ಕೇರಳ ಸರ್ಕಾರದಿಂದ ಮೊದಲ ಬಾರಿಗೆ ಕ್ಯಾಬ್ ಸೇವೆ ಆರಂಭ
ತಿರುವನಂತಪುರಂ,ಜುಲೈ. 28: ಕೇರಳ ಸರ್ಕಾರವು ಮುಂದಿನ ತಿಂಗಳಿನಿಂದ ತನ್ನದೇ ಆದ ಇ- ಟ್ಯಾಕ್ಸಿ ಸೇವೆಯನ್ನು ಪ್ರಾರಂಭಿಸಲಿದೆ. ಈ ಮೂಲಕ ಜನಪ್ರಿಯ ಕಾರ್ಪೊರೇಟ್ ಆನ್‌ಲೈನ್ ಕ್ಯಾಬ್ ಸೇವೆಗೆ ಪರ್ಯಾಯ ಸಾರಿಗೆ ವ್ಯವಸ್ಥೆ ತಂದು ಸ್ಪರ್ಧೆ ನಡೆಸಲು ಸಿದ್ಧವಾಗಿದೆ.
ಇದು ದೇಶದಲ್ಲಿ ಕೇರಳ ರಾಜ್ಯ ಸರ್ಕಾರದಿಂದ ಮೊದಲ ಉಪಕ್ರಮವೆಂದು ಪರಿಗಣಿಸಲಾಗಿದೆ. 'ಕೇರಳ ಸವಾರಿ' ಎಂಬ ಹೆಸರಿನ ಆನ್‌ಲೈನ್ ಟ್ಯಾಕ್ಸಿ ಬಾಡಿಗೆ ಸೇವೆಯನ್ನು ರಾಜ್ಯ ಕಾರ್ಮಿಕ ಇಲಾಖೆಯು ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಆಟೋ- ಟ್ಯಾಕ್ಸಿ ನೆಟ್‌ವರ್ಕ್‌ಗಳನ್ನು ಸಂಪರ್ಕಿಸುವ ಮೂಲಕ ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಸುರಕ್ಷಿತ ಮತ್ತು ವಿವಾದ ಮುಕ್ತ ಪ್ರಯಾಣವನ್ನು ಖಾತರಿಪಡಿಸುವ ಉದ್ದೇಶದಿಂದ ಈ ಸೇವೆಯನ್ನು ಹೊರತರುತ್ತಿದೆ.
ಕೇರಳದ ಸಾರ್ವಜನಿಕ ಶಿಕ್ಷಣ ಮತ್ತು ಕಾರ್ಮಿಕ ಸಚಿವ ವಿ ಶಿವನ್‌ಕುಟ್ಟಿ ಮಾತನಾಡಿ, "ದೇಶದಲ್ಲಿ ಸರ್ಕಾರವೊಂದು ಆನ್‌ಲೈನ್ ಟ್ಯಾಕ್ಸಿ ಸೇವೆಯನ್ನು ಪ್ರಾರಂಭಿಸುತ್ತಿರುವುದು ಇದೇ ಮೊದಲು. ಈ ಸರ್ಕಾರವು ಕಾರ್ಮಿಕರ ಕಲ್ಯಾಣ ಉದ್ದೇಶದಿಂದ ಬಹುರಾಷ್ಟ್ರೀಯ ಕಂಪನಿಗಳ ಮಾದರಿಯಲ್ಲಿ ಪ್ರಬಲ ಸ್ಪರ್ಧೆ ನೀಡಲು ಮುಂದಾಗುತ್ತಿದೆ," ಎಂದು ತಿಳಿಸಿದರು.
ಕೇರಳ ಸವಾರಿ ನಿಗದಿತ ದರದ ಹೊರತಾಗಿ ಶೇ 8ರಷ್ಟು ಸೇವಾ ಶುಲ್ಕವನ್ನು ಮಾತ್ರ ವಿಧಿಸಲಿದೆ. ಕೇರಳ ಸವಾರಿ ಆ್ಯಪ್ ಮಕ್ಕಳು ಮತ್ತು ಮಹಿಳೆಯರಿಗೆ ಬಳಸಲು ಅತ್ಯಂತ ಸುರಕ್ಷಿತವಾದ ವ್ಯವಸ್ಥೆಯಾಗಿದೆ. ಭದ್ರತಾ ಮಾನದಂಡಗಳ ಮೂಲಕ ಅತ್ಯಂತ ಕಾಳಜಿಯಿಂದ ಆ್ಯಪ್ ಅನ್ನು ವಿನ್ಯಾಸಗೊಳಿಸಲಾಗಿದೆ. ಆ್ಯಪ್‌ನಲ್ಲಿ ಪ್ಯಾನಿಕ್ ಬಟನ್ ವ್ಯವಸ್ಥೆ ಇದ್ದು, ಇದು ಕಾರು ಅಪಘಾತದ ಸಂದರ್ಭದಲ್ಲಿ ಅಥವಾ ಬೇರೆ ಯಾವುದೇ ರೀತಿಯ ಅಪಾಯದ ಸಂದರ್ಭದಲ್ಲಿ ಒತ್ತಬಹುದು ಸಚಿವ ವಿ ಶಿವನ್‌ಕುಟ್ಟಿ ತಿಳಿಸಿದರು.
ಈ ಯೋಜನೆಯನ್ನು ಯೋಜನಾ ಮಂಡಳಿ, ಕಾನೂನು ಮಾಪನಶಾಸ್ತ್ರ, ಸಾರಿಗೆ, ಐಟಿ ಮತ್ತು ಪೊಲೀಸ್ ಇಲಾಖೆಗಳ ಸಹಕಾರದೊಂದಿಗೆ ಮೋಟಾರು ಕಾರ್ಮಿಕರ ಕಲ್ಯಾಣ ಮಂಡಳಿಯು ಅನುಷ್ಠಾನಗೊಳಿಸಲಿದೆ. ಸಾರ್ವಜನಿಕ ವಲಯದ ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್, ಪಾಲಕ್ಕಾಡ್ ಸಂಸ್ಥೆಯು ಯೋಜನೆಗೆ ತಾಂತ್ರಿಕ ನೆರವು ನೀಡಿದೆ ಎಂದು ಅವರು ಹೇಳಿದರು.

ಸಂಪೂರ್ಣ ಸುರಕ್ಷಿತ ಮತ್ತು ವಿವಾದ ಮುಕ್ತ
ಆಗಸ್ಟ್ 17 ರಂದು ಮಲಯಾಳಂ ತಿಂಗಳ ಚಿಂಗಮ್‌ನ ಆರಂಭದ ದಿನದಂದು ಇಲ್ಲಿನ ಕನಕಕ್ಕುನ್ನು ಅರಮನೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಹೊಸ ಸೇವೆಯನ್ನು ಪ್ರಾರಂಭಿಸಲಾಗುವುದು. ಕೇರಳ ಸವಾರಿಯಿಂದ ಸಂಪೂರ್ಣ ಸುರಕ್ಷಿತ ಮತ್ತು ವಿವಾದ ಮುಕ್ತ ಪ್ರಯಾಣ ಎಂಬ ಭರವಸೆ ನೀಡಲಾಗಿದೆ ಶಿವನ್‌ಕುಟ್ಟಿ ಹೇಳಿದರು.

ಸಾಂಪ್ರದಾಯಿಕ ಟ್ಯಾಕ್ಸಿ ಸ್ಟ್ಯಾಂಡ್‌ಗಳು ಕಣ್ಮರೆ
ಇತ್ತೀಚಿನ ದಿನಗಳಲ್ಲಿ ಜನರು ಆನ್‌ಲೈನ್ ಟ್ಯಾಕ್ಸಿ ಸೇವೆಗಳನ್ನು ಬಳಸಲು ಬಯಸುತ್ತಿರುವುದರಿಂದ, ಅನೇಕ ಸಾಂಪ್ರದಾಯಿಕ ಟ್ಯಾಕ್ಸಿ ಸ್ಟ್ಯಾಂಡ್‌ಗಳು ಕಣ್ಮರೆಯಾಗಿವೆ. ಹೆಚ್ಚಿನ ಸಂಖ್ಯೆಯ ಮೋಟಾರು ಸಾರಿಗೆ ನೌಕರರು ನಿರುದ್ಯೋಗಿಗಳಾಗಿದ್ದಾರೆ. ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯು ಮೋಟಾರು ಸಾರಿಗೆ ಕಾರ್ಮಿಕರ ವಲಯವನ್ನು ಕಾಲದ ಅಗತ್ಯಕ್ಕೆ ಅನುಗುಣವಾಗಿ ಬದಲಾಯಿಸುವ ಅಗತ್ಯವಿದೆ ಎಂಬುದನ್ನು ಮನಗಂಡು ಸರ್ಕಾರಿ ವಲಯದಲ್ಲಿ ಆನ್‌ಲೈನ್ ಟ್ಯಾಕ್ಸಿ ಸೇವೆಯನ್ನು ಪ್ರಾರಂಭಿಸಲು ನಿರ್ಧರಿಸಿದೆ ಎಂದು ಸಚಿವರು ಹೇಳಿದರು.

ಕಂಪನಿಗಳಲ್ಲಿ ಶೇ.20ರಿಂದ 30ರಷ್ಟು ಸೇವಾ ಶುಲ್ಕ
ಕೇರಳ ಮೋಟಾರು ಸಾರಿಗೆ ಕಾರ್ಮಿಕರ ಕಲ್ಯಾಣ ನಿಧಿ ಮಂಡಳಿಯು ಈ ಸೇವೆ ಅನುಷ್ಠಾನ ಸಂಸ್ಥೆಯಾಗಿದೆ. ಇದು ಕಾನೂನು ಮಾಪನಶಾಸ್ತ್ರ, ಸಾರಿಗೆ, ಐಟಿ, ಪೊಲೀಸ್ ಮತ್ತು ಮುಂತಾದ ಇಲಾಖೆಗಳ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇತರ ಆನ್‌ಲೈನ್ ಟ್ಯಾಕ್ಸಿಗಳಲ್ಲಿ ಶೇ.20ರಿಂದ 30ರಷ್ಟಿದ್ದ ಸರ್ಕಾರ ನಿಗದಿಪಡಿಸಿದ ದರಕ್ಕೆ ಹೆಚ್ಚುವರಿಯಾಗಿ ಕೇರಳ ಸವಾರಿ ಕೇವಲ ಎಂಟು ಪ್ರತಿಶತದಷ್ಟು ಸೇವಾ ಶುಲ್ಕವನ್ನು ವಿಧಿಸುತ್ತದೆ.

500 ಆಟೋ-ಟ್ಯಾಕ್ಸಿ ಚಾಲಕರು ಈಗಾಗಲೇ ಸದಸ್ಯರು
ಸೇವಾ ಶುಲ್ಕವಾಗಿ ಸಂಗ್ರಹಿಸಿದ ಮೊತ್ತವನ್ನು ಯೋಜನೆಯ ಅನುಷ್ಠಾನ ಮತ್ತು ಪ್ರಯಾಣಿಕರಿಗೆ ಉತ್ತೇಜನಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ಪ್ರಸ್ತುತ ತಿರುವನಂತಪುರಂ ಕಾರ್ಪೊರೇಷನ್‌ನ ಮಿತಿಯಲ್ಲಿ ಸುಮಾರು 500 ಆಟೋ-ಟ್ಯಾಕ್ಸಿ ಚಾಲಕರು ಯೋಜನೆಯ ಸದಸ್ಯರಾಗಿದ್ದಾರೆ. ವಿವಿಧ ಇಲಾಖೆಗಳ ಅಧಿಕಾರಿಗಳು ಅವರಿಗೆ ವಿವಿಧ ವಿಷಯಗಳಲ್ಲಿ ತರಬೇತಿ ನೀಡಿದ್ದಾರೆ ಎಂದು ಸಚಿವರು ತಿಳಿಸಿದರು.












Click it and Unblock the Notifications