Rohit Sharma: ಮುಂಬೈ ಇಂಡಿಯನ್ಸ್ ಬಿಡ್ತಾರ ರೋಹಿತ್ ಶರ್ಮಾ? ಮುಂದಿನ ವರ್ಷ ಈ ತಂಡಕ್ಕಾಗಿ ಆಡೋದು ಫಿಕ್ಸ್!
ಮುಂಬೈ ಇಂಡಿಯನ್ಸ್ ತಂಡದಲ್ಲಿ ರೋಹಿತ್ ಶರ್ಮಾ ಅವರಿಗೆ ಸರಿಯಾದ ಗೌರವ ಸಿಗುತ್ತಿಲ್ಲ ಎನ್ನುವುದು ಅಭಿಮಾನಿಗಳ ಆರೋಪ. ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ನೀಡಲು, ರೋಹಿತ್ ಅವರನ್ನು ಏಕಾಏಕಿ ನಾಯಕತ್ವದಿಂದ ಕೆಳಗಿಳಿಸಿದ್ದು ಅಭಿಮಾನಿಗಳು ಆಕ್ರೋಶಕ್ಕೆ ಕಾರಣವಾಗಿತ್ತು, ಹಾರ್ದಿಕ್ ಪಾಂಡ್ಯ ವಿರುದ್ಧ ಅಭಿಮಾನಿಗಳು ಕಿಡಿಕಾರಿದ್ದರು.
ಇದೊಂದು ವರ್ಷ ಮಾತ್ರ ರೋಹಿತ್ ಶರ್ಮಾ ಅವರು ಮುಂಬೈ ಇಂಡಿಯನ್ಸ್ ತಂಡದಲ್ಲಿ ಇರುತ್ತಾರೆ, ಮುಂದಿನ ವರ್ಷ ಅವರು ಬೇರೆ ತಂಡಕ್ಕೆ ಹೋಗುವುದು ಪಕ್ಕಾ ಎನ್ನುವ ಊಹಾಪೋಹ ಇದೆ. ಈಗಾಗಲೇ ಆರ್ ಸಿಬಿ ಮತ್ತು ಸಿಎಸ್‌ಕೆ ಅಭಿಮಾನಿಗಳು ತಮ್ಮ ತಂಡಕ್ಕೆ ಬನ್ನಿ ಎಂದು ಸಾಮಾಜಿಕ ತಾಲತಾಣದಲ್ಲಿ ಮನವಿ ಮಾಡುತ್ತಿದ್ದಾರೆ.

2025ರ ಐಪಿಎಲ್‌ಗೆ ಮುನ್ನ ಮೆಗಾ ಹರಾಜು ನಡೆಯಲಿದೆ. ಈವರೆಗೆ ಮೆಗಾ ಹರಾಜಿಗೆ ಮುನ್ನ ಪ್ರತಿ ತಂಡಗಳು ನಾಲ್ವರು ಆಟಗಾರರನ್ನು ಮಾತ್ರ ಉಳಿಸಿಕೊಂಡು ಉಳಿದ ಆಟಗಾರರನ್ನು ಬಿಡುಗಡೆ ಮಾಡಬೇಕಿತ್ತು. ಆದರೆ ಈ ಬಾರಿ 8 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಎಲ್ಲಾ ಫ್ರಾಂಚೈಸಿಗಳು ಮನವಿ ಮಾಡಿವೆ.
ರೋಹಿತ್ ಶರ್ಮಾ ತಂಡದಿಂದ ಬಿಡುಗಡೆ?
2025ರ ಐಪಿಎಲ್ ಮೆಗಾ ಹರಾಜಿಗೆ ಮುನ್ನ ರೋಹಿತ್ ಶರ್ಮಾ ಅವರೇ ಮುಂಬೈ ಇಂಡಿಯನ್ಸ್ ತಂಡದಿಂದ ಹೊರಬರಲಿದ್ದಾರಾ ಎನ್ನುವ ಪ್ರಶ್ನೆ ಕೂಡ ಇದೆ. ಮುಂಬೈ ಇಂಡಿಯನ್ಸ್ ಏನಾದರೂ ರೋಹಿತ್ ಅವರ ಮನವೊಲಿಸಿ ತಂಡದಲ್ಲೇ ಉಳಿಸಿಕೊಳ್ಳುತ್ತಾ ಎನ್ನುವ ಪ್ರಶ್ನೆ ಕೂಡ ಇದೆ.
ಆದರೆ ಹಲವು ತಂಡಗಳು ಮಾತ್ರ ರೋಹಿತ್ ಶರ್ಮಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ಹೊಂದಿವೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ಕೋಚ್ ಜಸ್ಟಿನ್ ಲ್ಯಾಂಗರ್ ರೋಹಿತ್ ಶರ್ಮಾ ಕುರಿತಂತೆ ನೀಡಿರುವ ಹೇಳಿಕೆ ಸಖತ್ ಸದ್ದು ಮಾಡುತ್ತಿದೆ.
ತಂಡದಲ್ಲಿ ಹೊಂದಲು ಬಯಸುವ ಆಟಗಾರರ ಬಗ್ಗೆ ಹೇಳುವಂತೆ ಎಲ್‌ಎಸ್‌ಜಿ ಕೋಚ್ ಜಸ್ಟಿನ್ ಲ್ಯಾಂಗರ್ ಅವರನ್ನು ಸಂದರ್ಶಕರು ಕೇಳಿದಾಗ, ನಮ್ಮ ತಂಡದ ಬಹುತೇಕ ಆಟಾರರ ಕ್ರಮಾಂಕ ನಿರ್ಧರಿಸಲಾಗಿದೆ ಎಂದರು. ರೋಹಿತ್ ಶರ್ಮಾ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಬಹುದು ಎಂದು ಬಯಸುತ್ತೀರಾ ಎನ್ನುವ ಪ್ರಶ್ನೆಗೆ, ನಗುಮುಖದಲ್ಲೇ ಉತ್ತರಿಸಿದ ಲ್ಯಾಂಗರ್, "ರೋಹಿತ್ ಶರ್ಮಾ? ನಾವು ಮುಂಬೈನಿಂದ ಅವರನ್ನು ಕರೆದುಕೊಂಡು ಹೋಗುತ್ತಿದ್ದೇವೆ. ನೀವು ಸಮಾಲೋಚಕರಾಗಿರುವುದು ಉತ್ತಮ," ಎಂದು ಹೇಳಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡಕ್ಕೆ ನಾಯಕನಾಗಿ 5 ಪ್ರಶಸ್ತಿ ಗೆದ್ದುಕೊಟ್ಟಿರುವ ರೋಹಿತ್ ಶರ್ಮಾ ಅವರು ತಂಡದನ್ನು ಬಿಡುವುದು ಅಷ್ಟು ಸುಲಭವಲ್ಲ. ಒಂದು ವೇಳೆ ಅವರು ಮುಂಬೈ ತೊರೆದು ಐಪಿಎಲ್ ಮೆಗಾ ಹರಾಜಿನಲ್ಲಿ ಬಂದರೆ, ಹಲವು ತಂಡಗಳು ಅವರಿಗಾಗಿ ಪೈಪೋಟಿ ನಡೆಸುವುದು ಖಂಡಿತ, ಜೊತೆಗೆ ದೊಡ್ಡ ಮೊತ್ತಕ್ಕೂ ಹರಾಜಾಗುವ ಸಾಧ್ಯತೆ ಇದೆ.












Click it and Unblock the Notifications