Virat Kohli: ವಿರಾಟ್ ಕೊಹ್ಲಿ ಮನವಿಗೆ ಸ್ಪಂದಿಸಿದ ಫ್ಯಾನ್ಸ್: ಹೃದಯ ಗೆದ್ದ ವಿಡಿಯೋ
ಗುರುವಾರ ಮುಂಬೈನ ವಾಂಖೇಡೆ ಅಂಗಳದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಸಿಬಿ ಸೋಲು ಕಂಡಿತು. ಆದರೆ ಆರ್‌ಸಿಬಿ ತಂಡದ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಅಭಿಮಾನಿಗಳ ಮನಸ್ಸು ಗೆಲ್ಲುವಲ್ಲಿ ಸಫಲರಾದರು. ಅಷ್ಟಕ್ಕೂ ಆಗಿದ್ದೇನು ಇಲ್ಲಿದೆ ಮಾಹಿತಿ.
ಹಾರ್ದಿಕ್ ಪಾಂಡ್ಯ ಸದ್ಯ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಐದು ಬಾರಿಯ ಚಾಂಪಿಯನ್ ರೋಹಿತ್ ಶರ್ಮಾ ಅವರನ್ನು ಮುಂಬೈ ತಂಡ ನಾಯಕತ್ವದಿಂದ ಕೆಳಗಿಳಿಸಿದ್ದು ಅಭಿಮಾನಿಗಳಿಗೆ ಬೇಸರ ತರಿಸಿದೆ. ಇದರಿಂದ ಹಾರ್ದಿಕ್ ವಿರುದ್ಧ ಆಗಾಗ ಅಸಮಾಧಾನವನ್ನು ಹೊರಹಾಕುತ್ತಲೇ ಇದ್ದರು. ರೋಹಿತ್ ಶರ್ಮಾ 38 ರನ್ ಬಾರಿಸಿ ಔಟ್ ಆಗುತ್ತಿದ್ದಂತೆ ಅಂಗಳಕ್ಕೆ ಬಂದ ಹಾರ್ದಿಕ್ ಪಾಂಡ್ಯ ಕಂಡು ಅಭಿಮಾನಿಗಳು ಬೊಬ್ಬೆ ಹೊಡೆಯಲು ಆರಂಭಿಸಿದರು.

ಹಾರ್ದಿಕ್ ನಾಯಕ
ಹಾರ್ದಿಕ್ ಪಾಂಡ್ಯ ಅವರನ್ನು ವಾಂಖೆಡೆ ಸ್ಟೇಡಿಯಂನಲ್ಲಿ ನೆರೆದಿದ್ದ ಪ್ರೇಕ್ಷಕರು ಬೊಬ್ಬೆ ಹೊಡೆಯಲು ಆರಂಭಿಸಿದ್ದನ್ನು ಕಂಡು ವಿರಾಟ್ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಮುಂಬೈಗೆ ಹೊಸದಾಗಿ ನೇಮಕಗೊಂಡ ನಾಯಕನ ವಿರುದ್ಧ ನಕಾರಾತ್ಮಕ ಕಾಮೆಂಟ್‌ಗಳನ್ನು ನಿಲ್ಲಿಸುವಂತೆ ಕೊಹ್ಲಿ ಅಭಿಮಾನಿಗಳಿಗೆ ಕೇಳಿಕೊಂಡರು.
ಅಲ್ಲದೆ ಹಾರ್ದಿಕ್ ಪಾಂಡ್ಯ ಅವರನ್ನು ಬೆಂಬಲಿಸುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಐತಿಹಾಸಿಕ ವಾಂಖೆಡೆ ಸ್ಟೇಡಿಯಂನಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ RCB ಏಕಪಕ್ಷೀಯ ಸೋಲನ್ನು ಅನುಭವಿಸಿದ ನಂತರ ಕೊಹ್ಲಿಯ ಹೃದಯ ಸ್ಪರ್ಶದ ಗೆಸ್ಚರ್ ವೈರಲ್ ಆಗುತ್ತಿದೆ.
ಹಾರ್ದಿಕ್ ವಿರುದ್ಧ ನಿಂದನೆ
197 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈಗೆ 12ನೇ ಓವರ್‌ನಲ್ಲಿ ರೋಹಿತ್ ಶರ್ಮಾ ಔಟ್ ಆದರು. ಇದಾದ ಬಳಿಕ ಕ್ರೀಸ್ ಗೆ ಬಂದ ಹಾರ್ದಿಕ್ ಪಾಂಡ್ಯ ಸೂರ್ಯಕುಮಾರ್ ಯಾದವ್ ಜೊತೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರಯ. ಹಾರ್ದಿಕ್ ಪಾಂಡ್ಯ ಆಗಮಿಸುತ್ತಿದ್ದಂತೆಯೇ ಇಡೀ ಕ್ರೀಡಾಂಗಣದಲ್ಲಿ ಗದ್ದಲ ಆರಂಭವಾಯಿತು. ಇದನ್ನು ಕೇಳಿ ವಿರಾಟ್ ಕೊಹ್ಲಿ ನಿರಾಸೆಗೊಂಡರು.
ಹಾರ್ದಿಕ್ ದೇಶಕ್ಕಾಗಿ ಆಡುತ್ತಾರೆ ಮತ್ತು ವಾಂಖೆಡೆಯಲ್ಲಿ ಪ್ರೇಕ್ಷಕರಿಂದ ಇಂತಹ ಸ್ವಾಗತಕ್ಕೆ ಅವರಿಗೆ ಬೇಸರ ತರುತ್ತದೆ ಎಂದು ಕೊಹ್ಲಿ ಸನ್ನೆ ಮಾಡುತ್ತಿರುವುದು ಕಂಡುಬಂದಿದೆ.

ಮುಸುಕಿನ ಗುದ್ದಾಟ
ಬೌಲಿಂಗ್ ವೇಳೆಯೂ ಅಭಿಮಾನಿಗಳು ರೋಹಿತ್ ಶರ್ಮಾಗೆ ಬೆಂಬಲವನ್ನು ಸೂಚಿಸುತ್ತಿದ್ದರು. ಆದರೆ ಹಾರ್ದಿಕ್ ಪಾಂಡ್ಯಗೆ ಅಚ್ಚಾಗಿ ಬೆಂಬಲ ಇರಲಿಲ್ಲ. ಬ್ಯಾಟಿಂಗ್ ಮಾಡಲು ಹಾರ್ದಿಕ್ ಕ್ರೀಸ್‌ಗೆ ಬಂದಾಗಲೂ ಇದೇ ಸನ್ನಿವೇಶಗಳು ಕಂಡು ಬಂದಿತು. ಹಾರ್ದಿಕ್ ತಮ್ಮ ನೈಜ ಶೈಲಿಯಲ್ಲಿ ಬ್ಯಾಟ್ ಮಾಡಿ ಆರು ಎಸೆತಗಳಲ್ಲಿ ಮೂರು ಸಿಕ್ಸರ್‌ಗಳೊಂದಿಗೆ ಅಜೇಯ 21 ರನ್ ಗಳಿಸಿದರು.
ಎಪ್ರಿಲ್ 1 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ವೇಳೆಯೂ ಹಾರ್ದಿಕ್ ಭಾರೀ ಅಬ್ಬರಿಸಿದ್ದರು. ಆಗ ಮಧ್ಯಪ್ರವೇಶಿಸಿದ ಸಂಜಯ್ ಮಂಜ್ರೇಕರ್, ಸಂಯಮದಿಂದ ವರ್ತಿಸುವಂತೆ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದರು.
ಮುಂಬೈಗೆ ಜಯ
ಐಪಿಎಲ್‌ನ 25ನೇ ಪಂದ್ಯದಲ್ಲಿ ಟಾಸ್ ಸೋತ ಆರ್‌ಸಿಬಿ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 196 ರನ್ ಕಲೆ ಹಾಕಿತು. ನಾಯಕ ಫಾಫ್ ಡುಪ್ಲೇಸಿಸ್, ರಜತ್ ಪಟಿದಾರ್, ದಿನೇಶ್ ಕಾರ್ತಿಕ್ ಅರ್ಧಶತಕ ಬಾರಿಸಿ ಮಿಂಚಿದರು. ಮುಂಬೈ ಪರ ಜಸ್ಪ್ರಿತ್ ಬುಮ್ರಾ ಐದು ವಿಕೆಟ್ ಪಡೆದರು.
ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಇನ್ನು 27 ಎಸೆತಗಳು ಬಾಕಿ ಇರುವಂತೆ ಮೂರು ವಿಕೆಟ್ ಕಳೆದುಕೊಂಡು 199 ರನ್ ಸೇರಿಸಿತು. ಆತಿಥೇಯ ತಂಡದ ಪರ ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ಅರ್ಧಶತಕ ಬಾರಿಸಿದರು. ಐಪಿಎಲ್ 2024 ರಲ್ಲಿ ಆರ್‌ಸಿಬಿಗೆ ಐದನೇ ಸೋಲಾಗಿದ್ದು, ಮುಂಬೈಗೆ ಎರಡನೇ ಗೆಲುವಾಗಿದೆ.












Click it and Unblock the Notifications