ಚಿನ್ನ ಸ್ಮಗಲಿಂಗ್: ಪಿಣರಾಯಿಗೆ ಕ್ಲೀನ್ ಚಿಟ್ ಕೊಟ್ಟ ಎನ್ಐಎ
ತಿರುವನಂತಪುರಂ, ಸೆ. 1: ಕೇರಳದ ಬಹುಕೋಟಿ ಚಿನ್ನದ ಸ್ಮಗಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಕ್ಲೀನ್ ಚಿಟ್ ಸಿಕ್ಕಿದೆ. ಈ ಪ್ರಕರಣದಲ್ಲಿ ಸಿಎಂ ಭಾಗಿಯಾಗಿರುವ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಹೇಳಿದೆ ಎಂದು ನ್ಯೂಸ್ 18 ವರದಿ ಮಾಡಿದೆ.
Recommended Video
ಸಿಎಂ ಆಪ್ತರಾಗಿರುವ ಅಮಾನತುಗೊಂಡಿರುವ ಐಎಎಎಸ್ ಅಧಿಕಾರಿ ಎಂ ಶಿವಶಂಕರ್ ಅವರನ್ನು ರಾಷ್ಟ್ರೀಯ ತನಿಖಾ ತಂಡ(ಎನ್ಐಎ)ದ ಅಧಿಕಾರಿಗಳು, ಕಸ್ಟಮ್ಸ್ ಅಧಿಕಾರಿಗಳು, ಜಾರಿ ನಿರ್ದೇಶನಾಲಯವು ಹಲವು ಬಾರಿ ವಿಚಾರಣೆಗೊಳಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಪ್ರಕರಣದ ಪ್ರಮುಖ ಆರೋಪಿ ಸ್ವಪ್ನ ಸುರೇಶ್ ಅವರಿಗೆ ಸಿಎಂ ಸಚಿವಾಲಯದ ಅಧೀನದ ಐಟಿ ಇಲಾಖೆಯಲ್ಲಿ ಗುತ್ತಿಗೆ ಆಧಾರಿತ ಹುದ್ದೆಯನ್ನು ಕೊಡಿಸುವಲ್ಲಿ ಶಿವಶಂಕರ್ ಮಹತ್ವದ ಪಾತ್ರ ವಹಿಸಿದ್ದರು ಎಂದು ಆರೋಪ ಕೇಳಿ ಬಂದಿದೆ. ಆರೋಪ ಕೇಳಿ ಬಂದ ಬಳಿಕ ಸಿಎಂ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಶಿವಶಂಕರ್ ಅವರನ್ನು ತೆಗೆದು ಹಾಕಲಾಗಿತ್ತು.
ಹೀಗಾಗಿ, ಈ ಚಿನ್ನದ ಸ್ಮಗಲಿಂಗ್ ಪ್ರಕರಣಕ್ಕೂ ಸಿಎಂ ಕಚೇರಿಗೂ ನೇರ ಸಂಬಂಧವಿದೆ ಎಂದು ವಿಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಆರೋಪಿಸಿದ್ದವು. ಸರಣಿ ಪ್ರತಿಭಟನೆ ಮೂಲಕ ಸಿಎಂ ಪಿಣರಾಯಿ ರಾಜೀನಾಮೆಗೆ ಆಗ್ರಹಿಸಲಾಗಿತ್ತು. ಸಿಪಿಎಂ ನೇತೃತ್ವದ ಎಲ್ ಡಿ ಎಫ್ ಸರ್ಕಾರದ ವಿರುದ್ಧ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅವಿಶ್ವಾಸ ನಿಲುವಳಿ ಮಂಡಿಸಿತ್ತು. ಆದರೆ, ಪಿಣರಾಯಿ ವಿಶ್ವಾಸಮತ ಗಳಿಸಿದ್ದರು.

ಯಾರು ಯಾರು ಆರೋಪಿಗಳು
ಯುಎಇ ಕಾನ್ಸುಲೇಟ್ ಅಧಿಕಾರಿಯಾಗಿದ್ದ ಪಿಎಸ್ ಸರೀತ್, ಮಾಜಿ ಉದ್ಯೋಗಿ ಸ್ವಪ್ನ ಸುರೇಶ್, ಸಂದೀಪ್ ನಾಯರ್, ಫೈಜಲ್ ಫರೀದ್ ಅವರ ವಿರುದ್ಧ Unlawful Activities (Prevention) Act ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಎನ್ಐಎ ತನಿಖೆ ಮುಂದುವರೆಸಿದೆ. 2019ರಿಂದ ಇಲ್ಲಿ ತನಕ ಸುಮಾರು 200 ಕೆ.ಜಿಗೂ ಅಧಿಕ ಚಿನ್ನವನ್ನು ಈ ರೀತಿ ಅಕ್ರಮವಾಗಿ ರವಾನೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಸ್ವಪ್ನ ಪ್ರಭ ಸುರೇಶ್, ಫಾಜೀಲ್ ಫರೀದ್, ಸಂದೀಪ್ ನಾಯರ್ ಹಾಗೂ ಸರೀತ್ ಕುಮಾರ್ ಅವರ ವಿಚಾರಣೆಗೆ ಅಗತ್ಯವಿದೆ ಎಂದು ಎನ್ಐಎ ಅಧಿಕಾರಿಗಳು ಚಾರ್ಜ್ ಶೀಟ್ ನಲ್ಲಿ ಹೇಳಿದ್ದಾರೆ. ಈ ಪೈಕಿ ಫಾಜೀರ್ ಫರೀದ್ ದುಬೈನಲ್ಲಿ ಬಂಧನವಾಗಿದೆ. ಯುಎಇ ಕಾನ್ಸುಲೇಟ್ ಕಚೇರಿಯ ಪಿಆರ್ ಒ ಪಿಎಸ್ ಸರೀತ್ ಮೊದಲಿಗೆ ಬಂಧನವಾಗಿದ್ದು, ಆತನ ಮೂಲಕವೇ ಸ್ವಪ್ನ ಈ ಕೇಸಿನಲ್ಲಿರುವುದು ಪತ್ತೆಯಾಗಿತ್ತು. ಸಿಎಂ ಪಿಣರಾಯಿ ವಿಜಯನ್ ಪ್ರಧಾನ ಕಾರ್ಯದರ್ಶಿ ಶಿವಶಂಕರ್ ಜೊತೆ ಸ್ವಪ್ನ ಸಂಪರ್ಕದಲ್ಲಿರುವುದು ಪತ್ತೆಯಾಯಿತು.

ರಾಜತಾಂತ್ರಿಕ ರಕ್ಷಣೆಯೊಂದಿಗೆ ಸ್ಮಗಲಿಂಗ್
ರಾಜತಾಂತ್ರಿಕ ರಕ್ಷಣೆ ಹೊಂದಿರುವ ''ಡಿಪ್ಲೊಮ್ಯಾಟಿಕ್ ಬ್ಯಾಗೇಜ್'' ನಲ್ಲಿದ್ದ 30 ಕೆಜಿ ಚಿನ್ನವನ್ನು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶ ಪಡಿಸಿಕೊಂಡಿದ್ದರು. ಸುಮಾರು 15 ಕೋಟಿ ರೂಪಾಯಿ ಮೌಲ್ಯದ ಈ ಚಿನ್ನ ಅಕ್ರಮ ಸಾಗಣೆಯ ಆರೋಪಿ ರಾಜತಾಂತ್ರಿಕ ಕಚೇರಿಯ ಮಾಜಿ ಸಿಬ್ಬಂದಿ ಸ್ವಪ್ನ ಸುರೇಶ್ ಎಂದು ಆರೋಪಿಸಲಾಗಿದೆ.
ನಾಲ್ಕೈದು ದಿನಗಳಿಂದ ನಾಪತ್ತೆಯಾಗಿದ್ದ ಸ್ವಪ್ನ ಆನ್ ಲೈನ್ ಮೂಲಕ ಜಾಮೀನು ಅರ್ಜಿ ಹಾಕಿದ್ದರು. ಯುಎಪಿಎ ಕಾಯ್ದೆ 1967ಉಲ್ಲಂಘನೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದರಿಂದ ಎಲ್ಲಾ ಆರೋಪಿಗಳ ಜಾಮೀನು ರದ್ದಾಗಿದೆ. ಇದಲ್ಲದೆ ನಕಲಿ ದಾಖಲೆ ನೀಡಿ ಸಿಎಂ ಅಡಿಯಲ್ಲಿದ್ದ ಐಟಿ ಇಲಾಖೆಯಲ್ಲಿ ಈಕೆ ಗುತ್ತಿಗೆ ಪಡೆದಿದ್ದಳು.

ರಶೀದ್ ಅಲ್ಶೆಮೈಲಿ ನಾಪತ್ತೆ
ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿ ಎನಿಸಿಕೊಂಡಿರುವ ರಶೀದ್ ಅಲ್ಶೆಮೈಲಿ ನಾಪತ್ತೆಯಾಗಿದ್ದು, ಭಾರತದಿಂದ ವಿದೇಶಕ್ಕೆ ಹಾರಿದ್ದಾನೆ. ವಿಯೆನ್ನಾ ಒಪ್ಪಂದದಂತೆ ಈತನಿಗೆ ಸುರಕ್ಷತೆಯೂ ಇದೆ. ದೆಹಲಿಗೆ ಬಂದಿದ್ದ ಈತ, ಯುಎಇಗೆ ತೆರಳಿರುವುದು ಕಂಡು ಬಂದಿದೆ. ಹೀಗಾಗಿ, ಯುಎಇ ಕಾನ್ಸುಲೇಟ್ ಕಚೇರಿಯಲ್ಲಿ ಇನ್ನಷ್ಟು ಸಿಬ್ಬಂದಿಗಳು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಎನ್ಐಎ ಮೂಲಗಳು ಹೇಳಿವೆ. ರಶೀದ್ ಖಾಮಿಸ್ ಅಲ್ ಶಾಮೆಲಿ, ಯುಎಇ ಅಧಿಕಾರಿ ಹೆಸರಿಗೆ ಈ ಬ್ಯಾಗೇಜ್ ತಲುಪಬೇಕಿತ್ತು.

ಚಿನ್ನದ ಸ್ಮಗಲಿಂಗ್ ದೊಡ್ಡಜಾಲ
ಸರೀತ್ ಕುಮಾರ್ ನಿಂದ ಪಡೆದ ಚಿನ್ನವನ್ನು ಸಂದೀಪ್ ನಾಯರ್ ಪಡೆದುಕೊಂಡು ಮಲ್ಲಪುರಂನ ಕೆ.ಟಿ ರಮೀಸ್ ಗೆ ತಲುಪಿಸುತ್ತಿದ್ದ. ಸದ್ಯ ರಮೀಶ್ ಕಸ್ಟಮ್ ಅಧಿಕಾರಿಗಳ ವಶದಲ್ಲಿದ್ದಾನೆ. ರಮೀಸ್ ಈ ಬ್ಯಾಗೇಜನ್ನು ಮುವತ್ತುಪುಳದ ಪಿ.ಟಿ ಅಬ್ದು, ಮೊಹಮ್ಮದ್ ಶಫಿ, ಎಡಕಂದನ್ ಸೈಥಾಲವಿ, ಜಲಾಲ್ ಮೊಹಮ್ಮದ್ ಗೆ ತಲುಪಿಸುತ್ತಿದ್ದ, ಇವರಿಂದ ಹವಾಲ ಆಪರೇಟರ್ ಗಳು ಇದನ್ನು ಬಳಸುತ್ತಿದ್ದರು ಎಂದು ತಿಳಿದು ಬಂದಿದೆ. ಇತ್ತೀಚಿನ ಎಲ್ಲಾ ಮೊತ್ತವನ್ನು ಕಸ್ಟಮ್ ಅಧಿಕಾರಿಗಳು ಪಡೆದುಕೊಂಡಿದ್ದಾರೆ. ಆದರೆ, ಅಬ್ದುಗೆ ತಲುಪಿದ 78 ಕೆಜಿ ಚಿನ್ನ ಇನ್ನೂ ಎಲ್ಲೂ ಪತ್ತೆಯಾಗಿಲ್ಲ.












Click it and Unblock the Notifications