Breaking: ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಕಾಶ್ಮೀರಿ ಪಂಡಿತ್ ಬಲಿ
ಶ್ರೀನಗರ, ಆಗಸ್ಟ್ 16: ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಉಗ್ರರ ದಾಳಿಯಲ್ಲಿ ಕಾಶ್ಮೀರಿ ಪಂಡಿತರೊಬ್ಬರು ಹತ್ಯೆಗೀಡಾಗಿದ್ದಾರೆ. ಘಟನೆಯಲ್ಲಿ ಮೃತನ ಸಹೋದರ ಗಾಯಗೊಂಡಿದ್ದು. ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಶೋಪಿಯಾನ್‌ನ ಚೋಟಿಪೋರಾ ಪ್ರದೇಶದ ಸೇಬಿನ ತೋಟದಲ್ಲಿ ನಾಗರಿಕರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಕಾಶ್ಮೀರಿ ಪಂಡಿತರೊಬ್ಬರು ಸಾವನ್ನಪ್ಪಿದ್ದು, ಸಂತ್ರಸ್ತ ಕುಟುಂಬ ಶೋಕದಲ್ಲಿ ಮುಳುಗಿದೆ.
ಮೃತರನ್ನು 45 ವರ್ಷದ ಸುನೀಲ್ ಕುಮಾರ್ ಎಂದು ಗುರುತಿಸಲಾಗಿದ್ದು, ಆತನ ಸಹೋದರನನ್ನು ಪಿಂಟು ಕುಮಾರ್ ಎಂದು ಗುರುತಿಸಲಾಗಿದೆ. ಉಗ್ರರನ್ನು ಹಿಡಿಯಲು ಭದ್ರತಾ ಸಿಬ್ಬಂದಿ ಪ್ರದೇಶವನ್ನು ಸುತ್ತುವರಿದಿದ್ದಾರೆ.

ಹತ್ಯೆಯ ಕುರಿತು ಪ್ರತಿಕ್ರಿಯಿಸಿದ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಕಾನ್ಫರೆನ್ಸ್ ಮುಖ್ಯಸ್ಥ ಸಜಾದ್ ಲೋನ್, "ಶೋಪಿಯಾನ್‌ನಲ್ಲಿ ಹೇಡಿ ಭಯೋತ್ಪಾದಕರು ಮತ್ತೊಂದು ಭೀಕರ ದಾಳಿ ನಡೆಸಿದ್ದಾರೆ. ಈ ಹೇಯ ಹಿಂಸಾಚಾರವನ್ನು ನಾವು ಬಲವಾಗಿ ಖಂಡಿಸುತ್ತೇವೆ. ಮೃತರ ಕುಟುಂಬಕ್ಕೆ ನನ್ನ ಸಂತಾಪ" ಎಂದಿದ್ದಾರೆ.
ಕಾಶ್ಮೀರಿ ಪಂಡಿತರು ಸುರಕ್ಷಿತವಾಗಿಲ್ಲ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕೂಡ ಪ್ರತಿಕ್ರಿಯಿಸಿದ್ದಾರೆ.
"ಕಾಶ್ಮೀರಿ ಪಂಡಿತರು ಅಸುರಕ್ಷಿತರಾಗಿದ್ದಾರೆ. ಪ್ರಧಾನಿ ಮೋದಿಯವರ ಆಡಳಿತ ಮತ್ತು ಲೆಫ್ಟಿನೆಂಟ್ ಗವರ್ನರ್ ನೇಮಕ ಇಲ್ಲಿ ವಿಫಲವಾಗಿದೆ. ಕಾಶ್ಮೀರಿ ಪಂಡಿತರು ಸುರಕ್ಷಿತವಾಗಿರುತ್ತಾರೆ ಎಂದು ಹೇಳಿ 370ನೇ ವಿಧಿಯನ್ನು ತೆಗೆದುಹಾಕಲಾಗಿದೆ, ಆದರೆ, ಎಲ್ಲಾ ಕಾಶ್ಮೀರಿ ಪಂಡಿತರು ಭಯದಿಂದ ಬದುಕುತ್ತಿದ್ದಾರೆ. ಇದಕ್ಕೆ ಪ್ರಧಾನಿ, ಗೃಹ ಸಚಿವರು ಮತ್ತು ಬಿಜೆಪಿ ಉತ್ತರಿಸಬೇಕು" ಎಂದಿದ್ದಾರೆ.

ಜಮ್ಮು ಕಾಶ್ಮೀರ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ ಪಾಕಿಸ್ತಾನದ ವಿರುದ್ಧ ಕಿಡಿಕಾರಿದ್ದಾರೆ. "ಪಾಕಿಸ್ತಾನವು ಕಾಶ್ಮೀರವನ್ನು ಸ್ಮಶಾನವನ್ನಾಗಿ ಮಾಡಲು ಬಯಸುತ್ತಿದೆ. ಆದರೆ ಅದರ ಕೆಟ್ಟ ಯೋಜನರ ಜಾರಿಗೆ ಬರಲು ನಾವು ಬಿಡುವುದಿಲ್ಲ. ಪಾಕಿಸ್ತಾನವು ಕಾಶ್ಮೀರದಲ್ಲಿ ರಕ್ತಪಾತವನ್ನು ಬಯಸುತ್ತದೆ. ಪಾಕಿಸ್ತಾನಿ ಭಯೋತ್ಪಾದಕರು ಕಾಶ್ಮೀರಿ ಜನರ ಶತ್ರುಗಳು. ಶೋಪಿಯಾನ್ ಪ್ರದೇಶದಲ್ಲಿ ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು, ಅವರಿಗೆ ಖಂಡಿತವಾಗಿ ಶಿಕ್ಷೆ ವಿಧಿಸಲಾಗುವುದು" ಎಂದರು.












Click it and Unblock the Notifications