Virat Kohli: 6 ರನ್‌ಗಳಿಗೆ ಹಾರಿ ಹೋಯ್ತು ವಿರಾಟ್ ಕೊಹ್ಲಿ ವಿಕೆಟ್; ಕ್ಷಣದಲ್ಲೇ ಕ್ರೀಡಾಂಗಣ ಖಾಲಿ!
ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ರನ್ ಗಳಿಸುವಲ್ಲಿ ವಿರಾಟ್ ಕೊಹ್ಲಿ ವಿಫಲವಾದ ಕಾರಣ ಅವರನ್ನು ರಣಜಿಯಲ್ಲಿ ಆಡಲು ಕೇಳಲಾಗಿತ್ತು. ದಶಕಗಳ ಬಳಿಕ ದೆಹಲಿ ತಂಡಕ್ಕಾಗಿ ಆಡುತ್ತಿರುವ ವಿರಾಟ್ ಕೊಹ್ಲಿಯನ್ನು ನೋಡಲು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಜನ ಕಿಕ್ಕಿರಿದು ತುಂಬಿದ್ದರು. ಆದರೆ ನೆರೆದಿದ್ದ ಜನಕ್ಕೆ ವಿರಾಟ್ ಕೊಹ್ಲಿ ಮತ್ತೊಮ್ಮೆ ನಿರಾಸೆ ಮೂಡಿಸಿದ್ದಾರೆ.
ರೈಲ್ವೇಸ್ ವಿರುದ್ಧದ ಪಂದ್ಯದ ಎರಡನೇ ದಿನ ಬ್ಯಾಟಿಂಗ್ ಮಾಡಲು ಮೈದಾನಕ್ಕಿಳಿದ ವಿರಾಟ್ ಕೊಹ್ಲಿ ಕೇವಲ 6 ರನ್ ಗಳಿಸಿ ಔಟ್ ಆಗಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ವಿರಾಟ್ ಕೊಹ್ಲಿ 15 ಎಸೆತಗಳಲ್ಲಿ 1 ಬೌಂಡರಿ ಸಹಿತ ಕೇವಲ ಆರು ರನ್ ಗಳಿಸಿದ್ದಾಗ ಹಿಮಾಂಶು ಸಂಗ್ವಾನ್ ಎಸೆತದಲ್ಲಿ ಕ್ಲೀನ್ ಬೋಲ್ಡ್ ಆದರು.

ಬಾರ್ಡರ್ ಗವಾಸ್ಕರ್ ಟ್ರೋಫಿ ಬಳಿಕ ವಿರಾಟ್ ಕೊಹ್ಲಿಗೆ ರಣಜಿ ಟ್ರೋಫಿಯಲ್ಲಿ ಆಡುವಂತೆ ಬಿಸಿಸಿಐ ಸೂಚನೆ ಕೊಟ್ಟಿತ್ತು. ರಣಜಿ ಪಂದ್ಯಕ್ಕಾಗಿಯೇ ಒಂದು ವಾರದಿಂದ ಅಭ್ಯಾಸ ನಡೆಸಿದ್ದರು. ಆರ್ ಸಿಬಿ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಮಾರ್ಗದರ್ಶನದಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡಿದ್ದ ಅವರು ಫಾರ್ಮ್‌ಗೆ ಮರಳುವ ವಿಶ್ವಾಸದಲ್ಲಿದ್ದರು.
ಬೆಂಕಿ ಹಚ್ಚಿದ ಫ್ಯಾನ್ಸ್
ವಿರಾಟ್ ಕೊಹ್ಲಿಯನ್ನು ನೋಡಲು ಮೊದಲ ದಿನವೇ ಭಾರಿ ಪ್ರಮಾಣದಲ್ಲಿ ಪ್ರೇಕ್ಷಕರು ಆಗಮಿಸಿದ್ದರು. ಎರಡನೇ ದಿನ ಕೊಹ್ಲಿ ಬ್ಯಾಟಿಂಗ್‌ಗೆ ಇಳಿಯುವುದು ಖಚಿತವಾಗಿದ್ದರಿಂದ ಎರಡನೇ ದಿನ ಇನ್ನಷ್ಟು ಜನ ಸೇರಿದ್ದರು. ಆದರೆ ಕೊಹ್ಲಿ 6 ರನ್ ಗಳಿಸಿ ಔಟಾಗುತ್ತಿದ್ದಂತೆ ಅಭಿಮಾನಿಗಳು ನಿರಾಸೆಗೊಂಡರು.
ಕೆಲವು ಅಭಿಮಾನಿಗಳು ಸಿಟ್ಟಿನಿಂದ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಬೆಂಕಿ ಹಚ್ಚಿದ್ದಾರೆ. ಕೂಡಲೇ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ವಿರಾಟ್ ಕೊಹ್ಲಿ ಔಟಾಗುತ್ತಿದ್ದಂತೆ ಕಿಕ್ಕಿರಿದು ಸೇರಿದ್ದ ಕ್ರೀಡಾಂಗಣ ಖಾಲಿಯಾಗಿದೆ. ಜನ ಗುಂಪು ಗುಂಪಾಗಿ ಮೈದಾನ ತೊರೆದಿದ್ದಾರೆ.












Click it and Unblock the Notifications