ಎರಡು ಫಾರ್ಮ್‌ಗಳಲ್ಲಿ ಹಂದಿಜ್ವರ; ಅಲರ್ಟ್ ಆಯ್ತು ಕೇರಳ ಗೌರ್ಮೆಂಟ್!
ವಯನಾಡ್, ಜುಲೈ 23: ಕೇರಳದ ವಯನಾಡ್ ಜಿಲ್ಲೆಯ ಎರಡು ಫಾರ್ಮ್‌ಗಳಲ್ಲಿ ಆಫ್ರಿಕನ್ ಹಂದಿ ಜ್ವರ ವರದಿಯಾದ ಬೆನ್ನಲ್ಲೇ, ರಾಜ್ಯ ಸರ್ಕಾರ ಫುಲ್ ಅಲರ್ಟ್ ಆಗಿದೆ. ಈ ರೋಗ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ಜಾರಿಗೊಳಿಸುವುದಕ್ಕೆ ಮುಂದಾಗಿದೆ.
ರಾಜ್ಯದಲ್ಲಿ ಹಂದಿಜ್ವರದ ಸೋಂಕಿನ ಬಗ್ಗೆ ಕೇರಳದ ಪಶುಸಂಗೋಪನಾ ಸಚಿವ ಜೆ ಚಿಂಚು ರಾಣಿ ದೃಢಪಡಿಸಿದ್ದಾರೆ. ಹಂದಿ ಜ್ವರದ ಕ್ರಿಯಾ ಯೋಜನೆಯ ಭಾಗವಾಗಿ ಜೈವಿಕ ಭದ್ರತೆ ಮತ್ತು ತ್ಯಾಜ್ಯ ವಿಲೇವಾರಿ ಕಾರ್ಯವಿಧಾನವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಹಂದಿ ಸಾಕಣೆ ಕೇಂದ್ರಗಳಿಗೆ ನಿರ್ದೇಶನ ನೀಡಿದ್ದಾರೆ.
ಶುಕ್ರವಾರ ಈ ಕುರಿತು ಮಾತನಾಡಿದ ಸಚಿವರು, "ವಯನಾಡ್ ಜಿಲ್ಲೆಯ ಮನಂತವಾಡಿ ಪ್ರದೇಶದಲ್ಲಿ ಇರುವ ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ ದೃಢಪಟ್ಟಿದೆ. ಈ ರೋಗವನ್ನು ಐಸಿಎಆರ್ ಸಂಬಂಧಿತ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ-ಸೆಕ್ಯುರಿಟಿ ಅನಿಮಲ್ ಡಿಸೀಸ್ (NIHSAD) ದೃಢಪಡಿಸಿದೆ

ಕೇರಳದಲ್ಲಿ ಹಂದಿಜ್ವರದಿಂದ 44 ಹಂದಿ ಸಾವು
"ಕೇರಳದ ವಯನಾಡ್ ಜಿಲ್ಲೆಯ ಮಾನಂತವಾಡಿ ಫಾರ್ಮ್‌ನಲ್ಲಿ 43 ಹಂದಿಗಳು ಮತ್ತು ತಾವಿನ್ಹಾಳ್ ಪಂಚಾಯಿತಿಯ ಜಮೀನಿನಲ್ಲಿ ಒಂದು ಹಂದಿ ಸಾವನ್ನಪ್ಪಿವೆ. ಪಂಚಾಯಿತಿಯ ಜಮೀನಿನಲ್ಲಿ 300 ಹಂದಿಗಳಿವೆ. ಪ್ರಸ್ತುತ, ಮೂರು ಪ್ರಾಣಿಗಳು ಅನಾರೋಗ್ಯದ ಲಕ್ಷಣಗಳನ್ನು ತೋರಿಸುತ್ತಿವೆ. ಕಳೆದ ಜುಲೈ 19, 2022 ರಂದು, ಪಶುಸಂಗೋಪನಾ ಇಲಾಖೆಯ ಅಡಿಯಲ್ಲಿ ವಿವಿಧ ವಿಭಾಗಗಳ ತಜ್ಞರ ಸಭೆಯನ್ನು ನಡೆಸಲಾಯಿತು. ನಾವು ರೋಗವನ್ನು ನಿಯಂತ್ರಣಕ್ಕೆ ಸಂಬಂಧಿಸಿದ ಕ್ರಮಗಳ ಬಗ್ಗೆ ಚರ್ಚಿಸಿದ್ದೇವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ವಯನಾಡ್ ಜಿಲ್ಲೆ ಹಂದಿ ಸಾಕಾಣಿಕೆದಾರರಿಗೆ ತರಬೇತಿ
"ಹಂದಿಜ್ವರ ಪೀಡಿತ ಪ್ರದೇಶಗಳಿಗೆ ಪರಿಣಿತರ ತಂಡವು ಭೇಟಿ ನೀಡಿ ಮಾದರಿಯನ್ನು ಸಂಗ್ರಹಿಸಲಿದೆ. ಈ ಕುರಿತು ರೈತರಲ್ಲಿ ಅರಿವು ಮೂಡಿಸಲು ಅಗತ್ಯ ಮಾಹಿತಿ ನೀಡಲಾಗುತ್ತದೆ. ಜಿಲ್ಲಾ ಪಶು ವೈದ್ಯಾಧಿಕಾರಿಗಳ ಸಭೆಯು ಬತ್ತೇರಿಯಲ್ಲಿ ನಡೆದಿದ್ದು, ಮುಖ್ಯ ರೋಗ ತನಿಖಾ ಅಧಿಕಾರಿಯು ಪರಿಸ್ಥಿತಿಯನ್ನು ವಿವರಿಸಿದರು. ವಯನಾಡ್ ಹಂದಿ ಸಾಕಣೆದಾರರ ಸಂಘದ ಪ್ರತಿನಿಧಿಗಳಿಗೆ ಜಾಗೃತಿ ತರಬೇತಿ ನೀಡಿದ್ದಾರೆ," ಎಂದು ಹೇಳಿದರು.

ಹಂದಿ ಮಾಂಸ ಆಮದು ಮತ್ತು ರಫ್ತಿಗೆ ನಿರ್ಬಂಧ
ಕೇರಳದಲ್ಲಿ ಹಂದಿಜ್ವರದ ರೋಗ ದೃಢಪಟ್ಟಿದೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ, ಪ್ರಾಣಿಗಳಲ್ಲಿನ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯ್ದೆ, 2009 (2009 ರ ಕೇಂದ್ರ ಕಾಯಿದೆ 27) ಅನ್ನು ವಿಧಿಸಲಾಗಿದೆ. ಇದರಿಂದ ಹಂದಿಗಳನ್ನು ರಾಜ್ಯದ ಒಳಗೆ ಮತ್ತು ಹೊರಗೆ ಸಾಗಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಎಲ್ಲಾ ಗಡಿ ಚೆಕ್ ಪೋಸ್ಟ್‌ಗಳಲ್ಲಿ ತಪಾಸಣೆಯನ್ನು ಬಿಗಿಗೊಳಿಸುವಂತೆ ಮತ್ತು ಹಂದಿಗಳು, ಹಂದಿ ಮಾಂಸ, ಹಂದಿ ಮಾಂಸದ ಉತ್ಪನ್ನಗಳು ಮತ್ತು ಹಂದಿಗಳ ಮಲವನ್ನು ಸಾಗಿಸುವ ವಾಹನಗಳು ರಾಜ್ಯಕ್ಕೆ ಪ್ರವೇಶಿಸುವುದನ್ನು ತಡೆಯಲು ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ದೇಶೀಯ ಹಂದಿಗಳಿಗೆ ಮಾರಣಾಂತಿಕ ರೋಗ
ಕೇರಳದ ಎಲ್ಲಾ ಹಂದಿ ಫಾರಂಗಳಲ್ಲಿ ಪಶು ಕಲ್ಯಾಣ ಇಲಾಖೆಯ ವೈದ್ಯರ ಮಾರ್ಗದರ್ಶನದ ಅಡಿ ತಪಾಸಣೆ ನಡೆಸಲಾಗುತ್ತಿದೆ. ನಿಯಮಾವಳಿ ಉಲ್ಲಂಘಿಸಿ ಹಂದಿ ಸಾಗಾಟಕ್ಕೆ ಯತ್ನಿಸುವವರ ವಿರುದ್ಧ ಕಾನೂನು ಪ್ರಕಾರ ಕಠಿಣ ಶಿಕ್ಷೆ ವಿಧಿಸಲಾಗುವುದು. ಪ್ರಸ್ತುತ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಲಸಿಕೆ ಇಲ್ಲದಿದ್ದರೆ ಪಶು ಕಲ್ಯಾಣ ಇಲಾಖೆ ಸೂಚಿಸಿದಂತೆ ಜೈವಿಕ ಭದ್ರತಾ ವ್ಯವಸ್ಥೆ ಬಲಪಡಿಸಲು ಎಲ್ಲಾ ತೋಟದ ಮಾಲೀಕರು ಕಾಳಜಿ ವಹಿಸಬೇಕು ಎಂದು ಸಚಿವರು ತಿಳಿಸಿದರು.












Click it and Unblock the Notifications