ಕೊರೊನಾ ಸೋಂಕು: 2 ವಾರಗಳ ಕಾಲ ಗುರುವಾಯೂರ್ ದೇವಸ್ಥಾನಕ್ಕೆ ನಿರ್ಬಂಧ
ತ್ರಿಶೂರ್, ಡಿಸೆಂಬರ್ 12: ಕೊರೊನಾ ಸೋಂಕು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ವಿಶ್ವಪ್ರಸಿದ್ಧ ಗುರುವಾಯೂರ್ ಶ್ರೀಕೃಷ್ಣ ದೇವಾಲಯವನ್ನು ಎರಡು ವಾರಗಳ ಮಟ್ಟಿಗೆ ಬಂದ್ ಮಾಡಲಾಗುತ್ತಿದೆ.
ದೇವಾಲಾಯದ ಸುತ್ತ ಮುತ್ತಲಿನ ಪ್ರದೇಶವನ್ನು ತ್ರಿಶೂರ್ ಜಿಲ್ಲಾಡಳಿತವು ಕೋವಿಡ್ 19 ಬಾಂಧಿತ ವಲಯವೆಂದು ಘೋಷಿಸಿದೆ.
ಸಾರ್ವಜನಿಕ ದರ್ಶನ ನಿರ್ಬಂಧಿಸುವ ನಿರ್ಧಾರವನ್ನು ಪ್ರಕಟಿಸಿದ ದೇವಸ್ವಂ ಪತ್ರಿಕಾ ಪ್ರಕಟಣೆಯಲ್ಲಿ ಎಂದಿನಂತೆ ದೇವಾಲಯ ಸಂಕೀರ್ಣದಲ್ಲಿ ಎಲ್ಲಾ ನಿಯಮಿತ ಪೂಜೆಗಳು ಮತ್ತು ಮೂಲ ವಿಧಿಗಳನ್ನು ನೆರವೇರಿಸಲಾಗುವುದು.

ಡಿಸೆಂಬರ್ 12 ರಿಂದ ವರ್ಚುವಲ್ ಕ್ಯೂ ಮತ್ತು ನೇರ ದರ್ಶನ ಮತ್ತು ಸಮೀಪದ ದೀಪಸ್ಥಂಭ ದರ್ಶನ, ತುಕಾಭಾರ ಹಾಗೂ ಇನ್ನಿತರೆ ಸೇವೆಗಳನ್ನು ರದ್ದುಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶುಕ್ರವಾರ ನಡೆದ ಗುರುವಾಯೂರ್ ದೇವಸ್ವಂ ಆಡಳಿತ ಸಮಿತಿಯ ತುರ್ತು ಸಭೆಯಲ್ಲಿ ಶನಿವಾರದಿಂದ ಎರಡು ವಾರ ಕಾಲ ದೇವಾಲಯಕ್ಕೆ ಭಕ್ತರ ಪ್ರವೇಶ ನಿರ್ಬಂಧಕ್ಕೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂರು ದಿನಗಳಲ್ಲಿ ಎಲ್ಲಾ ದೇವಸ್ವಂ ಅಧಿಕಾರಿಗಳನ್ನು ಪ್ರತಿಜನಕ ಅಥವಾ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆ ನಂತರದಲ್ಲಿ ಇಂತಹಾ ಪರೀಕ್ಷೆಗಳು ತಿಂಗಳಿಗೊಮ್ಮೆ ನಡೆಯಲಿದೆ.
ಗುರುವಾಯೂರ್ ದೇವಸ್ವಂನ ಒಟ್ಟು 153 ಉದ್ಯೋಗಿಗಳು ಶುಕ್ರವಾರ ಪ್ರತಿಜನಕ ಪರೀಕ್ಷೆಯನ್ನು ತೆಗೆದುಕೊಂಡರು ಮತ್ತು ಅವರಲ್ಲಿ 22 ಮಂದಿ ವೈರಲ್ ಸೋಂಕಿಗೆ ಧನಾತ್ಮಕವಾಗಿ ವರದಿ ಪಡೆದಿದ್ದಾರೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.
ದೇವಾಲಯದ ಮೂಲಗಳ ಪ್ರಕಾರ, ಆಲಯದ 22 ಉದ್ಯೋಗಿಗಳು ಶುಕ್ರವಾರ ಸೋಂಕಿಗೆ ಧನಾತ್ಮಕ ವರದಿ ಪಡೆದಿದ್ದಾರೆ.ಗುರುವಾಯೂರ್ ಇರುವ ತ್ರಿಶೂರ್ ಜಿಲ್ಲೆಯಲ್ಲಿ ಶುಕ್ರವಾರ 272 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು ಗುರುವಾರ 393 ಪ್ರಕರಣಗಳು ವರದಿಯಾಗಿವೆ.
ದರ್ಶನಕ್ಕಾಗಿ ಆನ್‌ಲೈನ್ ನೋಂದಣಿಯ ನಂತರ ಸೆಪ್ಟೆಂಬರ್ 10 ರಿಂದ ಕಟ್ಟುನಿಟ್ಟಾದ ಕೋವಿಡ್ -19 ಪ್ರೋಟೋಕಾಲ್‌ನೊಂದಿಗೆ ಭಕ್ತರಿಗೆ ಅವಕಾಶ ನೀಡಲಾಗುತ್ತಿತ್ತು.
ಶನಿವಾರ ನಿಗದಿಯಾಗಿರುವ ಮದುವೆಗಾಗಿ ಈಗಾಗಲೇ ದೇವಸ್ಥಾನವನ್ನು ತಲುಪಿದ ಕುಟುಂಬದವರಿಗೆ ಕಟ್ಟುನಿಟ್ಟಾದ ಕೋವಿಡ್ ಪ್ರೊಟೋಕಾಲ್‌ಗೆ ಅನುಸಾರವಾಗಿ ಸಮಾರಂಭವನ್ನು ನಡೆಸಲು ಅವಕಾಶ ನೀಡಲಾಗುವುದು. ಆದರೆ, ಶನಿವಾರದ ನಂತರ, ಎರಡು ವಾರಗಳವರೆಗೆ ಯಾವುದೇ ಮದುವೆಗೆ ಅವಕಾಶ ನೀಡುವುದಿಲ್ಲ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications