2027ರ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಜೊತೆ ವೈಭವ್ ಸೂರ್ಯವಂಶಿ ಓಪನರ್.. ಭಾರತದ ಮಾಜಿ ಕ್ರಿಕೆಟರ್ ಹೇಳಿಕೆ ವೈರಲ್
Vaibhav Sooryavanshi: ಇತ್ತೀಚೆಗಷ್ಟೇ ನಡೆದ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ 15 ವರ್ಷದ ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟ ಆಡಿ ಟೀಮ್ ಇಂಡಿಯಾ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಅವರನ್ನು ಮುಂಬರುವ 2027ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಜೊತೆ ಆರಂಭಿಕನಾಗಿ ಕಣಕ್ಕಿಳಿಸುವಂತೆ ಮಾಜಿ ಕ್ರಿಕೆಟರ್ ಫಾರೋಖ್ ಇಂಜಿನಿಯರ್ ಒತ್ತಾಯಿಸಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಭಾರತೀಯ ಕ್ರಿಕೆಟ್‌ನ ಉದಯೋನ್ಮುಖ ಆಟಗಾರ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್ ಶೈಲಿ ದಿಗ್ಗಜರ ಗಮನ ಸೆಳೆದಿದೆ. ಅತಿ ಚಿಕ್ಕ ವಯಸ್ಸಿನಲ್ಲೇ ಇಷ್ಟೊಂದು ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿರುವ ವೈಭವ್ ಅವರನ್ನು 2027ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಅವರ ಜೊತೆ ಆರಂಭಿಕನಾಗಿ ಆಡಿಸಬೇಕು ಎಂಬುದು ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಫಾರೋಖ್ ಇಂಜಿನಿಯರ್ ಅವರ ಆಗ್ರಹವಾಗಿದೆ.

ಫಾರೋಖ್ ಇಂಜಿನಿಯರ್ ಹೇಳಿದ್ದೇನು?
ಫಾರೋಖ್ ಇಂಜಿನಿಯರ್ ಅವರು ಭಾರತ ತಂಡದ ಬ್ಯಾಟಿಂಗ್ ಕ್ರಮಾಂಕದ ಕುರಿತು ಮಾತನಾಡುತ್ತಾ, 'ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರನ್ನು ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಓಪನರ್ ಆಗಿ ಕಳುಹಿಸಬೇಕು. ಪ್ರಸ್ತುತ ಇರುವ ಆರಂಭಿಕ ಆಟಗಾರ ಶುಭ್‌ಮನ್ ಗಿಲ್ ಅವರನ್ನು ನಂಬರ್ 4 ಕ್ರಮಾಂಕಕ್ಕೆ ಇಳಿಸಬೇಕು,' ಎಂದು ಸಲಹೆ ನೀಡಿದ್ದಾರೆ.
'ರೋಹಿತ್ ಜೊತೆ ವೈಭವ್ ಓಪನಿಂಗ್ ಆಡಬೇಕು'
'ಟೀಮ್ ಇಂಡಿಯಾಗೆ ಮುಂದಿನ ದಿನಗಳಲ್ಲಿ ಒಬ್ಬ ಆಕ್ರಮಣಕಾರಿ ಎಡಗೈ ಆರಂಭಿಕ ಬ್ಯಾಟರ್‌ನ ಅಗತ್ಯ ಇದೆ. ವೈಭವ್ ಸೂರ್ಯವಂಶಿ ಅವರಲ್ಲಿರುವ ನಿರ್ಭೀತ ಆಟದ ವೈಖರಿ ಮತ್ತು ವೇಗವಾಗಿ ರನ್ ಗಳಿಸುವ ಸಾಮರ್ಥ್ಯ ರೋಹಿತ್ ಶರ್ಮಾ ಅವರೊಂದಿಗಿನ ಆರಂಭಿಕ ಜೋಡಿಗೆ ಸೂಕ್ತವಾಗಿದ್ದಾರೆ. ಪವರ್‌ಪ್ಲೇ ಅವಧಿಯಲ್ಲಿ ಎದುರಾಳಿ ಬೌಲರ್‌ಗಳ ಮೇಲೆ ಒತ್ತಡ ಹೇರಲು ವೈಭವ್ ಅವರಂತಹ ಆಕ್ರಮಣಕಾರಿ ಬ್ಯಾಟರ್‌ಗಳು ಸಹಕಾರಿ ಆಗಲಿದ್ದಾರೆ,' ಎಂದು ಹೇಳಿದ್ದಾರೆ.
ಗಿಲ್ ಯಾವ ಕ್ರಮಾಂಕದಲ್ಲಿ ಬರಬೇಕು?
'ಶುಭ್‌ಮನ್ ಗಿಲ್ ಅವರು ಉತ್ತಮ ಇನಿಂಗ್ಸ್ ಕಟ್ಟುವ ಅದ್ಭುತ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದ್ದರಿಂದ ಅವರು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗಿಳಿಯುವುದು ತಂಡದ ಮಿಡಲ್ ಆರ್ಡರ್ ಬಲಗೊಳ್ಳುತ್ತದೆ. ಪಂದ್ಯದ ಪರಿಸ್ಥಿತಿಗೆ ತಕ್ಕಂತೆ ರನ್ ವೇಗವನ್ನು ಕಾಯ್ದುಕೊಳ್ಳುವುದು ಮತ್ತು ವಿಕೆಟ್ ಬೀಳದಂತೆ ಕಾಯ್ದುಕೊಳ್ಳುವ ಜವಾಬ್ದಾರಿಯನ್ನು ಗಿಲ್ ಉತ್ತಮವಾಗಿ ನಿರ್ವಹಿಸಬಲ್ಲರು. ಹೀಗೆ ಮಾಡಿದರೆ ಟೀಮ್ ಇಂಡಿಯಾದ ಬ್ಯಾಟಿಂಗ್ ಲೈನ್‌ಅಪ್ ಉತ್ತಮವಾಗಲಿರಲಿದೆ,' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಆಯ್ಕೆ ಸಮಿತಿಯು ಮುಂಬರುವ ಪ್ರಮುಖ ಸರಣಿಗಳು ಹಾಗೂ ಐಸಿಸಿ ಟೂರ್ನಿಗಳಿಗೆ ಬಲಿಷ್ಠ ಯುವ ಪಡೆಯನ್ನು ಸಜ್ಜುಗೊಳಿಸುವತ್ತ ಗಮನ ಹರಿಸಿದೆ. ಅನುಭವಿ ರೋಹಿತ್ ಶರ್ಮಾ ಜೊತೆ ಯುವ ಆಟಗಾರ ವೈಭವ್ ಸೂರ್ಯವಂಶಿ ಕಣಕ್ಕಿಳಿದರೆ ಟೀಮ್ ಇಂಡಿಯಾದ ಆರಂಭಿಕ ಬ್ಯಾಟಿಂಗ್ ವಿಭಾಗ ಎದುರಾಳಿಗಳಿಗೆ ಕಂಠಕ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಅಂತಲೂ ಹೇಳಿದ್ದಾರೆ.
ಈ ಹೊಸ ಕಾಂಬಿನೇಷನ್ ಕುರಿತು ಇದೀಗ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಆದರೆ ಮುಂಬರುವ ದಿನಗಳಲ್ಲಿ ಆಯ್ಕೆದಾರರು ಈ ರೀತಿಯ ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ. ಈಗಾಗಲೇ ವೈಭವ್ ಸೂರ್ಯವಂಶಿ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ಎರಡು ಅರ್ಧಶತಕ ಸಿಡಿಸಿ ಅದ್ಭುತ ಸಾಧನೆ ಮಾಡಿದ್ದರು. ಇವರ ಆಕ್ರಮಣಕಾರಿ ಆಟಕ್ಕೆ ದಿಗ್ಗಜರಿಂದ ಮೆಚ್ಚುಗೆಗಳ ಸುರಿಮಳೆಯೇ ಹರಿದುಬಂದಿತ್ತು. ಇದರ ಬೆನ್ನಲ್ಲೇ ಇದೀಗ ವೈಭವ್‌ನನ್ನು ಏಕದಿನ ಸರಣಿಯ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಅವರ ಜೊತೆ ಕಣಕ್ಕಿಳಿಸಬೇಕು ಎನ್ನುವ ಮಾತುಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ.


Click it and Unblock the Notifications
