Virat Kohli: ಐಪಿಎಲ್‌ನಲ್ಲಿ ಮತ್ತೊಂದು ದಾಖಲೆ ಬರೆದ ವಿರಾಟ್ ಕೊಹ್ಲಿ
ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಆವೃತ್ತಿಗೆ ಭಾನುವಾರ ತೆರೆ ಬಿದ್ದಿದೆ. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಕೋಲ್ಕತಾ ನೈಟ್ ರೈಡರ್ಸ್ ಮೂರನೇ ಬಾರಿ ಪ್ರಶಸ್ತಿ ಗೆದ್ದು ಬೀಗಿದೆ.
ಈ ಬಾರಿ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಸತತ ಎರಡನೇ ಬಾರಿ ಆರೆಂಜ್ ಕ್ಯಾಪ್ ಗೆದ್ದ ಏಕೈಕ ಭಾರತೀಯ ಬ್ಯಾಟರ್ ಎನ್ನುವ ಹೆಗ್ಗಳಿಕೆ ಅವರದ್ದಾಗಿದೆ.

ವಿರಾಟ್ ಕೊಹ್ಲಿ ಇದಕ್ಕೂ ಮೊದಲು 2016ರ ಐಪಿಎಲ್ ಆವೃತ್ತಿಯಲ್ಲಿ ಆರೆಂಜ್ ಕ್ಯಾಪ್ ಗೆದ್ದಿದ್ದರು. ಆ ಆವೃತ್ತಿಯಲ್ಲಿ 16 ಪಂದ್ಯಗಳಲ್ಲಿ 81.08 ಸರಾಸರಿ 152 ಸ್ಟ್ರೈಕ್‌ರೇಟ್‌ನಲ್ಲಿ 973 ರನ್ ಗಳಿಸಿದ್ದರು. 7 ಅರ್ಧಶತಕ ಮತ್ತು ನಾಲ್ಕು ಶತಕಗಳನ್ನು ಗಳಿಸಿ ಹೊಸ ದಾಖಲೆ ಬರೆದಿದ್ದರು. ಆ ಆವೃತ್ತಿಯಲ್ಲಿ ಆರ್ ಸಿಬಿ ಫೈನಲ್‌ಗೆ ಪ್ರವೇಶಿಸಿದ್ದರೂ, ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲನುಭವಿಸಿತ್ತು. ಆದರೆ ಒಂದೇ ಐಪಿಎಲ್‌ನಲ್ಲಿ 973 ರನ್ ಗಳಿಸಿದ ದಾಖಲೆಯನ್ನು ಈವರೆಗೂ ಯಾರಿಗೂ ಮುರಿಯಲು ಆಗಿಲ್ಲ.
ಈ ಬಾರಿ ಕೂಡ ಆರೆಂಜ್ ಕ್ಯಾಪ್
2024ರ ಆವೃತ್ತಿಯಲ್ಲಿ ಕೂಡ ಕೊಹ್ಲಿ ಅದ್ಭುತ ಫಾರ್ಮ್‌ನಲ್ಲಿದ್ದರು. 15 ಪಂದ್ಯಗಳಲ್ಲಿ 61.75 ಸರಾಸರಿ ಮತ್ತು 154.70 ಸ್ಟ್ರೈಕ್‌ರೇಟ್‌ನಲ್ಲಿ 741 ರನ್ ಗಳಿಸಿದ್ದಾರೆ. ಒಂದು ಶತಕ ಮತ್ತು ಐದು ಅರ್ಧಶತಕ ಕೂಡ ಬಾರಿಸಿದ್ದಾರೆ. ಅವರ ಅತ್ಯುತ್ತಮ ಬ್ಯಾಟಿಂಗ್ ನೆರವಿನಿಂದ ಪ್ಲೇಆಫ್ ತಲುಪಿದ್ದ ಆರ್ ಸಿಬಿ, ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿತ್ತು.












Click it and Unblock the Notifications