ಕೇರಳ ಸರ್ಕಾರ ಕೇಳಿದ್ದಕ್ಕಿಂತ ಶೇ.60ರಷ್ಟು ಹೆಚ್ಚುವರಿ ಲಸಿಕೆ ಪೂರೈಕೆ!
ತಿರುವನಂತಪುರಂ, ಆಗಸ್ಟ್ 11: ಭಾರತದಲ್ಲಿ ಅತಿಹೆಚ್ಚು ಕೊವಿಡ್-19 ಸೋಂಕಿತ ಪ್ರಕರಣಗಳು ಕೇರಳ ರಾಜ್ಯವೊಂದರಲ್ಲೇ ವರದಿಯಾಗುತ್ತಿವೆ. ಈ ಹಿನ್ನೆಲೆ ಸಾಂಕ್ರಾಮಿಕ ರೋಗ ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಲಸಿಕೆ ಪೂರೈಕೆ ವೇಗವನ್ನು ಹೆಚ್ಚಿಸಲಾಗುತ್ತಿದೆ. ರಾಜ್ಯ ಸರ್ಕಾರ ಕೇಳಿದ್ದಕ್ಕಿಂತ ಶೇ.60ರಷ್ಟು ಹೆಚ್ಚುವರಿ ಲಸಿಕೆಯನ್ನು ಕೇಂದ್ರ ಸರ್ಕಾರದಿಂದ ಪೂರೈಸಲಾಗಿದೆ ಎಂದು ಕೇರಳ ಹೈಕೋರ್ಟ್ ಗೆ ಕೇಂದ್ರ ಸರ್ಕಾರ ಉತ್ತರಿಸಿದೆ.
ದರ ಜಾಗತೀಕರಣ ಮತ್ತು ರಾಷ್ಟ್ರೀಯ ಕೊವಿಡ್-19 ಲಸಿಕೆ ಅಭಿಯಾನವನ್ನು ಪ್ರಶ್ನಿಸಿ ಕೆ ಪಿ ಅರವಿಂದನ್ ಮತ್ತು ಡಾ. ಪ್ರವೀಣಾ ಜಿ ಪೈ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ಲಸಿಕೆ ಪೂರೈಕೆ ಬಗ್ಗೆ ಉತ್ತರ ನೀಡುವಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಸೂಚನೆ ನೀಡಿತ್ತು.
"ರಾಷ್ಟ್ರೀಯ ಕೊವಿಡ್-19 ಲಸಿಕೆ ಯೋಜನೆ ಅಡಿಯಲ್ಲಿ ಕೇರಳದಲ್ಲಿ ಅಗತ್ಯಕ್ಕೆ ತಕ್ಕದಾಗಿ ಲಸಿಕೆಯನ್ನು ಪೂರೈಕೆ ಮಾಡಲಾಗಿದೆ. ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆಯಾ ಜನಸಂಖ್ಯೆ, ಲಸಿಕೆ ವಿತರಣೆ ವೇಗ ಮತ್ತು ಲಸಿಕೆ ವ್ಯರ್ಥಗೊಳಿಸಿರುವುದರ ಆಧಾರದ ಮೇಲೆ ಕೊರೊನಾವೈರಸ್ ಲಸಿಕೆಯನ್ನು ಪೂರೈಕೆ ಮಾಡಲಾಗುತ್ತಿದೆ," ಎಂದು ಕೇಂದ್ರ ಸರ್ಕಾರವು ತನ್ನ ಉತ್ತರದಲ್ಲಿ ತಿಳಿಸಿದೆ.

ಕೇರಳಕ್ಕೆ ಶೇ.60ರಷ್ಟು ಹೆಚ್ಚುವರಿ ಲಸಿಕೆ ಪೂರೈಕೆ:
"ಜುಲೈ 2021ರ ಲಸಿಕೆ ಹಂಚಿಕೆ ಪ್ರಕಾರ, ರಾಜ್ಯಕ್ಕೆ 39,02,580 ಡೋಸ್ ಲಸಿಕೆಯನ್ನು ನೀಡುವಂತೆ ಪ್ರಸ್ತಾಪಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರದ ಅಂಕಿ-ಅಂಶಗಳ ಪ್ರಕಾರವಾಗಿ 61,36,720 ಡೋಸ್ ಲಸಿಕೆಯನ್ನು ರಾಜ್ಯಕ್ಕೆ ರವಾನಿಸಲಾಗಿದೆ. ಅಂದರೆ ಕೇರಳ ಸರ್ಕಾರವು ಪ್ರಸ್ತಾಪಿಸಿದ್ದಕ್ಕಿಂತಲೂ ಶೇ.60ರಷ್ಟು ಹೆಚ್ಚುವರಿ ಲಸಿಕೆಯನ್ನು ನೀಡಲಾಗಿದೆ," ಎಂದು ಅಸಿಸ್ಟೆಂಟ್ ಸ್ಯಾನಿಸೆಟರ್ ಜನರಲ್ ಪಿ ವಿಜಯಕುಮಾರ್ ಹೇಳಿದ್ದಾರೆ.
ಲಸಿಕೆ ವಿತರಣೆ ಆಧಾರದ ಮೇಲೆ ಪೂರೈಕೆ:
"ರಾಜ್ಯಗಳಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಪ್ರಮಾಣ ಮತ್ತು ವೇಗವನ್ನು ಗಮನದಲ್ಲಿ ಇಟ್ಟುಕೊಂಡು ಹೆಚ್ಚುವರಿ ಲಸಿಕೆಯನ್ನು ಕೇಂದ್ರ ಸರ್ಕಾರದಿಂದ ಪೂರೈಕೆ ಮಾಡಲಾಗುತ್ತಿದೆ. ಕೇರಳದಲ್ಲಿ ಅರ್ಹ ಫಲಾನುಭವಿಗಳ ಪೈಕಿ ಶೇ.55ರಷ್ಟು ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. ದೇಶದಲ್ಲಿ ಅರ್ಹ ಫಲಾನುಭವಿಗಳ ಪೈಕಿ ಶೇ.42 ರಷ್ಟು ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಇನ್ನು ದೇಶದಲ್ಲಿ ಅರ್ಹ ಫಲಾನುಭವಿಗಳ ಪೈಕಿ ಶೇ.12ರಷ್ಟು ಜನರಿಗೆ ಲಸಿಕೆ ವಿತರಿಸಿದ್ದರೆ, ಕೇರಳವೊಂದರಲ್ಲೇ ಶೇ.22ರಷ್ಟು ಮಂದಿಗೆ ಲಸಿಕೆ ನೀಡಲಾಗಿದೆ. ಆದ್ದರಿಂದ ರಾಷ್ಟ್ರೀಯ ಕೊವಿಡ್-19 ಲಸಿಕೆ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರವು ಪ್ರಸ್ತಾಪಿಸಿದ್ದಕ್ಕಿಂತ ಹೆಚ್ಚುವರಿ ಲಸಿಕೆಯನ್ನು ಪೂರೈಕೆ ಮಾಡಲಾಗಿದೆ. ಅದೇ ರೀತಿ ಲಭ್ಯತೆಗೆ ತಕ್ಕಂತೆ ಮುಂದೆಯೂ ರಾಜ್ಯಕ್ಕೆ ಲಸಿಕೆಯನ್ನು ಒದಗಿಸುವ ಕಾರ್ಯ ಮಾಡಲಾಗುವುದು," ಎಂದು ಅಸಿಸ್ಟೆಂಟ್ ಸ್ಯಾನಿಸೆಟರ್ ಜನರಲ್ ಪಿ ವಿಜಯಕುಮಾರ್ ತಿಳಿಸಿದ್ದಾರೆ.

ಕೊವಿಡ್-19 ಸೋಂಕಿತ ಪ್ರಕರಣಗಳ ಏರಿಳಿತ ಹೇಗಿದೆ?
ಕೊರೊನಾವೈರಸ್ ಲಸಿಕೆ ವಿತರಣೆಯನ್ನು ಒಂದು ದಿಕ್ಕಿನಲ್ಲಿ ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ. ಇನ್ನೊಂದು ದಿಕ್ಕಿನಲ್ಲಿ ಲಸಿಕೆ ಹಾಕಿಸಿಕೊಂಡವರಿಗೇ ಸೋಂಕು ತಗುಲಿರುವುದು ಜನರಲ್ಲಿ ಭಯ ಹುಟ್ಟು ಹಾಕುತ್ತಿದೆ. ಕಳೆದ 24 ಗಂಟೆಗಳಲ್ಲಿ 21,119 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 35,86,693ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ 18,493 ಸೋಂಕಿತರ ಆರೋಗ್ಯದಿಂದ ಡಿಸ್ಚಾರ್ಜ್ ಆಗಿದ್ದು, 152 ಸೋಂಕಿತರು ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದಾರೆ. ಇದರಿಂದ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 18,004ಕ್ಕೆ ಏರಿಕೆಯಾಗಿದೆ. ಇದರ ಹೊರತಾಗಿ ಕೇರಳದಲ್ಲಿ 1,71,985 ಕೊರೊನಾವೈರಸ್ ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ದೇಶದಲ್ಲಿ ಶೇ.75ರಷ್ಟು ಲಸಿಕೆ ಖರೀದಿಸುವ ಕೇಂದ್ರ:
ಭಾರತದಲ್ಲಿ ಉತ್ಪಾದನೆ ಆಗುತ್ತಿರುವ ಕೊರೊನಾವೈರಸ್ ಲಸಿಕೆಯ ಶೇ.75ರಷ್ಟು ಪ್ರಮಾಣವನ್ನು ಕೇಂದ್ರ ಸರ್ಕಾರವೇ ಕಂಪನಿಗಳಿಂದ ನೇರವಾಗಿ ಖರೀದಿಸುತ್ತದೆ. ಹೀಗೆ ಖರೀದಿಸಿದ ಲಸಿಕೆಯನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಸರಬರಾಜು ಮಾಡಲಾಗುತ್ತದೆ. ದೇಶದಲ್ಲಿ ಪ್ರತಿಯೊಬ್ಬರಿಗೆ ಕೊವಿಡ್-19 ಲಸಿಕೆ ಸಿಗಬೇಕು ಎನ್ನುವ ಉದ್ದೇಶದಿಂದ ಉಚಿತ ಲಸಿಕೆ ವಿತರಣೆ ಅಭಿಯಾನವನ್ನು ನಡೆಸಲಾಗುತ್ತಿದೆ.
ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನವನ್ನು ಆರಂಭಿಸಿ 208 ದಿನಗಳಲ್ಲಿ 52.32 ಕೋಟಿಗೂ ಅಧಿಕ ಮಂದಿಗೆ ಲಸಿಕೆ ವಿತರಿಸಲಾಗಿದೆ. ಮಂಗಳವಾರ ರಾತ್ರಿ 7 ಗಂಟೆ ವೇಳೆಗೆ 40,02,634 ಫಲಾನುಭವಿಗಳಿಗೆ ಲಸಿಕೆ ವಿತರಿಸಲಾಗಿದೆ. ದೇಶದಲ್ಲಿ ಈವರೆಗೂ 52,32,53,450 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆಯನ್ನು ವಿತರಿಸಲಾಗಿದೆ. ದೇಶದಲ್ಲಿ ಬುಧವಾರ ಒಂದೇ ದಿನ 29,07,836 ಫಲಾನುಭವಿಗಳಿಗೆ ಮೊದಲ ಡೋಸ್, 10,94,798 ಮಂದಿಗೆ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಕೊವಿಡ್-19 ಲಸಿಕೆ ವಿತರಣೆಯ ಹಂತಗಳು
ಭಾರತದಲ್ಲಿ ಕೊರೊನಾವೈರಸ್ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಲಸಿಕೆ ವಿತರಣೆಯನ್ನು ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ. ಕಳೆದ ಜನವರಿ 16ರಂದು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಮೊದಲ ಶ್ರೇಣಿ ಕಾರ್ಮಿಕರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಮಾರ್ಚ್ 1ರಂದು ಎರಡನೇ ಹಂತದಲ್ಲಿ ಆರೋಗ್ಯ ಸಮಸ್ಯೆ ಹೊಂದಿರುವ 45 ವರ್ಷ ಮೇಲ್ಪಟ್ಟ ಹಾಗೂ 60 ವರ್ಷದ ಮೇಲ್ಪಟ್ಟ ಪ್ರತಿಯೊಬ್ಬರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಏಪ್ರಿಲ್ 1ರಂದು ಮೂರನೇ ಹಂತದಲ್ಲಿ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊವಿಡ್-19 ಲಸಿಕೆ ವಿತರಣೆ ಶುರು ಮಾಡಲಾಗಿತ್ತು. ಜೂನ್ 21ರಿಂದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ವಿತರಣೆಯನ್ನು ಆರಂಭಿಸಲಾಗಿದೆ.
ದೇಶದಲ್ಲಿ ಕೊವಿಡ್-19 ಲಸಿಕೆ ವಿತರಣೆ ಮಾಹಿತಿ
2021ರ ಆಗಸ್ಟ್ 11ರ ಅಂಕಿ-ಅಂಶಗಳ ಪ್ರಕಾರ, 53,24,44,960 ಡೋಸ್ ಕೊರೊನಾವೈರಸ್ ಲಸಿಕೆ ಪೂರೈಕೆ ಮಾಡಲಾಗಿದೆ. ಈ ಪೈಕಿ ಎಷ್ಟು ಡೋಸ್ ಲಸಿಕೆ ಬಳಕೆಯಾಗಿದೆ, ಇನ್ನೆಷ್ಟು ಲಸಿಕೆ ಬರಬೇಕಿದೆ. ಬಾಕಿ ಉಳಿದಿರುವಲಸಿಕೆ ಪ್ರಮಾಣ ಎಷ್ಟು ಎಂಬುದನ್ನು ಪಟ್ಟಿಯಲ್ಲಿ ನೋಡಿರಿ.
ಕೊರೊನಾವೈರಸ್ ಲಸಿಕೆ ಪೂರೈಕೆ ಮತ್ತು ಲಭ್ಯತೆ ಪಟ್ಟಿ:
* ಪೂರೈಕೆಯಾದ ಲಸಿಕೆ ಪ್ರಮಾಣ - 53,24,44,960
* ಸದ್ಯ ಬರಬೇಕಾಗಿರುವ ಲಸಿಕೆ ಪ್ರಮಾಣ - 72,40,250
* ಬಳಕೆ ಆಗಿರುವ ಲಸಿಕೆ ಪ್ರಮಾಣ - 51,56,11,035
* ಕೊವಿಡ್-19 ಲಸಿಕೆಯ ಲಭ್ಯತೆ - 2,25,03,900












Click it and Unblock the Notifications