ಯುಎಸ್ ಓಪನ್: ಇಗಾ ಸ್ವಿಯಾಟೆಕ್ ಮಹಿಳೆಯರ ಚಾಂಪಿಯನ್
ನ್ಯೂಯಾರ್ಕ್, ಸೆ. 11: ಪೋಲೆಂಡ್ ದೇಶದ ಟೆನಿಸ್ ಆಟಗಾರ್ತಿ ಇಗಾ ಸ್ವಿಯಾಟೆಕ್ 2022ರ ಯುಎಸ್ ಓಪನ್ ಟೆನಿಸ್ ಮಹಿಳಾ ಸಿಂಗಲ್ಸ್ ಚಾಂಪಿಯನ್ ಎನಿಸಿದ್ದಾರೆ. ಭಾನುವಾರ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಟುನಿಶಿಯಾದ ಆನ್ಸ್ ಜಾಬ್ಯೂರ್ ಅವರನ್ನು 6-2, 7-6 (7-5) ನೇರ ಸೆಟ್‌ಗಳಿಂದ ಸೋಲಿಸಿದರು.
ವಿಶ್ವ ನಂಬರ್ ಒನ್ ಶ್ರೇಯಾಂಕದ ಇಗಾ ಸ್ವಿಯಾಟೆಕ್ ಫೈನಲ್‌ನಲ್ಲಿ ನಿರೀಕ್ಷಿತ ರೀತಿಯಲ್ಲಿ ಪ್ರಾಬಲ್ಯ ತೋರಿದರು. ಮೊದಲ ಸೆಟ್‌ನಲ್ಲಿ ಸುಲಭವಾಗಿ ಗೆದ್ದ ಅವರು ಎರಡನೇ ಸೆಟ್‌ನಲ್ಲಿ ತುಸು ಪ್ರತಿರೋಧ ಎದುರಿಸಬೇಕಾಯಿತು.
ಇಗಾ ಸ್ವಿಯಾಟೆಕ್ ಅವರಿಗೆ ಇದು ಮೂರನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿಯಾಗಿದೆ. ಆದರೆ, ಯುಎಸ್ ಓಪನ್ ಗೆದ್ದದ್ದು ಇದೇ ಮೊದಲು. ಆದರೆ, ಒಂದೇ ಸೀಸನ್‌ನಲ್ಲಿ ಎರಡು ಗ್ರ್ಯಾನ್ ಸ್ಲಾಂ ಗೆದ್ದಿದ್ದಾರೆ. ಜೂನ್‌ನಲ್ಲಿ ಅವರು ಫ್ರೆಂಚ್ ಓಪನ್ ಗೆದ್ದಿದ್ದರು. 2016ರ ನಂತರ ಒಂದೇ ಸೀಸನ್‌ನಲ್ಲಿ ಎರಡು ಗ್ರ್ಯಾನ್ ಸ್ಲಾಂ ಗೆದ್ದ ಆಟಗಾರ್ತಿ ಇಗಾ ಸ್ವಿಯಾಟೆಕ್ ಅವರೇ ಮೊದಲು.

ಕುತೂಹಲವೆಂದರೆ ವೀನಸ್ ವಿಲಿಯಮ್ಸ್ ಮತ್ತು ಸೆರೆನಾ ವಿಲಿಯಮ್ಸ್ ಯುಗ ಮುಗಿದ ಬಳಿಕ ಯಾವುದೇ ಆಟಗಾರ್ತಿ ಮಹಿಳಾ ಟೆನಿಸ್ ಅನ್ನು ಸಂಪೂರ್ಣವಾಗಿ ಆಳಲು ಸಾಧ್ಯವಾಗಿಲ್ಲ. ಕೆಲ ಟೆನಿಸ್ ಪಂಡಿತರು 21 ವರ್ಷದ ಇಗಾ ಸ್ಟಿಯಾಟೆಕ್ ಅವರಲ್ಲಿ ಇಂಥದ್ದೊಂದು ಸಾಧ್ಯತೆಯನ್ನು ಕಾಣುತ್ತಿದ್ದಾರೆ.
ಪೀರ್ಸ್-ಸ್ಯಾಂಡರ್ಸ್ ಮಿಶ್ರ ಡಬಲ್ಸ್ ಚಾಂಪಿಯನ್ಸ್
ಆಸ್ಟ್ರೇಲಿಯಾದ ಜಾನ್ ಪೀರ್ಸ್ ಮತ್ತು ಸ್ಟಾರ್ಮ್ ಸ್ಯಾಂಡರ್ಸ್ ಜೋಡಿ ಯುಎಸ್ ಓಪನ್ ಮಿಕ್ಸೆಡ್ ಡಬಲ್ಸ್ ಚಾಂಪಿಯನ್ಸ್ ಎನಿಸಿದರು. ನಿನ್ನೆ ಶನಿವಾರ ನಡೆದ ಫೈನಲ್‌ನಲ್ಲಿ ಬೆಲ್ಜಿಯನ್ ದೇಶದ ಕರ್ಸ್ಟನ್ ಫ್ಲಿಪ್‌ಕೆನ್ಸ್ ಮತ್ತು ಫ್ರಾನ್ಸ್ ದೇಶದ ಎಡ್ವರ್ಡ್ ರೋಜರ್ ವ್ಯಾಸೆಲಿನ್ ಜೋಡಿಯನ್ನು 4-6, 6-4, 10-7ರಿಂದ ರೋಚಕ ರೀತಿಯಲ್ಲಿ ಸೋಲಿಸಿದರು.
ಜಾನ್ ಪೀರ್ಸ್ ಮತ್ತು ಸ್ಟಾರ್ಮ್ ಸ್ಯಾಂಡರ್ಸ್ ಜೋಡಿಗೆ ಇದು ಮೊದಲ ಗ್ರ್ಯಾನ್‌ಸ್ಲಾಂ ಪ್ರಶಸ್ತಿಯಾಗಿದೆ. ಜಾನ್ ಪೀರ್ಸ್ 2017ರಲ್ಲಿ ಅಸ್ಟ್ರೇಲಿಯನ್ ಓಪನ್‌ನ ಪುರುಷರ ಡಬಲ್ಸ್ ಪ್ರಶಸ್ತಿ ಜಯಿಸಿದ್ದರು. ಆದರೆ, ಮಿಕ್ಸೆಡ್ ಡಬಲ್ಸ್‌ನಲ್ಲಿ ಗ್ರ್ಯಾನ್ ಸ್ಲಾಂ ಗೆದ್ದದ್ದು ಅವರು ಇದೇ ಮೊದಲು. ಹಾಗೆಯೇ, 2001ರ ನಂತರ ಆಸ್ಟ್ರೇಲಿಯಾದ ಆಟಗಾರರು ಮಿಕ್ಸೆಡ್ ಡಬಲ್ಸ್ ಗೆದ್ದದ್ದೂ ಇದೇ ಮೊದಲು.

ಪುರುಷರ ಫೈನಲ್
2022ರ ಯುಎಸ್ ಓಪನ್‌ನ ಪುರುಷರ ಫೈನಲ್ ಚಾಂಪಿಯನ್ ಯಾರೆಂಬುದು ಇಂದು ಭಾನುವಾರ ನಿರ್ಧಾರವಾಗುತ್ತದೆ. ರೋಜರ್ ಫೆಡರರ್ ಮತ್ತು ರಫೇಲ್ ನಡಾಲ್ ಅನುಪಸ್ಥಿತಿಯಲ್ಲಿ ನಡೆಯುತ್ತಿರುವ ಯುಎಸ್ ಓಪನ್ ಟೂರ್ನಿ ತುಸು ಕಳೆ ಕಳೆದುಕೊಂಡಿರುವು ಹೌದು. ಆದರೆ, ಕಾರ್ಲಸ್ ಆಲ್ಕರಾನ್ ಮತ್ತು ಕ್ಯಾಸ್ಪರ್ ರೂಡ್ ಇಬ್ಬರೂ ಫೈನಲ್ ತಲುಪಿದ್ದು, ಸಾಕಷ್ಟು ಅದ್ಭುತ ಟೆನಿಸ್ ಪ್ರದರ್ಶನ ತೋರಿದ್ದಾರೆ.
ಭಾರತೀಯ ಕಾಲಮಾನದಲ್ಲಿ ಭಾನುವಾರ ರಾತ್ರಿ 1:30ಕ್ಕೆ ಪಂದ್ಯ ಆರಂಭವಾಗಲಿದೆ. 19 ವರ್ಷದ ಕಾರ್ಲಸ್ ಆಲ್ಕರಾಜ್ ಸ್ಪೇನ್ ದೇಶದ ಆಟಗಾರರಾದರೆ, ನಾರ್ವೆ ದೇಶದ ಕ್ಯಾಸ್ಪರ್ ರೂಡ್ 23 ವರ್ಷದ ಆಟಗಾರರಾಗಿದ್ದಾರೆ. ಕಾರ್ಲಸ್ ಆಲ್ಕರಾಜ್ ಕಾರ್ಫಿಯಾ ಈ ಟೂರ್ನಿಯಲ್ಲಿ 3ನೇ ಶ್ರೇಯಾಂಕದವರಾದರೆ, ಕ್ಯಾಸ್ಪರ್ ರೂಡ್ 5ನೇ ಶ್ರೇಯಾಂಕಿತರು.
ಭಾರತೀಯರ ಸ್ಪರ್ಧೆ
ಈ ಬಾರಿಯ ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತೀಯರು ಹೆಚ್ಚು ಕಾಲ ಬಾಳಲಿಲ್ಲ. ರೋಹನ್ ಬೋಪಣ್ಣ ಮತ್ತು ರಾಮಕುಮಾರ್ ರಾಮನಾಥನ್ ಇಬ್ಬರೂ ಆರಂಭಿಕ ಸುತ್ತಿನಿಂದಲೇ ನಿರ್ಗಮಿಸಿದರು.
ಪುರುಷರ ಡಬಲ್ಸ್‌ನಲ್ಲಿ ನೆದರ್‌ಲೆಂಡ್ಸ್ ದೇಶದ ಮಾಟ್ವೆ ಮಿಡಲ್‌ಕೂಪ್‌ಗೆ ಜೋಡಿಯಾಗಿ ಸ್ಪರ್ಧಿಸಿದ್ದ 42 ವರ್ಷದ ರೋಹನ್ ಬೋಪಣ್ಣ 6-7, 2-6ರಿಂದ ಇಟಲಿಯ ಆಂಡ್ರೀ ವಾವಸ್ಸೋರಿ ಮತ್ತು ಲೋರೆಂಜೋ ಸೋನೇಗೊ ಜೋಡಿಗೆ ಸೋತರು.
ಮಿಶ್ರ ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ ಮತ್ತು ಚೀನಾದ ಯಾಂಗ್ ಝಾವೊಕ್ಸುವಾನ್ ಜೋಡಿ ಆಸ್ಟ್ರೇಲಿಯಾದ ಮ್ಯಾಕ್ಸ್ ಪುರ್ಸೆಲ್ ಮತ್ತು ಗೇಬ್ರಿಯೆಲಾ ಡಾಬ್ರೋವ್‌ಸ್ಕಿ ಎದುರು 5-7, 5-7 ಸೆಟ್‌ಗಳಿಂದ ಸೋತಿತು.
ಇನ್ನೊಂದೆಡೆ ರಾಮಕುಮಾರ್ ರಾಮನಾಥನ್ ಪುರುಷರ ಡಬಲ್ಸ್‌ನಲ್ಲಿ ಸರ್ಬಿಯಾದ ನಿಕೋಲಾ ಕಾಚಿಕ್ ಜೋಡಿಯಾಗಿ ಕಣಕ್ಕಿಳಿದಿದ್ದರು. ಆದರೆ, ಮೊದಲ ಸುತ್ತಿನಲ್ಲಿ ಇಟಲಿಯ ಸಿಮೋನ್ ಬೋಲೆಲ್ಲಿ ಮತ್ತು ಫೇಬಿಯೋ ಫಾಗ್ನಿನಿ ಜೋಡಿಯನ್ನು 4-6, 4-6 ನೇರ ಸೆಟ್‌ಗಳಿಂದ ಸೋತು ಟೂರ್ನಿಯಿಂದ ನಿರ್ಗಮಿಸಿದರು.
ರಾಜೀವ್ ರಾಮ್ ಪುರುಷರ ಡಬಲ್ಸ್ ಚಾಂಪಿಯನ್
ಯುಎಸ್ ಓಪನ್‌ನಲ್ಲಿ ಭಾರತೀಯರು ಮುನ್ನಡೆ ಸಾಧಿಸದೇ ಹೋದರೂ ಭಾರತೀಯ ಮೂಲದ ರಾಜೀವ್ ರಾಮ್ ಪುರುಷರ ಡಬಲ್ಸ್ ಚಾಂಪಿಯನ್ ಆಗಿದ್ದು ವಿಶೇಷ. ಅಮೆರಿಕದ ರಾಜೀವ್ ರಾಮ್ ಮತ್ತು ಬ್ರಿಟನ್‌ನ ಜೋ ಸಾಲಿಸ್‌ಬುರಿ ಶುಕ್ರವಾರ ನಡೆದ ಪುರುಷರ ಡಬಲ್ಸ್ ಫೈನಲ್‌ನಲ್ಲಿ 7-6, 7-5ರಿಂದ ವೆಸ್ಲೇ ಕೂಲ್ಹಾಫ್ ಮತ್ತು ನೀಲ್ ಸ್ಕುಪ್‌ಸ್ಕಿ ಜೋಡಿಯನ್ನು ಸೋಲಿಸಿದರು.
ರಾಜೀವ್ ರಾಮ್-ಜೋ ಸಾಲಿಸ್‌ಬುರಿ ಜೋಡಿಗೆ ಇದು ಸತತ ಎರಡನೇ ಯುಎಸ್ ಓಪನ್ ಪುರುಷರ ಡಬಲ್ಸ್ ಪ್ರಶಸ್ತಿ. ಈ ಸಾಧನೆ ಮಾಡಿದ ವಿಶ್ವದ ಎರಡನೇ ಜೋಡಿ ಇದಾಗಿದೆ. ಆಸ್ಟ್ರೇಲಿಯಾದ ಟಾಟ್ ವೂಡ್‌ಬ್ರಿಜ್ ಮತ್ತು ಮಾರ್ಕ್ ವೂಡ್‌ಫೋರ್ಡ್ ಬಿಟ್ಟರೆ ಯಾರೂ ಕೂಡ ಈ ಸಾಧನೆ ಮಾಡಿಲ್ಲ.
(ಒನ್ಇಂಡಿಯಾ ಸುದ್ದಿ)












Click it and Unblock the Notifications