Vaibhav Sooryavanshi: ಪ್ಲೀಸ್ ಆ ಕೆಲ್ಸ ಮಾಡ್ಬೇಡ್ವೋ: ವೈಭವ್ ಸೂರ್ಯವಂಶಿಗೆ ಇಶಾನ್ ಕಿಶನ್ ಕೊಟ್ಟ ಸಲಹೆ ಭಾರಿ ವೈರಲ್
Vaibhav Sooryavanshi: ಭಾರತೀಯ ಕ್ರಿಕೆಟ್‌ನ ಅತೀ ಕಿರಿಯ ಆಟಗಾರನಾಗಿ ಗುರುತಿಸಿಕೊಂಡಿರುವ 15 ವರ್ಷದ ವೈಭವ್ ಸೂರ್ಯವಂಶಿ ಅವರು ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ದಿಗ್ಗಜರ ಗಮನ ಸೆಳೆದಿದ್ದಾರೆ. ಇದೀಗ ಸದ್ಯ ಭಾರತ ಹಾಗೂ ಜಿಂಬಾಬ್ವೆ ನಡುವೆ ಟಿ20 ಸರಣಿ ನಡೆಯುತ್ತಿದ್ದು, ಈ ನಡುವೆಯೇ ಇಶಾನ್ ಕಿಶನ್ ವೈಭವ್‌ಗೆ ಮಹತ್ವದ ಸಲಹೆ ನೀಡಿದ್ದಾರೆ.
ಈಗಾಗಲೇ ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಎರಡು ಟಿ20 ಪಂದ್ಯಗಳಲ್ಲಿ ಗೆದ್ದ ಟೀಮ್ ಇಂಡಿಯಾವು ಸರಣಿಯನ್ನ ತನ್ನಾಗಿಸಿಕೊಂಡಿದೆ. ಇನ್ನೂ ಕೊನೆಯ ಹಾಗೂ ಮೂರನೇ ಪಂದ್ಯದಲ್ಲೂ ಗೆಲುವು ಸಾಧಿಸಿ ಜಿಂಬಾಬ್ವೆ ತಂಡವನ್ನು ಕ್ಲೀನ್ ಸ್ವೀಪ್ ಮಾಡುವ ವಿಶ್ವಾಸದಲ್ಲಿದೆ. ಇದಕ್ಕೂ ಮುನ್ನ ಇಶಾನ್ ಕಿಶನ್ ಅವರು ವೈಭವ್ ಸೂರ್ಯವಂಶಿಗೆ ಯಾವುದರ ಕಡೆ ಹೆಚ್ಚು ಗಮನಹರಿಸಬೇಕು ಎಂಬ ಬಗ್ಗೆ ಕಿವಿಮಾತು ಹೇಳಿದ್ದಾರೆ.

ವಂಡರ್ ಕಿಡ್‌ಗೆ ಇಶಾನ್ ಕಿಶನ್ ಕಿವಿಮಾತು
ಭಾರತದ ತಂಡದ ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ ಅವರು ಉದಯೋನ್ಮುಖ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರಿಗೆ ಪ್ರಮುಖ ಸಲಹೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳ ಪ್ರಭಾವ ಹಾಗೂ ಹೊರಗಿನ ಚರ್ಚೆಗಳಿಂದ ದೂರ ಇರು. ಕೇವಲ ಆಟದ ಮೇಲೆ ಸಂಪೂರ್ಣ ಗಮನ ಹರಿಸು ಎಂದು 15 ವರ್ಷದ ವಂಡರ್ ಕಿಡ್‌ಗೆ ಕಿವಿಮಾತು ಹೇಳಿದ್ದಾರೆ.
ಕಳೆದ ಪಂದ್ಯದಲ್ಲಿ ಕಡಿಮೆ ರನ್‌ಗೆ ವಿಕೆಟ್ ಪತನ
ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡ 90 ರನ್‌ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಈ ಪಂದ್ಯದಲ್ಲಿ ಭಾರತ ಆರಂಭದಲ್ಲೇ ಅಭಿಷೇಕ್ ಶರ್ಮಾ (8 ರನ್) ಮತ್ತು ವೈಭವ್ ಸೂರ್ಯವಂಶಿ (20 ರನ್) ಅವರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಇಶಾನ್ ಕಿಶನ್, ತಿಲಕ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ
ಆ ಸಂದರ್ಭದಲ್ಲಿ ಮೈದಾನಕ್ಕಿಳಿದ ಇಶಾನ್ ಕಿಶನ್ ಕೇವಲ 44 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ 81 ರನ್‌ಗಳ ಸ್ಪೋಟಕ ಇನ್ನಿಂಗ್ಸ್ ಆಡಿದರು. ಮತ್ತೊಂದೆಡೆ ತಿಲಕ್ ವರ್ಮಾ ಸಹ ಕೊನೆ ಓವರ್‌ವರೆಗೂ ನಿಂತು ಜವಾಬ್ದಾರಿಯುತ ಆಟ ಆಡಿ ಅಜೇಯ 60 ರನ್‌ಗಳ ಕೊಡುಗೆ ನೀಡಿದರು. ಈ ಮೂಲಕ ತಂಡದ ಮೊತ್ತವನ್ನು 219ಕ್ಕೆ ತಲುಪಿಸಿದರು. ನಂತರ ಜಿಂಬಾಬ್ವೆ ತಂಡವನ್ನು 129 ರನ್‌ಗಳಿಗೆ ಆಲೌಟ್ ಮಾಡಿ ಭಾರತ ಸುಲಭ ಗೆಲುವು ದಾಖಲಿಸಿತು.
ವೈಭವ್ ಬೆಂಬಲಕ್ಕೆ ನಿಂತ ಕಿಶನ್
ಪಂದ್ಯ ಮುಗಿದ ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇಶಾನ್ ಕಿಶನ್, ಯುವ ಆಟಗಾರ ವೈಭವ್ ಬೆಂಬಲಕ್ಕೆ ನಿಂತರು. 'ವೈಭವ್ ಸೂರ್ಯವಂಶಿ ಅತ್ಯಂತ ಬುದ್ಧಿವಂತ ಆಟಗಾರ. ಮೈದಾನದ ಒಳಗೆ ಮತ್ತು ಹೊರಗೆ ಹೇಗೆ ನಡೆದುಕೊಳ್ಳಬೇಕು ಎಂಬ ಅರಿವು ಆತನಿಗೆ ಇದೆ. ಆದರೆ ದೇಶವನ್ನು ಪ್ರತಿನಿಧಿಸುವಾಗ ಯಾವುದರ ಮೇಲೆ ಗಮನ ಹರಿಸಬೇಕು ಎಂಬುದು ಬಹಳ ಮುಖ್ಯವಾಗುತ್ತದೆ,' ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಇಶಾನ್ ಕಿಶನ್, 'ನಾನು, ಅಭಿಷೇಕ್ ಶರ್ಮಾ, ನಾಯಕ ಅಕ್ಷರ್ ಪಟೇಲ್ ಸೇರಿದಂತೆ ತಂಡದ ಹಿರಿಯ ಆಟಗಾರರು ವೈಭವ್ ಜೊತೆ ಸದಾ ಮಾತನಾಡುತ್ತಿರುತ್ತೇವೆ. ಸಾಮಾಜಿಕ ಜಾಲತಾಣಗಳ ಹಾವಳಿ ಮತ್ತು ಹೊರಗಿನ ಅನಗತ್ಯ ಮಾತುಗಳಿಗೆ ಕಿವಿಗೊಡದೆ, ಕೇವಲ ಕ್ರಿಕೆಟ್ ಕುರಿತು ಮಾತ್ರ ಆಲೋಚಿಸುವಂತೆ ತಿಳಿಹೇಳುತ್ತಿದ್ದೇವೆ. ಕಿರಿಯ ವಯಸ್ಸಿನಲ್ಲೇ ಬಂದಾಗ ತಪ್ಪು ದಾರಿ ತುಳಿಯುವ ಅಥವಾ ಗಮನ ಬೇರೆಡೆಗೆ ಹರಿಯುವ ಸಾಧ್ಯತೆಗಳಿರುತ್ತವೆ. ಅದನ್ನು ತಡೆಯುವುದು ನಮ್ಮ ಕರ್ತವ್ಯ,' ಎಂದು ಹೇಳಿದರು.
'ತಂಡದಲ್ಲಿ ನಾವೆಲ್ಲರೂ ಸಹೋದರರಂತೆ ಇದ್ದೇವೆ. ವೈಭವ್ ಕೂಡ ನನ್ನದೇ ಒಂದು ಸಣ್ಣ ಹಳ್ಳಿಯಿಂದ ಬಂದವನು. ನಾವು ನಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಮಾಡಿದ ತಪ್ಪುಗಳನ್ನು ಈ ಯುವ ಆಟಗಾರರು ಮಾಡಬಾರದು. ಪ್ರಸ್ತುತ ಆತ ತನ್ನ ಆಟವನ್ನು ಆನಂದಿಸುತ್ತಿದ್ದು, ಅದೇ ರೀತಿ ಮುಂದುವರಿಯಬೇಕು,' ಎಂದು ಇಶಾನ್ ಕಿಶನ್ ಹೇಳಿದರು.
ವೈಭವ್ ಬ್ಯಾಟಿಂಗ್ ಶೈಲಿಗೆ ಕಿಶನ್ ಫಿದಾ
ವೈಭವ್ ಬ್ಯಾಟಿಂಗ್ ಸಾಮರ್ಥ್ಯವನ್ನು ಶ್ಲಾಘಿಸಿದ ಅವರು, 'ವೈಭವ್ ಭಾರತಕ್ಕೆ ಪಂದ್ಯ ಗೆಲ್ಲಿಸಿಕೊಡುವ ಸಾಮರ್ಥ್ಯ ಹೊಂದಿರುವ ಅಪರೂಪದ ಆಟಗಾರ. ಮೊದಲ ಎಸೆತದಿಂದಲೇ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸುವ ಕಲೆ ಆತನಲ್ಲಿದೆ. ಆತ ಕ್ರೀಸ್‌ನಲ್ಲಿ ನಿಂತರೆ ಪವರ್‌ಪ್ಲೇನಲ್ಲೇ ತಂಡದ ಮೊತ್ತವನ್ನು 80-90 ರನ್‌ಗಳಿಗೆ ಕೊಂಡೊಯ್ಯಬಲ್ಲನು,' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಯುವ ಆಟಗಾರರು ಸೋಷಿಯಲ್ ಮೀಡಿಯಾ ಪ್ರಚಾರದಿಂದ ದೂರವಿದ್ದು, ತಮ್ಮ ವೃತ್ತಿಯ ಕಡೆಗೆ ಆದ್ಯತೆ ನೀಡಿದರೆ ಭವಿಷ್ಯದಲ್ಲಿ ಭಾರತೀಯ ಕ್ರಿಕೆಟ್‌ಗೆ ದೊಡ್ಡ ಕೊಡುಗೆ ನೀಡಬಹುದು ಎಂಬುದು ಇಶಾನ್ ಕಿಶನ್ ಮಾತಿನ ಅರ್ಥವಾಗಿದೆ. ಒಟ್ಟಿನಲ್ಲಿ ಇಶಾನ್ ಕಿಶನ್ ವೈಭವ್ ಸೂರ್ಯವಂಶಿ ಬೆನ್ನಿಗೆ ನಿಂತು ಪ್ರಶಂಸೆಗೆ ಪಾತ್ರರಾಗಿದ್ದಾರೆ.


Click it and Unblock the Notifications
