CJP ಪ್ರತಿಭಟನೆಗೆ ಈಗ ಮೋದಿ ರಿಯಾಕ್ಟ್ ಮಾಡಿದ್ದೇಕೆ?: ಅಣ್ಣಾ ಹಜಾರೆ ಚಳುವಳಿಯ ಪಾಠವೇ?

ಕಳೆದ ಕೆಲವು ದಿನಗಳಿಂದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ ಸಿಜೆಪಿ ಹಾಗೂ ವಿದ್ಯಾರ್ಥಿಯರು. ತಡವಾಗಿಯಾದ್ರೂ ಪ್ರಧಾನಿ ಮೋದಿ ಇದೀಗ ಮೌನ ಮುರಿದಿದ್ದು, ಈಗಲೂ ಸುಮ್ಮನಿರದೇ ಮಾತನಾಡಿದ್ದು ಯಾಕೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಬೆಂಗಳೂರು: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಬೇಸತ್ತು ಹಲವು ವಿದ್ಯಾರ್ಥಿಗಳು ಸಾವಿಗೆ ಶರಣಾಗಿದ್ದರು. ಇದರ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ವಿದ್ಯಾರ್ಥಿಗಳು ನವದೆಹಲಿಯ ಜಂತರ್ ಮಂತರ್‌ನಲ್ಲಿ ನಿರಂತರವಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಇಷ್ಟು ಇದಕ್ಕೆ ಕ್ಯಾರೇ ಅನ್ನದ ಸರಕಾರ ಇದೀಗ ಮೌನ ಮುರಿದಿದೆ.

PM Modi

ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ಕಾಂಗ್ರೆಸ್ ಹಾಗೂ ಮೈತ್ರಿ ಪಕ್ಷಗಳೂ ಕೈ ಜೋಡಿಸಿದೆ. ಜೆನ್ ಜೀ ಕಿಚ್ಚು ಹೆಚ್ಚಾಗುತ್ತಿರುವ ಬೆನ್ನಲ್ಲೇ ಸರಕಾರದ ಪ್ರತಿನಿಧಿಗಳು ಪ್ರತಿಭಟನಾನಿರತರನ್ನು ಭೇಟಿ ಆಗಿದ್ದಾರೆ. ಇದೊಂದು ಬೀದಿ ಹೋರಾಟವೆಂದು ನಿರ್ಲಕ್ಷಿಸಲಾಗುವುದಿಲ್ಲವೆಂದು ಈಗಾಗಲೇ 2011-12ರ ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಚಳುವಳಿಯಿಂದ ಪಾಠ ಕಲಿತಾಗಿದೆ. ಯಾವುದೇ ಬೀದಿ ಹೋರಾಟವನ್ನೂ ಶಕ್ತಿಶಾಲಿ ರಾಜಕೀಯ ಶಕ್ತಿಯಾಗಿ ಬೆಳೆಯಲು ಬಿಡಬಾರದೆಂಬುದನ್ನು ಅರಿತಿರುವ ಮೋದಿ ಆ್ಯಂಡ್ ಟೀಂಗೆ ಇನ್ನೂ ಮೌನವಾಗಿದ್ದೆ ಅಪಾಯ ಕಟ್ಟಿಟ್ಟ ಬುತ್ತಿ ಅನ್ನೋದು ಅರ್ಥವಾದಂತಿದೆ.

ಇಂಥ ವಿಷಯಗಳಲ್ಲಿ ಯಾವಾಗ ಏನು ಮಾಡಬೇಕೆಂಬುವುದು ಬೇರೆ ರಾಜಕೀಯ ಪಕ್ಷಗಳಿಗೆ ಹೋಲಿಸಿದಲ್ಲಿ, ಬಿಜೆಪಿ ತುಸು ಹೆಚ್ಚು ಬುದ್ಧಿವಂತಿಕೆ ತೋರುತ್ತೆ. ಅಂದಿನ ಅಣ್ಣಾ ಹಜಾರೆ ಮತ್ತು ಬಾಬಾ ರಾಮ್‌ದೇವ್ ಅವರ ಹೋರಾಟದಿಂದ ಅತ್ಯಂತ ಹೆಚ್ಚು ರಾಜಕೀಯ ಲಾಭ ಪಡೆದದ್ದೇ ಇದೇ ಕಮಲ ಪಾಳಯ.

ಅಂದಿನ ಭ್ರಷ್ಟಾಚಾರ ವಿರೋಧಿ ಹೋರಾಟವು ಕಾಂಗ್ರೆಸ್ ನೇತೃತ್ವದ UPA ಸರ್ಕಾರವನ್ನೇ ದುರ್ಬಲಗೊಳಿಸುವಲ್ಲಿ ಯಶಸ್ವಿಯಾಗಿತ್ತು. ಒಂದೆಡೆ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಾರ್ಟಿ (AAP) ಅಸ್ತಿತ್ವ ಪಡೆದುಕೊಂಡರೆ, ಮತ್ತೊಂದೆಡೆ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಮಟ್ಟದ ಜನಬಲ ತಂದು ಕೊಡುವಲ್ಲಿಯೂ ಯಶಸ್ವಿಯಾಯಿತು. ಆ ಅನುಭವವೇ, ಇಂದಿನ ವಿದ್ಯಾರ್ಥಿ ಪ್ರತಿಭಟನೆಯನ್ನು ಅತ್ಯಂತ ಎಚ್ಚರಿಕೆಯಿಂದ ನಿಭಾಯಿಸುತ್ತಿದೆ ಬಿಜೆಪಿ.

UPA ಸರ್ಕಾರಕ್ಕೂ, ಇಂದಿನ ಬಿಜೆಪಿ ಸರ್ಕಾರಕ್ಕೇನು ವ್ಯತ್ಯಾಸ?

2011ರಲ್ಲಿ ಪರಿಣಾಮಕಾರಿ ಲೋಕಪಾಲ್ ಕಾಯ್ದೆಗೆ ಆಗ್ರಹಿಸಿ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ಆರಂಭಿಸಿದ್ರು. ಅಂದಿನ UPA ಸರ್ಕಾರ ಆ ಹೋರಾಟಕ್ಕೆ ತೀವ್ರ ರಾಜಕೀಯ ಪ್ರಾಮುಖ್ಯತೆ ನೀಡಿತು. ಪ್ರಣಬ್ ಮುಖರ್ಜಿ, ಪಿ. ಚಿದಂಬರಂ, ಸಲ್ಮಾನ್ ಖುರ್ಷಿದ್, ಕಪಿಲ್ ಸಿಬಲ್ ಮತ್ತು ಎಂ. ವೀರಪ್ಪ ಮೊಯ್ಲಿ ಅವರನ್ನೊಳಗೊಂಡ ಐವರು ಹಿರಿಯ ಕೇಂದ್ರ ಸಚಿವರನ್ನು ಹಜಾರೆ ತಂಡದ ಜೊತೆ ನೇರ ಮಾತುಕತೆಗೆ ಕಳುಹಿಸಿತ್ತು.

ಆದರೆ, ಇಂದಿನ ಮೋದಿ ಸರ್ಕಾರ CJP ನಾಯಕರ ಜೊತೆ ಮಾತುಕತೆ ನಡೆಸುತ್ತಿದ್ದರೂ, ಅದನ್ನು ಹಿರಿಯರವರೆಗೆ ತೆಗೆದುಕೊಂಡು ಹೋಗಿಲ್ಲ. ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರನ್ನು ಮಾತ್ರ ಸಿಜೆಪಿ ಜೊತೆ ಮಾತನಾಡಲು ಕಳುಹಿಸಿದೆ. ಆ ಮೂಲಕ ಸಿಜೆಪಿಗೆ ಅಷ್ಟೇನೂ ರಾಜಕೀಯ ಮಹತ್ವ ನೀಡಿಲ್ಲವೆಂಬ ಸ್ಪಷ್ಟ ಸಂದೇಶ ಕಳುಹಿಸಿದೆ ಕೇಂದ್ರ ಸರಕಾರ.

ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರು ಸರ್ಕಾರ ಮತ್ತು ವಿದ್ಯಾರ್ಥಿಗಳ ನಡುವಿನ ಸೇತುವಾಗಿ ಕಾರ್ಯ ನಿರ್ವಹಿಸುವ ಸೂಚನೆ ಇದೀಗ ಸಿಗುತ್ತಿದೆ. ದಿಢೀರ್ ಪ್ರಧಾನ್ ರಾಜೀನಾಮೆ ಆಗ್ರಹವನ್ನು ನಿಲ್ಲಿಸಿದ್ದು, ಪ್ರತಿಭಟನಾನಿರತರ ಮೇಲೆ ಪ್ರಕರಣ ದಾಖಲಿಸುವುದು ಬೇಡ. ವಿದ್ಯಾರ್ಥಿಗಳಿಗಾಗಿ ನಾನು ಬದುಕಬೇಕು ಎನ್ನುವ ಮೂಲಕ ಉಪವಾಸ ನಿಲ್ಲಿಸಲು ಆಸಕ್ತಿ ತೋರಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಹೊಣೆಗಾರಿಕೆ ಕುರಿತು ಸಂಸತ್ತಿನಲ್ಲಿ ಚರ್ಚಿಸಬೇಕೆಂಬ ಸೋನಮ್ ಬೇಡಿಕೆಯನ್ನು ಸರ್ಕಾರ ಒಪ್ಪಿಕೊಂಡರೂ, ಪ್ರತಿಭಟನಾಕಾರರು ಸುಮ್ಮನಾಗೋದು ಡೌಟು.

ಪ್ರಧಾನ್ ರಾಜೀನಾಮೆ ಬೇಡಿಕೆ, ಸರ್ಕಾರಕ್ಕೆ ಕುತ್ತು:

ಅಕಸ್ಮಾತ್ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪಡೆದರೆ ಪದೆ ಪದೇ ಸಚಿವರ ರಾಜೀನಾಮೆಗೆ ಒತ್ತಡ ಶುರುವಾಗಬಹುದೆಂಬ ಆತಂಕ ಕೇಂದ್ರ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. UPA ಕಾಲದಲ್ಲಿ ಸಾಲು ಸಾಲು ಆರೋಪಗಳಿಂದಾಗಿ ರೈಲ್ವೆ ಸಚಿವ ಪವನ್ ಕುಮಾರ್ ಬನ್ಸಲ್ ಮತ್ತು ಕಾನೂನು ಸಚಿವ ಅಶ್ವನಿ ಕುಮಾರ್ ರಾಜೀನಾಮೆ ನೀಡಿದ್ದರು. ಆದರೂ, ಸರ್ಕಾರದಲ್ಲಿ ಭ್ರಷ್ಚಚಾರ ತುಂಬಿ ತುಳುಕುತ್ತಿದೆ ಎಂಬ ಭಾವ ಜನರಿಂದ ದೂರವಾಗಲಿಲ್ಲ.

ಎಚ್ಚರಿಕೆ ಹೆಜ್ಜೆ ಇಡುತ್ತಿರೋ ಕಾಂಗ್ರೆಸ್:

ಕಳೆದ ಕೆಲವು ವರ್ಷಗಳಿಂದಲೂ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಸ್ಪರ್ಧಿ ಎಂದು ಗುರುತಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಜೊತೆಗೆ, INDIA ಮೈತ್ರಿಕೂಟದಲ್ಲಿದ್ದ ಹಲವು ಪ್ರಾದೇಶಿಕ ಪಕ್ಷಗಳು ದುರ್ಬಲಗೊಂಡಿವೆ. ಒಂದು ವೇಳೆ CJP ಚಳುವಳಿಯು ಒಂದು ಹೊಸ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದರೆ, ಅದು ಯುವ ಮತದಾರರನ್ನು ಆಕರ್ಷಿಸಬಹುದು. ಈಗ ಸಿಜೆಪಿಯನ್ನು ಬೆಂಬಲಿಸಿದರೆ ಭಾರತದ ಪುರಾತನ ಪಕ್ಷ ಕಾಂಗ್ರೆಸ್‌ಗೆ ಯುವಕರ ಬೆಂಬಲ ಸಿಕ್ಕಿ, ತನ್ನ ಸ್ಥಾನ ಮರುಸ್ಥಾಪಿಸಲು ನೆರವಾಗಬಹುದೆಂಬ ದೂರಾಲೋಚನೆಯೂ ಜೊತೆಗಿದೆ.

ಆಮ್ ಆದ್ಮಿ ಪಾರ್ಟಿಯಿಂದ ಕಲಿತ ಪಾಠವೂ ಕಾಂಗ್ರೆಸ್ ಮರೆತಿಲ್ಲ. ದೆಹಲಿ ಮತ್ತು ಪಂಜಾಬ್‌ನಲ್ಲಿ ಕಾಂಗ್ರೆಸ್ ಪ್ರಾಬಲ್ಯವನ್ನು ಕಿತ್ತುಕೊಂಡಿದ್ದಷ್ಟೇ ಅಲ್ಲ, ಗುಜರಾತ್ ಮತ್ತು ಗೋವಾದಲ್ಲಿಯೂ ವಿರೋಧ ಪಕ್ಷಗಳ ಮತಗಳನ್ನು ಒಡೆದು ಪರೋಕ್ಷವಾಗಿ ಬಿಜೆಪಿಗೆ ಗೆಲುವು ತಂದುಕೊಡುವಲ್ಲಿ ಆಪ್ ಯಶಸ್ವಿಯಾಗಿತ್ತು. ಬಿಜೆಪಿಗೆ ಆಪ್ ಕತ್ತು ತರಬಹುದು ಎಂದು ಕೊಂಡರೆ, ಕಾಂಗ್ರೆಸ್ ನೆಲ ಕಚ್ಚುವಲ್ಲಿ ಸಹಕರಿಸಿತು.

ಅದಕ್ಕೆ ಕಾಂಗ್ರೆಸ್ ಕೂಡ ಈ ಪ್ರತಿಭಟನೆಯಲ್ಲಿ ಕಾಯ್ದು ನೋಡುವ ತಂತ್ರ ಅನುಸರಿಸುತ್ತಿದೆ. ಪಕ್ಷವು ವಿದ್ಯಾರ್ಥಿಗಳ ಬೇಡಿಕೆಗೆ ಬೆಂಬಲ ನೀಡಿದರೂ, CJP ನಾಯಕತ್ವಕ್ಕೆ ಸಂಪೂರ್ಣ ರಾಜಕೀಯ ಮಾನ್ಯತೆ ನೀಡುತ್ತಿಲ್ಲ. ಜನ ಬೆಂಬಲ ಎಷ್ಟಿದೆ ಎಂಬುದನ್ನು ಅರಿತು ಮುಂದಡಿ ಇಡಲು ನಿರ್ಧರಿಸಿದೆ.

ಪಿಎಂ ಮನೆ ಮುಂದೆ ಪ್ರತಿಭಟನೆ ನಡೆಸಿದ್ಯಾಕೆ?

ಪ್ರಧಾನಿ ನಿವಾಸದ ಬಳಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯ ಉದ್ದೇಶ, ಸರ್ಕಾರದ ಮೇಲೆ ಒತ್ತಡ ಹೇರುವುದು ಮಾತ್ರವಲ್ಲ, ಈ ಹೋರಾಟದಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದೂ ಕಾಂಗ್ರೆಸ್‌ಗೆ ಅನಿವಾರ್ಯವಾಗಿತ್ತು. ಹಿಂದೆ ಅಣ್ಣಾ ಹಜಾರೆ ಹೋರಾಟದ ವೇಳೆ ಬಿಜೆಪಿ ಅನುಸರಿಸಿದ ತಂತ್ರವನ್ನೇ (ಜನರ ಭಾವನೆಗೆ ಬೆಂಬಲ ನೀಡುವುದು, ಆದರೆ ಮತ್ತೊಂದು ರಾಜಕೀಯ ಶಕ್ತಿ ಬೆಳೆಯಲು ಬಿಡದಿರುವುದು) ಇಂದು ಕಾಂಗ್ರೆಸ್ ಅನುಸರಿಸುತ್ತಿದೆ.

ಆಮ್ ಆದ್ಮಿ ಪಾರ್ಟಿಗೂ ಆತಂಕ!

ಇಷ್ಟರ ಮಧ್ಯೆ ಆಮ್ ಆದ್ಮಿ ಪಾರ್ಟಿಯ ಅರವಿಂದ್ ಕೇಜ್ರಿವಾಲ್ ಸಹ ಸಿಜೆಪಿಯನ್ನು ಬೆಂಬಲಿಸುತ್ತಿದೆ. ಯುವ ಜನರ ಮುಖವಾಣಿಯಂತೆ ಬಿಂಬಿತವಾಗಿರುವ ಆಪ್‌ಗೆ ಎಲ್ಲಿ ಸಿಜೆಪಿ ದೊಡ್ಡ ರಾಜಕೀಯ ಶಕ್ತಿಯಾಗಿ ಬೆಳೆಯುತ್ತದೋ ಎಂಬ ಆತಂಕ ಕಾಡುತ್ತಿದೆ. ಯಾವುದೇ ಹೊಸ ಪಕ್ಷ ಉದಯಿಸಿದರೂ, ಅದು ದಿಲ್ಲಿ ರಾಜಕೀಯದ ಮೇಲೆ ಅತ್ಯಂತ ಪ್ರಭಾವ ಬೀರಲಿದ್ದು, ಆ್ಯಟ್‌ಲೀಸ್ಟ್ ವಿರೋಧ ಪಕ್ಷವಾಗಿರುವ ಆಪ್‌ಗೆ ತನ್ನ ಸ್ಥಾನಕ್ಕೆ ಕುತ್ತು ಬರಬಹುದೆಂಬ ಆತಂಕ ಎಡಬಿಡದೇ ಕಾಡುತ್ತಿದೆ.

ಅಣ್ಣಾ ಹಜಾರೆ ಚಳುವಳಿ ಹಿನ್ನೆಲೆ:

ಭ್ರಷ್ಟಾಚಾರದ ವಿರುದ್ಧದ ಒಂದು ಅಭಿಯಾನವಾಗಿ ಅಣ್ಣಾ ಹಜಾರೆ 2011ರ ಏಪ್ರಿಲ್ 5 ರಂದು ಹಜಾರೆ ಲೋಕಪಾಲ್ ಕಾಯ್ದೆ ಜಾರಿಗೊಳಿಸಲು ಆಗ್ರಹಿಸಿ ಉಪವಾಸ ಸತ್ಯಾಗ್ರಹ ಆರಂಭಿಸಿದರು. ದೇಶಾದ್ಯಂತ ವ್ಯಕ್ತವಾದ ಭಾರಿ ಬೆಂಬಲಕ್ಕೆ ಹೆದರಿದ UPA ಸರ್ಕಾರ, ಕಾನೂನು ರೂಪಿಸಲು ಸಚಿವರು ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳನ್ನೊಳಗೊಂಡ ಜಂಟಿ ಸಮಿತಿಯನ್ನು ರಚಿಸಬೇಕಾಯಿತು.

ಹಜಾರೆ ಮತ್ತು ಬಾಬಾ ರಾಮ್‌ದೇವ್ ಜಂತರ್ ಮಂತರ್‌ನಲ್ಲಿ 2012ರಲ್ಲಿ ಮತ್ತೆ ಜೊತೆಯಾಗಿ ವಿದೇಶದಲ್ಲಿದ್ದ ಭಾರತೀಯರ ಕಪ್ಪು ಹಣವನ್ನು ಮರಳಿ ತರಬೇಕು ಹಾಗೂ ಕಠಿಣ ಭ್ರಷ್ಟಾಚಾರ ವಿರೋಧಿ ಕಾಯ್ದೆ ಬೇಕೆಂದು ಮತ್ತೆ ಹೋರಾಡಿದರು. ಆ ವೇಳೆ 2G ಸ್ಪೆಕ್ಟ್ರಮ್ ಹಂಚಿಕೆ ಹಗರಣ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಹಗರಣಗಳಂತಹ ಪ್ರಮುಖ ಆರೋಪಗಳು ಜನರ ಆಕ್ರೋಶಕ್ಕೆ ಬೆಂಕಿ ಹೊತ್ತಿಸಿದ್ದವು.

ವಿನೋದ್ ರೈ ನೇತೃತ್ವದ ಮಹಾಲೇಖಪಾಲರ (CAG) ವರದಿಯು, 2G ಹಗರಣದಿಂದ ಸರ್ಕಾರಕ್ಕೆ ₹1.76 ಲಕ್ಷ ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಿತ್ತು. ಅದು UPA ವಿರುದ್ಧ ಜನರನ್ನು ಎದ್ದು ನಿಲ್ಲುವಂತೆ ಮಾಡಿತು.ವರ್ಷಗಳ ನಂತರ ನ್ಯಾಯಾಲಯ ನೀಡಿದ ತೀರ್ಪು ಸಂಪೂರ್ಣವಾಗಿ ಬೇರೆ ಆಗಿತ್ತು. ಡಿಸೆಂಬರ್ 2017ರಲ್ಲಿ, ಪ್ರತ್ಯೇಕ ಸಿಬಿಐ ವಿಶೇಷ ನ್ಯಾಯಾಲಯ ಭ್ರಷ್ಟಾಚಾರ ಆರೋಪವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಹೇಳಿ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿತು.

ನಂತರ ವಿನೋದ್ ರೈ ಅವರು ಹಲವು ಪ್ರಮುಖ ಹುದ್ದೆಗಳನ್ನು ಅಲಂಕರಿಸುವಲ್ಲಿಯೂ ಯಶಸ್ವಿಯಾದರು. BCCI ಆಡಳಿತ ಸುಧಾರಣೆಗಾಗಿ ರಚನೆಯಾದ ಸಿಒಎ (CoA) ಮುಖ್ಯಸ್ಥರಾದರು, ಬ್ಯಾಂಕ್ಸ್ ಬೋರ್ಡ್ ಬ್ಯೂರೋದ ಮೊದಲ ಅಧ್ಯಕ್ಷರಾದರು. ಅಷ್ಟೇ ಅಲ್ಲ ಹಲವು ಖಾಸಗಿ ಕಂಪನಿಗಳಲ್ಲಿಯೂ ಸೇವೆ ಸಲ್ಲಿಸಿದರು.

ಇತ್ತ ಅಣ್ಣಾ ಹಜಾರೆ ಅವರು ಕಳೆದ 12 ವರ್ಷಗಳಲ್ಲಿ ಯಾವುದೇ ಪ್ರತಿಭಟನೆಗೂ ಬರಲಿಲ್ಲ. ಕೊನೆಗೆ ರೈತರ ದೊಡ್ಡ ಹೋರಾಟ ನಡೆದಾಗಲೂ ಅವರು ಮೌನಕ್ಕೆ ಶರಣಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+