ಹಿಂದೆ ಇದನ್ನ ಯಾರೂ ಮಾಡಿಲ್ಲ: ಕನ್ನಡಿಗ ದ್ರಾವಿಡ್‌ಗೆ ಕೊಟ್ಟ ಮಾತು ಉಳಿಸಿಕೊಂಡ ವೈಭವ್‌ಗೆ ಸಲಾಂ ಎಂದ ಹರ್ಭಜನ್ ಸಿಂಗ್
Vaibhav Sooryavanshi: ಐಪಿಎಲ್‌ನಲ್ಲಿ ರನ್‌ಮಳೆ ಹರಿಸುವ ಮೂಲಕ ಭಾರತದ ಹಿರಿಯರ ತಂಡಕ್ಕೆ ಪಾದಾರ್ಪಣೆ ಮಾಡಿದ ವೈಭವ್ ಸೂರ್ಯವಂಶಿ ಬಗ್ಗೆ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಹರ್ಭಜನ್ ಸಿಂಗ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇದು ಇದೀಗ ಎಲ್ಲೆಡೆ ಸಖತ್ ಸದ್ದು ಮಾಡುತ್ತಿದೆ.
ಐಪಿಎಲ್‌ನಲ್ಲಿ ವಿಶ್ವಶ್ರೇಷ್ಠ ಬೌಲರ್‌ಗಳನ್ನೇ ದಂಡಿಸಿ ಕ್ರಿಕೆಟ್ ಜಗತ್ತೇ ತನ್ನೆಡೆಗೆ ತಿರುಗಿ ನೋಡುವಂತೆ ಮಾಡಿದ್ದ 15 ವರ್ಷದ ಬಾಲಕ ವೈಭವ್ ಸೂರ್ಯವಂಶಿ ಅವರನ್ನು ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಪ್ರಚಂಡ ಪುಟಾಣಿ, ಯೂನಿವರ್ಸಲ್ ಬೇಬಿ ಬಾಸ್ ಅಂತಾ ಪ್ರಸಿದ್ಧಿ ಪಡೆದಿದ್ದಾರೆ. ಅಲ್ಲದೆ ಇವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಾಗಲೂ ದಿಗ್ಗಜರಿಂದ ಮೆಚ್ಚುಗೆಗಳ ಸುರಿಮಳೆ ಹರಿದುಬಂದಿದ್ದವು. ಇದೀಗ ಭಜ್ಜಿ ಸಹ ಇವರ ಭಯವಿಲ್ಲದ ಆಟಕ್ಕೆ ಸಲಾಂ ಅಂದಿದ್ದಾರೆ.

ವೈಭವ್ ಕೊಂಡಾಡಿದ ಹರ್ಭಜನ್ ಸಿಂಗ್
ಟೀಮ್ ಇಂಡಿಯಾದ ಮಾಜಿ ಆಫ್-ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಯುವ ಸ್ಟಾರ್ ಆಟಗಾರ ವೈಭವ್ ಸೂರ್ಯವಂಶಿ ಅವರ ಆಟದ ವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. 'ಇಂತಹ ಅದ್ಭುತ ಕೌಶಲ್ಯ ಮತ್ತು ನಿರ್ಭೀತವಾಗಿ ಬ್ಯಾಟ್ ಬೀಸುವ ಮನೋಭಾವವನ್ನು ಈವರೆಗೆ ಯಾರೂ ಹೊಂದಿರಲಲ್ಲಿ. ವೈಭವ್ ಅವರು ಒಬ್ಬ ಅದ್ಭುತ ಪ್ರತಿಭೆ,' ಎಂದು ಅವರು ಬಣ್ಣಿಸಿದ್ದಾರೆ. ಇದೇ ವೇಳೆ ಇನ್ನೂ ಹಲವು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ.
ಜಿಯೋ ಹಾಟ್‌ಸ್ಟಾರ್ ಜೊತೆ ಮಾತನಾಡಿದ ಹರ್ಭಜನ್ ಸಿಂಗ್ ಅವರು, 'ವೈಭವ್ ಅವರ ಆತ್ಮವಿಶ್ವಾಸ ಹೊಗಳಿದ್ದಾರೆ. ಇಂದಿನ ಯುವ ಕ್ರಿಕೆಟಿಗರು ಯಾವುದೇ ಭಯವಿಲ್ಲದೆ ಆಕ್ರಮಣಕಾರಿ ಆಟ ಆಡುತ್ತಿದ್ದಾರೆ. ಇದು ಭಾರತೀಯ ಕ್ರಿಕೆಟ್‌ನ ಬದಲಾಗುತ್ತಿರುವ ಮನಸ್ಥಿತಿಯನ್ನು ತೋರಿಸುತ್ತದೆ,' ಎಂದು ಹೇಳಿದ್ದಾರೆ.
'ವೈಭವ್ ನಿಜಕ್ಕೂ ಅದ್ಭುತ ಪ್ರತಿಭೆ'
'ವೈಭವ್ ಸೂರ್ಯವಂಶಿ ಈಗ ಮಾಡುತ್ತಿರುವ ಸಾಧನೆಯನ್ನು ಈ ಹಿಂದೆ ಯಾರೂ ಮಾಡಿಲ್ಲ. ಅವರು ನಿಜಕ್ಕೂ ಅದ್ಭುತ ಪ್ರತಿಭೆ. ನನ್ನ ಇಡೀ ವೃತ್ತಿಜೀವನದಲ್ಲಿ ಇಂತಹ ಆಕ್ರಮಣಕಾರಿ ಬ್ಯಾಟಿಂಗ್ ಕೌಶಲ್ಯ ಹೊಂದಿರುವ ಯುವ ಆಟಗಾರನನ್ನು ನಾನು ನೋಡಿಲ್ಲ,' ಎಂದು ಹರ್ಭಜನ್ ಸಿಂಗ್ ಅವರು ತಿಳಿಸಿದ್ದಾರೆ.
ಈಗಿನ ಯುವ ಆಟಗಾರರಿಗೆ ಸೋಶಿಯಲ್ ಮೀಡಿಯಾ ಮತ್ತು ದೃಶ್ಯ ಮಾಧ್ಯಮಗಳ ಮೂಲಕ ಸಿಗುತ್ತಿರುವ ವ್ಯಾಪಕ ಪ್ರಚಾರದ ಬಗ್ಗೆ ಮಾತನಾಡಿದ ಅವರು, 'ಹಿಂದಿನ ಕಾಲದಲ್ಲೂ ಪ್ರತಿಭಾನ್ವಿತ ಆಟಗಾರರಿದ್ದರು. ಆದರೆ ಇಂದಿನ ಸಾಮಾಜಿಕ ಜಾಲತಾಣ ಎಂಬ ದೊಡ್ಡ ವೇದಿಕೆಯಿಂದಾಗಿ ಪ್ರತಿಯೊಂದು ಸಣ್ಣ ಸಾಧನೆಯೂ ದೊಡ್ಡ ಮಟ್ಟದಲ್ಲಿ ಜನರನ್ನು ತಲುಪುತ್ತಿದೆ. ಅದರಲ್ಲೂ ವೈಭವ್ ಆಟದ ಶೈಲಿಯಂತೂ ವಿಶ್ವದಾದ್ಯಂತ ತಲುಪಿರುವುದು ಖಷಿಯ ವಿಚಾರ,' ಎಂದು ಹೇಳಿದ್ದಾರೆ.
ದ್ರಾವಿಡ್ ಪ್ರಶ್ನೆಗೆ ವೈಭವ್ ನೀಡಿದ ಉತ್ತರ ಏನು ಗೊತ್ತಾ?
ವೈಭವ್ ಸೂರ್ಯವಂಶಿ ಅವರ ಭಯವಿಲ್ಲದ ಆಟಕ್ಕೆ ಸಾಕ್ಷಿಯಾಗಿ ಹರ್ಭಜನ್ ಸಿಂಗ್ ಅವರು ಒಂದು ಕುತೂಹಲಕಾರಿ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಐಪಿಎಲ್ ಪದಾರ್ಪಣೆಗೂ ಮುನ್ನ, ರಾಜಸ್ಥಾನ್ ರಾಯಲ್ಸ್ ತಂಡದ ಅಂದಿನ ಕೋಚ್ ರಾಹುಲ್ ದ್ರಾವಿಡ್ ಅವರು ವೈಭವ್‌ಗೆ ಒಂದು ಪ್ರಶ್ನೆ ಕೇಳಿದ್ದರು. ನಿಮ್ಮ ಐಪಿಎಲ್ ವೃತ್ತಿಜೀವನದ ಮೊದಲ ಎಸೆತದಲ್ಲೇ ಹೊಡೆಯಲು ಅನುಕೂಲಕರವಾದ ಬಾಲ್ ಸಿಕ್ಕರೆ ಏನು ಮಾಡುತ್ತೀರಿ? ಎಂದು ದ್ರಾವಿಡ್ ಕೇಳಿದ್ದರು. ಅದಕ್ಕೆ ವೈಭವ್ ಆ ಬಾಲ್ ನನ್ನ ಬಳಿ ಬಂದರೆ ನಾನು ಖಂಡಿತವಾಗಿಯೂ ಸಿಕ್ಸರ್ ಬಾರಿಸುತ್ತೇನೆ ಎಂದು ಉತ್ತರಿಸಿದ್ದರು ಎಂದು ನೆನಪಿಸಿಕೊಂಡು.
'ತಮ್ಮ ಮಾತಿನಂತೆ ನಡೆದುಕೊಂಡ ವೈಭವ್ ಸೂರ್ಯವಂಶಿ ಅವರು, ಶಾರ್ದೂಲ್ ಠಾಕೂರ್ ಅವರ ಬೌಲಿಂಗ್‌ನಲ್ಲಿ ಎದುರಿಸಿದ ಮೊದಲ ಎಸೆತದಲ್ಲೇ ಭರ್ಜರಿ ಸಿಕ್ಸರ್ ಬಾರಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೆ ಒಳಗಾಗುವಂತೆ ಮಾಡಿದ್ದರು. ಈ ಪ್ರಸಂಗ ಯುವ ಆಟಗಾರನಲ್ಲಿರುವ ಅಪಾರ ಆತ್ಮವಿಶ್ವಾಸವನ್ನು ತೋರಿಸುತ್ತದೆ,' ಎಂದು ಹರ್ಭಜನ್ ಮೆಚ್ಚುಗೆ ವ್ಯಕ್ತಪಡಿಸಿದರು.
ಸಚಿನ್ ತೆಂಡೂಲ್ಕರ್ ಸಲಹೆ ನೆನೆದ ಹರ್ಭಜನ್ ಸಿಂಗ್
ಇದೇ ವೇಳೆ ತಮ್ಮ ಕ್ರಿಕೆಟ್ ಜೀವನದಲ್ಲಿ ಸಚಿನ್ ತೆಂಡೂಲ್ಕರ್ ಅವರಿಂದ ದೊರೆತ ಮಹತ್ವದ ಸಲಹೆಯನ್ನು ಹರ್ಭಜನ್ ಸಿಂಗ್ ನೆನಪಿಸಿಕೊಂಡಿದ್ದಾರೆ. 'ಸಚಿನ್ ಒಮ್ಮೆ ನನಗೆ ಹೇಳಿದ್ದರು. ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯುವ ಹಲವು ವಿಷಯಗಳು ಬರುತ್ತವೆ. ಆದರೆ ನೀವು ಕುದುರೆಯ ಕಣ್ಣಿಗೆ ಕಟ್ಟುವ ಪಟ್ಟಿಗಳಂತೆ ಕೇವಲ ನೇರವಾಗಿ, ಅಂದರೆ ಕ್ರಿಕೆಟ್‌ನತ್ತ ಮಾತ್ರ ಗಮನ ಹರಿಸಬೇಕು. ಇದನ್ನು ಪಾಲಿಸಿದರೆ ನಿಮಗೆ ಸಿಗಬೇಕಾದ ಗೌರವ, ಹೆಸರು ಮತ್ತು ಪ್ರಸಿದ್ಧಿ ತಾನಾಗಿಯೇ ಹುಡುಕಿಕೊಂಡು ಬರುತ್ತದೆ ಎಂದು ಹೇಳಿದ್ದರು,' ಅಂತಾ ಸ್ಮರಿಸಿದರು.
ಈ ಅತ್ಯದ್ಭುತ ಸಲಹೆಯನ್ನೇ ಹರ್ಭಜನ್ ಸಿಂಗ್ ಅವರು ಇಂದಿನ ಯುವ ಆಟಗಾರರಿಗೂ ನೀಡಿದ್ದಾರೆ. 'ಯಾವತ್ತೂ ಕ್ರಿಕೆಟ್‌ಗಿಂತ ನಾವು ದೊಡ್ಡವರಲ್ಲ ಎಂಬುದನ್ನು ನೆನಪಿಡಬೇಕು. ಆಟವನ್ನು ಗೌರವಿಸದಿದ್ದರೆ, ಕ್ರಿಕೆಟ್ ನೀಡಿದ ಪ್ರಸಿದ್ಧಿಯನ್ನು ಅಷ್ಟೇ ವೇಗವಾಗಿ ಹಿಂಪಡೆಯುವ ಶಕ್ತಿಯನ್ನೂ ಹೊಂದಿದೆ,' ಎಂದು ಹರ್ಭಜನ್ ಸಿಂಗ್ ಅವರು ವೈಭವ್ ಸೇರಿದಂತೆ ಇನ್ನಿತರೆ ಯುವ ಆಟಗಾರರಿಗೆ ಕಿವಿಮಾತು ಹೇಳಿ ಗಮನ ಸೆಳೆದರು. ಒಟ್ಟಿನಲ್ಲಿ ಭಜ್ಜಿ ಅವರು ಬಾಲಕ ವೈಭವ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ವಿಚಾರ ಇದೀಗ ಸಖತ್ ಟ್ರೆಂಡಿಂಗ್‌ನಲ್ಲಿದೆ.


Click it and Unblock the Notifications
