ಹೊರಗಡೆ ತಮಾಷೆ.. ಕಣಕ್ಕಿಳಿದರೆ ರಾಕ್ಷಸ: ವೈಭವ್ ಸೂರ್ಯವಂಶಿ ಬಗ್ಗೆ ನಾಯಕ ಶ್ರೇಯಸ್ ಅಯ್ಯರ್ ಅಚ್ಚರಿ ಹೇಳಿಕೆ
Vaibhav Sooryavanshi: ವೆಸ್ಟ್ ಇಂಡೀಸ್ ವಿರುದ್ಧದ ಮುಂಬರುವ ಟಿ-20 ಸರಣಿಗೂ ಮುನ್ನ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಅವರು, ವೈಭವ್ ಸೂರ್ಯವಂಶಿ ಕುರಿತು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಮೈದಾನದ ಹೊರಗೆ ಅತ್ಯಂತ ಶಾಂತವಾಗಿರುವ ವೈಭವ್, ಕ್ರೀಸ್‌ನಲ್ಲಿ ಬ್ಯಾಟ್ ಹಿಡಿದು ನಿಂತರೆ ತೀವ್ರ ಆಕ್ರಮಣಕಾರಿಯಾಗುತ್ತಾರೆ. ಅವರನ್ನು ನೋಡಿದರೆ ಇದೇ ದೊಡ್ಡ ವ್ಯಂಗ್ಯ ಎನಿಸುತ್ತದೆ ಎಂದು ನಾಯಕ ಅಯ್ಯರ್ ಅವರು ಹೇಳಿದ್ದಾರೆ. ಇದೇ ವೇಳೆ ಇನ್ನೂ ಹಲವು ಮಹತ್ವದ ವಿಚಾಗಳನ್ನು ಬಿಚ್ಚಿಟ್ಟಿದ್ದಾರೆ.

'ವೈಭವ್‌ನಲ್ಲಿ ಅದ್ಭುತ ಪ್ರತಿಭೆಯಿದೆ'
ಜಿಯೋ ಹಾಟ್‌ಸ್ಟಾರ್‌ನೊಂದಿಗೆ ಮಾತನಾಡಿದ ಶ್ರೇಯಸ್ ಅಯ್ಯರ್, 'ಎಲ್ಲರೂ ವೈಭವ್ ಜೊತೆ ಕ್ರಿಕೆಟ್ ಬಗ್ಗೆಯೇ ಮಾತನಾಡುತ್ತಾರೆ. ಆದರೆ ನಾನು ಅವರ ಜೊತೆ ಕ್ರಿಕೆಟ್ ಹೊರತಾದ ಜೀವನ ಮತ್ತು ವೈಯಕ್ತಿಕ ವಿಷಯಗಳ ಬಗ್ಗೆ ಹೆಚ್ಚು ಚರ್ಚಿಸುತ್ತೇನೆ. ಏಕೆಂದರೆ ಒಬ್ಬ ಆಟಗಾರನಾಗಿ ಅವರಲ್ಲಿ ಎಷ್ಟು ಕೌಶಲ್ಯ ಹಾಗೂ ಪ್ರತಿಭೆ ಇದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ, ಎಂದು ಹೇಳಿದ್ದಾರೆ.
'ವೈಭವ್ ಶಾಂತ ಸ್ವಭಾವದ ಹುಡುಗ'
ಮುಂದುವರೆದು ಮಾತನಾಡಿದ ಶ್ರೇಯಸ್ ಅಯ್ಯರ್, 'ವೈಭವ್ ಸೂರ್ಯವಂಶಿ ಮೈದಾನದ ಹೊರಗೆ ಅತ್ಯಂತ ಶಿಸ್ತಿನ, ಶಾಂತ ಹಾಗೂ ಮುಗ್ಧ ಸ್ವಭಾವದ ಹುಡುಗ. ಡ್ರೆಸ್ಸಿಂಗ್ ರೂಮ್‌ನಲ್ಲಿ ಅವರ ಉಪಸ್ಥಿತಿ ತುಂಬಾ ಚೆನ್ನಾಗಿರುತ್ತದೆ. ಆದರೆ ಮೈದಾನಕ್ಕೆ ಕಾಲಿಟ್ಟ ತಕ್ಷಣ ಆಕ್ರಮಣಕಾರಿ ಬ್ಯಾಟರ್ ಆಗಿ ಬದಲಾಗುತ್ತಾರೆ,' ಎಂದು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
'ವೈಭವ್ ಅವಕಾಶಕ್ಕಾಗಿ ಕಾಯಬೇಕಿದೆ'
15 ವರ್ಷದ ಎಡಗೈ ಬ್ಯಾಟರ್ ವೈಭವ್ ಸೂರ್ಯವಂಶಿ, ಐಪಿಎಲ್ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ₹1.1 ಕೋಟಿಗೆ ಹರಾಜಾದ ನಂತರ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದರು. ಇತ್ತೀಚೆಗೆ ನಡೆದ ಪ್ರಮುಖ ಪಂದ್ಯಗಳಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದ್ದರೂ, ಪ್ರಸ್ತುತ ಭಾರತೀಯ ಟಿ20 ತಂಡದಲ್ಲಿ ಆರಂಭಿಕರಾಗಿ ವಿಶ್ವಕಪ್ ವಿಜೇತ ಆಟಗಾರರಿರುವುದರಿಂದ ವೈಭವ್ ತಮ್ಮ ಅವಕಾಶಕ್ಕಾಗಿ ಕಾಯಬೇಕಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ನಾಯಕ ಶ್ರೇಯಸ್ ಅಯ್ಯರ್, 'ತಂಡದಲ್ಲಿ ಸದ್ಯ ವಿಶ್ವಕಪ್ ಗೆದ್ದ ಅನುಭವಿ ಆರಂಭಿಕ ಆಟಗಾರರಿದ್ದಾರೆ ಮತ್ತು ಅವರಿಗೆ ಪೂರ್ಣ ಅವಕಾಶ ಸಿಗುವುದು ಸೂಕ್ತ. ವೈಭವ್ ಸದ್ಯ 15 ಜನರ ಭಾರತೀಯ ತಂಡದಲ್ಲಿದ್ದಾರೆ. ಸೂಕ್ತ ಸಮಯ ಬಂದಾಗ ಅವರು ಭಾರತೀಯ ಕ್ರಿಕೆಟ್ ಅನ್ನು ಖಂಡಿತವಾಗಿ ಆಳಲಿದ್ದಾರೆ," ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತ ತಂಡ, ಇದೀಗ ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ಸಜ್ಜಾಗಿದೆ. ಈ ಸರಣಿಯಲ್ಲಿ ವೈಭವ್ ಸೂರ್ಯವಂಶಿ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗಲಿದೆಯೇ ಎಂಬುದನ್ನು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.


Click it and Unblock the Notifications
