Dinesh Karthik: ಆರ್ಸಿಬಿ ಫ್ಯಾನ್ಸ್ ಗ್ರೇಟ್... ಆದರೆ ದಿನೇಶ್ ಕಾರ್ತಿಕ್ ಹೇಳಿದ್ದೇನು?
ಆರ್ಸಿಬಿ ತಂಡದ ಆಟಗಾರರಿಗಿಂತ ಅದರ ನಿಷ್ಠಾವಂತ ಅಭಿಮಾನಿಗಳಿಂದಲೇ ಹೆಚ್ಚಾಗಿ ಹೆಸರು ಮಾಡಿದೆ ಎಂದರೆ ತಪ್ಪಾಗಲಾರದು. 16 ವರ್ಷದಿಂದ ಕಪ್ ಗೆಲ್ಲದೇ ಇದ್ದರೂ ಅಭಿಮಾನಿಗಳ ಅಭಿಮಾನ ಮಾತ್ರ ಒಂಚೂರು ಕಡಿಮೆಯಾಗಿಲ್ಲ.
ಆರ್ಸಿಬಿ ತಂಡದಲ್ಲಿ ಫಿನಿಷರ್, ಡಿಕೆ ಬಾಸ್ ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ದಿನೇಶ್ ಕಾರ್ತಿಕ್ ಈಗ ಅಭಿಮಾನಿಗಳ ಬಗ್ಗೆ ಮಾತನಾಡಿದ್ದಾರೆ. ಆರ್ ಅಶ್ವಿನ್ ಅವರ ಜೊತೆ ಯೂಟ್ಯೂಬ್ ಚಾನೆಲ್‌ನಲ್ಲಿ ಸಂದರ್ಶನದಲ್ಲಿ ಭಾಗವಹಿಸಿ ಮಾತನಾಡಿರುವ ದಿನೇಶ್ ಕಾರ್ತಿಕ್, ತಮ್ಮ ಐಪಿಎಲ್ ಕ್ರಿಕೆಟ್ ಪ್ರಯಾಣದ ಬಗ್ಗೆ ಮಾತನಾಡಿದ್ದಾರೆ.

ಆರ್ಸಿಬಿ ಅಭಿಮಾನಿಗಳನ್ನು ಹೊಗಳಿದ ಡಿಕೆ
ಆರ್ಸಿಬಿ ಅಭಿಮಾನಿಗಳ ಬಗ್ಗೆ ಮಾತನಾಡಿದ ದಿನೇಶ್ ಕಾರ್ತಿಕ್, ಅವರು ಅಭಿಮಾನಿಗಳು ಎನ್ನುವುದಕ್ಕಿಂತ ಕುಟುಂಬದ ಸದಸ್ಯರಂತೆ ಎಂದಿದ್ದಾರೆ. ತಮ್ಮ ತಂಡವನ್ನು, ತಂಡದ ಆಟಗಾರರನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ. ಯಾರಾದರೂ ಬೇರೆ ಅಭಿಮಾನಿಗಳು ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಇವರೇ ಜಗಳ ಮಾಡುತ್ತಾರೆ, ನಮ್ಮನ್ನು ಸಮರ್ಥನೆ ಮಾಡಿಕೊಳ್ಳುತ್ತಾರೆ, ಅದೇ ಸಮಯದಲ್ಲಿ ಅವರೇ ನಮಗೆ ಉಗಿಯುತ್ತಾರೆ ಎಂದು ಹೇಳಿದ್ದಾರೆ.
ಆದರೆ, ನಮ್ಮನ್ನು ಬೇರೆ ಅಭಿಮಾನಿಗಳ ಮುಂದೆ ಎಂದಿಗೂ ಬಿಟ್ಟುಕೊಡುವುದಿಲ್ಲ. ತಮ್ಮದೇ ಕುಟುಂಬದ ಸದಸ್ಯನಂತೆ ಭಾವಿಸುತ್ತಾರೆ. ಚಿನ್ನಸ್ವಾಮಿಯಲ್ಲಿ ಅಭಿಮಾನಿಗಳು ಡಿಕೆ, ಡಿಕೆ ಎಂದು ಕೂಗಿದಾಗ ನಾನು ಜಗತ್ತಿನ ಶ್ರೇಷ್ಠ ಕ್ರಿಕೆಟಿಗೆ ಎನ್ನುವ ಭಾವನೆ ಬರುತ್ತದೆ ಎಂದಿದ್ದಾರೆ.
ಸಿಎಸ್‌ಕೆ ತಂಡಕ್ಕೆ ಆಡುವ ಕನಸಿತ್ತು
ತಮಿಳುನಾಡಿನವರೇ ಆದ ದಿನೇಶ್ ಕಾರ್ತಿಕ್ ಅವರಿಗೆ ಮೊದಲ ಆವೃತ್ತಿಯಲ್ಲೇ ಸಿಎಸ್‌ಕೆ ತಂಡಕ್ಕೆ ಆಯ್ಕೆಯಾಗುವ ವಿಶ್ವಾಸ ಇತ್ತಂತೆ, ಆದರೆ ತಂಡಕ್ಕೆ ಆಯ್ಕೆಯಾಗದೇ ಇರುವುದು ಬೇಸರ ತರಿಸಿತು. ಈಗಲೂ ತಂಡದ ಮೇಲೆ ಗೌರವ ಇದೆ, ಆದರೆ ತವರಿನ ತಂಡಕ್ಕೆ ಆಡಲು ಆಗಲಿಲ್ಲ ಎನ್ನುವ ಬೇಸರವೂ ಇದೆ ಎಂದು ಹೇಳಿದ್ದಾರೆ.
2013ರಲ್ಲಿ ಮುಂಬೈ ಇಂಡಿಯನ್ಸ್ ಮೊದಲ ಬಾರಿಗೆ ಐಪಿಎಲ್ ಗೆದ್ದಾಗ ದಿನೇಶ್ ಕಾರ್ತಿಕ್ ತಂಡದಲ್ಲಿದ್ದರು, ಆದರೆ ಮುಂದಿನ ವರ್ಷವೇ ಅವರನ್ನು ತಂಡದಿಂದ ಕೈಬಿಡಲಾಯಿತು. ಆ ಬಗ್ಗೆ ನನಗೆ ಈಗಲೂ ವಿಷಾದವಿದೆ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.
ಮುಂಬೈ ಇಂಡಿಯನ್ಸ್ ಐಪಿಎಲ್ ಪಂದ್ಯಾವಳಿಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದೆ. ಅವರದ್ದೇ ಆದ ಮೈದಾನವಿದ್ದು, ತಂಡದ ಆಟಗಾರರು ವರ್ಷದ 365 ದಿನವೂ ಅಲ್ಲಿ ಅಭ್ಯಾಸ ಮಾಡಬಹುದು, ಕೋಚ್‌ಗಳು, ಫಿಸಿಯೋಗಳು ನಿಮಗೆ ಎಲ್ಲಾ ದಿನ ಸಹಾಯ ಮಾಡಲು ಲಭ್ಯವಿರುತ್ತಾರೆ. ಬೇರೆ ದಿನಗಳಲ್ಲಿ ಅಲ್ಲಿ ಹೋಗಿ ಅಭ್ಯಾಸ ಮಾಡಿದರೆ ವಿಮಾನ ಪ್ರಯಾಣದ ವೆಚ್ಚವನ್ನೂ ಕೂಡ ಅವರೇ ನೀಡುತ್ತಾರೆ, ಅದಕ್ಕಾಗಿಯೇ ಅವರು ಐದು ಬಾರಿ ಚಾಂಪಿಯನ್ ಆಗಿರುವುದು, ಇದೇ ಕಾರಣಕ್ಕೆ ಅವರು ಯಶಸ್ವಿ ಫ್ರಾಂಚೈಸ್ ಆಗಿರುವುದು ಎಂದು ಹೇಳಿದ್ದಾರೆ.
ಇದರ ಜೊತೆಗೆ ಕೆಕೆಆರ್ ತಂಡಕ್ಕಾಗಿ ಆಡಿದಾಗ, ತಂಡದ ನಾಯಕತ್ವ ವಹಿಸಿಕೊಂಡಿದ್ದಾಗಿನ ಬಗ್ಗೆ ಕೂಡ ಮಾತನಾಡಿದ್ದಾರೆ.












Click it and Unblock the Notifications