ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕರವಿಳಕ್ಕು 2022: ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನದ ಬಗ್ಗೆ ಮಾಹಿತಿ

|
Google Oneindia Kannada News

ಪಟ್ಟಣಂತಿಟ್ಟ, ಜನವರಿ 12: ಶಬರಿಮಲೆಯಲ್ಲಿ ಜನವರಿ 14 ರಂದು ಮಕರ ಜ್ಯೋತಿ ದರ್ಶನವಾಗಲಿದ್ದು, ಜನವರಿ 19 ರವರೆಗೆ ಭಕ್ತರಿಗೆ ಅಯ್ಯಪ್ಪನ ದರ್ಶನಕ್ಕೆ ಅವಕಾಶವಿರಲಿದೆ. ಮಕರವಿಳಕ್ಕು ಪೂಜೆ ಹಾಗೂ ಯಾತ್ರೆಗಾಗಿ ಗುರುವಾರ ಸಂಜೆಯಿಂದ ಶಬರಿಮಲೆ ದೇಗುಲವನ್ನು ಮತ್ತೆ ತೆರೆಯಲಾಗಿದ್ದು, ಭಕ್ತರಿಗೆ ದರ್ಶನ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಮಕರವಿಳಕ್ಕು (ಸಂಕ್ರಾಂತಿ) ಹಬ್ಬ ಹಾಗೂ ಎರಡನೇ ಹಂತದ ಯಾತ್ರಾ ಋತುವಿನ ಆರಂಭದ ಪ್ರಯುಕ್ತ ಇಲ್ಲಿನ ಪ್ರಸಿದ್ಧ ಅಯಪ್ಪ ಸ್ವಾಮಿ ದೇಗುಲ ಭಕ್ತರಿಗೆ ಬಾಗಿಲು ತೆರೆದಿದೆ.

ಇದೇ ವೇಳೆ ಕೊರೊನಾ ಸೋಂಕಿಗೆ ತುತ್ತಾಗಿದ್ದ ಮೂವರೊಂದಿಗೆ ಸಂಪರ್ಕಕ್ಕೆ ಬಂದಿದ್ದ ಕಾರಣ ದೇವಾಲಯದ ಮುಖ್ಯ ಅರ್ಚಕರು ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಜ.14ರಂದು ಮಕರವಿಳಕ್ಕು ಹಬ್ಬ ನಡೆಯಲಿದ್ದು, ಭಕ್ತರಿಗೆ ಮಕರ ಜ್ಯೋತಿಯ ದರ್ಶನವಾಗಲಿದೆ. ಜ.20ರಂದು ದೇವಾಲಯ ಮತ್ತೆ ಬಾಗಿಲು ಮುಚ್ಚಲಿದೆ. ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಪ್ರತಿ ದಿನ 5000 ಭಕ್ತರಿಗಷ್ಟೇ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಮಕರವೆಂದರೆ ಹತ್ತನೇ ರಾಶೀ ಚಕ್ರ, ಮಕರ ಸಂಕ್ರಾಂತಿ ಎಂದರೆ ಬದಲಾವಣೆ. ಸೂರ್ಯನು ಮಕರ ರಾಶಿಗೆ ಪ್ರವೇಶವಾಗುವ ದಿನವನ್ನು ಸಂಕ್ರಾಂತಿ ಹಬ್ಬವಾಗಿ ಆಚರಿಸುತ್ತಾರೆ. ಜ್ಯೋತಿಷ್ಯದ ಪ್ರಕಾರ ಮಕರ ರಾಶಿಯನ್ನು ಆಳುವವನು ಶನೀಶ್ಚರ. ಇವನು ಸೂರ್ಯಪುತ್ರ. ಈ ದಿನದಂದು ಸೂರ್ಯನು ತನ್ನ ಮಗನ ಆಡಳಿತಕ್ಕೊಳಪಟ್ಟ ಮನೆಯನ್ನು ಪ್ರವೇಶಿಸುತ್ತಾನೆ ಎಂದು ಹೇಳಲಾಗುತ್ತದೆ.

Makaravilakku 2022: An Important Festival At The Sabarimala Temple

ಮಕರ ಸಂಕ್ರಮಣ

ಒಂದು ರೀತಿಯಲ್ಲಿ ಸ್ವತಃ ತಂದೆ ಮಗನಾದ ಸೂರ್ಯ ಶನೀಶ್ಚರರು ಇಬ್ಬರೂ ವಿರುದ್ಧವಾದವರು. ಆದರೆ ಈ ಸಂಕ್ರಾಂತಿಯ ಸಂದರ್ಭದಲ್ಲಿ ತನ್ನ ಮಗನಾದ ಶನಿಯ ಬಳಿ ಸೂರ್ಯನು ಹೋಗುವುದರಿಂದಾಗಿ ಈ ಸಂದರ್ಭವು ಮನುಷ್ಯರಿಗೆ ದ್ವೇಷ ಹಾಗೂ ಜಗಳವನ್ನು ಬಿಟ್ಟು ಒಂದಾಗಿ ಎನ್ನುವ ಸಂದೇಶವನ್ನು ನೀಡುತ್ತದೆ.

ಯಾವುದೇ ಹಳೆಯ ಕಹಿ ನೆನಪು ಹಾಗೂ ಅಸಮಾಧಾನವನ್ನು ಬಿಟ್ಟು ಜಗತ್ತಿನ ಸೌಂದರ್ಯವನ್ನು ಆಸ್ವಾದಿಸುವ ಹಾಗೂ ಪ್ರೀತಿಸುವ ಅವಕಾಶವನ್ನು ಈ ಸಂಕ್ರಾಂತಿಯು ಹೊತ್ತು ತರುತ್ತದೆ. ಹಾಗಾಗಿ ಸೂರ್ಯನ ಶಕ್ತಿ ಹಾಗೂ ಹೃದಯವೈಶಾಲ್ಯತೆಯನ್ನು ಸ್ಮರಿಸಿ, ಅನಗತ್ಯ ವಾದ ವಿವಾದಗಳನ್ನು ಬದಿಗಿಟ್ಟು ಅರ್ಥಪೂರ್ಣ ಸಂಬಂಧಗಳನ್ನು ಸ್ಥಾಪಿಸಿ ಹಾಗೂ ಸಂತೋಷದ ಕ್ಷಣಗಳನ್ನು ಈ ಸಂಕ್ರಾಂತಿಯಂದು ಆನಂದಿಸಿ.

ಕರ್ನಾಟಕದಲ್ಲಿ ಸಂಕ್ರಾಂತಿಯನ್ನು ಸುಗ್ಗಿಯೆಂದು ಕರೆದರೆ ತಮಿಳಿಗರಿಗೆ 'ಪೊಂಗಲ್‌' ಸಂಭ್ರಮದ ಹಬ್ಬ, ಕೇರಳಿಗರು 'ಮಕರವಿಳಕ್ಕು'ವಿನ ಬೆಳಕಿಗೆ ಕಾತುರರಾಗಿರುತ್ತಾರೆ. ಆಂಧ್ರಪ್ರದೇಶದಲ್ಲಿ 'ಭೋಗಿ'ಯ ಬೆಂಕಿ ಹಬ್ಬದ ಸಂಭ್ರಮವನ್ನು ಸಾರಿ ಹೇಳುತ್ತದೆ.

ದಕ್ಷಿಣ ಭಾರತದಲ್ಲಿ ಸಂಕ್ರಾಂತಿಯನ್ನು ಈ ಎಲ್ಲಾ ಹೆಸರಿನಿಂದ ಕರೆದರೆ ಉತ್ತರ ಭಾರತದ ಗುಜರಾತ್‌ ನಲ್ಲಿ ಉತ್ತರಾಯಣವೆಂದೂ, ಪಂಜಾಬಿನಲ್ಲಿ ಲೊಹ್ರಿ, ಅಸ್ಸಾಂನಲ್ಲಿ ಮಾಘ ಬಿಹು, ಪಂಜಾಬ್‌ನಲ್ಲಿ ಸಿಖ್‌ ಸಮುದಾಯವು ವೈಸಾಖಿ ಎಂದು ಆಚರಿಸುತ್ತಾರೆ.

ಬಹಳಷ್ಟು ಮಂದಿಗೆ 'ಮಕರ ಜ್ಯೋತಿ' ಎಂದರೇನು ಎಂಬ ಜಿಜ್ಞಾಸೆ ಇದೆ. ಇದನ್ನು ಪರಿಹರಿಸುವ ಒಂದು ಸಣ್ಣ ಪ್ರಯತ್ನ ಇದು. ಶಬರಿಮಲೆಯ ಎರಡು ತಿಂಗಳ ಪವಿತ್ರ ವ್ರತಾಚರಣೆಯ ಕೊನೆಯ ದಿನವಾದ ಮಕರ ಸಂಕ್ರಮಣದಂದು 'ಮಕರ ಜ್ಯೋತಿ'ಯ ದರ್ಶನವಾಗುತ್ತದೆ. ಮಕರಜ್ಯೋತಿಯ ದರ್ಶನಕ್ಕಾಗಿ ದೇಶದ ನಾನಾ ಮೂಲೆಗಳಿಂದ ಲಕ್ಷಾಂತರ ಭಕ್ತರು ಶಬರಿಮಲೆಗೆ ಆಗಮಿಸುತ್ತಾರೆ.

ಶಬರಿಮಲೆಗೆ ವಿರುದ್ಧ ದಿಕ್ಕಿನಲ್ಲಿರುವ ಪೊನ್ನಂಬಲಮೇಡು ಗಿರಿಯಲ್ಲಿ ಮಕರಜ್ಯೋತಿ ಕಾಣಿಸಿಕೊಳ್ಳುತ್ತದೆ. ಪ್ರತಿವರ್ಷ ಜನವರಿ 14ರಂದು ಅಯ್ಯಪ್ಪ ಸ್ವಾಮಿಗೆ ಸಂಜೆ 7 ಗಂಟೆಗೆ ನಡೆಯುವ ಮಹಾಮಂಗಳಾರತಿ ಬಳಿಕ ಮಕರ ಜ್ಯೋತಿಯ ದರ್ಶನವಾಗುತ್ತದೆ. ಮಕರ ಜ್ಯೋತಿಯು ಮೂರು ಬಾರಿ ದೇದೀಪ್ಯಮಾನವಾಗಿ ಮಿಣುಗಿ ಅದೃಶ್ಯವಾಗುತ್ತದೆ.

ಮಕರ ಜ್ಯೋತಿಯ ಬಗ್ಗೆ ಕೆಲವು ಅಯ್ಯಪ್ಪ ಸ್ವಾಮಿ ಭಕ್ತರು ಸೇರಿದಂತೆ ಹಲವರಲ್ಲಿ ಏಕಾಭಿಪ್ರಾಯವಿಲ್ಲ. ಕೆಲವರು ಮಕರ ಜ್ಯೋತಿಯ 'ರಹಸ್ಯ'ದ ಬಗ್ಗೆ 'ಅಧ್ಯಯನ' ಮಾಡಿದ್ದು ಕಡೆಗೆ ಒಂದು ಅಭಿಪ್ರಾಯಕ್ಕೆ ಬಂದಿದ್ದಾರೆ. ಮಕರಜ್ಯೋತಿ ಕಾಣಿಸಿಕೊಳ್ಳುವ ಪೊನ್ನಂಬಲಮೇಡು ಗಿರಿಯು ದಟ್ಟ ಕಾಡಿನಿಂದ ಆವೃತವಾಗಿದೆ. ಈ ಗಿರಿಯು ಅರಣ್ಯ ಇಲಾಖೆ ಹಾಗೂ ವಿದ್ಯುತ್ ಇಲಾಖೆಯ ಸುಪರ್ದಿಯಲ್ಲಿದೆ . ಸಾರ್ವಜನಿಕರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ.

Recommended Video

ಭಾರತಕ್ಕಿಂತ ಉತ್ತಮವಾಗಿದೆ ಪಾಕಿಸ್ತಾನದ ಆರ್ಥಿಕತೆ!! ನಿಜಾನಾ?? | Oneindia Kannada

English summary
Makaravilakku is an annual festival of great importance, held every year during Makar Sankranti in Kerala, India at the Sabarimala Temple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X