ಉಗ್ರರ ಬಗ್ಗೆ ಸಹಾನುಭೂತಿ: ಕಾಶ್ಮೀರದಲ್ಲಿ ಇನ್ನಷ್ಟು ಮಂದಿ ಬಂಧನ ಸಾಧ್ಯತೆ
ಶ್ರೀನಗರ, ಮಾರ್ಚ್ 15: ವಿವಿಧ ಸಾಮಾಜಿಕ-ಧಾರ್ಮಿಕ ಮತ್ತು ರಾಜಕೀಯ ಸಂಘಟನೆಗಳ ಮುಖಂಡರನ್ನು ಬಂಧಿಸಿದ ಕೆಲವು ದಿನಗಳಲ್ಲಿಯೇ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಮತ್ತೊಂದು ಸುತ್ತಿನ ಬೇಟೆಗೆ ಅಣಿಯಾಗಿದ್ದಾರೆ.
ಸುಮಾರು 200 ಉಗ್ರರು, ಜಮಾತ್ ಎ ಇಸ್ಲಾಮಿ ಸಂಘಟನೆಯ ಬೆಂಬಲಿಗರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಸರ್ಕಾರಿ ಉದ್ಯೋಗಿಗಳೂ ಸೇರಿದ್ದಾರೆ. ಉಗ್ರರ ಪರ ಅನುಕಂಪ ಉಳ್ಳವರನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಮೂಲಗಳು ತಿಳಿಸಿರುವುದಾಗಿ ನ್ಯೂಸ್ 18 ವರದಿ ಮಾಡಿದೆ.
ಹಿರಿಯ ಅಧಿಕಾರಿಗಳನ್ನು ಒಳಗೊಂಡಂತೆ ಅನೇಕ ಸರ್ಕಾರಿ ಉದ್ಯೋಗಿಗಳನ್ನು ಈ ಪಟ್ಟಿಯಲ್ಲಿ ಹೆಸರಿಸಲಾಗಿದೆ. ಅವುಗಳನ್ನು ಶೀಘ್ರದಲ್ಲಿಯೇ ಕೆಲಸದಿಂದ ತೆಗೆದುಹಾಕಲಾಗುವುದು ಎಂದು ತಿಳಿಸಲಾಗಿದೆ.

ಈ ಅಧಿಕಾರಿಗಳು ಗುಪ್ತವಾಗಿ ಕೆಲಸ ಮಾಡುತ್ತಿದ್ದಾರೆ. ಉಗ್ರರಿಗೆ, ಪ್ರತ್ಯೇಕತಾವಾದಿಗಳಿಗೆ ಮತ್ತು ಇತರೆ ದೇಶ ವಿರೋಧಿ ಶಕ್ತಿಗಳಿಗೆ ಹಣಕಾಸು ನೆರವು ಹಾಗೂ ಗೋಪ್ಯ ಮಾಹಿತಿಗಳನ್ನು ನೀಡುವುದು ಮಾತ್ರವಲ್ಲದೆ ಯುವಜನರಲ್ಲಿ ಪ್ರತ್ಯೇಕತೆಯ ಪ್ರಚಾರ ಮಾಡುತ್ತಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಧಿಕ ಸಂಖ್ಯೆಯ ಸರ್ಕಾರಿ ಶಿಕ್ಷಕರು ಅಕ್ರಮವಾಗಿ ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವುದು ಕಂಡುಬಂದಿದೆ. ಅವರು ತಾವು ಕೆಲಸ ಮಾಡುವ ಸ್ಥಳಗಳಲ್ಲಿ ಸಹೋದ್ಯೋಗಿಗಳು ಮತ್ತು ಉದ್ಯೋಗಿಗಳ ಮೇಲೆ ಪ್ರತ್ಯೇಕತೆಯ ಪರವಾಗಿ ಪ್ರಭಾವ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.












Click it and Unblock the Notifications