Virat Kohli - Chris Gayle: ಗೇಲ್ ಕಾಕಾ 'ಆರ್ಸಿಬಿ'ಗೆ ಬನ್ನಿ ಎಂದ ಕೊಹ್ಲಿ; ಯೂನಿವರ್ಸಲ್ ಬಾಸ್ ಏನಂದ್ರು?
ಯೂನಿವರ್ಸಲ್ ಬಾಸ್ ಎಂದೇ ಹೆಸರಾಗಿರುವ ಸ್ಫೋಟಕ ಬ್ಯಾಟರ್ ಕ್ರಿಸ್ ಗೇಲ್ ಶನಿವಾರ ಸಿಎಸ್‌ಕೆ ವಿರುದ್ಧದ ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡರು. ಮಾಜಿ ಆರ್ಸಿಬಿ ಆಟಗಾರ ತಂಡದ ಜೆರ್ಸಿ ತೊಟ್ಟು ತನ್ನ ನೆಚ್ಚಿನ ತಂಡಕ್ಕೆ ಬೆಂಬಲ ಕೊಟ್ಟರು.
ಗೆಲ್ಲಲೇಬೇಕಾದ ಪಂದ್ಯದಲ್ಲಿ ರೋಚಕವಾಗಿ ಹೋರಾಡಿದ ಆರ್ಸಿಬಿ, 27 ರನ್‌ಗಳಿಂದ ಸಿಎಸ್‌ಕೆ ತಂಡವನ್ನು ಮಣಿಸಿ ಪ್ಲೇಆಫ್‌ಗೆ ಅರ್ಹತೆ ಪಡೆದುಕೊಂಡು, ಸಿಎಸ್‌ಕೆ ತಂಡವನ್ನು ಟೂರ್ನಿಯಿಂದಲೇ ಹೊರಹಾಕಿದರು.

ಪಂದ್ಯ ಗೆಲ್ಲುತ್ತಿದ್ದಂತೆ ಆಟಗಾರರ ಸಂಭ್ರಮ ಸಖತ್ ಜೋರಾಗಿತ್ತು. ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಮತ್ತು ಕ್ರಿಸ್ ಗೇಲ್ ಡ್ರೆಸ್ಸಿಂಗ್ ರೂಂನಲ್ಲಿ ಭೇಟಿಯಾದರು. ಆರ್ಸಿಬಿಯ ಹಳೆಯ ದಿನಗಳನ್ನು ಇಬ್ಬರೂ ನೆನಪು ಮಾಡಿಕೊಂಡಿದ್ದಲ್ಲದೆ, ಅಭಿಮಾನಿಗಳಿಗೂ ನೆನಪಿಸಿದರು.
ಆರ್ಸಿಬಿಗೆ ಬನ್ನಿ ಎಂದ ವಿರಾಟ್
ಸದ್ಯ ಐಪಿಎಲ್‌ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಇರುವುದರಿಂದ ಬರೀ ಬ್ಯಾಟಿಂಗ್ ಮಾಡಿ, ಬಳಿಕ ರೆಸ್ಟ್ ಮಾಡುವ ಅವಕಾಶ ಇದೆ. ಇದನ್ನೇ ನೆನಪಿಸಿದ ವಿರಾಟ್ ಕೊಹ್ಲಿ"ಗೇಲ್ ಕಾಕಾ ಮುಂದಿನ ಐಪಿಎಲ್‌ನಲ್ಲಿ ಆರ್ಸಿಬಿಗೆ ಬನ್ನಿ, ಇಂಪ್ಯಾಕ್ಟ್ ಪ್ಲೇಯರ್ ನಿಯಮ ಇರುವುದರಿಂದ ನೀವು ಬ್ಯಾಟಿಂಗ್ ಮಾತ್ರ ಮಾಡಿ, ಫೀಲ್ಡಿಂಗ್ ಮಾಡುವ ಅಗತ್ಯವಿಲ್ಲ" ಎಂದು ಆಹ್ವಾನ ಕೊಟ್ಟಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಕ್ರಿಸ್ ಗೇಲ್ "ನೋಡು ಈಗಲೂ ಜೆರ್ಸಿ ಫಿಟ್ ಆಗಿ ಕಾಣುತ್ತಿದೆ, ನಿಮಗೇನಾದರೂ ಎಕ್ಸ್ಟ್ರಾ ಬ್ಯಾಟರ್ ಬೇಕಾದರೆ, ನಾನು ಇಂಪ್ಯಾಕ್ಟ್ ಪ್ಲೇಯರ್ ಆಗುತ್ತೇನೆ" ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿಯನ್ನು ಭೇಟಿಯಾದ ಫೋಟೊ ಹಂಚಿಕೊಂಡಿದ್ದು, ಖುಷಿ ವ್ಯಕ್ತಪಡಿಸಿದ್ದಾರೆ. ಬಳಿಕ ಸಿಎಸ್‌ಕೆ ತಂಡದ ಮಾಜಿ ನಾಯಕ ಎಂಎಸ್ ಧೋನಿ ಮತ್ತು ತಮ್ಮದೇ ದೇಶದ ಮಾಜಿ ಕ್ರಿಕೆಟ್ ಡಿಜೆ ಬ್ರಾವೋ ಅವರನ್ನು ಭೇಟಿ ಮಾಡಿ, ಮಾತನಾಡಿಸಿದ್ದಾರೆ.
ಕ್ರಿಸ್ ಗೇಲ್, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಆರ್ ಸಿಬಿ ತಂಡದ ಬ್ಯಾಟಿಂಗ್ ಆಧಾರಸ್ಥಂಭವಾಗಿದ್ದರು. ತಂಡದ ಜನಪ್ರಿಯತೆ ಹೆಚ್ಚಾಗಲು ಈ ಮೂವರ ಕೊಡುಗೆ ಸಾಕಷ್ಟಿದೆ.
ಆರ್ ಸಿಬಿ ತಂಡಕ್ಕೆ ಗೇಲ್ ಅವರ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಫ್ರಾಂಚೈಸಿ 'ಹಾಲ್ ಆಫ್ ಫೇಮ್' (Hall of Fame) ನೀಡಿ ಗೌರವಿಸಿದೆ. ಎಬಿ ಡಿವಿಲಿಯರ್ಸ್ ಮತ್ತು ವಿನಯ್ ಕುಮಾರ್ ಈ ಗೌರವಕ್ಕೆ ಭಾಜನರಾದ ಇನ್ನಿಬ್ಬರು ಮಾಜಿ ಆರ್ ಸಿಬಿ ಆಟಗಾರರಾಗಿದ್ದಾರೆ.












Click it and Unblock the Notifications