ಕೇರಳದಲ್ಲಿ ಬಾಲಕ, ಬಾಲಕಿಯರ ಶಾಲೆಗಳ ಸ್ಥಗಿತಗೊಳಿಸಲು ಆದೇಶ
ತಿರುವನಂತಪುರಂ,ಜುಲೈ,22: ಮುಂಬರುವ 2023- 24ನೇ ಶೈಕ್ಷಣಿಕ ವರ್ಷದಿಂದ ಬಾಲಕರು ಮತ್ತು ಬಾಲಕಿಯರಿಗಾಗಿಯೇ ಇರುವ ಶಾಲೆಗಳನ್ನು ಮುಚ್ಚುವಂತೆ ಕೇರಳ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶುಕ್ರವಾರ ಆದೇಶ ನೀಡಿದೆ.
ಈ ಎಲ್ಲಾ ಶಾಲೆಗಳನ್ನು ಬಾಲಕ ಬಾಲಕಿಯರು ಒಟ್ಟಾಗಿ ಕಲಿಯುವ ಸಹ ಶಿಕ್ಷಣ ನೀಡುವ ಮಿಶ್ರ ಶಾಲೆಗಳಾಗಿ ಪರಿವರ್ತಿಸಬೇಕು ಎಂದು ಆಯೋಗ ಹೇಳಿದೆ. ಮಕ್ಕಳ ಹಕ್ಕುಗಳ ಆಯೋಗವು ಕೇರಳ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಸಾಮಾನ್ಯ ಶಿಕ್ಷಣ ನಿರ್ದೇಶಕರು ಮತ್ತು ಎಸ್‌ಸಿಇಆರ್‌ಟಿ ನಿರ್ದೇಶಕರಿಗೆ ಆದೇಶವನ್ನು ಜಾರಿಗೊಳಿಸಲು ಕ್ರಿಯಾ ಯೋಜನೆಯನ್ನು ರೂಪಿಸುವಂತೆ ಕೇಳಿದೆ.
ಕೋ-ಎಡ್ ಶಾಲೆಗಳಾಗಿ ಪರಿವರ್ತಿಸುವ ಶಾಲೆಗಳಲ್ಲಿ ಶೌಚಾಲಯ ಸೇರಿದಂತೆ ಮೂಲಸೌಕರ್ಯಗಳನ್ನು ಸುಧಾರಿಸಲು ಮತ್ತು ಮಿಶ್ರ ಶಾಲೆಯ ಮಹತ್ವದ ಕುರಿತು ಪೋಷಕರಲ್ಲಿ ಜಾಗೃತಿ ಮೂಡಿಸಲು ಮೂವರು ಉನ್ನತ ಅಧಿಕಾರಿಗಳಿಗೆ ಸೂಚಿಲಾಗಿದೆ. ಕೊಲ್ಲಂ ಜಿಲ್ಲೆಯ ಆಂಚಲ್‌ನ ಡಾ. ಐಸಾಕ್ ಪೌಲ್ ಸಲ್ಲಿಸಿದ್ದ ಅರ್ಜಿಯನ್ನು ಆಧರಿಸಿ ಆಯೋಗ ಈ ಆದೇಶ ನೀಡಿದೆ. ವಿಶೇಷ ಶಾಲೆಗಳಲ್ಲಿ ಲಿಂಗ ಸಮಾನತೆಯನ್ನು ನಿರಾಕರಿಸಲಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು.
ಕೇರಳದಲ್ಲಿ ಇನ್ನೂ ಬಾಲಕ ಮತ್ತು ಬಾಲಕಿಯರಿಗಾಗಿ ವಿಶೇಷ ಶಾಲೆಗಳು ಕಾರ್ಯನಿರ್ವಹಿಸುತ್ತಿರುವುದು ಕುತೂಹಲ ಮೂಡಿಸಿದೆ ಎಂದು ಆಯೋಗದ ಸದಸ್ಯ ರೆನಿ ಆಂಟೋನಿ ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ. ಈಗಿರುವ ಸಾಮಾಜಿಕ ಸನ್ನಿವೇಶದಲ್ಲಿ ಹುಡುಗರು ಮತ್ತು ಹುಡುಗಿಯರಿಗೆ ಪ್ರತ್ಯೇಕ ಶಾಲೆಗಳಲ್ಲಿ ಕಲಿಸುವ ಅಗತ್ಯವಿಲ್ಲ. ಇದಲ್ಲದೇ, ಅಂತಹ ಶಾಲೆಗಳ ಅಸ್ತಿತ್ವವನ್ನು ಮುಂದುವರಿದ ಶಿಕ್ಷಣ ಮತ್ತು ಮಾನಸಿಕ ಸಿದ್ಧಾಂತಗಳಿಂದ ದೂರವಿಡುವಂತೆ ಮಾತ್ರ ಕಾಣಬಹುದು. ಅಂತಹ ಶಾಲೆಗಳು ಅಸ್ತಿತ್ವದಲ್ಲಿರಲು ಯಾವುದೇ ಸಮರ್ಥನೆ ಇಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪಾಲಕ- ಶಿಕ್ಷಕರ ಸಂಘಕ್ಕೆ ಮನವಿ
ಇಂತಹ ಅವೈಜ್ಞಾನಿಕ ಪದ್ಧತಿಯನ್ನು ಕೊನೆಗಾಣಿಸಲು ಸರ್ಕಾರ ಹಿಂಜರಿಯಬಾರದು ಎಂದು ಆದೇಶದಲ್ಲಿ ಹೇಳಲಾಗಿದೆ. ವಿಶೇಷ ಶಾಲೆಗಳನ್ನು ಕೊನೆಗೊಳಿಸಲಾಗುವುದು. ಆದರೆ, ಪಾಲಕ- ಶಿಕ್ಷಕರ ಸಂಘವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಲೆಗಳ ವಸ್ತುಸ್ಥಿತಿಯನ್ನು ನಿರ್ಣಯಿಸಿದ ನಂತರವೇ ಅಂತಹ ಪರಿವರ್ತನೆ ಸಾಧ್ಯ ಎಂದು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಆಯೋಗಕ್ಕೆ ತಿಳಿಸಿದ್ದಾರೆ ಎನ್ನಲಾಗಿದೆ.

11 ವಿಶೇಷ ಶಾಲೆಗಳ ಪರಿವರ್ತನೆ
ವಿಶೇಷ ಶಾಲೆಗಳನ್ನು ಸಹ ಶಿಕ್ಷಣ ಸಂಸ್ಥೆಗಳಾಗಿ ಪರಿವರ್ತಿಸುವುದು ಸರ್ಕಾರದ ನೀತಿಯಾಗಿದೆ ಎಂದು ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಕೂಡ ಹೇಳಿದ್ದರು. ಎರಡನೇ ಪಿಣರಾಯಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ 11 ವಿಶೇಷ ಶಾಲೆಗಳನ್ನು ಸಹ ಶಿಕ್ಷಣ ನೀಡುವ ಶಾಲೆಗಳಾಗಿ ಪರಿವರ್ತಿಸಲಾಗಿದೆ. ಹೆಚ್ಚಿನ ಶಾಲಾ ಅಧಿಕಾರಿಗಳು, ಪಿಟಿಎಗಳು ಮತ್ತು ಸ್ಥಳೀಯ ಸಂಸ್ಥೆಗಳು ಇದೇ ರೀತಿಯ ಬೇಡಿಕೆಗಳನ್ನು ಮುಂದಿಟ್ಟರೆ ಹೆಚ್ಚಿನ ಶಾಲೆಗಳನ್ನು ಪರಿವರ್ತಿಸಲಾಗುವುದು ಎಂದು ಅವರು ಜುಲೈ 4ರಂದು ವಿಧಾನಸಭೆಗೆ ತಿಳಿಸಿದ್ದರು.

ವೈಜ್ಞಾನಿಕವಾಗಿ ಮನೋಭಾವನೆ ತರಲು ಮುಂದಡಿ
ಹೀಗಾಗಿ ಮಕ್ಕಳ ಆಯೋಗವೂ ಪೋಷಕರ ಮನಸ್ಥಿತಿಯನ್ನು ಬದಲಾಯಿಸುವ ಅಗತ್ಯವನ್ನು ಒತ್ತಿಹೇಳಿದೆ. ಹುಡುಗರಿಗೆ ಪ್ರವೇಶ ನೀಡುವುದರಿಂದ ಶಾಲೆಗಳ ಶಿಸ್ತು ಹಾಳಾಗುತ್ತದೆ ಮತ್ತು ಹೆಣ್ಣು ಮಕ್ಕಳ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂಬ ಭಾವನೆಯಲ್ಲಿರುವ ಪೋಷಕರಿಗೆ ಸಹ ಶಿಕ್ಷಣದ ಪ್ರಯೋಜನಗಳ ಬಗ್ಗೆ ವೈಜ್ಞಾನಿಕವಾಗಿ ತಿಳಿಸಬೇಕು. ಶಾಲಾ ಅಧಿಕಾರಿಗಳು ಮತ್ತು ಪಿಟಿಎಗಳು ಇದಕ್ಕೆ ಮುತುವರ್ಜಿ ವಹಿಸಬೇಕು ಎಂದು ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ.

ಲಿಂಗ ಸಮಾನತೆಗೆ ಪ್ರೋತ್ಸಾಹ
ಸಹ ಶಿಕ್ಷಣ ನೀಡುವ ಕೋ-ಎಡ್ ಶಾಲೆಗಳ ಮೇಲಿನ ಅಂತಾರಾಷ್ಟ್ರೀಯ ಅಧ್ಯಯನಗಳನ್ನು ಗಮನಿಸಿ ಅಂತಹ ಶಾಲೆಗಳು ಪರಸ್ಪರ ಗೌರವವನ್ನು ಹುಟ್ಟುಹಾಕುತ್ತವೆ ಮತ್ತು ಲಿಂಗ ಸಮಾನತೆಯನ್ನು ತರುತ್ತವೆ ಎಂದು ತೋರಿಸಿದೆ ಎಂದು ಆದೇಶವು ಹೇಳಿದೆ. ಈ ಶಾಲೆಗಳಲ್ಲಿ ಅಧ್ಯಯನ ಮಾಡುವುದು ಸಾಂಪ್ರದಾಯಿಕ ವಿಚಾರಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಲಿಂಗ ಸಮಾನತೆಗೆ ಹುಡುಗರನ್ನು ಪ್ರೋತ್ಸಾಹಿಸುತ್ತದೆ ಎಂದು ಆದೇಶವು ಹೇಳಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಕೇರಳದಲ್ಲಿ ಸರ್ಕಾರಿ ಮತ್ತು ಅನುದಾನಿತ ವಲಯಗಳಲ್ಲಿ ಬಾಲಕಿಯರಿಗೆ 280 ಶಾಲೆಗಳಿವೆ. ಬಾಲಕರಿಗೆ 164 ಶಾಲೆಗಳು ಸದ್ಯ ಇವೆ.












Click it and Unblock the Notifications