ಒಂದೇ ದಿನ ನಡೆದ ಸೇನಾ ಕಾರ್ಯಾಚರಣೆಯಲ್ಲಿ ಮೂವರು ಉಗ್ರರ ಹತ್ಯೆ
ಶ್ರೀನಗರ್, ಜನವರಿ.20: ಜಮ್ಮು-ಕಾಶ್ಮೀರದಲ್ಲಿ ನಿಷೇಧಿತ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮೂವರು ಉಗ್ರರನ್ನು ಭದ್ರತಾ ಪಡೆ ಸಿಬ್ಬಂದಿ ಹೊಡೆದುರುಳಿಸಿದ್ದಾರೆ. ಸೋಮವಾರ ಶೋಪಿಯಾನ್ ಜಿಲ್ಲೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಉಗ್ರರನ್ನು ಸದೆ ಬಡೆಯಲಾಗಿದೆ.
ಕಣಿವೆ ರಾಜ್ಯದಲ್ಲಿ ದಾಳಿಗೆ ನಿಷೇಧಿತ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮೂವರು ಉಗ್ರರು ಸಂಚು ರೂಪಿಸಿದ್ದರು ಎಂದು ಶಂಕಿಸಲಾಗಿದೆ. ಉಗ್ರರ ಹತ್ಯೆ ಬಳಿಕ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ.
ಶೋಪಿಯಾನ್ ಜಿಲ್ಲೆಯ ವಾಹಿ ಪ್ರದೇಶದಲ್ಲಿ ಭಾರತೀಯ ಸೇನೆ, ಸಿಆರ್ ಪಿಎಫ್ ಹಾಗೂ ಜಮ್ಮು-ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಮೂವರ ಪೈಕಿ ಇಬ್ಬರ ಗುರುತನ್ನು ಪತ್ತೆ ಮಾಡಲಾಗಿದೆ. ಉಳಿದಂತೆ ಇನ್ನೊಬ್ಬ ಉಗ್ರನ ಗುರುತು ಪತ್ತೆ ಮಾಡಲಾಗುತ್ತಿದೆ.

ಮೂವರ ಪೈಕಿ ಇಬ್ಬರು ಉಗ್ರರ ಗುರುತು ಪತ್ತೆ:
ಮೂವರು ಉಗ್ರರ ಪೈಕಿ ಒಬ್ಬನನ್ನು ಆದಿಲ್ ಶೇಖ್ ಎಂದು ಗುರುತಿಸಲಾಗಿದೆ. ಕಳೆದ 2018ರ ಸಪ್ಟೆಂಬರ್.29ರಂದು ಇದೇ ಉಗ್ರ ಆದಿಲ್ ಶೇಖ್, ಜವಾಹರ್ ನಗರದಲ್ಲಿ ಇರುವ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ ಮಾಜಿ ಶಾಸಕ ಅಜಜ್ ಮಿರ್ ಮನೆಯಲ್ಲಿ ಎಂಟು ಶಸ್ತ್ರಾಸ್ತ್ರಗಳನ್ನು ದರೋಡೆ ಮಾಡಿದ್ದನು ಎನ್ನಲಾಗಿದೆ.
ಇನ್ನು, ಮತ್ತೊಬ್ಬ ಉಗ್ರನನ್ನು ಶೋಪಿಯಾನ್ ಮೂಲದ ವಾಸೀಮ್ ವಾನಿ ಎಂದು ಗುರುತಿಸಲಾಗಿದೆ.












Click it and Unblock the Notifications