Virat Kohli: 9000 ರನ್, 63 ಅರ್ಧಶತಕ: ಎರಡು ದಾಖಲೆ ಬರೆದ ವಿರಾಟ್ ಕೊಹ್ಲಿ
ಐಪಿಎಲ್ 2025ರ ಆವೃತ್ತಿಯಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಆವೃತ್ತಿಯ ಕೊನೆಯ ಲೀಗ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಅರ್ಧಶತಕ ಸಿಡಿಸಿದ ವಿರಾಟ್ ಕೊಹ್ಲಿ ಎರಡು ಹೊಸ ದಾಖಲೆಗಳನ್ನು ಬರೆದಿದ್ದಾರೆ.
228 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಆರ್ ಸಿಬಿಗೆ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಉತ್ತರ ಆರಂಭವನ್ನೇ ಒದಗಿಸಿದರು. ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುವ ಮೂಲಕ ಮತ್ತೊಮ್ಮೆ ಆರ್ ಸಿಬಿಗೆ ನೆರವಾದರು. ಅವರು 27 ರನ್ ಗಳಿಸಿದ್ದಾಗ ಆರ್ ಸಿಬಿ ತಂಡಕ್ಕಾಗಿ 9000 ರನ್ ಗಳಿಸಿದ ಬ್ಯಾಟರ್ ಎನಿಸಿಕೊಂಡರು.

ಐಪಿಎಲ್ ಇತಿಹಾಸದಲ್ಲಿ ಮಾತ್ರವಲ್ಲದೆ ಟಿ20 ಕ್ರಿಕೆಟ್‌ನಲ್ಲೇ ಒಂದು ತಂಡಕ್ಕೆ ಇಷ್ಟು ರನ್ ಗಳಿಸಿರುವ ಏಕೈಕ ಆಟಗಾರ ವಿರಾಟ್ ಕೊಹ್ಲಿ. 18 ವರ್ಷಗಳಿಂದ ಅವರು ಆರ್ ಸಿಬಿ ತಂಡಕ್ಕಾಗಿ ಆಡುತ್ತಿದ್ದಾರೆ. ತಂಡದ ಬ್ಯಾಟಿಂಗ್‌ನ ಆಧಾರಸ್ಥಂಭವಾಗಿದ್ದಾರೆ. ಈಗ ಸ್ಥಗಿತಗೊಂಡಿರುವ ಚಾಂಪಿಯನ್ಸ್ ಲೀಗ್ ಟಿ20 ಪಂದ್ಯಾವಳಿಯಲ್ಲಿ ಅವರು ಆರ್ ಸಿಬಿಗಾಗಿ 424 ರನ್ ಸಿಡಿಸಿದ್ದರೆ, ಐಪಿಎಲ್‌ನಲ್ಲಿ 265 ಪಂದ್ಯಗಳಲ್ಲಿ 8606 ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡಕ್ಕಾಗಿ 6060 ರನ್ ಗಳಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.
ಐಪಿಎಲ್‌ನಲ್ಲಿ ಅತಿ ಹೆಚ್ಚು ಅರ್ಧಶತಕ
30 ಎಸೆತಗಳಲ್ಲಿ 10 ಬೌಂಡರಿ ಸಹಿತ 54 ರನ್ ಗಳಿಸಿದ ಅವರು ಸಿಕ್ಸರ್ ಬಾರಿಸಲು ಹೋಗಿ ವಿಕೆಟ್ ಒಪ್ಪಿಸಿದರು. ಇದು ಅವರ ಐಪಿಎಲ್‌ನ 63ನೇ ಅರ್ಧಶತಕವಾಗಿದೆ. ಐಪಿಎಲ್‌ನಲ್ಲಿ ಅತಿ ಹೆಚ್ಚು ಅರ್ಧಶತಕ ಬಾರಿಸಿದ ದಾಖಲೆ ಈಗ ವಿರಾಟ್ ಕೊಹ್ಲಿ ಅವರ ಪಾಲಾಗಿದೆ. ಡೇವಿಡ್ ವಾರ್ನರ್ ಐಪಿಎಲ್‌ನಲ್ಲಿ 62 ಅರ್ಧಶತಕ ಬಾರಿಸಿದ್ದು ಕೊಹ್ಲಿ ವಾರ್ನರ್ ದಾಖಲೆ ಮುರಿದು ಹೊಸ ದಾಖಲೆ ಬರೆದಿದ್ದಾರೆ.
ಈ ಬಾರಿ ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ವಿರಾಟ್ ಕೊಹ್ಲಿ 13 ಪಂದ್ಯಗಳಲ್ಲಿ 602 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿ 6ನೇ ಬಾರಿಗೆ 600ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಆಟಗಾರ ಎನಿಸಿಕೊಂಡರು.
ಇದು 18ನೇ ಆವೃತ್ತಿಯಾಗಿದ್ದು ವಿರಾಟ್ ಕೊಹ್ಲಿ ಅವರ 18 ವರ್ಷಗಳ ಐಪಿಎಲ್ ಟ್ರೋಫಿ ಬರ ಕೊನೆಯಾಗಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಜೋಶ್ ಹೇಜಲ್‌ವುಡ್ ವಾಪಸ್ ಬಂದ ಬಳಿಕ ತಂಡದ ಬೌಲಿಂಗ್ ಬಲ ಕೂಡ ಹೆಚ್ಚಲಿದ್ದು ಅಭಿಮಾನಿಗಳ ಸುದೀರ್ಘ ಕಾಯುವಿಕೆ ಈ ವರ್ಷ ಅಂತ್ಯವಾಗಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ.












Click it and Unblock the Notifications