ವೈಭವ್ ನಮ್ಮನ್ನೇ ಬಿಟ್ಟಿಲ್ಲ.. ಇನ್ನು ನಿಮ್ಮನ್ನ ಸುಮ್ನೆ ಬಿಡ್ತಾನಾ? ಜಿಟಿಗೆ ಎಸ್‌ಆರ್‌ಎಚ್ ಕೋಚ್ ಎಚ್ಚರಿಕೆ, ಭಾರಿ ವೈರಲ್
Vaibhav Sooryavanshi: ಐಪಿಎಲ್ 2026ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಎದುರು ಸೋತು ಸನ್‌ರೈಸರ್ಸ್ ಹೈದರಾಬಾದ್ ಟೂರ್ನಿಯಿಂದ ಹೊರಬಿದ್ದಿದೆ. ಆದರೆ ಆ ಪಂದ್ಯದಲ್ಲಿ ಆರ್‌ಆರ್‌ನ 15 ವರ್ಷದ ಪೋರ ವೈಭವ್ ಸೂರ್ಯವಂಶಿ ಆಡಿದ ಸ್ಫೋಟಕ ಆಟದ ಕಿಚ್ಚು ಇನ್ನೂ ಆರಿಲ್ಲ. ಹೈದರಾಬಾದ್ ತಂಡದ ಬೌಲಿಂಗ್ ಕೋಚ್ ಜೇಮ್ಸ್ ಫ್ರಾಂಕ್ಲಿನ್ ವೈಭವ್ ಆಟಕ್ಕೆ ಎಷ್ಟು ಬೆರಗಾಗಿದ್ದಾರೆಂದರೆ ಮುಂದಿನ ಪಂದ್ಯದಲ್ಲಿ ರಾಜಸ್ಥಾನವನ್ನು ಎದುರಿಸಲಿರುವ ಗುಜರಾತ್ ಟೈಟಾನ್ಸ್ ತಂಡಕ್ಕೆ ಎಚ್ಚರಿಕೆಯ ಮುನ್ಸೂಚನೆ ನೀಡಿದ್ದರು. ಇದು ಇದೀಗ ಭಾರಿ ವೈರಲ್ ಆಗುತ್ತಿದೆ.
ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ಮಾತನಾಡಿದ ಫ್ರಾಂಕ್ಲಿನ್, 'ಇಂತಹ ಅದ್ಭುತ ಪ್ರತಿಭೆಯನ್ನು ಕ್ರಿಕೆಟ್ ಲೋಕ ಈ ಹಿಂದೆ ಎಂದೂ ನೋಡಿಲ್ಲ. ಈ ಎಡಗೈ ಬ್ಯಾಟರ್ ಕೇವಲ ಹೊಡೆತಗಳನ್ನು ಬಾರಿಸುವುದಿಲ್ಲ, ಬದಲಾಗಿ ಬೌಲರ್‌ಗಳ ಮನಸ್ಥಿತಿಯ ಜೊತೆ ಆಟವಾಡುತ್ತಾನೆ. ನಮ್ಮ ಬೌಲರ್‌ಗಳು ಪವರ್‌ಪ್ಲೇನಲ್ಲಿ ಲೆಗ್ ಸ್ಟಂಪ್ ಒಳಭಾಗದಲ್ಲಿ ಫುಲ್ ಲೆಂತ್ ಎಸೆತಗಳನ್ನು ಎಸೆಯಲು ತಂತ್ರ ರೂಪಿಸಿದ್ದರು. ಆದರೆ ವೈಭವ್ ಅದನ್ನು ಅತಿ ಬೇಗನೆ ಅರ್ಥ ಮಾಡಿಕೊಂಡು ಬೌಲರ್‌ಗಳು ತಮ್ಮ ದಿಕ್ಕನ್ನೇ ಬದಲಿಸುವಂತೆ ಒತ್ತಡ ಹೇರಿದರು. ಬೌಲರ್ ದಿಕ್ಕು ಬದಲಿಸಿದ ಮರುಕ್ಷಣವೇ ಅದನ್ನು ತಮಗೆ ಪೂರಕವಾಗಿ ಬಳಸಿಕೊಳ್ಳುವ ಕಲೆ ಅವರಿಗಿದೆ,' ಎಂದು ಶ್ಲಾಘಿಸಿದರು.

ಗುಜರಾತ್ ಟೈಟಾನ್ಸ್‌ಗೆ ಫ್ರಾಂಕ್ಲಿನ್ ಎಚ್ಚರಿಕೆ
ಕ್ವಾಲಿಫೈಯರ್-2 ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ ಸಮರ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಫ್ರಾಂಕ್ಲಿನ್, 'ನಮ್ಮಂತಹ ಬಲಿಷ್ಠ ಬೌಲಿಂಗ್ ಪಡೆಯನ್ನೇ ವೈಭವ್ ಸುಮ್ಮನೆ ಬಿಟ್ಟಿಲ್ಲ, ಇನ್ನು ನಿಮ್ಮನ್ನು ಬಿಡುತ್ತಾನಾ?,' ಎನ್ನುವ ರೀತಿಯಲ್ಲಿ ಎಚ್ಚರಿಕೆ ನೀಡಿದ್ದಾರೆ. ಸೂರ್ಯವಂಶಿ ಅವರ ಆಕ್ರಮಣಕಾರಿ ಆಟ ಎದುರಾಳಿಗಳಿಗೆ ದೊಡ್ಡ ತಲೆನೋವಾಗಲಿದೆ ಎಂಬುದು ಅವರ ಅಭಿಪ್ರಾಯವಾಗಿದೆ.
ಕ್ರಿಸ್ ಗೇಲ್ ದಾಖಲೆ ಧೂಳಿಪಟ
ವೈಭವ್ ಸೂರ್ಯವಂಶಿ ಈ ಸೀಸನ್‌ನಲ್ಲಿ ಕೇವಲ ರನ್ ಗಳಿಸುತ್ತಿಲ್ಲ, ಬದಲಾಗಿ ದಂತಕಥೆಗಳ ದಾಖಲೆಗಳನ್ನು ಪುಡಿಗಟ್ಟುತ್ತಿದ್ದಾರೆ. ಐಪಿಎಲ್ ಸೀಸನ್ ಒಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ್ದ ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಅವರ ದಾಖಲೆಯನ್ನು ವೈಭವ್ ಅಳಿಸಿಹಾಕಿದ್ದಾರೆ. ಈವರೆಗೆ ಅವರು ಬರೋಬ್ಬರಿ 65 ಸಿಕ್ಸರ್‌ಗಳನ್ನು ಸಿಡಿಸಿ ಅಬ್ಬರಿಸಿದ್ದಾರೆ. ಈ ಟೂರ್ನಿಯಲ್ಲಿ ಈಗಾಗಲೇ 680 ರನ್ ಗಳಿಸಿರುವ ವೈಭವ್ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಜೊತೆಗೆ 55 ಬೌಂಡರಿಗಳನ್ನು ಬಾರಿಸಿದ್ದಾರೆ.
25 ವರ್ಷಗಳ ಕಾಲ ಆಳಬಲ್ಲ ಆಟಗಾರ
'ವೈಭವ್ ಅವರ ವೃತ್ತಿಜೀವನದಲ್ಲಿ ಇನ್ನೂ 25 ವರ್ಷಗಳ ಕಾಲ ಆಡುವ ಅವಕಾಶವಿದೆ ಎಂದು ಯೋಚಿಸಿದರೆ ಆಶ್ಚರ್ಯವಾಗುತ್ತದೆ. ಅವರು ಮಾನಸಿಕವಾಗಿ ತುಂಬಾ ಬಲಿಷ್ಠರಾಗಿದ್ದಾರೆ. ಎಸ್‌ಆರ್‌ಎಚ್ ವಿರುದ್ಧ ಪಂದ್ಯದಲ್ಲಿ ಒಬ್ಬ ಅದ್ಭುತ ಪ್ರತಿಭೆಯಿಂದ ಮೂಡಿಬಂದ ಅಸಾಧಾರಣ ಇನ್ನಿಂಗ್ಸ್ ಇದಾಗಿದೆ,' ಎಂದು ಫ್ರಾಂಕ್ಲಿನ್ ಬಣ್ಣಿಸಿದ್ದರು. ಒಟ್ಟಿನಲ್ಲಿ ಹೇಳುವುದಾದರೆ ತಮ್ಮ ತಂಡ ಸೋತರೂ ಎದುರಾಳಿ ತಂಡದ ಬಾಲಕನ ಪ್ರತಿಭೆಯನ್ನು ಮುಕ್ತವಾಗಿ ಹೊಗಳುವ ಮೂಲಕ ಎಸ್‌ಆರ್‌ಎಚ್ ಕೋಚ್ ಕ್ರೀಡಾಭಿಮಾನಿಗಳ ಮನಗೆದ್ದಿದ್ದಾರೆ.












Click it and Unblock the Notifications