ಕಾಶ್ಮೀರಕ್ಕೆ ದಾಖಲೆ ಮಟ್ಟದಲ್ಲಿ ಪ್ರವಾಸಿಗರ ಆಗಮನ
ಶ್ರೀನಗರ, ಡಿಸೆಂಬರ್ 03: ಕಾಶ್ಮೀರಕ್ಕೆ ದಾಖಲೆ ಮಟ್ಟದಲ್ಲಿ ಪ್ರವಾಸಿಗರು ಆಗಮಿಸಿದ್ದಾರೆ.
ನವೆಂಬರ್‌ನಲ್ಲಿ ಸುಮಾರು 1.27 ಲಕ್ಷ ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಕಳೆದ ಏಳು ವರ್ಷಗಳಲ್ಲಿಯೇ ಅತೀ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸಿರುವುದು ವಿಶೇಷವಾಗಿದೆ.
ಡಿಸೆಂಬರ್ನಿಂದ ಫೆಬ್ರವರಿವರೆಗೆ ಕಾಶ್ಮೀರ ಸೇರಿದಂತೆ ವಾಯವ್ಯ ಭಾರತದ ಹಲವು ಭಾಗಗಳು, ದಕ್ಷಿಣ ಮತ್ತು ಈಶಾನ್ಯ ಭಾರತದ ಹೆಚ್ಚಿನ ಭಾಗಗಳಲ್ಲಿ ಮತ್ತು ಹಿಮಾಲಯದ ತಪ್ಪಲಿನ ಕೆಲವು ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ತಾಪಮಾನವಿರುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದು, ಪ್ರವಾಸಿಗರ ಸಂಖ್ಯೆಯಲ್ಲಿ ಸ್ವಲ್ಪ ಕಡಿಮೆಯಾಗುವ ಸಾಧ್ಯತೆ ಇದೆ.
ಎಎನ್‌ಐ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಕಾಶ್ಮೀರದ ಪ್ರವಾಸೋದ್ಯಮ ನಿರ್ದೇಶಕ ಡಾ.ಗುಲಾಮ್ ನಬಿ ಇಟೂ, ನವೆಂಬರ್‌ನಲ್ಲಿ ಸುಮಾರು 1.27 ಲಕ್ಷ ಪ್ರವಾಸಿಗರು ಮತ್ತು ಅಕ್ಟೋಬರ್‌ನಲ್ಲಿ 97 ಸಾವಿರ ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಪ್ರವಾಸೋದ್ಯಮ ಪ್ರಚಾರ ಮತ್ತು ಕಾಶ್ಮೀರದಲ್ಲಿ ನಡೆಯುವ ಸಾಂಪ್ರದಾಯಿಕ ಉತ್ಸವಗಳು ಈ ದಾಖಲೆಗೆ ಕಾರಣ ಎಂದಿದ್ದಾರೆ.

ಜಮ್ಮು ವಿಶ್ವವಿದ್ಯಾಲಯದ ಹಾಸ್ಪಿಟಾಲಿಟಿ ಮತ್ತು ಮ್ಯಾನೇಜ್‌ಮೆಂಟ್ ಸ್ಕೂಲ್‌ನ ಪ್ರಾಧ್ಯಾಪಕ ಪರೀಕ್ಷಿತ್ ಮನ್ಹಾಸ್ ಪ್ರತಿಕ್ರಿಯಿಸಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶೇಷವಾಗಿ ಕಾಶ್ಮೀರಕ್ಕೆ ಹೆಚ್ಚಿನ ಪ್ರವಾಸಿಗರು ಆಗಮಿಸಿದ್ದಾರೆ.
ಸರ್ಕಾರದ ಪ್ರಯತ್ನಗಳು ಫಲ ನೀಡುತ್ತಿವೆ ಮತ್ತು ಜಮ್ಮು ಕಾಶ್ಮೀರ ಸಹಜ ಸ್ಥಿತಿಗೆ ಮರಳುತ್ತಿದೆ. ಪ್ರವಾಸೋದ್ಯಮಕ್ಕೆ ಇಂಥ ಹೆಚ್ಚಿನ ಪ್ರಯತ್ನಗಳ ಅಗತ್ಯವಿದೆ ಎಂದು ಹೇಳಿದರು.
ಶ್ರೀನಗರದ ವಿಶ್ವ ಪ್ರಸಿದ್ಧ ದಾಲ್ ಸರೋವರದಲ್ಲಿ ಅರಳಿರುವ ತಾವರೆಗಳು ಪ್ರವಾಸಿಗರನ್ನು ಬರ ಮಾಡಿಕೊಳ್ಳುತ್ತಿವೆ. ಈ ಸರೋವರದ ಮೇಲೆ ತೇಲುವ ಮಾರುಕಟ್ಟೆಗಳು ಗಿಜಿಗುಡುತ್ತಿವೆ. ಲಾಲ್‌ಚೌಕ್‌ನಲ್ಲಿ ಹಿಂದೆಂದೂ ಇಲ್ಲದಷ್ಟು ಸಂಚಾರ ದಟ್ಟಣೆ ಇದೆ. ಬೆಟ್ಟದ ಮೇಲಿನ ಶಂಕರಾಚಾರ್ಯ ದೇಗುಲದ ಮೆಟ್ಟಿಲುಗಳ ಮೇಲೆ ಭಕ್ತರ ಸಾಲು. ಗುಲ್‌ಮರ್ಗ್, ಸೋನ್‌ಮರ್ಗ್, ಪಹಲ್ಗಾಮ್, ಬಾಲ್‌ಟಾಲ್, ಬಾಂಡಿಪುರ, ಬಡ್ಗಾಮ್ ಮುಂತಾದ ರಮಣೀಯ ಸ್ಥಳಗಳಲ್ಲಿ ಟೂರಿಸ್ಟ್‌ಗಳ ಕಲರವ, ಸಿನಿಮಾ ಚಿತ್ರೀಕರಣದ ಸಡಗರ.
2016ರಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿಯನ್ನು ಸೇನಾ ಪಡೆಗಳು ಎನ್‌ಕೌಂಟರ್‌ನಲ್ಲಿ ಮುಗಿಸಿದ ಬಳಿಕ ಎದ್ದ ಜನ ದಂಗೆ, 2019ರಲ್ಲಿ ಕೇಂದ್ರ ಸರಕಾರ ದಿಟ್ಟ ನಿರ್ಧಾರ ಕೈಗೊಂಡು 370 ಮತ್ತು 35 (ಎ) ವಿಧಿ ಬರ್ಖಾಸ್ತುಗೊಳಿಸಿದ ಬಳಿಕ ತಿಂಗಳುಗಟ್ಟಲೆ ಹಾಕಲಾಗಿದ್ದ ಕರ್ಫ್ಯೂ ಹಾಗೂ ಆ ಬಳಿಕ ಅಪ್ಪಳಿಸಿದ ಕೋವಿಡ್ ಅಲೆಗಳಿಂದಾಗಿ ಕಾಶ್ಮೀರ ಕಣಿವೆಯ ವಾಣಿಜ್ಯ ಜೀವನ ತಲ್ಲಣಿಸಿತ್ತು. ಇದೀಗ ಮತ್ತೆ ಜಮ್ಮು-ಕಾಶ್ಮೀರದ ಜನ ಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.
ಜಮ್ಮು-ಕಾಶ್ಮೀರ ಸಂಪದ್ಭರಿತ ವಿಶಿಷ್ಟ ಪ್ರದೇಶ. ಸೇಬು ಮತ್ತು ಕೇಸರಿ ಬೆಳೆ ಇವರಿಗೆ ಕೈತುಂಬ ಹಣ ತಂದು ಕೊಡುತ್ತದೆ. ಇದನ್ನು ಬಿಟ್ಟರೆ ಅತಿ ಹೆಚ್ಚು ಆದಾಯ ತಂದು ಕೊಡುವುದು ಪ್ರವಾಸೋದ್ಯಮ. ಇಲ್ಲಿಯ ಜಿಡಿಪಿಯಲ್ಲಿ ಪ್ರವಾಸೋದ್ಯಮದ ಪಾಲು ಶೇ.10ರಷ್ಟಿದೆ.
ಹಾಗೆ ನೋಡಿದರೆ ಇತರ ರಾಜ್ಯಗಳಿಗೆ ಹೋಲಿಸಿದರೆ ಜಮ್ಮು ಕಾಶ್ಮೀರದಲ್ಲಿ ಕೋವಿಡ್ ಪ್ರಮಾಣ ತೀರ ಕಡಿಮೆ. ಇದೀಗ ಎರಡನೇ ಅಲೆ ತಗ್ಗಿದ ಬಳಿಕ ಮತ್ತು ಸುರಕ್ಷಾ ವ್ಯವಸ್ಥೆ ಬಿಗಿಯಾದ ಕಾರಣ ದೇಶಾದ್ಯಂತದಿಂದ ಪ್ರವಾಸಿಗರು ಜಮ್ಮು-ಕಾಶ್ಮೀರಕ್ಕೆ ಮುಗಿ ಬಿದ್ದಿದ್ದಾರೆ. ವಿಶ್ವದ ಪ್ರಮುಖ ಪ್ರವಾಸಿ ತಾಣಗಳೆಲ್ಲ ಕೋವಿಡ್ ಕಾರಣ ಬೀಗ ಮುದ್ರೆ ಕಂಡಿದ್ದರೆ, ಕಾಶ್ಮೀರದ ರಮ್ಯ ತಾಣಗಳು ಮಾತ್ರ ಕೈ ಬೀಸಿ ಕರೆಯುತ್ತಿವೆ.
ದಾಲ್ ಸರೋವರದ ಮೀನಾ ಬಜಾರ್ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ಭರ್ಜರಿ ವ್ಯಾಪಾರ. ಹೋಟೆಲ್‌ಗಳ ರೂಮುಗಳು ದಶಕಗಳ ಬಳಿಕ ಫುಲ್. ಶ್ರೀನಗರ ಮತ್ತು ಜಮ್ಮು ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಓಡಾಟವಿದೆ.












Click it and Unblock the Notifications