India vs Australia: ಆಸ್ಟ್ರೇಲಿಯಾ ತಂಡಕ್ಕೆ ಡೇವಿಡ್ ವಾರ್ನರ್ ವಾರ್ನಿಂಗ್
ಮಹತ್ವದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಆಸ್ಟ್ರೇಲಿಯಾಗೆ ಪ್ರವಾಸ ಮಾಡಿರುವ ಭಾರತ ತಂಡ ಕಠಿಣ ಅಭ್ಯಾಸ ನಡೆಸುತ್ತಿದೆ. ಅಭ್ಯಾಸ ಪಂದ್ಯ ಇರದ ಕಾರಣ ಭಾರತ ಮತ್ತು ಭಾರತ ಎ ಎನ್ನುವ ತಂಡ ಮಾಡಿಕೊಂಡು ಮೂರು ದಿನಗಳ ಅಭ್ಯಾಸ ಪಂದ್ಯ ಕೂಡ ಆಡಲಾಗುತ್ತಿದೆ. ಆಸ್ಟ್ರೇಲಿಯಾದ ಬೌನ್ಸ್ ಸ್ನೇಹಿ ಪಿಚ್‌ಗಳಲ್ಲಿ ಭಾರತದ ಬ್ಯಾಟರ್ ಗಳಿಗೆ ಅಗ್ನಿ ಪರೀಕ್ಷೆ ಇದೆ. ಇದಕ್ಕಾಗಿ ಶಾರ್ಟ್ ಬಾಲ್ ಎಸೆತಗಳನ್ನು ಎದುರಿಸಲು ಭಾರತೀಯ ಆಟಗಾರರು ಅಭ್ಯಾಸ ನಡೆಸುತ್ತಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ 3 ಪಂದ್ಯಗಳ ಸರಣಿ ಸೋತ ಬಳಿಕ ಭಾರತದ ಆತ್ಮವಿಶ್ವಾಸ ಕಡಿಮೆಯಾಗಿದೆ ಎನ್ನುವ ಆಲೋಚನೆ ಆಸ್ಟ್ರೇಲಿಯಾ ತಂಡದ್ದಾಗಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆಎಲ್ ರಾಹುಲ್ ಫಾರ್ಮ್‌ನಲ್ಲಿ ಇಲ್ಲದ ಕಾರಣ, ಆಸ್ಟ್ರೇಲಿಯಾ ವೇಗಿಗಳು ಖುಷಿಯಾಗಿದ್ದಾರೆ. ಆದರೆ ಆಸ್ಟ್ರೇಲಿಯಾ ಮಾಜಿ ಆಟಗಾರ ಡೇವಿಡ್ ವಾರ್ನರ್ ಪಾಟ್ ಕಮ್ಮಿನ್ಸ್ ಪಡೆಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ವಿರಾಟ್ ಕೊಹ್ಲಿಯನ್ನು ಕಡೆಗಣಿಸಬೇಡಿ
ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿರುವ ವಿರಾಟ್ ಕೊಹ್ಲಿ ನೆಟ್ಸ್‌ನಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ವಿರಾಟ್ ಕೊಹ್ಲಿ ಫಾರ್ಮ್ ಕಂಡುಕೊಳ್ಳಲು ಪ್ರಯತ್ನ ಮಾಡುತ್ತಿದ್ದು, ಯಾವಾಗ ಬೇಕಾದರೂ ಫಾರ್ಮ್‌ಗೆ ಮರಳಬಹುದು ಎಂದು ಡೇವಿಡ್ ವಾರ್ನರ್ ಹೇಳಿದ್ದು, ಯಾವುದೇ ಕಾರಣಕ್ಕೂ ವಿರಾಟ್ ಕೊಹ್ಲಿಯನ್ನು ಆಸ್ಟ್ರೇಲಿಯಾ ತಂಡ ಕಡೆಗಣಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಮೊದಲ ಪಂದ್ಯ ನವೆಂಬರ್ 22 ರಂದು ಆರಂಭವಾಗಲಿದ್ದು ಪರ್ತ್‌ನಲ್ಲಿ ಮೊದಲ ಟೆಸ್ಟ್ ನಡೆಯಲಿದೆ.
ಕೊಹ್ಲಿ ಫಾರ್ಮ್‌ನಲ್ಲಿ ಇಲ್ಲದೇ ಇರಬಹುದು, ಆದರೆ ಆಸ್ಟ್ರೇಲಿಯಾ ತಂಡದ ಗೆಲುವಿಗೆ ಅಡ್ಡಿಯಾಗುವ ಸಾಮರ್ಥ್ಯ ಆತನಿಗಿದೆ. ಸವಾಲುಗಳನ್ನು ಎದುರಿಸುವುದನ್ನು ಕೊಹ್ಲಿ ಯಾವಾಗಲೂ ಇಷ್ಟಪಡುತ್ತಾರೆ, ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಸೋತ ಬಳಿಕ ಕೊಹ್ಲಿ ಫಾರ್ಮ್‌ಗೆ ಮರಳಲು ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ ಎಂದು ಹೇಳಿದರು.
ತಮ್ಮ ವಿರುದ್ಧ ಟೀಕೆಗಳು ಬಂದಾಗೆಲ್ಲಾ ಕೊಹ್ಲಿ ಅದಕ್ಕೆ ಮೈದಾನದಲ್ಲೇ ಉತ್ತರ ಕೊಟ್ಟಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಸರಣಿಯಲ್ಲಿ ಸೋತ ಬಳಿಕ ಕೊಹ್ಲಿ ಪ್ರದರ್ಶನದ ಬಗ್ಗೆ ಟೀಕೆ ವ್ಯಕ್ತವಾಗಿದ್ದು, ಕೊಹ್ಲಿ ಯಾವಾಗ ಬೇಕಾದರೂ ಫಾರ್ಮ್‌ಗೆ ಮರಳಬಹುದು ನಾನು ಆಸ್ಟ್ರೇಲಿಯಾ ತಂಡದ ಬಗ್ಗೆ ಚಿಂತೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ಸ್ಟೀವ್ ಸ್ಮಿತ್ ಈ ಸರಣಿಯಲ್ಲಿ ಪ್ರಮುಖವಾಗಿದ್ದು, ಇವರ ಪ್ರದರ್ಶನವೇ ಬಾರ್ಡರ್-ಗವಾಸ್ಕರ್ ಟ್ರೋಫಿಯ ಫಲಿತಾಂಶವನ್ನು ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ. ಸ್ಮಿತ್ ಕೂಡ ಇತ್ತೀಚೆಗೆ ಸತತವಾಗಿ ವೈಫಲ್ಯ ಅನುಭವಿಸಿದ್ದು, ಭಾರತದ ವಿರುದ್ಧದ ಸರಣಿಯಲ್ಲಿ ಫಾರ್ಮ್‌ಗೆ ಮರಳುವ ವಿಶ್ವಾಸದಲ್ಲಿದ್ದಾರೆ.
2024ರಲ್ಲಿ ವಿರಾಟ್ ಕೊಹ್ಲಿ ಕೇವಲ 5 ಟೆಸ್ಟ್ ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ನ್ಯೂಜಿಲೆಂಡ್ ವಿರುದ್ದದ ಸರಣಿಯಲ್ಲಿ ಕೊಹ್ಲಿ ಕೇವಲ 93 ರನ್ ಮಾತ್ರ ಗಳಿಸಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟ್ರೋಫಿ ಫೈನಲ್‌ಗೆ ಅರ್ಹತೆ ಪಡೆಯಲು ಭಾರತಕ್ಕೆ ಈ ಸರಣಿಯಲ್ಲಿ ಗೆಲ್ಲುವುದು ಅನಿವಾರ್ಯವಾಗಿದ್ದು, ಕಠಿಣ ಅಭ್ಯಾಸ ನಡೆಸುತ್ತಿದೆ.












Click it and Unblock the Notifications