Vaibhav Sooryavanshi: ವಿನೋದ್ ಕಾಂಬ್ಳಿ ಉದಾಹರಣೆ ಮೂಲಕ ವೈಭವ್ ಸೂರ್ಯವಂಶಿಗೆ ಕಪಿಲ್ ದೇವ್ ಎಚ್ಚರಿಕೆ ಸಂದೇಶ
Vaibhav Sooryavanshi: ಭಾರತೀಯ ಕ್ರಿಕೆಟ್‌ನ ಯುವ ವೈಭವ್ ಸೂರ್ಯವಂಶಿ ಅವರು ಆಕ್ರಮಣಕಾರಿ ಬ್ಯಾಟಿಂಗ್‌ನಿಂದಲೇ ಗುರುತಿಸಿಕೊಂಡಿದ್ದು, ಅತೀ ಚಿಕ್ಕ ವಯಸ್ಸಿನಲ್ಲೇ ಸ್ಟಾರ್‌ಡಂ ಪಟ್ಟ ಪಡೆದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಕಪಿಲ್ ದೇವ್ ಅವರು ವಿನೋದ್ ಕಾಂಬ್ಳಿ ಅವರ ಉದಾಹರಣೆ ನೀಡಿ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದ್ದಾರೆ.
ಭಾರತೀಯ ಕ್ರಿಕೆಟ್‌ನ 15 ವರ್ಷದ ಅದ್ಭುತ ಪ್ರತಿಭೆ ವೈಭವ್ ಸೂರ್ಯವಂಶಿ ಅವರ ಇತ್ತೀಚಿನ ಪ್ರದರ್ಶನ ಮತ್ತು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರುವ ಕುರಿತು ವಿಶ್ವಕಪ್ ವಿಜೇತ ಮಾಜಿ ನಾಯಕ ಕಪಿಲ್ ದೇವ್ ಪ್ರತಿಕ್ರಿಯಿಸಿದ್ದಾರೆ. ವೈಭವ್ ಸೂರ್ಯವಂಶಿ ಅವರಲ್ಲಿ ಉತ್ತಮ ಸಾಮರ್ಥ್ಯವಿದ್ದರೂ, ಅವರನ್ನು ಈಗಲೇ ಸೂಪರ್‌ಸ್ಟಾರ್ ಅಥವಾ ಮುಂದಿನ ದಿಗ್ಗಜ ಎಂದು ಬಿಂಬಿಸುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಕಪಿಲ್ ದೇವ್ ಹೇಳಿದ್ದೇನು?
ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕಪಿಲ್ ದೇವ್ ಅವರು, 'ವೈಭವ್ ಸೂರ್ಯವಂಶಿ ಅವರಿಗೆ ಖಂಡಿತವಾಗಿಯೂ ಉತ್ತಮ ಸಾಮರ್ಥ್ಯವಿದೆ. ಆದರೆ ಕ್ರಿಕೆಟ್‌ನಲ್ಲಿ ಅದ್ಭುತ ಪ್ರತಿಭೆಯೊಂದಿಗೆ ಬಂದು, ನಂತರ ಮರೆಯಾದ ನೂರಾರು ಆಟಗಾರರನ್ನು ನಾವು ನೋಡಿದ್ದೇವೆ. ಇದಕ್ಕೆ ವಿನೋದ್ ಕಾಂಬ್ಳಿ ಅವರೇ ಸೂಕ್ತ ಉದಾಹರಣೆ. ಅಗಾಧ ಪ್ರತಿಭೆ ಇದ್ದರೂ ಕಾಂಬ್ಳಿ ಅವರ ವೃತ್ತಿಜೀವನ ಸುದೀರ್ಘವಾಗಿ ಮುಂದುವರೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ವೈಭವ್ ಕುರಿತು ಈಗಲೇ ಯಾವುದೇ ದೊಡ್ಡ ಭವಿಷ್ಯ ನುಡಿಯುವುದು ಸೂಕ್ತವಲ್ಲ,' ಎಂದು ಸ್ಪಷ್ಟಪಡಿಸಿದ್ದಾರೆ.
ಒಬ್ಬ ಆಟಗಾರನಿಗಿರಬೇಕಾದ ಲಕ್ಷಣಗಳು
ಪ್ರಸ್ತುತ ವೈಭವ್ ಸೂರ್ಯವಂಶಿಗೆ ಕೇವಲ 15 ವರ್ಷ ವಯಸ್ಸು. ಇನ್ನು ಮೂರು ವರ್ಷಗಳ ಸಮಯವನ್ನು ಅವರಿಗೆ ನೀಡಬೇಕು. ವಯಸ್ಸಾದಂತೆ ಅವರ ಜೀವನಶೈಲಿ, ಯೋಚನಾ ಶಕ್ತಿ ಮತ್ತು ಮನೋಭಾವ ಬದಲಾಗುತ್ತದೆ. ಮುಂಬರುವ 2-3 ವರ್ಷಗಳಲ್ಲಿ ಅವರು ತಮ್ಮನ್ನು ಹೇಗೆ ತೊಡಗಿಸಿಕೊಳ್ಳುತ್ತಾರೆ ಮತ್ತು ವೈಯಕ್ತಿಕ ಜೀವನ ಹಾಗೂ ಆಟವನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದು ಅವರ ಕ್ರೀಡಾ ಭವಿಷ್ಯವನ್ನು ನಿರ್ಧರಿಸುತ್ತದೆ. ಕೇವಲ ಇಂದಿನ ಪ್ರದರ್ಶನಕ್ಕಿಂತ, ಮುಂಬರುವ ದಿನಗಳ ಶಿಸ್ತು ಅತ್ಯಂತ ಪ್ರಮುಖವಾದುದು ಎಂದು ಕಪಿಲ್ ಅಭಿಪ್ರಾಯಪಟ್ಟಿದ್ದಾರೆ.
ಮುಂದಿನ ನಾಯಕನ ಹುಡುಕಾಟದ ಬಗ್ಗೆ ಮಹತ್ವದ ಹೇಳಿಕೆ
'ಪ್ರತಿ ಪೀಳಿಗೆಯಲ್ಲೂ ನಮಗೆ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರಂತಹ ದಿಗ್ಗಜರು ಸಿಕ್ಕಿದ್ದಾರೆ. ಅವರು ದೇಶಕ್ಕೆ ಅಪಾರ ಹೆಮ್ಮೆ ತಂದಿದ್ದಾರೆ. ಒಬ್ಬ ಕ್ರಿಕೆಟಿಗನಾಗಿ, ಭಾರತೀಯ ತಂಡದಲ್ಲಿ ಮುಂದಿನ 10 ರಿಂದ 15 ವರ್ಷಗಳ ಕಾಲ ಸತತವಾಗಿ ಆಡಿ ತಂಡವನ್ನು ಮುನ್ನಡೆಸಬಲ್ಲ 'ಮುಂದಿನ ಹೀರೋ' ಯಾರು ಎಂಬುದನ್ನು ನಾನು ಸದಾ ಗಮನಿಸುತ್ತಿರುತ್ತೇನೆ. ವೈಭವ್ ಅವರಲ್ಲಿ ಅದು ಇದೆ, ಆದರೆ ಅವರು ಸುದೀರ್ಘ ವೃತ್ತಿಜೀವನ ಕಟ್ಟಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ,' ಎಂದು ಹೇಳಿದ್ದಾರೆ.
ವೈಭವ್ ಸೂರ್ಯವಂಶಿ ಪ್ರದರ್ಶನ
ಐಪಿಎಲ್ 2026ರ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್ ಗೆಲ್ಲುವ ಮೂಲಕ ದಾಖಲೆ ಬರೆದಿದ್ದ ವೈಭವ್ ಸೂರ್ಯವಂಶಿ, ಭಾರತ ಟಿ20 ತಂಡಕ್ಕೂ ಪದಾರ್ಪಣೆ ಮಾಡಿದ್ದಾರೆ. ಪ್ರಸ್ತುತ ಭಾರತ ತಂಡದಲ್ಲಿ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಅವರಂತಹ ಅನುಭವಿ ಓಪನರ್‌ಗಳಿರುವುದರಿಂದ ವೈಭವ್ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.
ಒಟ್ಟಿನಲ್ಲಿ ಹೇಳುವುದಾದರೆ, ಕಪಿಲ್ ದೇವ್ ಅವರ ಸಂದೇಶ ಸ್ಪಷ್ಟವಾಗಿದೆ. ಕೇವಲ ಪ್ರತಿಭೆ ಭಾರತ ತಂಡದ ಬಾಗಿಲು ತೆರೆಯಬಹುದು, ಆದರೆ ಮೈದಾನದ ಹೊರಗಿನ ಶಿಸ್ತು, ಜೀವನಶೈಲಿ ಮತ್ತು ಮಾನಸಿಕ ಸ್ಥೈರ್ಯ ಮಾತ್ರ ಒಬ್ಬ ಆಟಗಾರನನ್ನು ಸಚಿನ್ ಅಥವಾ ವಿರಾಟ್ ಅವರಂತೆ ದಶಕಗಳ ಕಾಲ ಯಶಸ್ಸಿನಲ್ಲಿಸಲು ಸಾಧ್ಯ.. ಅದರಲ್ಲೂ ವಿನೋದ್ ಕಾಂಬ್ಳಿ ಅವರ ಉದಾಹರಣೆ ನೀಡಿ ಎಚ್ಚರಿಕೆ ಸಂದೇಶ ರವಾನಿಸಿರುವುದೇ ಇದೀಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.


Click it and Unblock the Notifications
