'ಮತ್ತೆ ಗೃಹಬಂಧನ, ಇದು ಕಾಶ್ಮೀರದ ನೈಜ ಚಿತ್ರಣ' ಎಂದ ಮುಫ್ತಿ
ಶ್ರೀನಗರ, ಸೆಪ್ಟೆಂಬರ್ 29: ''ನನ್ನನ್ನು ಮತ್ತೆ ಗೃಹ ಬಂಧನದಲ್ಲಿ ಇರಿಸಿದ್ದಾರೆ. ನನಗೆ ಕಾಶ್ಮೀರದ ತ್ರಾಲ್ ಪ್ರದೇಶಕ್ಕೆ ತೆರಳಲು ಬಿಡುತ್ತಿಲ್ಲ," ಎಂದು ಪಿಡಿಪಿ ಮುಖ್ಯಸ್ಥೆ ಹಾಗೂ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಬುಧವಾರ ಮತ್ತೆ ಆರೋಪ ಮಾಡಿದ್ದಾರೆ.
ಪಿಡಿಪಿ ಮುಖ್ಯಸ್ಥೆ ಹಾಗೂ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ತನ್ನನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ಹಲವಾರು ಬಾರಿ ಆರೋಪವನ್ನು ಮಾಡಿದ್ದಾರೆ. ಕೇಂದ್ರ ಸರ್ಕಾರದ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಹಲವಾರು ನಾಯಕರನ್ನು, ಸಾಮಾಜಿಕ ಕಾರ್ಯಕರ್ತರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಮತ್ತು ನ್ಯಾಶ್ನಲ್ ಕಾನ್ಫಿರೆನ್ಸ್ ಉಖಂಡ ಒಮರ್ ಅಬ್ದುಲ್ಲಾ ಅವರನ್ನು ಬಂಧಿಸಲಾಗಿತ್ತು.
ಇನ್ನು ಆ ಸಂದರ್ಭದಲ್ಲಿ ಮೊಬೈಲ್, ಇಂಟರ್‌ನೆಟ್ ಸೌಲಭ್ಯಗಳನ್ನು ಕೂಡಾ ಸ್ಥಗಿತ ಮಾಡಲಾಗಿತ್ತು. ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಬಂಧನದಲ್ಲಿರುವಲ್ಲಿದ್ದ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿರನ್ನು ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆ ಮಾಡಲಾಗಿತ್ತು.

ಮೆಹಬೂಬ ಮುಫ್ತಿರನ್ನು 2019 ರಂದು ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್‌ಎ) ಅಡಿಯಲ್ಲಿ ಬಂಧನ ಮಾಡಲಾಗಿತ್ತು. ಯಾವುದೇ ಒಂದು ನಿಗದಿತ ವಿಚಾರವಿಲ್ಲದೆ ವ್ಯಕ್ತಿಯನ್ನು ಮೂರು ತಿಂಗಳುಗಳ ಕಾಲ ಬಂಧನದಲ್ಲಿ ಇಡಲು ಕಾಯ್ದೆಯು ಅವಕಾಶ ನೀಡುತ್ತದೆ. ಆದರೆ ಮೆಹಬೂಬ ಮುಫ್ತಿರನ್ನು ಒಂದು ವರ್ಷಕ್ಕೂ ಅಧಿಕ ಕಾಲ ಬಂಧನದಲ್ಲಿ ಇರಿಸಲಾಗಿತ್ತು. ಈ ಹಿನ್ನೆಲೆ ಮೆಹಬೂಬ ಮುಫ್ತಿ ಮಗಳು ಇಲ್ತಿಜಾ ಮುಫ್ತಿ ಸಲ್ಲಿಕೆ ಮಾಡಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಮೆಹಬೂಬ ಮುಫ್ತಿಗೆ ಬಿಡುಗಡೆಗೆ ಸೂಚಿಸಿತ್ತು.
ಮುಫ್ತಿ ಅವರನ್ನು ಆರಂಭದಲ್ಲಿ ಜಮ್ಮು ಮತ್ತು ಕಾಶ್ಮೀರದ ಚೆಷ್ಮಾ ಶಹಿ ಅತಿಥಿ ಗೃಹದಲ್ಲಿ ಇರಿಸಲಾಗಿತ್ತು. ಬಳಿಕ ಶ್ರೀನಗರದ ಬೇರೆ ಸರ್ಕಾರಿ ಅತಿಥಿ ಗೃಹಕ್ಕೆ ವರ್ಗಾಯಿಸಲಾಗಿತ್ತು. ನಂತರ ಅವರನ್ನು ಮನೆಗೆ ಕರೆದುಕೊಂಡು ಹೋಗಿ ಗೃಹ ಬಂಧನದಲ್ಲಿ ಮುಂದುವರಿಸಲಾಗಿತ್ತು. ಮುಫ್ತಿ ಬಂಧನವನ್ನು ಮಗಳು ಇಲ್ತಿಜಾ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಇನ್ನು ಬಿಡುಗಡೆಯಾದ ಬಳಿಕ ತನ್ನನ್ನು ಮತ್ತೆ ಗೃಹ ಬಂಧನದಲ್ಲಿ ಇರಿಸಿರುವ ಹಾಗೂ ವಶಕ್ಕೆ ಪಡೆದಿರುವ ಬಗ್ಗೆ ಮೆಹಬೂಬ ಮುಫ್ತಿ ಹಲವಾರು ಬಾರಿ ಮಾತುಕತೆ ನಡೆಸಿದ್ದಾರೆ. ಇತ್ತೀಚೆಗೆ ಸೆಪ್ಟೆಂಬರ್ 7 ರಂದು ಟ್ವೀಟ್ ಮಾಡಿದ್ದ ಮೆಹಬೂಬ ಮುಫ್ತಿ, "ನನ್ನನ್ನು ಮಂಗಳವಾರ ಗೃಹಬಂಧನಕ್ಕೆ ಒಳಪಡಿಸಲಾಗಿದೆ. ಕಾಶ್ಮೀರದಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಕೇಂದ್ರಾಡಳಿತ ಪ್ರದೇಶವಾದ ಬಳಿಕ ಜಮ್ಮು ಕಾಶ್ಮೀರ ಸಹಜ ಸ್ಥಿತಿಗೆ ಮರಳಿದೆ ಎಂಬ ವಾದ ಹುಸಿಯಾಗಿದೆ. ನೈಜ ಸ್ಥಿತಿ ಏನು ಎಂಬುದು ಈಗ ಬಹಿರಂಗಗೊಂಡಿದೆ," ಎಂದು ತಿಳಿಸಿದ್ದರು.
"ಭಾರತ ಅಫ್ಘಾನಿಸ್ತಾನದ ಜನರ ಹಕ್ಕುಗಳ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದೆ. ಆದರೆ ಕಾಶ್ಮೀರದವರಿಗೆ ಉದ್ದೇಶಪೂರ್ವಕವಾಗಿ ಹಕ್ಕುಗಳನ್ನು ನಿರಾಕರಿಸುತ್ತಿದೆ. ಇದು ಕಾಶ್ಮೀರ ಆಡಳಿತದ ಸ್ಥಿತಿಯ ಬಗ್ಗೆ ಹೇಳುತ್ತಿದೆ. ನನ್ನನ್ನು ಗೃಹಬಂಧನದಲ್ಲಿರಿಸಲಾಗಿದೆ," ಎಂದಿದ್ದರು.
ಇನ್ನು ಸೆಪ್ಟೆಂಬರ್ 29 ರಂದು ಮತ್ತೆ ತನ್ನನ್ನು ಗೃಹ ಬಂಧನದಲ್ಲಿ ಇರಿಸಲಾಗಿರುವ ಬಗ್ಗೆ ಮತ್ತೆ ಮೆಹಬೂಬ ಮುಫ್ತಿ ಟ್ವೀಟ್ ಮಾಡಿದ್ದಾರೆ, "ಕಾಶ್ಮೀರದ ತ್ರಾಲ್ ಗ್ರಾಮಕ್ಕೆ ತೆರಳಲು ನಾನು ಮುಂದಾದ ಸಂದರ್ಭದಲ್ಲಿ ಇಂದು ನನ್ನನ್ನು ತಡೆಯಲಾಗಿದೆ, ಮನೆಯಲ್ಲೇ ಬಂಧನದಲ್ಲಿ ಇರಿಸಲಾಗಿದೆ. ಇದು ಕಾಶ್ಮೀರದ ನೈಜ ಚಿತ್ರಣ," ಎಂದು ಅಭಿಪ್ರಾಯಿಸಿದ್ದಾರೆ. ಇನ್ನು ಸೆಪ್ಟೆಂಬರ್ 27 ರಂದು, "ಸೈನ್ಯವು ಮನೆಗಳಿಗೆ ನುಗ್ಗಿ, ನಿರ್ದಯವಾಗಿ ಒಂದು ಕುಟುಂಬಕ್ಕೆ ತಳಿಸಿದೆ," ಎಂದು ಆರೋಪ ಮಾಡಿದ್ದಾರೆ. "ಆ ಪೈಕಿ ಮಗಳಿಗೆ ಗಂಭೀರ ಗಾಯವಾದ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಹಳ್ಳಿಯಲ್ಲಿನ ನಾಗರಿಕರ ಮೇಲೆ ಸೈನ್ಯವು ಹೊಡೆದದ್ದು ಇದೇ ಮೊದಲು ಏನಲ್ಲ," ಎಂದು ಹೇಳಿದ್ದರು.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications