Vaibhav Suryavanshi: ವಯಸ್ಸಿನ ಬಗ್ಗೆ ಸುಳ್ಳು ಸುದ್ದಿ ಹರಡಿದವರಿಗೆ ಉಗಿದ ವೈಭವ್ ಸೂರ್ಯವಂಶಿ ತಂದೆ
ವೈಭವ್ ಸೂರ್ಯವಂಶಿ ಎನ್ನುವ ಹಾಲುಗಲ್ಲದ ಹುಡುಗ ಇಂದು ಕ್ರಿಕೆಟ್ ಜಗತ್ತನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ. 13ನೇ ವರ್ಷದಲ್ಲಿ ಬಿಹಾರ ತಂಡಕ್ಕಾಗಿ ರಣಜಿ ಟ್ರೋಫಿಯಲ್ಲಿ ಆಡಿದ ಸೂರ್ಯವಂಶಿ, ಐಪಿಎಲ್‌ನಲ್ಲಿ ತಾನು ಆಡಿದ ಮೊದಲ ಪಂದ್ಯದಲ್ಲಿ ಎದುರಿಸಿದ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸುವ ಮೂಲಕ ಗಮನ ಸೆಳೆದಿದ್ದ.
ಎಲ್‌ಎಸ್‌ಜಿ ಮತ್ತು ಆರ್ ಸಿಬಿ ವಿರುದ್ಧ ಸಣ್ಣ ಇನ್ನಿಂಗ್ಸ್ ಆಡಿದ್ದರೂ ತನ್ನಲ್ಲಿರುವ ಕ್ಷಮತೆಯ ಪರಿಚಯ ಮಾಡಿಸಿದ್ದ. ಆದರೆ ಗುಜರಾತ್ ಟೈಟಾನ್ಸ್ ವಿರುದ್ಧ ತನ್ನ ವಿಶ್ವರೂಪ ತೋರಿಸುವ ಮೂಲಕ ಇಡೀ ಕ್ರಿಕೆಟ್ ಜಗತ್ತನ್ನೇ ದಂಗಾಗಿಸಿದ್ದಾನೆ. 210 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ್ದ ರಾಜಸ್ಥಾನ ರಾಯಲ್ಸ್ ಸೂರ್ಯವಂಶಿಯ ವೈಭವದ ಶತಕದ ಸಹಾಯದಿಂದ ಭರ್ಜರಿ ಗೆಲುವು ಸಾಧಿಸಿತು.

ಕೇವಲ 35 ಎಸೆತಗಳಲ್ಲಿ 7 ಬೌಂಡರಿ 11 ಭರ್ಜರಿ ಸಿಕ್ಸರ್ ಸಹಿತ ಶತಕ ಬಾರಿಸಿದರು. ಇದು ಐಪಿಎಲ್‌ನಲ್ಲಿ ದಾಖಲಾದ ಎರಡನೇ ವೇಗದ ಶತಕವಾಗಿದೆ. ಭಾರತೀಯ ಆಟಗಾರನ ವೇಗದ ಐಪಿಎಲ್ ಶತಕ. ಟಿ20 ಕ್ರಿಕೆಟ್‌ನಲ್ಲಿ ವೇಗದ ಶತಕ ದಾಖಲಿಸಿದ ಕಿರಿಯ ಆಟಗಾರ ಎನ್ನುವ ದಾಖಲೆ ಮಾಡಿದ್ದಾರೆ.
ಹುಡುಗನ ವಯಸ್ಸಿನ ಬಗ್ಗೆ ಕೊಂಕು
ಸಾಧನೆ ಮಾಡಲು ಸಹಾಯ ಮಾಡದೇ ಇದ್ದರೂ ಸಾಧಿಸಿದವರ ಕಾಲೆಳೆಯುವದಕ್ಕೆ ಮಾತ್ರ ಸಾಕಷ್ಟು ಜನ ಮಂದು ತಾ ಮುಂದು ತಾ ಮುಂದು ಎಂದು ಬರುತ್ತಾರೆ. ವೈಭವ್ ಸೂರ್ಯವಂಶಿ ವಿಚಾರದಲ್ಲೂ ಅದೇ ಆಗಿದೆ. ಆತ ಭಾರತ ತಂಡಕ್ಕೆ ಸಿಕ್ಕ ಭರವಸೆಯ ಬ್ಯಾಟರ್, ಕ್ರಿಕೆಟ್ ಲೋಕದಲ್ಲಿ ಸೂಪರ್ ಸ್ಟಾರ್ ಆಗಿ ಮಿಂಚುವ ಸಾಮರ್ಥ್ಯ ಇರುವ ಆಟಗಾರ. ದ್ರಾವಿಡ್ ಅವರ ಗರಡಿಯಲ್ಲಿ ಆತನ ಭವಿಷ್ಯ ಮತ್ತಷ್ಟು ಉಜ್ವಲವಾಗುವ ಸಾಧ್ಯತೆ ಇದೆ. ಆದರೆ ಕೆಲವರಿಗೆ ಆತನ ವಯಸ್ಸಿನ ಬಗ್ಗೆಯೇ ಹೆಚ್ಚು ಚಿಂತೆ ಎನಿಸುತ್ತದೆ.
ಹೌದು, ವೈಭವ್ ಸೂರ್ಯವಂಶಿ 14 ವರ್ಷವಲ್ಲ ಆತನಿಗೆ ಹೆಚ್ಚು ವಯಸ್ಸಾಗಿದೆ. ಆತ ವಯಸ್ಸಿನಲ್ಲಿ ಸುಳ್ಳು ಹೇಳಿದ್ದಾನೆ ಎಂದು ಹಲವು ಆರೋಪಗಳು ಕೇಳಿಬಂದಿವೆ. ಆದರೆ ಇದಕ್ಕೆಲ್ಲಾ ವೈಭವ್ ಅವರ ತಂದೆ ಸಂಜೀವ್ ಸೂರ್ಯವಂಶಿ ಸ್ಪಷ್ಟನೆ ಕೊಟ್ಟಿದ್ದಾರೆ.
ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ವೈಭವ್ ಅವರ ತಂದೆ ಸಂಜೀವ್ ಸೂರ್ಯವಂಶಿ, ಎಲ್ಲಾ ಅನುಮಾನಗಳನ್ನು ತಳ್ಳಿಹಾಕಿದರು. ವೈಭವ್ ಕೇವಲ ಎಂಟು ವರ್ಷದವನಿದ್ದಾಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅನುಮೋದಿಸಿದ ಮೂಳೆ ವಯಸ್ಸಿನ ಪರೀಕ್ಷೆಗೆ ಒಳಗಾಗಿದ್ದರು ಎಂದು ಸ್ಪಷ್ಟನೆ ನೀಡಿದ್ದಾರೆ. ಯುವ ಕ್ರಿಕೆಟಿಗರ ವಯಸ್ಸನ್ನು ಪರಿಶೀಲಿಸಲು ಮೂಳೆ ಪರೀಕ್ಷೆಯನ್ನು ಸಾಮಾನ್ಯವಾಗಿ ಮಾಡಲಾಗುತ್ತದೆ.
ಸ್ಥಳೀಯ ಪಂದ್ಯಾವಳಿಯಲ್ಲೇ ಆಡಲು ಆಧಾರ್ ಕಾರ್ಡ್ ನಂತಹ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತದೆ. ಇನ್ನು ಐಪಿಎಲ್‌ನಂತಹ ದೊಡ್ಡ ವೇದಿಕೆಯಲ್ಲಿ ಆಡುವಾಗ ಇನ್ನೆಷ್ಟು ಪರಿಶೀಲನೆ ಮಾಡಿರುತ್ತಾರೆ ಎನ್ನುವ ಸಾಮಾನ್ಯ ಜ್ಞಾನವೂ ಇಲ್ಲದವರು ಸೂರ್ಯವಂಶಿ ವಯಸ್ಸಿನ ಬಗ್ಗೆ ಮಾತನಾಡುವುದೇ ಹಾಸ್ಯಾಸ್ಪದ.
ಬಿಹಾರದಿಂದ ಬಂದಿರುವ ಈ ಹುಡುಗ ಮುಂದೆ ಸಾಧನೆಯ ಕನಸು ಕಾಣುವವರಿಗೆ ನಿಜಕ್ಕೂ ಸ್ಪೂರ್ತಿಯಾಗುತ್ತಾನೆ. ಸಾಧಿಸುವ ಛಲವಿದ್ದರೆ ವಯಸ್ಸು ಅಡ್ಡಿಯಾಗುವುದಿಲ್ಲ ಎನ್ನುವುದಕ್ಕೆ ಸೂರ್ಯವಂಶಿ ಸಾಕ್ಷಿ.












Click it and Unblock the Notifications