ಚಿತ್ರದುರ್ಗ: ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಈ ಬಡ ಕ್ರೀಡಾಪಟುವಿಗೆ ಬೇಕಿದೆ ನೆರವಿನ ಹಸ್ತಗಳು
ಚಿತ್ರದುರ್ಗ, ಜುಲೈ, 29: ಹುಟ್ಟಿದ ಮೇಲೆ ಏನಾದರೂ ಸಾಧಿಸಬೇಕು ಎಂಬ ಹಂಬಲ ಪ್ರತಿಯೊಬ್ಬರಲ್ಲೂ ಇರುತ್ತದೆ. ಅದರಂತೆಯೇ ಇಲ್ಲೊಬ್ಬ ಬಡ ಕುಟುಂಬದ ಪ್ರತಿಭೆ ರಾಜ್ಯ ಮತ್ತು ದೇಶಕ್ಕೋಸ್ಕರ ಕ್ರೀಡೆಯಲ್ಲಿ ಸಾಧನೆ ಮಾಡುವ ಹಠ ತೊಟ್ಟಿದ್ದಾನೆ. ಕಿತ್ತು ತಿನ್ನುವ ಬಡತನವಿದ್ದರೂ ಈತ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಗೆದ್ದಿದ್ದು, ಮತ್ತೊಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಳ್ಳಲು ಮುಂದಾಗಿದ್ದಾರೆ. ಆದರೆ ಈಗ ಈ ಪ್ರತಿಭೆಗೆ ಹಣಕಾಸಿನ ಕೊರತೆ ಎದುರಾಗಿದೆ.
ಆದ್ದರಿಂದ ಯಾರಾದರೂ ನೆರವು ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿ ಈ ಬಡ ಪ್ರತಿಭೆ ಎದುರು ನೋಡುತ್ತಿದ್ದಾನೆ. ಹಾಗಾದರೆ ಆ ಬಡ ಪ್ರತಿಭೆಯ ದಾಖಲೆ ಮತ್ತು ಹಿನ್ನೆಲೆಯನ್ನು ಇಲ್ಲಿ ತಿಳಿಯಿರಿ.

ಈ ಬಡ ಕ್ರೀಡಾ ಪ್ರತಿಭೆಯ ಹೆಸರು ಈ. ನಾಗರಾಜು ಆಗಿದ್ದು, ಈತನ ಊರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪಾತಪ್ಪನಗುಡಿ ಆಗಿದೆ. ಏನಾದರೂ ಮಾಡಿ ಒಲಂಪಿಕ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸುವಾಸೆ ಇವರದ್ದಾನೆ. ಆದರೆ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಇಂತಹ ಬಡತನದ ನಡುವಿದ್ದುಕೊಂಡೇ ಸ್ನೇಹಿತರ ಬಾಡಿಗೆ ಮನೆಯಲ್ಲಿ ಪದವಿ ಮುಗಿಸಿಕೊಂಡು ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ಗಳಲ್ಲಿ ಪದಕ ಗೆಲ್ಲುತ್ತಲೇ ಬಂದಿದ್ದಾರೆ.
2018ರಲ್ಲಿ ನೇಪಾಳದಲ್ಲಿ ನಡೆದ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಪಡೆದಿರುವ ಈತನಿಗೆ ಇದೀಗ 2023ರ ಸೆಪ್ಟೆಂಬರ್ ತಿಂಗಳಲ್ಲಿ ಒಂದು ವಾರಗಳ ಕಾಲ ಯುರೋಪ್ ದೇಶದಲ್ಲಿ ನಡೆಯುವ ಕ್ರೀಡೆಯಲ್ಲಿ ಪಾಲ್ಗೊಳ್ಳಲು ನೆರವಿನ ಕೈಗಳು ಬೇಕಿದೆ. ಇವರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸುತ್ತಾ ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದಾರೆ.
ಆದರೆ ಇದೀಗ ಸೆಪ್ಟೆಂಬರ್‌ನಲ್ಲಿ ಯುರೋಪ್ ಖಂಡದ ಲಾಟ್ರಿಯಾದಲ್ಲಿ ನಡೆಯುವ ಕ್ರೀಡೆಯಲ್ಲಿ ಭಾಗವಹಿಸಲು ಈತನಿಗೆ ಬಡತನ ಅಡ್ಡಿಯಾಗಿದೆ. ಹಣದ ಸಮಸ್ಯೆ ಎದುರಿಸುತ್ತಿರುವ ನಾಗರಾಜ ಯಾರಾದರೂ ನೆರವು ನೀಡಲಿದ್ದಾರೆ ಎಂದು ಸಹಾಯದ ಹಸ್ತಗಳನ್ನು ಎದುರು ನೋಡುತ್ತಿದ್ದಾರೆ. ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 2ರ ವರೆಗೆ ಯುರೋಪ್ ಖಂಡದ ಲಾಟ್ರಿಯಾದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಮ್ಯಾರಥಾನ್ ಕ್ರೀಡಾಕೂಟಕ್ಕಾಗಿ ಈತ ತಯಾರಿ ನಡೆಸುತ್ತಿದ್ದಾನೆ.
ಆ ಕ್ರೀಡೆಯಲ್ಲಿ ಪದಕ ಗೆದ್ದು ಅರ್ಹತೆ ಪಡೆದುಕೊಂಡರೆ ವಿವಿಧ ದೇಶಗಳಲ್ಲಿ ಮುಂದೆ ನಡೆಯುವ ಡೈಮಂಡ್ ಲೀಗ್, ಮ್ಯಾರಥಾನ್ ಕ್ರಾಸ್ ಕಂಟ್ರಿ, ಹೀಗೆ ಅಥ್ಲೆಟಿಕ್ಸ್ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗುತ್ತದೆ. ಇಲ್ಲವಾದರೆ ಕ್ರೀಡೆಯಲ್ಲಿ ಪಾಲ್ಗೊಳ್ಳದೇ ದೂರ ಉಳಿಯುವುದರಿಂದ ಸಾಧನೆಯ ಹಾದಿ ಕಠಿಣವಾಗಬಹುದಾಗಿದೆ ಎಂಬುದು ಅವರ ಯೋಚನೆಯಾಗಿದೆ.
ಆದರೆ ಬರಿಗೈಯ್ಯಲ್ಲಿರುವ ಪ್ರತಿಭೆ ನಾಗರಾಜುಗೆ ನೆರವು ಲಭಿಸದಿದ್ದರೆ ಆತನ ಕನಸು ಕಮರಿ ಹೋಗಲಿದೆ. ಚಿತ್ರದುರ್ಗ ಜಿಲ್ಲೆಯ ಎಲ್ಲಾ ಶಾಸಕರು, ಸಂಸದರು ಸೇರಿ ನಿರ್ಲಕ್ಷ್ಯಕ್ಕೊಳಗಾಗಿರುವ ಕ್ರೀಡಾಪಟುವಿಗೆ ನೀವು ಬೆನ್ನು ತಟ್ಟಿ ಸಹಾಯ ಮಾಡಿದರೆ ವಿದೇಶದಲ್ಲಿ ಕೋಟೆ ನಾಡು ಚಿತ್ರದುರ್ಗದ ಪತಾಕೆ ಹಾರಲಿದೆ. ಹಾಗೆಯೇ ಜಿಲ್ಲೆಯ ಹೆಸರು ಕೂಡ ಉನ್ನತ ಮಟ್ಟಕ್ಕೇರುತ್ತದೆ.
ಬಾಡಿಗೆ ಮನೆಯಲ್ಲಿ ವಾಸ
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಪಾತಪ್ಪನಗುಡಿ ಕುಗ್ರಾಮದ ಇವರಿಗೆ ಸ್ವಂತ ಸೂರು ಕೂಡ ಇಲ್ಲದಂತಾಗಿದೆ. ಬಾಡಿಗೆ ಮನೆಯಲ್ಲಿ ವಾಸವಿರುವ ಈರಣ್ಣ-ಚಂದ್ರಮ್ಮ ದಂಪತಿ ಪುತ್ರ ಈ ನಾಗರಾಜು. ಕಾಡುಗೊಲ್ಲ ಬುಡಕಟ್ಟು ಸಮುದಾಯದ ಈರಣ್ಣ-ಚಂದ್ರಮ್ಮ ಇಬ್ಬರಿಗೂ ಅಕ್ಷರ ಜ್ಞಾನವಿಲ್ಲ. ತಂದೆ ಈರಣ್ಣ ಹೊಟ್ಟೆಪಾಡಿಗಾಗಿ ಸಣ್ಣಪುಟ್ಟ ಹಮಾಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇತ್ತ ತಾಯಿ ಕಳೆದುಕೊಂಡಿರುವ ನಾಗರಾಜ್ ಸ್ನೇಹಿತರ ಜೊತೆಗೆ ವಾಸವಾಗಿದ್ದಾನೆ.
ಭಾಗಿಯಾದ ಅಥ್ಲೆಟಿಕ್ಸ್ ಆಟಗಳು
ಮುಖ್ಯವಾಗಿ ದೂರದ ಓಟದ ಸ್ಪರ್ಧೆಗಳಾದ, 5000 ಮೀ, 10000 ಮೀ, 10 ಕಿ.ಮೀ, 12 ಕಿ.ಮೀ. ಗುಡ್ಡಗಾಡು ಓಟ, ಹಾಫ್ ಮ್ಯಾರಥಾನ್ (21 ಕಿ.ಮೀ.) ರೇಸ್‌ಗಳಲ್ಲಿ ನಾಗರಾಜು ಪಾಲ್ಗೊಳ್ಳುತ್ತಿದ್ದಾರೆ. ಈಗಾಗಲೇ ದಾವಣಗೆರೆ ವಿಶ್ವವಿದ್ಯಾಲಯ ಮಟ್ಟದ ಅಥ್ಲೆಟಿಕ್ಸ್‌ನ 5,000 ಮೀ., 10,000 ಮೀ. ಓಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಅಲ್ಲದೆ ಅಖಿಲ ಭಾರತೀಯ ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ ಕ್ರೀಡೆಯಲ್ಲಿ ಭಾಗವಹಿಸಿ ದ್ವಿತೀಯ ಮತ್ತು ನಾಲ್ಕನೇ ಸ್ಥಾನ ಪಡೆದಿದ್ದಾರೆ.
2018 ರಲ್ಲಿ ನೇಪಾಳದಲ್ಲಿ ನಡೆದ ಓಪನ್ ಅಂತಾರಾಷ್ಟ್ರೀಯ ಮಟ್ಟದ ಚಾಂಪಿಯನ್‌ಷಿಪ್‌ನ 5000 ಮೀ. ರೇಸ್‌ನಲ್ಲಿ ಚಿನ್ನದ ಪದಕ ಗಳಿಸಿದ್ದಾನೆ. ಕೋಲ್ಕತ್ತಾದಲ್ಲಿ ನಡೆದ ಅಂತಾರಾಷ್ಟ್ರೀಯ (ಇಂಟರ್ ನ್ಯಾಷನಲ್ ಅಸೋಸಿಯೇಷನ್ ಆಫ್ ಅಥ್ಲೆಟಿಕ್ಸ್ ಫೆಡರೇಷನ್-ಐಎಎಎಫ್) ಮ್ಯಾರಥಾನ್‌ನ 5 ಕಿ.ಮೀ. ಓಟದಲ್ಲಿ 4ನೇ ಸ್ಥಾನ, ಎಸ್‌ಎಂಟಿ ಗೋವಾದಲ್ಲಿನ ಅಂತಾರಾತಾಷ್ಟ್ರೀಯ ಮ್ಯಾರಥಾನ್‌ನ 5 ಕಿ.ಮೀ. ಓಟದಲ್ಲಿ ದ್ವೀತಿಯ, ಸಂಗೂರ್‌ನಲ್ಲಿ ನಡೆದ (ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ-ಎಎಫ್‌ಐ) ಅಥ್ಲೆಟಿಕ್ಸ್ ವಲ್ಡ್ ಚಾಂಪಿಯನ್‌ಷಿಪ್‌ನ 5000 ಮೀ. ಓಟದಲ್ಲಿ 4ನೇ ಸ್ಥಾನ ಪಡೆದಿದ್ದಾರೆ.
ಅಲ್ಲದೆ ಪಂಜಾಬ್‌ನ ಪಾಟಿಯಾಲದಲ್ಲಿ (ಎಎಫ್‌ಐ) ನಡೆದ ಸೀನಿಯರ್ ಚಾಂಪಿಯನ್‌ಷಿಪ್‌ನಲ್ಲಿ 4ನೇ ಸ್ಥಾನ, ವಿಯೆಟ್ನಾಮ್‌ನಲ್ಲಿ ನಡೆದ (ಐಎಎಎಫ್) ಅಂತಾರಾಷ್ಟ್ರೀಯ ಮ್ಯಾರಥಾನ್‌ನಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ. 2021ರಲ್ಲಿ ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ ಗ್ರ್ಯಾಂಡ್ ಪ್ರಿಕ್ಸ್ -3 ತಿರುವನಂತಪುರಂ, ಕೇರಳ, ಹಾಗೂ 2022ರಲ್ಲಿ ಭುವನೇಶ್ವರ್ ಒಡಿಸಾದಲ್ಲಿ ನಡೆದ ಫೆಡರೇಶನ್ ಆಫ್ ಇಂಡಿಯಾ ಗ್ರ್ಯಾಂಡ್ ಪ್ರಿಕ್ಸ್ ಸರಣಿಯಲ್ಲೂ ಭಾಗವಹಿಸಿದ್ದಾರೆ.
2019ರ ಡಿಸೆಂಬರ್‌ನಲ್ಲಿ ತೈವಾನ್‌ನಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಸ್ವಲ್ಪದರಲ್ಲೇ ಪದಕ ಗಳಿಸುವ ಅವಕಾಶದಿಂದ ವಂಚಿತರಾಗಿದ್ದಾರೆ. ಇದೀಗ 2023ರ ಸೆಪ್ಟೆಂಬರ್‌ನಲ್ಲಿ ಯುರೋಪ್ ದೇಶದಲ್ಲಿ ನಮ್ಮ ದೇಶದ ತ್ರಿವರ್ಣ ಧ್ವಜ ಹರಾಡಬೇಕಾದರೆ ಇವರಿಗೆ ಸಹಾಯದ ಅವಶ್ಯಕತೆ ತುಂಬಾ ಮುಖ್ಯವಾಗಿದೆ. ಈ ಪ್ರತಿಭೆಗೆ ಸಹಾಯ ಮಾಡಲು ಬಯಸುವ ನಮ್ಮ ಓದುಗರು, ಅವರ ಮೊಬೈಲ್‌ಗೆ ಕರೆ ಮಾಡಿ, ಬ್ಯಾಂಕ್ ಅಕೌಂಟ್ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.
ಕ್ರೀಡಾ ಸ್ಪರ್ಧಿಯ ವಿವರ
ಹೆಸರು: ನಾಗರಾಜ್.ಇ
ಫೋನ್ ನಂ: 7899456950, 7899456950
" ಒನ್ ಇಂಡಿಯಾ ನ್ಯೂಸ್ ಜೊತೆ ಮಾತನಾಡಿದ ಹಳ್ಳಿ ಪ್ರತಿಭೆ ನಾಗರಾಜ್, ಒಲಿಂಪಿಕ್ಸ್ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂಬುದು ನನ್ನ ಮಹದಾಸೆಯಾಗಿದೆ. ನಾನು ತುಂಬಾ ಬಡತನದಿಂದ ಬಂದಿದ್ದೇನೆ. ನಮಗೆ ಯಾವುದೇ ಸ್ವಂತ ಮನೆ, ಜಮೀನು ಕೂಡ ಇಲ್ಲ. ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಗೆದ್ದಿದ್ದೇನೆ. ನಿಮ್ಮ ಸಹಾಯದ ಕೈಗಳು ಮುಂದೆ ಬಂದರೆ ಈ ಬಡ ಪ್ರತಿಭೆ ಮತ್ತೆ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮೂಲಕ ಒಲಿಂಪಿಕ್ಸ್‌ನಲ್ಲಿ ಪದಕ ಗಳಿಸಿ ತಮ್ಮೆಲ್ಲರಿಗೂ ಅರ್ಪಿಸುತ್ತೇನೆ," ಎಂದು ತಿಳಿಸಿದರು.
ಈಡೇರದ ಭರವಸೆ
ನೇಪಾಳದಿಂದ ಚಿನ್ನ ಗೆದ್ದು ತವರಿಗೆ ಆಗಮಿಸಿದ್ದ ನಾಗರಾಜ್ ಅವರನ್ನು ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಸನ್ಮಾನಿಸಿ ಗೌರವಿಸಿದ್ದರು. ಅಂದು ತನ್ನ ಕ್ಷೇತ್ರದ ಕ್ರೀಡಾ ಪ್ರತಿಭೆಗೆ ಶಾಸಕರು ಮನೆ ನಿರ್ಮಾಣ ಸೇರಿದಂತೆ ಮುಂದಿನ ಕ್ರೀಡೆಗಳಲ್ಲಿ ಭಾಗವಹಿಸಲು ಆರ್ಥಿಕ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರಂತೆ. ಆದರೆ ಶಾಸಕರ ಭರವಸೆ ಭರವಸೆಯಾಗಿಯೇ ಉಳಿದಿದೆ. ಮತ್ತೊಂದೆಡೆ ಬಡ ಪ್ರತಿಭೆಯು ಜಿಲ್ಲೆಯ ಸಂಸದ ಎ. ನಾರಾಯಣಸ್ವಾಮಿ ಅವರನ್ನು ಭೇಟಿ ಮಾಡಿ ಸಹಾಯ ಕೇಳಿದ್ರಂತೆ. ಸಂಸದರು ಸಹ ಮನೆ ನಿರ್ಮಾಣ ಮಾಡಿಕೊಡಲಾಗುವುದೆಂದು ನೀಡಿದ್ದ ಭರವಸೆ ಹಾಗೆಯೇ ಉಳಿದಿದೆ ಎನ್ನಲಾಗುತ್ತಿದೆ.












Click it and Unblock the Notifications