ಕೊರೊನಾ ಮುಕ್ತ ರಾಜ್ಯದತ್ತ ಕೇರಳ ಹೆಜ್ಜೆ, ಎಷ್ಟು ಕೇಸ್ ಸಕ್ರಿಯವಾಗಿದೆ?
ತಿರುವನಂತಪುರಂ, ಮೇ 4: ಭಾರತದಲ್ಲಿ ಮೊಟ್ಟ ಮೊದಲ ಕೊರೊನಾ ಕೇಸ್ ದಾಖಲಾಗಿದ್ದು ಕೇರಳ ರಾಜ್ಯದಲ್ಲಿ. ಇದೀಗ, ಕೇರಳ ಕೊವಿಡ್ ಸೋಂಕಿನಿಂದ ಮುಕ್ತವಾಗುವತ್ತಾ ಹೆಜ್ಜೆ ಹಾಕುತ್ತಿದೆ.
ಕೇರಳದಲ್ಲಿ ಇಂದು ಕೂಡ ಯಾವುದೇ ಹೊಸ ಪ್ರಕರಣ ದಾಖಲಾಗಿಲ್ಲ. ಈ ಮೂಲಕ ಕೊರೊನಾ ವಿರುದ್ಧದ ಹೋರಾಟದಲ್ಲಿ ಕೇರಳ ಉತ್ತಮ ಹೆಜ್ಜೆ ಇಡುತ್ತಿದೆ. ಇತರ ರಾಜ್ಯಗಳಿಗೆ ಮಾದರಿ ಎನಿಸಿಕೊಳ್ಳುತ್ತಿದೆ.
ಕೇರಳದಲ್ಲಿ ನೆಮ್ಮದಿ ತರುತ್ತಿದೆ ಚೇತರಿಕೆ ಕಂಡವರ ಸಂಖ್ಯೆ
ಕೇರಳದಲ್ಲಿ ಈವರೆಗೂ 499 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇದರಲ್ಲಿ ಕೇವಲ 4 ಜನರು ಮಾತ್ರ ಸಾವನ್ನಪ್ಪಿದ್ದಾರೆ. ಉಳಿದಂತೆ 461 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಈಗ ಕೇವಲ 34 ಜನರು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಳಿದ ರಾಜ್ಯಗಳಿಗೆ ಹೋಲಿಸಿಕೊಂಡರೆ ಕೇರಳ ಕೊರೊನಾ ಮುಕ್ತ ರಾಜ್ಯದತ್ತ ಹೆಜ್ಜೆ ಇಟ್ಟಿದೆ. ಅತಿ ಹೆಚ್ಚು ಸೋಂಕಿತರು ಚೇತರಿಕೆ ಕಂಡಿರುವ ಶೇಕಡಾವಾರು ಅಂಕಿ ಅಂಶ ಗಮನಿಸಿದರೆ ಕೇರಳ ಉತ್ತಮ ಫಲಿತಾಂಶ ಹೊಂದಿದೆ.
ಇನ್ನು ದೇಶದಲ್ಲಿ ಕಳೆದ 24 ಗಂಟೆಯಲ್ಲಿ 2573 ಪ್ರಕರಣಗಳು ದಾಖಲಾಗಿದೆ. 83 ಜನರು ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 42836ಕ್ಕೆ ಏರಿಕೆಯಾಗಿದ್ದು, 11762 ಜನರು ಗುಣಮುಖರಾಗಿದ್ದಾರೆ. 1389 ಜನರು ಮೃತಪಟ್ಟಿದ್ದಾರೆ.