ಸಮುದ್ರದ ಪಾತಾಳದಿಂದ ಸೂರ್ಯನ ಬೆಳಕಿನವರೆಗೆ! ವಿಜ್ಞಾನಿಗಳೇ ಬೆರಗಾದ ಜೀವಿಗಳ ರಹಸ್ಯ ಪ್ರಯಾಣ

ಭೂಮಿಯ ಅತ್ಯಂತ ನಿಗೂಢ ಪರಿಸರಗಳಲ್ಲಿ ಒಂದಾದ ಸಮುದ್ರದ ಸಾವಿರಾರು ಮೀಟರ್ ಆಳದಲ್ಲಿರುವ ಹೈಡ್ರೋಥರ್ಮಲ್ ವೆಂಟ್‌ಗಳು (Hydrothermal Vents) ವಿಜ್ಞಾನಿಗಳಿಗೆ ಹಲವು ದಶಕಗಳಿಂದ ಒಗಟಾಗಿವೆ. ಸೂರ್ಯನ ಬೆಳಕು ತಲುಪದ, ಸುಮಾರು 300-400 ಡಿಗ್ರಿ ಸೆಲ್ಸಿಯಸ್ ಉಷ್ಣತೆಯ ಬಿಸಿ ನೀರು ಹೊರಹೊಮ್ಮುವ, ವಿಪರೀತ ನೀರಿನ ಒತ್ತಡವಿರುವ ಈ ಪ್ರದೇಶಗಳಲ್ಲಿ ಬದುಕುವ ಬಸವನಹುಳುಗಳು, ಲಿಂಪೆಟ್‌ಗಳು (limpets), ಸೀಗಡಿಗಳು ಮತ್ತು ಇತರ ವಿಚಿತ್ರ ಜೀವಿಗಳು ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಮತ್ತೊಂದು ವೆಂಟ್‌ಗೆ ಹೇಗೆ ತಲುಪುತ್ತವೆ? ತೆವಳುತ್ತವೆಯೋ ಈಜುತ್ತವೆಯೋ? ದಾರಿ ಹೇಗೆ ತಿಳಿಯುತ್ತವೆ? ಎಂಬೆಲ್ಲ ಪ್ರಶ್ನೆಗೆ ಈಗ ಮಹತ್ವದ ಉತ್ತರ ಸಿಕ್ಕಿದೆ. ಟೋಕಿಯೊ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಹೊಸ ಅಧ್ಯಯನವು ಈ ಆಳ ಸಮುದ್ರದ ಜೀವಿಗಳ ಜೀವನಚಕ್ರದ ಬಗ್ಗೆ ಅಚ್ಚರಿಯ ಸತ್ಯಗಳನ್ನು ಬಹಿರಂಗಪಡಿಸಿದೆ.

ಸಮುದ್ರದ ತಳದಲ್ಲಿರುವ "ದ್ವೀಪಗಳು"

ಹೈಡ್ರೋಥರ್ಮಲ್ ವೆಂಟ್‌ಗಳನ್ನು ವಿಜ್ಞಾನಿಗಳು "ಸಮುದ್ರದ ತಳದ ದ್ವೀಪಗಳು" ಎಂದು ಕರೆಯುತ್ತಾರೆ. ಇವುಗಳ ಸುತ್ತಮುತ್ತ ಮಾತ್ರ ವಿಶೇಷ ಜೀವಿಗಳು ಬದುಕುತ್ತವೆ. ಒಂದು ವೆಂಟ್ ಮತ್ತು ಇನ್ನೊಂದು ವೆಂಟ್ ನಡುವೆ ನೂರಾರು ಅಥವಾ ಸಾವಿರಾರು ಕಿಲೋ ಮೀಟರ್ ಅಂತರವಿರಬಹುದು. ಮಧ್ಯದಲ್ಲಿ ಅವುಗಳಿಗೆ ಬದುಕಲು ಸೂಕ್ತ ಪರಿಸರವೂ ಇರುವುದಿಲ್ಲ.

Ocean Floor

ಆದರೂ ಒಂದೇ ಜಾತಿಯ ಜೀವಿಗಳು ಹಲವು ದೂರದ ವೆಂಟ್‌ಗಳಲ್ಲಿ ಕಂಡುಬರುತ್ತವೆ. ಇಷ್ಟು ದೂರ ಇವು ಹೇಗೆ ಹರಡುತ್ತವೆ ಎಂಬುದು ಹಲವು ವರ್ಷಗಳಿಂದ ಬಗೆಹರಿಯದ ಪ್ರಶ್ನೆಯಾಗಿತ್ತು.

ಕತ್ತಲೆಯಿಂದ ಬೆಳಕಿನ ಕಡೆಗೆ

ಈ ಅಧ್ಯಯನದಲ್ಲಿ ವಿಜ್ಞಾನಿಗಳು ಮೂರು ಜಾತಿಯ ಲಿಂಪೆಟ್‌ಗಳ ಚಿಪ್ಪುಗಳನ್ನು ಅತ್ಯಾಧುನಿಕ ರಾಸಾಯನಿಕ ತಂತ್ರಜ್ಞಾನದಿಂದ ಪರೀಕ್ಷಿಸಿದರು. ಆ ಚಿಪ್ಪುಗಳ ಅತ್ಯಂತ ಸಣ್ಣ ಲಾರ್ವಾ (ಮರಿ) ಹಂತದ ಪದರಗಳಲ್ಲಿ ಅವು ಬೆಳೆದ ಪರಿಸರದ ರಾಸಾಯನಿಕ ಗುರುತುಗಳು ಸಂಗ್ರಹವಾಗಿದ್ದವು.

ಅವುಗಳ ವಿಶ್ಲೇಷಣೆಯಿಂದ ಬೆಚ್ಚಿಬೀಳಿಸುವ ಸಂಗತಿ ಗೊತ್ತಾಯಿತು. ಈ ಜೀವಿಗಳು ಮೊಟ್ಟೆಯಿಂದ ಹೊರಬಂದ ನಂತರ ಸಮುದ್ರದ ತಳದಲ್ಲೇ ಉಳಿಯುವುದಿಲ್ಲ. ಬದಲಿಗೆ ಸುಮಾರು 2,000 ಮೀಟರ್ ಆಳದಿಂದ ಮೇಲಕ್ಕೆ ಈಜಿಕೊಂಡು, ಸೂರ್ಯನ ಬೆಳಕು ತಲುಪುವ ಸಮುದ್ರದ ಮೇಲಿನ ಪದರಗಳಿಗೆ ಬರುತ್ತವೆ. ಅಲ್ಲಿ ಫೈಟೋಪ್ಲಾಂಕ್ಟನ್‌ಗಳಂತಹ ಸೂಕ್ಷ್ಮ ಸಸ್ಯಜೀವಿಗಳನ್ನು ಆಹಾರವಾಗಿ ಸೇವಿಸಿ ಬೆಳೆಯುತ್ತವೆ.

ನಂತರ ಸಮುದ್ರದ ಮೇಲ್ಭಾಗದಲ್ಲಿರುವ ಪ್ರಬಲ ಸಾಗರ ಪ್ರವಾಹಗಳ ಸಹಾಯದಿಂದ ನೂರಾರು ಅಥವಾ ಸಾವಿರಾರು ಕಿಲೋಮೀಟರ್ ದೂರದವರೆಗೆ ಸಾಗುತ್ತವೆ. ಕೊನೆಗೆ ಮತ್ತೊಮ್ಮೆ ಸಮುದ್ರದ ಆಳಕ್ಕೆ ಇಳಿದು ಹೊಸ ಹೈಡ್ರೋಥರ್ಮಲ್ ವೆಂಟ್‌ನಲ್ಲಿ ನೆಲೆಸುತ್ತವೆ.

ಚಿಪ್ಪಿನೊಳಗೆ ಅಡಗಿದ್ದ ರಹಸ್ಯ

ಈ ಪ್ರಯಾಣವನ್ನು ವಿಜ್ಞಾನಿಗಳು ನೇರವಾಗಿ ನೋಡಿಲ್ಲ. ಆದರೆ ಚಿಪ್ಪಿನಲ್ಲೇ ಅದರ ಸಾಕ್ಷಿ ಸಿಕ್ಕಿದೆ. ಸಮುದ್ರದ ಆಳದಲ್ಲಿರುವ ಬಿಸಿ ನೀರಿನಲ್ಲಿ ಮ್ಯಾಂಗನೀಸ್ ಮತ್ತು ಬೇರಿಯಮ್‌ನಂತಹ ಲೋಹಗಳ ಪ್ರಮಾಣ ಹೆಚ್ಚು ಇರುತ್ತದೆ. ಆದರೆ ಲಾರ್ವಾ ಹಂತದ ಚಿಪ್ಪಿನಲ್ಲಿ ಅವುಗಳ ಗುರುತು ಕಾಣಿಸಲಿಲ್ಲ. ಬದಲಿಗೆ ಬೆಚ್ಚಗಿನ ಮೇಲ್ಮೈ ನೀರಿನ ರಾಸಾಯನಿಕ ಲಕ್ಷಣಗಳು ಕಂಡುಬಂದವು.

ಅಂದರೆ ಈ ಜೀವಿಗಳು ತಮ್ಮ ಬಾಲ್ಯವನ್ನು ಸಮುದ್ರದ ಮೇಲ್ಮೈ ಸಮೀಪದಲ್ಲೇ ಕಳೆದಿವೆ ಎಂಬುದು ದೃಢಪಟ್ಟಿತು. ಚಿಪ್ಪುಗಳು ಮರದ ವಾರ್ಷಿಕ ವಲಯಗಳಂತೆ ಜೀವನದ ಇತಿಹಾಸವನ್ನು ದಾಖಲಿಸಿಕೊಂಡಿದ್ದವು.

ಕೋಟ್ಯಂತರ ಮೊಟ್ಟೆಗಳ ಹಿಂದಿನ ಕಾರಣ

ಈ ಪ್ರಯಾಣ ಅತ್ಯಂತ ಅಪಾಯಕಾರಿ. ಮೇಲ್ಮೈಗೆ ತಲುಪಿದ ಲಾರ್ವಾಗಳಲ್ಲಿ ಬಹುತೇಕವು ಮೀನುಗಳು ಮತ್ತು ಇತರ ಸಮುದ್ರ ಜೀವಿಗಳಿಗೆ ಆಹಾರವಾಗುತ್ತವೆ. ಇನ್ನೂ ಕೆಲವು ಸಾಗರ ಪ್ರವಾಹಗಳಲ್ಲಿ ದಾರಿ ತಪ್ಪುತ್ತವೆ. ಬಹಳ ಕಡಿಮೆ ಸಂಖ್ಯೆಯ ಲಾರ್ವಾಗಳು ಮಾತ್ರ ಸುರಕ್ಷಿತವಾಗಿ ಹೊಸ ವೆಂಟ್‌ಗೆ ತಲುಪಿ ಬದುಕು ಆರಂಭಿಸುತ್ತವೆ.

ಈ ಕಾರಣಕ್ಕಾಗಿಯೇ ಹೈಡ್ರೋಥರ್ಮಲ್ ವೆಂಟ್ ಜೀವಿಗಳು ಒಂದೇ ಬಾರಿ ಲಕ್ಷಾಂತರ ಅಥವಾ ಕೋಟ್ಯಂತರ ಮೊಟ್ಟೆಗಳನ್ನು ಇಡುತ್ತವೆ ಎಂದು ಸಂಶೋಧಕರು ಹೇಳುತ್ತಾರೆ. ಹೆಚ್ಚು ಮೊಟ್ಟೆಗಳಿದ್ದಷ್ಟೂ ಕೆಲವೇ ಕೆಲವು ಜೀವಿಗಳು ಬದುಕುಳಿಯುವ ಸಾಧ್ಯತೆ ಹೆಚ್ಚಾಗುತ್ತದೆ.

ಈ ಸಂಶೋಧನೆ ಏಕೆ ಮಹತ್ವದ್ದು?

ಇಲ್ಲಿಯವರೆಗೆ ಆಳ ಸಮುದ್ರದ ಪರಿಸರವು ಮೇಲ್ಮೈ ಸಮುದ್ರದ ಪರಿಸರದಿಂದ ಸಂಪೂರ್ಣ ಪ್ರತ್ಯೇಕವಾಗಿದೆ ಎಂದು ವಿಜ್ಞಾನಿಗಳು ಭಾವಿಸಿದ್ದರು. ಆದರೆ ಹೊಸ ಅಧ್ಯಯನವು ಅದಕ್ಕೆ ವಿರುದ್ಧವಾದ ಚಿತ್ರಣ ನೀಡಿದೆ.

ಆಳ ಸಮುದ್ರದ ಜೀವಿಗಳ ಬದುಕು ಕೂಡ ಮೇಲ್ಮೈಯಲ್ಲಿರುವ ಸೂರ್ಯನ ಬೆಳಕು, ಫೈಟೋಪ್ಲಾಂಕ್ಟನ್, ಸಮುದ್ರದ ಪ್ರವಾಹಗಳು ಮತ್ತು ಮೇಲ್ಮೈ ನೀರಿನ ತಾಪಮಾನದ ಮೇಲೆ ಅವಲಂಬಿತವಾಗಿದೆ. ಅಂದರೆ ಸಮುದ್ರದ ಕತ್ತಲೆಯ ಜಗತ್ತು ಮತ್ತು ಬೆಳಕಿನ ಜಗತ್ತು ಪರಸ್ಪರ ಗಟ್ಟಿಯಾಗಿ ಜೋಡಿಸಿಕೊಂಡಿವೆ.

ಈ ಅಧ್ಯಯನ ಮತ್ತೊಂದು ಎಚ್ಚರಿಕೆಯನ್ನೂ ನೀಡಿದೆ. ಲಾರ್ವಾಗಳ ದೂರದ ಪ್ರಯಾಣ ಸಂಪೂರ್ಣವಾಗಿ ಸಾಗರ ಪ್ರವಾಹಗಳ ಮೇಲೆ ಅವಲಂಬಿತವಾಗಿದೆ. ಜಾಗತಿಕ ತಾಪಮಾನ ಏರಿಕೆಯಿಂದ ಸಮುದ್ರದ ತಾಪಮಾನ ಮತ್ತು ಪ್ರವಾಹಗಳ ದಿಕ್ಕು ಬದಲಾದರೆ ಈ ಜೀವಿಗಳ ವಲಸೆಗೂ ಪರಿಣಾಮ ಬೀಳುವ ಸಾಧ್ಯತೆಯಿದೆ.

ಅದೇ ರೀತಿ ಆಳ ಸಮುದ್ರದ ಗಣಿಗಾರಿಕೆ (Deep-sea Mining) ಆರಂಭವಾದರೆ ವೆಂಟ್ ಪರಿಸರ ವ್ಯವಸ್ಥೆಗಳ ಮೇಲೆ ಏನು ಪರಿಣಾಮ ಉಂಟಾಗಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಸಂಶೋಧನೆ ಪ್ರಮುಖ ಆಧಾರ. ವಿಜ್ಞಾನಿಗಳ ಪ್ರಕಾರ, ವಿವಿಧ ವೆಂಟ್ ಜೀವಿಗಳ ಜೀವನಚಕ್ರವನ್ನು ಇನ್ನಷ್ಟು ಅಧ್ಯಯನ ಮಾಡಿದರೆ ಮಾತ್ರ ಸಮುದ್ರದ ತಳದಲ್ಲಿನ ಪರಿಸರ ವ್ಯವಸ್ಥೆಗಳನ್ನು ಸಮರ್ಪಕವಾಗಿ ಸಂರಕ್ಷಿಸುವ ಯೋಜನೆ ರೂಪಿಸಲು ಸಾಧ್ಯವಾದೀತು.

ಅಚ್ಚರಿಯ ಪ್ರಶ್ನೆಗಳು

ಸದ್ಯದ ಅಧ್ಯಯನವು ಸುಮಾರು 2,000 ಮೀಟರ್ ಆಳದಲ್ಲಿರುವ ವೆಂಟ್‌ಗಳ ಜೀವಿಗಳ ಮೇಲೆ ನಡೆದಿತ್ತು. ಆದರೆ ಭೂಮಿಯಲ್ಲಿನ ಕೆಲವು ಹೈಡ್ರೋಥರ್ಮಲ್ ವೆಂಟ್‌ಗಳು 5,000 ಮೀಟರ್‌ಗಿಂತಲೂ ಹೆಚ್ಚು ಆಳದಲ್ಲಿವೆ. ಅಲ್ಲೂ ಇಂಥ ಜೀವಿಗಳಿವೆ. ಸಹಜವಾಗಿಯೇ ಅಷ್ಟು ಆಳದಲ್ಲಿ ಒತ್ತಡ ಸಿಕ್ಕಾಪಟ್ಟೆ. ಮನುಷ್ಯ ಊಹಿಸಲೂ ಸಾಧ್ಯವಿಲ್ಲ. ಮನುಷ್ಯನೇನು, ಯಾವ ಸಮುದ್ರನೌಕೆಯೂ ಅಷ್ಟು ಆಳಕ್ಕೆ ಹೋಗದು. ಒತ್ತಡಕ್ಕೆ ನುಚ್ಚುರಾಗುತ್ತದೆ.

ಅಂತಹ ಅತ್ಯಂತ ಆಳದ ಪ್ರದೇಶಗಳಲ್ಲಿರುವ ಜೀವಿಗಳೂ ಇದೇ ರೀತಿಯ ದೀರ್ಘ ಪ್ರಯಾಣ ಮಾಡುತ್ತವೆಯೇ? ಅವು ಮೇಲ್ಮೈಗೆ ಬರಲು ಎಷ್ಟು ಸಮಯ ತೆಗೆದುಕೊಳ್ಳುತ್ತವೆ? ಮರಳಿ ಆಳಕ್ಕೆ ಹೇಗೆ ಇಳಿಯುತ್ತವೆ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಮುಂದಿನ ಹಂತದ ಸಂಶೋಧನೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+