ಚಿನ್ನಸ್ವಾಮಿಯಲ್ಲಿ ಕನ್ನಡಿಗ ದೇವ್, ವಿರಾಟ್ ಅಬ್ಬರದ ಬ್ಯಾಟಿಂಗ್: ಆರ್‌ಸಿಬಿ ವಿರುದ್ಧ ಎಸ್‌ಆರ್‌ಎಚ್ ಹೀನಾಯು ಸೋಲು
IPL 2026 RCB Vs SRH: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿಯು ಎಸ್‌ಆರ್‌ಎಚ್ ವಿರುದ್ಧ ಆರು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿಯ ಐಪಿಎಲ್ ಅಭಿಯಾನಕ್ಕೆ ಅದ್ಭುತ ಚಾಲನೆ ನೀಡಿದೆ. ಅಂತಿಮ ಹಂತದವರೆಗೆ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆ ನಿಂತ ವಿರಾಟ್ ಕೊಹ್ಲಿ, ಅಜೇಯ 69 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಟಾಸ್ ಗೆದ್ದ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆಯೇ ಮೊದಲು ಬ್ಯಾಟ್ ಬೀಸಿದ ಇಶಾನ್ ಕಿಶನ್ ನಾಯತ್ವದ ಸನ್‌ರೈಸರ್ಸ್ ಹೈದರಾಬಾದ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 201 ರನ್‌ಗಳನ್ನು ಕಲೆಹಾಕಿತು. ಬಳಿಕ ಆರ್‌ಸಿಬಿಯು ಎಸ್‌ಆರ್‌ಎಚ್ ನೀಡಿದ ಈ ಬೃಹತ್ ರನ್‌ಗಳ ಗುರಿಯನ್ನು ಕೇವಲ 15.4 ಓವರ್‌ಗಳಲ್ಲಿ ಮುಗಿಸಿ ಭರ್ಜರಿ ಜಯ ಸಾಧಿಸಿತು. ವಿರಾಟ್ ಕೊಹ್ಲಿ ಜೊತೆ ಆರಂಭಿಕರಾಗಿ ಕಣಕ್ಕಿಳಿದ ಫಿಲ್ ಸಾಲ್ಟ್ ಬೇಗ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಕನ್ನಡಿಗ ದೇವದತ್ ಪಡಿಕ್ಕಲ್ ಸ್ಫೋಟಕ ಅರ್ಧಶತಕ ಸಿಡಿಸಿ ಉತ್ತರ ಆರಂಭ ಒದಗಿಸಿಕೊಟ್ಟರು.

ಇಶಾನ್ ಕಿಶನ್ ಶ್ರಮಕ್ಕೆ ಸಿಗದ ಪ್ರತಿಫಲ
ಎಸ್‌ಆರ್‌ಎಚ್ ಪರ ನಾಯಕ ಇಶಾನ್ ಕಿಶನ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡಿ ತಂಡದ ಮೊತ್ತವನ್ನು ಏರಿಸಿದರು. ಅವರು ಕೇವಲ 38 ಎಸೆತಗಳಲ್ಲಿ 8 ಬೌಂಡರಿ, 5 ಸಿಕ್ಸರ್‌ಗಳ ಸಹಿತ ಬರೋಬ್ಬರಿ 80 ರನ್‌ಗಳನ್ನ ಕಲೆಹಾಕಿದರು. ಇವರ ಈ ರನ್‌ಗಳೇ ತಂಡದ ಬೃಹತ್ ಮೊತ್ತಕ್ಕೆ ಕಾರಣವಾದವು. ಆದರೆ, ಇವರ ಶ್ರಮಕ್ಕೆ ಫ್ರತಿಫಲ ಸಿಗದಂತಾಯಿತು.
ಎಸ್‌ಆರ್‌ಎಚ್ ಪರ ಯಾರು ಎಷ್ಟು ರನ್ ಬಾರಿಸಿದರು?
ಸನ್ ರೈಸರ್ಸ್ ಹೈದರಾಬಾದ್ ಪರ ಮೊದಲು ಬ್ಯಾಟಿಂಗ್‌ಗಿಳಿದ ಅಭಿಷೇಕ್ ಶರ್ಮಾ ಅವರು ಕೇವಲ 7 ರನ್‌ಗೆ ವಿಕೆಟ್ ಒಪ್ಪಿಸಿದರೆ, ಟ್ರಾವಿಸ್ ಹೆಡ್ 11 ರನ್‌ಗೆ ಕ್ಯಾಚ್ ನೀಡಿ ಪೆವಿಲಿಯನ್‌ನತ್ತ ನಡೆದರು. ಬಳಿಕ ನಾಯಕ ಇಶಾನ್ ಕಿಶನ್ ಜವಾಬ್ದಾರಿಯುತ ಆಟ ಆಡಿ 80 ರನ್ ಕಲೆಹಾಕಿ ಮಿಂಚಿದರು. ಇನ್ನುಳಿದಂತೆ ಅನಿಕೇತ್ ವರ್ಮಾ 43(18), ಹೆನ್ರಿಚ್ ಕ್ಲಾಸೆನ್ 31(22), ನಿತೀಶ್ ಕುಮಾರ್ ರೆಡ್ಡಿ 1(6), ಸಲಿಲ್ ಅರೋರ 9(6), ಹರ್ಷ್ ದುಬೆ 3(2) ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಡೆವಿಡ್ ಪೇಯ್ನೆ ಅಜೇಯ 6, ಜಯದೇವ್ ಉನದ್ಕಟ್ ಅಜೇಯ 4 ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು 201ಕ್ಕೆ ತಲುಪಿಸಿದರು.
ದೇವ್, ರಜತ್, ಕೊಹ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ
ಬಳಿಕ ಆರ್‌ಸಿಬಿ ಪರ ದೇವದತ್ ಪಡಿಕ್ಕಲ್ ಸ್ಪೋಟಕ ಅರ್ಧಶತಕ ಸಿಡಿಸಿ ಉತ್ತಮ ಆರಂಭ ನೀಡಿದರು. ಬಳಿಕ ಬಂದ ನಾಯಕ ರಜತ್ ಪಾಟಿದಾರ್ ಕ್ರೀಸ್‌ನಲ್ಲಿ ಸ್ವಲ್ಪ ಸಮಯದವರೆಗೂ ಇದ್ದರೂ ಸಹ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಇನ್ನೂ ವಿರಾಟ್ ಕೊಹ್ಲಿ ಆರಂಭದಿಂದ ಕೊನೆಯವರೆಗೂ ನಿಂತು ತಂಡವನ್ನು ಗೆಲುವಿನ ದಡ ಸೇರಿಸಿದರು.
ಫಿಲ್ ಸಾಲ್ಟ್ 8(7), ವಿರಾಟ್ ಕೊಹ್ಲಿ ಅಜೇಯ 69, ದೇವದತ್ ಪಡಿಕ್ಕಲ್ 61(26), ರಜತ್ ಪಾಟಿದಾರ್ 31(12), ಟಿಮ್ ಡೆವಿಡ್ ಅಜೇಯ 16 ರನ್ ಸಿಡಿಸಿದರು. 16ನೇ ಓವರ್‌ನಲ್ಲಿ ವಿರಾಟ್ ಕೊಹ್ಲಿ ಸಿಕ್ಸ್, ಬೌಂಡರಿಗಳನ್ನು ಸಿಡಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಹೀಗೆ ವಿರಾಟ್ ಕೊಹ್ಲಿ ಕೇವಲ 38 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸ್‌ಗಳ ಸಹಿತ 69 ರನ್ ಸಿಡಿಸಿ ಮಿಂಚಿದರು. ಒಟ್ಟಿನಲ್ಲಿ ಆರ್‌ಸಿಬಿ ಬ್ಯಾಟರ್‌ಗಳ ಅಬ್ಬರಕ್ಕೆ, ಎಸ್‌ಆರ್‌ಎಚ್ ಬೌಲರ್‌ಗಳು ತತ್ತರಿಸಿದಂತೂ ನಿಜ. ಮತ್ತೊಂದೆಡೆ, ಫಿಲ್ ಸಾಲ್ಟ್ ಅವರು ಹಿಡಿದ ಕ್ಯಾಚ್‌ಗಳು ಸಹ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದವು. ಇವರು ಫೀಲ್ಡ್‌ನಲ್ಲಿ ಈ ಕೆಲ್ಸ ಮಾಡದೇ ಇದ್ದಿದರೆ, ಹೈದರಾಬಾದ್ ಬ್ಯಾಟರ್‌ಗಳು ರನ್‌ಗಳ ಹೊಳೆ ಹರಿಸುತ್ತಿದ್ದರು.












Click it and Unblock the Notifications