ನನ್ನ ಮನೇಲಿ ಈ ಸಲವೂ ಕಪ್ ಗೆದ್ದಿದ್ದೇವೆ, ಆರ್‌ಸಿಬಿ ಗೆಲುವಿಗೆ ಈಗ ಭಾವನಾತ್ಮಕ ಪೋಸ್ಟ್ ಮಾಡಿದ ವಿರಾಟ್ ಕೊಹ್ಲಿ
RCB Virat Kohli: ಐಪಿಎಲ್ 2026ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬಲಿಷ್ಠ ಗುಜರಾತ್ ಟೈಟಾನ್ಸ್ ಅನ್ನು ಮಣಿಸಿ ಸತತ ಎರಡನೇ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡಿತು. ಆರ್‌ಸಿಬಿ ಕಪ್ ಗೆದ್ದ ಒಂದು ವಾರದ ಬಳಿಕ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು ಫ್ಯಾನ್ಸ್ ನೋಡಲೇಬೇಕಾದ ಭಾವನಾತ್ಮಕ ಸಂದೇಶವೊಂದನ್ನ ಹಂಚಿಕೊಂಡಿದ್ದಾರೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರನ್ ಮೆಷಿನ್ ವಿರಾಟ್ ಕೊಹ್ಲಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅತ್ಯಂತ ವಿಶೇಷ ಹಾಗೂ ಭಾವನಾತ್ಮಕ ಪೋಸ್ಟ್‌ವೊಂದು ಸದ್ಯ ಸಾಮಾಜಿಕ ಜಾಲಯಾಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಆರ್‌ಸಿಬಿ ಫ್ರಾಂಚೈಸಿ ಮೇಲಿರುವ ತಮ್ಮ ಅಪಾರ ಪ್ರೀತಿಯನ್ನು ಕೊಹ್ಲಿ ಈ ಪೋಸ್ಟ್ ಮೂಲಕ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ವಿರಾಟ್ ಕೊಹ್ಲಿ ವೈರಲ್ ಪೋಸ್ಟ್‌ನಲ್ಲಿ ಏನಿದೆ?
ವಿರಾಟ್ ಕೊಹ್ಲಿ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿಆರ್‌ಸಿಬಿ ಜೆರ್ಸಿ ಧರಿಸಿರುವ ಮತ್ತು ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ನೆನಪುಗಳನ್ನು ಒಳಗೊಂಡ ಸುಂದರ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅದಕ್ಕೆ ಅವರು ನೀಡಿರುವ ಶೀರ್ಷಿಕೆ ಅಭಿಮಾನಿಗಳ ಕಣ್ಣುಗಳು ಒದ್ದೆಯಾಗುವಂತೆ ಮಾಡಿದೆ. ಅಂತಹದ್ದೇನಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ಕೊಹ್ಲಿ ಭಾವನಾತ್ಮಕ ಸಂದೇಶ
'ನಂಬಿಕೆ ಮತ್ತು ಆತ್ಮವಿಶ್ವಾಸದೊಂದಿಗೆ ಈ ಸೀಸನ್ ಆರಂಭಿಸಿದ್ದೆವು. ಸತತವಾಗಿ ಎರಡನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿ ಮುಗಿಸಿದ್ದೇವೆ. ಈ ತಂಡವು ಪ್ರತಿಯೊಂದು ಭಾವನೆಯನ್ನೂ ಒಟ್ಟಾಗಿಯೇ ಸ್ವೀಕರಿಸಿದೆ. ಸಂಭ್ರಮದ ಕ್ಷಣಗಳು, ಒತ್ತಡದ ಸಂದರ್ಭಗಳು, ಎದುರಾದ ಅಡೆತಡೆಗಳು ಮತ್ತು ಎಂದಿಗೂ ಕೈಬಿಡದ ನಿಮ್ಮ ಅಚಲವಾದ ಬೆಂಬಲ.. ಇವೆಲ್ಲವೂ ಈಗ ಇನ್ನಷ್ಟು ಸ್ಪೆಷಲ್ ಎನಿಸುತ್ತಿದೆ. ಏಕೆಂದರೆ ಇದು ನನ್ನ ಮನೆ,' ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡು ಗಮನ ಸೆಳೆದಿದ್ದಾರೆ.
ಭಾರಿ ಟ್ರೆಂಡ್‌ನಲ್ಲಿರುವ #ViratKohli, #RCB
ವಿರಾಟ್ ಕೊಹ್ಲಿ ಅವರು ಹಂಚಿಕೊಂಡಿರುವ ಈ ಪೋಸ್ಟ್ ಹಂಚಿಕೊಂಡ ಕೆಲವೇ ನಿಮಿಷಗಳಲ್ಲಿ ಇದಕ್ಕೆ ಲಕ್ಷಾಂತರ ಲೈಕ್ಸ್ ಮತ್ತು ಕಮೆಂಟ್‌ಗಳನ್ನು ಬಂದಿವೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾಶ್‌ಟ್ಯಾಗ್ #ViratKohli ಮತ್ತು #RCB ದೊಟ್ಟ ಮಟ್ಟದಲ್ಲಿ ಟ್ರೆಂಡ್ ಆಗುತ್ತಿದೆ.
ಮಾತು ತಪ್ಪದ ವಿರಾಟ್ ಕೊಹ್ಲಿ
ಐಪಿಎಲ್ ಇತಿಹಾಸದಲ್ಲಿ 2008ರ ಉದ್ಘಾಟನಾ ಆವೃತ್ತಿಯಿಂದ ಹಿಡಿದು ಈವರೆಗೂ ಒಂದೇ ಒಂದು ಫ್ರಾಂಚೈಸಿ ಪರವಾಗಿ ಸತತವಾಗಿ ಆಡುತ್ತಿರುವ ಏಕೈಕ ಆಟಗಾರ ಎಂದರೆ ಅದು ವಿರಾಟ್ ಕೊಹ್ಲಿ ಮಾತ್ರ. ಹರಾಜಿನ ಸಂದರ್ಭದಲ್ಲಿ ಬೇರೆ ತಂಡಗಳಿಂದ ಭಾರಿ ಮೊತ್ತದ ಆಫರ್‌ಗಳು ಬಂದಿದ್ದರೂ ಕೊಹ್ಲಿ ಮಾತ್ರ ಬೆಂಗಳೂರು ತಂಡವನ್ನು ಬಿಟ್ಟು ಹೋಗಲಿಲ್ಲ. 'ನಾನು ಐಪಿಎಲ್ ಆಡುವವರೆಗೂ ಆರ್‌ಸಿಬಿ ಪರವಾಗಿಯೇ ಆಡುತ್ತೇನೆ,' ಎಂಬ ತಮ್ಮ ಹೇಳಿಕೆಗೆ ಅವರು ಇಂದಿಗೂ ಬದ್ಧರಾಗಿದ್ದಾರೆ.
ಬೆಂಗಳೂರಿನ ಕ್ರಿಕೆಟ್ ಪ್ರೇಮಿಗಳಿಗೆ ಕೊಹ್ಲಿ ಕೇವಲ ಒಬ್ಬ ಆಟಗಾರನಲ್ಲ, ಬದಲಿಗೆ ಆರ್‌ಸಿಬಿ ಸಾಮ್ರಾಜ್ಯದ ಕಿಂಗ್. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೋಹ್ಲಿ... ಕೋಹ್ಲಿ... ಎಂಬ ಧ್ವನಿ ಮೊಳಗಿದಾಗಲೆಲ್ಲಾ ಉಂಟಾಗುವ ರೋಮಾಂಚನವೇ ಬೇರೆ. ಪ್ರಸಕ್ತ 2026ರ ಐಪಿಎಲ್ ಆವೃತ್ತಿಯಲ್ಲೂ ವಿರಾಟ್ ಕೊಹ್ಲಿ ಅಮೋಘ ಫಾರ್ಮ್‌ಗೆ ಮರಳಿದ್ದಾರೆ. ಈ ಭಾರಿ ಆರ್‌ಸಿಬಿ ಟ್ರೋಫಿ ಗೆಲ್ಲುವ ಕನಸಿಗೆ ಕೊಹ್ಲಿ ಅವರ ಆಕ್ರಮಣಕಾರಿ ಆಟವೇ ಪ್ರಮುಖ ಪಾತ್ರವಹಿಸಿತು.
Started the season with belief. Ended with back to back titles. 🏆
— Virat Kohli (@imVkohli) June 9, 2026
This team lived every emotion together. The highs, the pressure, the hurdles, and the unwavering support. It feels extra special because… this place is HOME! ❤️ @RCBTweets pic.twitter.com/H02HdsHCX3
ಒಟ್ಟಿನಲ್ಲಿ ಆರ್‌ಸಿಬಿ ಟ್ರೋಫಿ ಗೆದ್ದು ಒಂದು ವಾರದ ಬಳಿಕ ವಿರಾಟ್ ಕೊಹ್ಲಿ ಅವರು ಈ ಪೋಸ್ಟ್ ಹಂಚಿಕೊಂಡಿರುವುದು ತಂಡದ ಆಟಗಾರರಲ್ಲಿ ಹೊಸ ಉತ್ಸಾಹ ತುಂಬಿದಂತಿದೆ. ಆರ್‌ಸಿಬಿ ಅಭಿಮಾನಿಗಳು ಕೂಡ 'ನೀವು ಎಲ್ಲೇ ಹೋದರೂ ಬೆಂಗಳೂರು ನಿಮ್ಮನ್ನು ಎಂದಿಗೂ ಕೈಬಿಡುವುದಿಲ್ಲ. ಮುಂದಿನ ಬಾರಿಯೂ ಕಪ್ ನಮ್ದೆ ಎಂದು ಕಮೆಂಟ್ ಮಾಡುವ ಮೂಲಕ ಕಿಂಗ್ ಕೊಹ್ಲಿಗೆ ಬೆಂಬಲ ಸೂಚಿಸಿದ್ದಾರೆ.












Click it and Unblock the Notifications