Vinesh Phogat: ಭಾರತಕ್ಕೆ ಮರಳಿದ ಬಳಿಕ ವಿನೇಶ್ ಫೋಗಟ್ ಮೊದಲ ಪ್ರತಿಕ್ರಿಯೆ
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನ ತಂದುಕೊಡುವ ಕನಸು ಕಂಡಿದ್ದ ಕುಸ್ತಿಪಟು ವಿನೇಶ್ ಫೋಗಟ್ 100 ಗ್ರಾಂ ತೂಕ ಹೆಚ್ಚಿರುವ ಕಾರಣ ಅನರ್ಹತೆಯ ಆಘಾತ ಅನುಭವಿಸಿದ್ದರು. ಬೆಳ್ಳಿ ಪದಕವನ್ನಾದರೂ ಕೊಡಬೇಕು ಎಂದು ಮೇಲ್ಮನವಿ ಸಲ್ಲಿಸಿದ್ದರೂ ಕ್ರೀಡಾ ತಾತ್ಕಾಲಿಕ ನ್ಯಾಯಾಲಯ (ಸಿಎಎಸ್) ಆಕೆಯ ಮನವಿಯನ್ನು ತಿರಸ್ಕರಿಸಿದೆ. ನಿರಾಸೆಯಿಂದಲೇ ಭಾರತಕ್ಕೆ ಬಂದ ಹೆಮ್ಮೆಯ ಕ್ರೀಡಾಪಟುವಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ.
ಶನಿವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಜನರ ಪ್ರೀತಿ, ಗೌರವವನ್ನು ಕಂಡು ವಿನೇಶ್ ಫೋಗಟ್ ಭಾವುಕರಾದರು. ಇಂತಹ ಪ್ರೀತಿ ಮತ್ತು ಗೌರವವನ್ನು ನೀಡಿದ್ದಕ್ಕಾಗಿ ಜನರಿಗೆ ಕೃತಜ್ಞತೆ ಸಲ್ಲಿಸಿದರು. ದೆಹಲಿಗೆ ಬಂದ ಬಳಿಕ ವಿನೇಶ್ ಫೋಗಟ್ ಅವರು ಭಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮತ್ತು ಕಾಂಗ್ರೆಸ್ ಸಂಸದ ದೀಪೇಂದರ್ ಸಿಂಗ್ ಹೂಡಾ ಅವರ ಜೊತೆ ರೋಡ್ ಶೋ ನಡೆಸಿದರು.

ಈ ಸಂದರ್ಭದಲ್ಲಿ ಎಎನ್‌ಐ ಜೊತೆ ಮಾತನಾಡಿದ ವಿನೇಶ್ ಫೋಗಟ್, ನನ್ನ ದೇಶದ ಜನರಿಂದ ನನಗೆ ಸಿಕ್ಕಿರುವ ಈ ಪ್ರೀತಿ ಮತ್ತು ಗೌರವಕ್ಕೆ ನಾನು ಆಭಾರಿಯಾಗಿದ್ದೇನೆ ಎಂದು ಹೇಳಿದರು. ಒಂದು ಕ್ಷಣ ಭಾವುಕರಾದ ಅವರು, ಕಣ್ಣೀರು ಹಾಕಿದರು..
ಆಕೆ ನಿಜವಾದ ಚಾಂಪಿಯನ್
ಬಜರಂಗ್ ಪುನಿಯಾ ಮಾತನಾಡಿ, ವಿನೇಶ್ ಅವರನ್ನು ಚಾಂಪಿಯನ್ ರೀತಿ ಸ್ವಾಗರಿಸಲಾಗಿದೆ. ದೆಹಲಿಯ ಬೀದಿಗಳಿಂದ, ಒಲಿಂಪಿಕ್ಸ್‌ನಲ್ಲಿ ಆಕೆಯ ಕುಸ್ತಿಯವರೆಗೆ ಹೋರಾಟವನ್ನು ದೇಶದ ಜನ ನೋಡಿದ್ದಾರೆ. ಇಂದು ಆಕೆಗೆ ಜನರಿಂದ ಸಾಕಷ್ಟು ಪ್ರೀತಿ ಸಿಕ್ಕಿದೆ ಎಂದು ಹೇಳಿದರು. ವಿನೇಶ್ ಫೋಗಟ್ ಮಹಿಳೆಯರು ಮತ್ತು ದೇಶಕ್ಕಾಗಿ ಸಾಕಷ್ಟು ಸೇವೆ ಮಾಡಿದ್ದಾರೆ. ಈಗ ಅವರಿಗೆ ಜನ ಗೌರವ ನೀಡುತ್ತಾರೆ ಎಂದು ಸಾಕ್ಷಿ ಮಲಿಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ಯಾರಿಸ್‌ನಲ್ಲಿ ವಿನೇಶ್ ಅವರು ಒಲಿಂಪಿಕ್ಸ್‌ನಲ್ಲಿ ಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎನ್ನುವ ದಾಖಲೆ ಮಾಡಿದ್ದರು. ಚಿನ್ನ ಗೆಲ್ಲುವ ಆಕೆಯ ಆಸೆಗೆ ಅನರ್ಹತೆ ಅಡ್ಡಿಯಾಯಿತು. ಬೆಳ್ಳಿ ಪದಕ ಗೆಲ್ಲದೇ ಇದ್ದರೂ ವಿನೇಶ್ ಫೋಗಟ್ ಹೋರಾಡಿದ ರೀತಿಗೆ ದೇಶಾದ್ಯಂತ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಆಕೆಗೆ ಬೆಳ್ಳಿ ಪದಕ ಕೊಡುವಂತೆ ಸಾಕಷ್ಟು ಒತ್ತಾಯ ಮಾಡಲಾಯಿತಾದರೂ, ಕೊನೆಗೆ ನಿರಾಸೆಯಾಯಿತು.
ಅನರ್ಹತೆ ಬಳಿಕ ಕುಸ್ತಿಗೆ ವಿದಾಯ ಘೋಷಿಸಿದ್ದ ವಿನೇಶ್ ಫೋಗಟ್, ಇದೀಗ ನಿವೃತ್ತಿಯಿಂದ ವಾಪಸ್ ಬರುವ ಮುನ್ಸೂಚನೆ ಕೊಟ್ಟಿದ್ದಾರೆ. ನನ್ನೊಳಗಿನ ಕುಸ್ತಿ ಮತ್ತು ಹೋರಾಟದ ಮನೋಭಾವ ಎಂದಿಗೂ ಕಡಿಮೆಯಾಗಲ್ಲ ಎಂದು ಹೇಳಿದ್ದಾರೆ. ವಿನೇಶ್ ಮುಂದಿನ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿ ಎನ್ನುವುದು ಕ್ರೀಡಾಭಿಮಾನಿಗಳ ಆಗ್ರಹವಾಗಿದೆ. ಇದಕ್ಕೆ ವಿನೇಶ್ ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.












Click it and Unblock the Notifications