ವೈಭವ್ ಸೂರ್ಯವಂಶಿ ನಮ್ಮ ದೇಶಕ್ಕೆ ಯಾವಾಗ ಬರ್ತಾನೆ ಅಂತಾ ಕಾಯುತ್ತಿದ್ದೇನೆ: ನ್ಯೂಜಿಲೆಂಡ್ ಸ್ಟಾರ್ ಕ್ರಿಕೆಟರ್
Vaibhav Sooryavanshi: ಭಾರತೀಯ ಕ್ರಿಕೆಟ್‌ನ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಅದ್ಭುತ ಬ್ಯಾಟಿಂಗ್ ಶೈಲಿಗೆ ನ್ಯೂಜಿಲೆಂಡ್ ತಂಡದ ಅನುಭವಿ ವೇಗಿ ಲಾಕಿ ಫರ್ಗುಸನ್ ಮನಸೋತಿದ್ದಾರೆ. ಸೂರ್ಯವಂಶಿಯನ್ನು ಅಸಾಧಾರಣ ಹಾಗೂ ಪ್ರತಿಭೆ ಎಂದು ಬಣ್ಣಿಸಿರುವ ಅವರು, ಮುಂಬರುವ ಭಾರತ ಮತ್ತು ಕಿವೀಸ್ ನಡುವಿನ ಟಿ20 ಸರಣಿಯಲ್ಲಿ ಅವರ ವಿರುದ್ಧ ಬೌಲಿಂಗ್ ಮಾಡಲು ಕಾಯುತ್ತಿರುವುದಾಗಿ ತಿಳಿಸಿದ್ದಾರೆ.
ಅಕ್ಟೋಬರ್ 22ರಿಂದ ಆರಂಭವಾಗಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಗಾಗಿ ವೈಭವ್ ಸೂರ್ಯವಂಶಿ ಅವರನ್ನು ಭಾರತೀಯ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಈ ಹಿನ್ನೆಲೆ ಮಾಧ್ಯಮಗಳೊಂದಿಗೆ ಮಾತನಾಡಿದ 35 ವರ್ಷದ ನ್ಯೂಜಿಲೆಂಡ್ ವೇಗಿ ಫರ್ಗುಸನ್ ಅವರು, ಯುವ ಪ್ರತಿಭೆಯ ಕುರಿತು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

'ವೈಭವ್ ಭಾರತ ತಂಡಕ್ಕೆ ಆಯ್ಕೆಯಾಗಿದ್ದು ಆಶ್ಚರ್ಯವೇನಲ್ಲ'
ಐಪಿಎಲ್‌ನಲ್ಲಿ ವೈಭವ್ ಸೂರ್ಯವಂಶಿ ಅವರ ವಿರುದ್ಧ ಆಡಿದ ಅನುಭವವನ್ನು ಸ್ಮರಿಸಿದ ಫರ್ಗುಸನ್, 'ನಾನು ಐಪಿಎಲ್‌ನಲ್ಲಿ ಅವರ ವಿರುದ್ಧ ಬೌಲಿಂಗ್ ಮಾಡಿದ್ದೇನೆ. ಅವರು ಅಸಾಧಾರಣ ಸಾಮರ್ಥ್ಯವಿರುವ ಪ್ರತಿಭೆ. ಸತತ ಐಪಿಎಲ್ ಆವೃತ್ತಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಅವರನ್ನು ಭಾರತೀಯ ತಂಡಕ್ಕೆ ಸೇರ್ಪಡೆಗೊಳಿಸಿರುವುದು ನನಗೇನೂ ಆಶ್ಚರ್ಯ ಎನಿಸುವುದಿಲ್ಲ,' ಎಂದು ಹೇಳಿದ್ದಾರೆ.
'ವೈಭವ್ ಸವಾಲನ್ನು ಎದುರಿಸಲು ಸಿದ್ಧ'
ತಮ್ಮ ತಾಯ್ನಾಡಿನಲ್ಲಿ ವೈಭವ್ ಸೂರ್ಯವಂಶಿ ಅವರ ಸವಾಲನ್ನು ಎದುರಿಸಲು ಸಿದ್ಧರಾಗಿರುವುದಾಗಿ ತಿಳಿಸಿದ ಅವರು, 'ನ್ಯೂಜಿಲೆಂಡ್ ಮೈದಾನಗಳಲ್ಲಿ ಅವರ ಸವಾಲನ್ನು ಎದುರಿಸಲು ನಾನು ಕಾತರನಾಗಿದ್ದೇನೆ. ಬಹುಶಃ ಅವರು ನಮ್ಮ ದೇಶಕ್ಕೆ ಬಂದು ಆಡುತ್ತಿರುವುದು ಇದೇ ಮೊದಲ ಬಾರಿ ಇರಬಹುದು. ಸದ್ಯ ಭಾರತ ತಂಡ ಪರ ಪ್ರವಾಸ ಕೈಗೊಳ್ಳುತ್ತಿರುವುದು ಅತ್ಯಂತ ರೋಚಕ ಸರಣಿಯಾಗಲಿದೆ,' ಎಂದು ಹೇಳಿದರು.
'ಯುವ ಕ್ರಿಕೆಟಿಗರು ಪಂದ್ಯದ ಮೆರಗನ್ನು ಹೆಚ್ಚಿಸುತ್ತಾರೆ'
ಪ್ರವಾಸಿ ಆಟಗಾರರಿಗೆ ನ್ಯೂಜಿಲೆಂಡ್‌ನ ವಾತಾವರಣ ಮತ್ತು ಸಣ್ಣ ಮೈದಾನಗಳ ಬೌಂಡರಿಗಳು ಸವಾಲೊಡ್ಡಲಿವೆ ಎಂದ ಫರ್ಗುಸನ್, 'ಭಾರತದಿಂದ ಪ್ರಪಂಚವೇ ಮೆಚ್ಚುವಂತಹ ಪ್ರತಿಭೆಗಳು ನಿರಂತರವಾಗಿ ಹೊರಹೊಮ್ಮುತ್ತಲಿದ್ದಾರೆ. ಆದರೆ, ನ್ಯೂಜಿಲೆಂಡ್‌ನಂತಹ ಭಿನ್ನ ವಾತಾವರಣ ಮತ್ತು ಪಿಚ್‌ಗಳಲ್ಲಿ ಆಡುವುದು ಹೊಸಬರಿಗೆ ಕೊಂಚ ಕಷ್ಟಕರ. ಸೂರ್ಯವಂಶಿ ತಮ್ಮ ಅದ್ಭುತ ಆಟದಿಂದ ಪ್ರಶಂಸೆಗೆ ಅರ್ಹರಾಗಿದ್ದಾರೆ. ಅವರ ಭವಿಷ್ಯಕ್ಕೆ ಸುದೀರ್ಘ ವೃತ್ತಿಜೀವನದ ಹಾದಿಯಿದೆ. ಯಾವುದೇ ಭಯವಿಲ್ಲದೆ ಆಡುವ ಯುವ ಕ್ರಿಕೆಟಿಗರು ಪಂದ್ಯದ ಮೆರುಗನ್ನು ಹೆಚ್ಚಿಸುತ್ತಾರೆ,' ಎಂದು ವಿವರಿಸಿದರು.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸರಣಿಗಳು
ಮುಂಬರುವ ಪ್ರವಾಸದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು 2 ಟೆಸ್ಟ್, 5 ಟಿ20 ಮತ್ತು 5 ಏಕದಿನ ಪಂದ್ಯಗಳ ಬೃಹತ್ ಸರಣಿಯಲ್ಲಿ ಮುಖಾಮುಖಿಯಾಗಲಿವೆ. 'ಭಾರತವು ಅತ್ಯಂತ ಶಕ್ತಿಶಾಲಿ ತಂಡ ಎಂಬುದು ನಮಗೆ ಗೊತ್ತು. ಆದರೆ ನಮ್ಮ ದೇಶದಲ್ಲಿ ಅವರಿಗೆ ಆತಿಥ್ಯ ನೀಡುವುದು ನಿಜಕ್ಕೂ ಅದ್ಭುತ ಅನುಭವ,' ಎಂದು ಫರ್ಗುಸನ್ ಅಭಿಪ್ರಾಯ ವ್ಯಕ್ತಡಿಸಿದ್ದಾರೆ.
ಇದೇ ವೇಳೆ ಮುಂಬರುವ ಏಕದಿನ ವಿಶ್ವಕಪ್ ಅನ್ನು ದೃಷ್ಟಿಯಲ್ಲಿಟ್ಟುಕೊಂಡು ನ್ಯೂಜಿಲೆಂಡ್ ಏಕದಿನ ತಂಡಕ್ಕೆ ಮರಳುತ್ತಿರುವ ಬಗ್ಗೆಯೂ ಸಂತಸ ವ್ಯಕ್ತಪಡಿಸಿದ್ದಾರೆ. 'ಆಟದ ತಂತ್ರಜ್ಞಾನ ಹಾಗೂ ಯುವ ಬೌಲರ್‌ಗಳಿಂದ ಹೊಸ ವಿಷಯಗಳನ್ನು ಕಲಿಯುವುದು ತಮ್ಮ ವೃತ್ತಿಜೀವನಕ್ಕೆ ಹೊಸ ಚೈತನ್ಯ ನೀಡಿದೆ.' ಎಂದು ಹೇಳಿದರು. ಒಟ್ಟಿನಲ್ಲಿ ಇದೀಗ ದಿಗ್ಗಜರು ವೈಭವ್ ಸೂರ್ಯವಂಶಿ ಅವರ ಆಟದ ಬಗ್ಗೆಯೇ ಹೆಚ್ಚಾಗಿ ಮಾತನಾಡುತ್ತಿದ್ದು, ಇದೇ ವೇಳೆ ಪರ್ಗ್ಯುಸನ್ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸವಾಲೊಡ್ಡುವ ರೀತಿಯಲ್ಲಿ ಆಹ್ವಾನಿಸಿರುವುದು ಇದೀಗ ಗಮನ ಸೆಳೆಯುವ ವಿಚಾರವಾಗಿದೆ.


Click it and Unblock the Notifications
