Border Gavaskar Trophy: ರೋಹಿತ್ ಶರ್ಮಾ ಅಲ್ಲ; ಇವರಿಬ್ಬರನ್ನು ಕೊಂಡಾಡುತ್ತಿವೆ ಆಸ್ಟ್ರೇಲಿಯಾ ಪತ್ರಿಕೆಗಳು
ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿ ಸೋತಿರುವ ಭಾರತ ಇದೀಗ ಆಸ್ಟ್ರೇಲಿಯಾ ವಿರುದ್ಧದ ಐದು ಟೆಸ್ಟ್‌ಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಗೆ ಸಜ್ಜಾಗುತ್ತಿದೆ. ಭಾರತ ತಂಡದ ಆಟಗಾರರು ಈಗಾಗಲೇ ಎರಡು ಬ್ಯಾಚ್‌ಗಳಲ್ಲಿ ಆಸ್ಟ್ರೇಲಿಯಾಗೆ ಪ್ರಯಾಣಿಸಿದ್ದು, ಶೀಘ್ರದಲ್ಲೇ ಮೊದಲ ಟೆಸ್ಟ್‌ಗೆ ಅಭ್ಯಾಸ ಆರಂಭಿಸಲಿದ್ದಾರೆ.
ನವೆಂಬರ್ 22ರಿಂದ ಮೊದಲ ಟೆಸ್ಟ್ ಪರ್ತ್‌ನಲ್ಲಿ ಆರಂಭವಾಗಲಿದೆ. ಬಾರ್ಡರ್ ಗವಾಸ್ಕರ್ ಟ್ರೋಫಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳಿಗೆ ಪ್ರತಿಷ್ಠೆಯ ಸರಣಿಯಾಗಿದೆ. ಭಾರತ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಪ್ರಾಬಲ್ಯ ಸಾಧಿಸಿದ್ದು, ಈ ಬಾರಿ ಕೂಡ ಅದನ್ನು ಮುಂದುವರೆಸುವ ವಿಶ್ವಾಸದಲ್ಲಿದೆ.

ಆಸ್ಟ್ರೇಲಿಯಾ ಕೂಡ ಈ ಬಾರಿ ಭಾರತದ ಪ್ರಾಬಲ್ಯವನ್ನು ಮುರಿದು ಬಾರ್ಡರ್ ಗವಾಸ್ಕರ್ ಟ್ರೋಫಿ ಗೆಲ್ಲಲು ರಣತಂತ್ರ ರೂಪಿಸಿದೆ. ಈ ಸರಣಿ ಬಗ್ಗೆ ಆಸ್ಟ್ರೇಲಿಯಾ ಮಾಧ್ಯಮಗಳು ಕೂಡ ಕುತೂಹಲ ಹೊಂದಿದ್ದು, ವ್ಯಾಪಕವಾಗಿ ಪ್ರಚಾರ ಮಾಡುತ್ತಿವೆ. ಆಸ್ಟ್ರೇಲಿಯಾ ಮಾಧ್ಯಮಗಳಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅಲ್ಲ, ವಿರಾಟ್ ಕೊಹ್ಲಿ ಮತ್ತು ಯಶಸ್ವಿ ಜೈಸ್ವಾಲ್ ಹೈಲೈಟ್ ಆಗಿದ್ದಾರೆ.
ಪತ್ರಿಕೆಗಳ ಮುಖಪುಟದಲ್ಲಿ ಕೊಹ್ಲಿ, ಜೈಸ್ವಾಲ್
ರೋಹಿತ್ ಶರ್ಮಾ ಭಾರತ ತಂಡದ ನಾಯಕರಾಗಿದ್ದರೂ, ಆಸ್ಟ್ರೇಲಿಯಾದಲ್ಲಿ ವಿರಾಟ್ ಕೊಹ್ಲಿ ಜನಪ್ರಿಯತೆ ಹೆಚ್ಚಾಗಿದೆ. ಅದರ ಜೊತೆ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆಯುತ್ತಿರುವ ಯಶಸ್ವಿ ಜೈಸ್ವಾಲ್ ಕೂಡ ಆಸ್ಟ್ರೇಲಿಯಾ ಮಾಧ್ಯಮಗಳ ಗಮನ ಸೆಳೆದಿದ್ದಾರೆ. ವಿರಾಟ್ ಕೊಹ್ಲಿ ಚಿತ್ರಗಳು ಹೆಚ್ಚಿನ ಪತ್ರಿಕೆಗಳಲ್ಲಿ ಪ್ರಾಬಲ್ಯ ಹೊಂದಿದ್ದರೂ, ಇನ್ನೊಬ್ಬ ಉದಯೋನ್ಮುಖ ತಾರೆ ಯಶಸ್ವಿ ಜೈಸ್ವಾಲ್, ಅವರನ್ನು ಕೆಲವು ಪತ್ರಿಕೆಗಳಲ್ಲಿ ಗುರುತಿಸಬಹುದು.
ಕೊಹ್ಲಿಗೆ ಆಸ್ಟ್ರೇಲಿಯಾದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ, ಆಸ್ಟ್ರೇಲಿಯಾ ನೆಲದಲ್ಲಿ ಕೊಹ್ಲಿ ಕೂಡ ಅತ್ಯುತ್ತಮ ಪ್ರದರ್ಶನ ನೀಡಿರುವ ಇತಿಹಾಸ ಹೊಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸತತವಾಗಿ ವಿಫಲವಾಗಿರುವ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ಸರಣಿಯಲ್ಲಿ ಫಾರ್ಮ್‌ಗೆ ಮರಳುವ ವಿಶ್ವಾಸದಲ್ಲಿದ್ದಾರೆ.
ಸರಣಿಗೆ ಮುನ್ನವೇ ಆಸ್ಟ್ರೇಲಿಯಾ ಕ್ರಿಕೆಟಿಗರು ಮೈಂಡ್‌ಗೇಮ್ ಆರಂಭಿಸಿದ್ದಾರೆ. ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ವಿರಾಟ್ ಕೊಹ್ಲಿ ಫಾರ್ಮ್ ಅನ್ನು ಪ್ರಶ್ನೆ ಮಾಡಿದ್ದರು, ಇದಕ್ಕೆ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ತಕ್ಕ ಪ್ರತಿಕ್ರಿಯೆ ನೀಡಿದ್ದಾರೆ.
ಕೊಹ್ಲಿ ಫಾರ್ಮ್ ಬಗ್ಗೆ ಮಾತನಾಡಿದ್ದ ರಿಕಿ ಪಾಂಟಿಂಗ್, ಕಳೆದ ಐದು ವರ್ಷಗಳಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಕೊಹ್ಲಿ ಕೇವಲ ಎರಡು ಶತಕ ಮಾತ್ರ ಗಳಿಸಿದ್ದಾರೆ, ಬೇರೆ ಯಾವ ಆಟಗಾರ ಈ ಅಂಕಿ ಅಂಶ ಹೊಂದಿದ್ದರೆ ತಂಡದಲ್ಲಿ ಉಳಿಯುತ್ತಿರಲಿಲ್ಲ ಎಂದು ಹೇಳಿದ್ದರು. ರಿಕಿ ಪಾಂಟಿಂಗ್ ಅವರು ಆಸ್ಟ್ರೇಲಿಯಾ ಕ್ರಿಕೆಟ್ ಬಗ್ಗೆ ಯೋಚಿಸಬೇಕು, ಅವರಿಗೆ ಭಾರತೀಯ ಕ್ರಿಕೆಟ್ ಬಗ್ಗೆ ಏನು ಕಾಳಜಿ ಇದೆ? ವಿರಾಟ್ ಮತ್ತು ರೋಹಿತ್ ಯಾವಾಗ ಬೇಕಾದರೂ ಫಾರ್ಮ್‌ಗೆ ಮರಳಬಹುದು ಎಂದು ಹೇಳಿದ್ದರು.












Click it and Unblock the Notifications