ತಂದೆ-ಮಗುವನ್ನು ಅವಮಾನಿಸಿದ ಪೊಲೀಸ್ ಅಧಿಕಾರಿಯ ಸಮರ್ಥಿಸಿದ ಕೇರಳ ಸರ್ಕಾರಕ್ಕೆ 'ಹೈ' ಚಾಟಿ
ತಿರುವನಂತಪುರಂ, ಡಿಸೆಂಬರ್ 21: ತಿರುವನಂತಪುರಂ ಜಿಲ್ಲೆಯ ಅಟ್ಟಿಂಗಲ್‌ನಲ್ಲಿ ಪೊಲೀಸ್ ಅಧಿಕಾರಿಯಿಂದ ಅವಮಾನಕ್ಕೊಳಗಾದ ಎಂಟು ವರ್ಷದ ಬಾಲಕಿ ಮತ್ತು ಆಕೆಯ ತಂದೆಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಕೇರಳ ಹೈಕೋರ್ಟ್ ನಾಲ್ಕು ದಿನಗಳ ಹಿಂದೆ ಸೂಚನೆ ನೀಡಿದೆ. ಇದಾದ ಬಳಿಕ ಈಗ ಕೇರಳ ಹೈಕೋರ್ಟ್ ರಾಜ್ಯ ಸರ್ಕಾರದ ವರದಿಯನ್ನು ಸ್ವೀಕಾರ ಮಾಡಲು ನಿರಾಕರಿಸಿದೆ.
ಆಗಸ್ಟ್ 27 ರಂದು, 38 ವರ್ಷದ ಜಯಚಂದ್ರ ಮತ್ತು ಅವರ ಮಗಳು ಇಸ್ರೋ ಘಟಕಕ್ಕೆ ಉಪಕರಣಗಳನ್ನು ಸಾಗಿಸುವ ಬೃಹತ್ ಟ್ರೈಲರ್ ಅನ್ನು ವೀಕ್ಷಣೆ ಮಾಡಲು ಅಟ್ಟಿಂಗಲ್ ಬಳಿಯ ಹೊರವಲಯದ ಮುಖ್ಯ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಪೊಲೀಸ್ ಅಧಿಕಾರಿ ಇವರಿಬ್ಬರನ್ನು ಅವಮಾನ ಮಾಡಿದ್ದಾರೆ. ತನ್ನ ಮೊಬೈಲ್ ಫೋನ್ ಕಾಣೆಯಾಗಿದೆ ಎಂದು ಹೇಳಿ ಮಹಿಳಾ ಅಧಿಕಾರಿ ರೆಜಿತಾ, ಪೊಲೀಸ್ ಗಸ್ತು ವಾಹನದ ಬಳಿ ನಿಂತಿದ್ದ ಜಯಚಂದ್ರ ಕದ್ದಿದ್ದಾರೆ ಎಂದು ಆರೋಪ ಮಾಡಿದ್ದರು. ಜಯಚಂದ್ರ ಮೊಬೈಲ್ ಕದ್ದು ಎಂಟು ವರ್ಷದ ಮಗಳಿಗೆ ನೀಡಿರಬೇಕು ಎಂದು ಮಹಿಳಾ ಅಧಿಕಾರಿ ರೆಜಿತಾ ದೂರಿದ್ದರು.
ಇಷ್ಟೇ ಅಲ್ಲದೇ ಸಾರ್ವಜನಿಕವಾಗಿ ಇಬ್ಬರ ಮೇಲೆ ವಾಗ್ದಾಳಿ ನಡೆಸಿದ್ದರು. ಇಬ್ಬರನ್ನು ಕೂಡಾ ಹತ್ತಿರದ ಪೊಲೀಸ್ ಠಾಣೆಗೆ ಕರೆದೊಯ್ಯಲಾಗುವುದು ಎಂದು ಬೆದರಿಕೆ ಹಾಕಿದ್ದರು. ಈ ಸಂದರ್ಭದಲ್ಲಿ ಅಲ್ಲಿ ಹಲವಾರು ಮಂದಿ ಬಂದು ಸೇರಿದ್ದರು. ಆ ಬಳಿಕ ರೆಜಿತಾ ಮೊಬೈಲ್ ಫೋನ್ ಪೊಲೀಸ್ ಗಸ್ತು ವಾಹನದಲ್ಲಿಯೇ ಪತ್ತೆಯಾಗಿತ್ತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದವು. ಆ ಬೆನ್ನಲ್ಲೇ ಮಹಿಳೆಯರ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಸ್ಥಾಪಿಸಲಾದ 'ಪಿಂಕ್ ಪೆಟ್ರೋಲ್'ಗೆ ಸೇರಿದ ಮಹಿಳಾ ಪೊಲೀಸ್ ಅಧಿಕಾರಿಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದ್ದವು.

ರಾಜ್ಯ ಸರ್ಕಾರದ ವರದಿಯಲ್ಲಿ ಏನಿದೆ?
ಈ ಘಟನೆಯ ಬಗ್ಗೆ ವರದಿ ನೀಡಿರುವ ರಾಜ್ಯ ಸರ್ಕಾರವು ಮಹಿಳಾ ಅಧಿಕಾರಿ ಆ ಚಿಕ್ಕ ಬಾಲಕಿಗೆ ಮನಸ್ಸಿಗೆ ನೋವುಂಟು ಮಾಡುವಂತೆ ನಡೆದುಕೊಂಡಿಲ್ಲ. ಅನುಚಿತವಾಗಿ ವರ್ತನೆ ಮಾಡಿಲ್ಲ ಎಂದು ರಾಜ್ಯ ಸರ್ಕಾರದ ವರದಿ ಹೇಳಿದೆ. ಇನ್ನು ಅದಕ್ಕೆ ಸಾಕ್ಷಿ ಎಂಬಂತೆ ನಾಲ್ವರು ಸಾಕ್ಷಿಗಳನ್ನು ಕೂಡಾ ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ಹಾಗೆಯೇ ಆ ಮಗುವಿಗೆ ಪರಿಹಾರವನ್ನು ನಿರಾಕರಣೆ ಮಾಡಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಧಿಕಾರಿಯ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದರೂ ಸರ್ಕಾರ ಅಧಿಕಾರದ ಮೇಲೆ ಮೃದು ಧೋರಣೆಯನ್ನು ತಳೆದಿದೆ ಎಂದು ಆರೋಪ ಮಾಡಲಾಗಿದೆ. ಇನ್ನು ಸರ್ಕಾರವು ವರದಿಯಲ್ಲಿ, "ಮಗು ಅವಮಾನದಿಂದ ಅಳಲಿಲ್ಲ. ಜನರು ಸೇರಿದ್ದನ್ನು ನೋಡಿ ಅತ್ತಿದೆ," ಎಂದು ಸರ್ಕಾರವು ಹೇಳಿದೆ.
ಅವಮಾನ ಮಾಡಿದ ಪೊಲೀಸ್ ಅಧಿಕಾರಿ ವಿರುದ್ಧ ದೂರು
ಆಗಸ್ಟ್ 27 ರಂದು, ತಮ್ಮನ್ನು ಪೊಲೀಸ್ ಅಧಿಕಾರಿ ರೆಜಿತಾ ಕಳ್ಳತನದ ಆರೋಪ ಮಾಡಿ ಸಾರ್ವಜನಿಕವಾಗಿ ಅವಮಾನ ಮಾಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಆಗಸ್ಟ್ 31 ರಂದು, ಜಯಚಂದ್ರನ್ ರಾಜ್ಯ ಪೊಲೀಸ್ ಮುಖ್ಯಸ್ಥ ಅನಿಲ್ ಕಾಂತ್‌ರನ್ನು ಸಂಪರ್ಕ ಮಾಡಿ ಈ ಪೊಲೀಸ್ ಅಧಿಕಾರಿಯ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಕಾಂತ್, ದಕ್ಷಿಣ ವಲಯ ಐಜಿ ಹರ್ಷಿತಾ ಅಟ್ಟಲೂರಿಗೆ ತನಿಖೆ ನಡೆಸುವಂತೆ ಸೂಚಿಸಿದ್ದರು. ಬಳಿಕ ರೆಜಿತಾರ ವರ್ಗಾವಣೆ ನಡೆದಿತ್ತು. ಆದರೆ ಅನುಕೂಲಕರವಾದ ಸ್ಥಳಕ್ಕೆ ವರ್ಗಾವಣೆ ಮಾಡಲಾಗಿದೆ ಎಂಬ ವರದಿಗಳ ಬೆನ್ನಲ್ಲೇ ಸೆಪ್ಟೆಂಬರ್‌ನಲ್ಲಿ, ಕುಟುಂಬವು ಕೇರಳ ಸೆಕ್ರೆಟರಿಯೇಟ್ ಮುಂದೆ ಒಂದು ದಿನದ ಧರಣಿಯನ್ನು ಕೂತಿತ್ತು. ಇದಕ್ಕೂ ಯಾವುದೇ ಪ್ರತಿಕ್ರಿಯೆ ದೊರೆಯದ ಹಿನ್ನೆಲೆ ಈ ಕುಟುಂಬವು ಕೇರಳ ಹೈಕೋರ್ಟ್ ಮೊರೆ ಹೋಯಿತು.
ಸರ್ಕಾರ ಅಧಿಕಾರಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ ಮತ್ತು ಮಗುವಿನ ಮೂಲಭೂತ ಹಕ್ಕುಗಳನ್ನು ನಿರಾಕರಿಸುತ್ತಿದೆ ಎಂದು ಮಗುವಿನ ಕುಟುಂಬ ಆರೋಪಿಸಿದೆ. ನವೆಂಬರ್ 29 ರಂದು, ಅಧಿಕಾರಿಯು ಮಗು ಮತ್ತು ಆಕೆಯ ತಂದೆಯನ್ನು ಅವಮಾನಿಸುವ ದೃಶ್ಯಗಳನ್ನು ವೀಕ್ಷಿಸಿದ ನಂತರ, ನ್ಯಾಯಾಲಯವು ಅಧಿಕಾರಿ ಮಗುವಿನ ಬಳಿ ಕ್ಷಮೆ ಕೂಡಾ ಕೇಳಿಲ್ಲ ಎಂಬುವುದನ್ನು ಗಮನಿಸಿದೆ. ಇದಾದ ಒಂದು ವಾರದ ನಂತರ, ಅಧಿಕಾರಿಯು ಹೈಕೋರ್ಟ್‌ಗೆ ಲಿಖಿತ ಕ್ಷಮೆಯಾಚನೆಯನ್ನು ಸಲ್ಲಿಸಿದರು. ಕುಟುಂಬ ಎದುರಿಸಿದ ಆಘಾತಕ್ಕೆ 50 ಲಕ್ಷ ರೂಪಾಯಿ ಪರಿಹಾರ ಕೋರಿ ಕುಟುಂಬ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದ್ದು, ಇದು ಭಾರೀ ಮೊತ್ತವಾದ ಕಾರಣ ಇಷ್ಟೊಂದು ಪರಿಹಾರ ನೀಡಲು ಸಾಧ್ಯವಿಲ್ಲ ಎಂದಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications