RCB: ಈ ಮೂವರು ಕರ್ನಾಟಕದ ವೇಗಿಗಳ ಮೇಲೆ ಆರ್‌ಸಿಬಿ ಕಣ್ಣು
ಇಂಡಿಯನ್ ಪ್ರೀಮಿಯರ್ ಲೀಗ್ ( IPL) 2025ರ ಮೆಗಾ ಹರಾಜಿಗೆ ದಿನಗಣನೆ ಶುರುವಾಗಿದೆ. ನವೆಂಬರ್ 24, 25 ರಂದು ಜೆಡ್ಡಾದಲ್ಲಿ ಈ ಬಾರಿಯ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. 1,500ಕ್ಕೂ ಅಧಿಕ ಸಂಖ್ಯೆಯ ಆಟಗಾರರು ಈ ಬಾರಿ ಹರಾಜಿನಲ್ಲಿ ನೊಂದಾಯಿಸಿಕೊಂಡಿದ್ದು ಅದೃಷ್ಟ ಪರೀಕ್ಷಿಸಿಕೊಳ್ಳಲಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಈ ಬಾರಿ ಮೆಗಾ ಹರಾಜಿಗೆ ಮುನ್ನ ಮೂವರು ಆಟಗಾರರನ್ನು ಮಾತ್ರ ಉಳಿಸಿಕೊಂಡಿದ್ದು, ಬಲಿಷ್ಠ ತಂಡ ಕಟ್ಟುವ ಉತ್ಸಾಹದಲ್ಲಿದೆ.
ಐಪಿಎಲ್‌ನ ಆರಂಭದ ವರ್ಷಗಳಲ್ಲಿ ಆರ್‌ಸಿಬಿ ತಂಡದಲ್ಲಿ ಕರ್ನಾಟಕ ಆಟಗಾರರೇ ಹೆಚ್ಚಾಗಿದ್ದರು. ಬೌಲಿಂಗ್ ಕೂಡ ಅತ್ಯುತ್ತಮವಾಗಿತ್ತು. ವಿಜಯ್ ಮಲ್ಯ ಬಳಿಕ ತಂಡದ ಆಡಳಿತ ಮಂಡಳಿ ಬದಲಾಗಿದ್ದು, ಕನ್ನಡಿಗರಿಗೆ ತಂಡದಲ್ಲಿ ಅವಕಾಶ ಕಡಿಮೆಯಾಯಿತು. ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ಮಯಾಂಕ್ ಅಗರ್ವಾಲ್, ರಾಬಿನ್ ಉತ್ತಪ್ಪ ಸೇರಿದಂತೆ ಅನೇಕ ಪ್ರತಿಭಾವಂತರನ್ನು ಆರ್ ಸಿಬಿ ಕೈಬಿಟ್ಟಿದ್ದು ಕನ್ನಡಿಗೆ ಸಿಟ್ಟಿಗೆ ಕಾರಣವಾಗಿತ್ತು.

ಈ ಬಾರಿ ಮೆಗಾ ಹರಾಜಿಗೆ ಮೊದಲು ಕರ್ನಾಟಕದ ಆಟಗಾರರಿಗೆ ತಂಡದಲ್ಲಿ ಪ್ರಾಮುಖ್ಯತೆ ನೀಡಬೇಕು ಎಂದು ಸರ್ಕಾರ ಸೂಚನೆ ಕೊಟ್ಟಿರುವುದಾಗಿ ವರದಿಯಾಗಿದೆ. ಒಂದು ವೇಳೆ ಸರ್ಕಾರದ ಸೂಚನೆಯನ್ನು ಅನುಸರಿಸಲು ಆರ್ ಸಿಬಿ ಮುಂದಾದರೆ, ಹಲವು ಕರ್ನಾಟಕದ ಆಟಗಾರರಿಗೆ ಮಣೆ ಹಾಕುವ ಸಾಧ್ಯತೆ ಇದೆ.
ಈ ವೇಗಿಗಳಿಗೆ ಸಿಗುತ್ತಾ ಅವಕಾಶ
ಕರ್ನಾಟಕದ ಹಲವು ಪ್ರತಿಭಾವಂತ ಆಟಗಾರರು ವಿವಿಧ ತಂಡಗಳಲ್ಲಿ ಆಡಿದ್ದಾರೆ, ಅನುಭವಿ ಮತ್ತು ಯುವ ಆಟಗಾರರ ದೊಡ್ಡ ಪಡೆಯೇ ಇದೆ. ಆರ್ ಸಿಬಿ ಉತ್ತಮ ಬೌಲರ್ ಗಳಿಗೆ ಹುಡುಕಾಡುತ್ತಿದ್ದು, ರಾಜ್ಯದ ಪರ ಆಡಿ ಗಮನ ಸೆಳೆಯುತ್ತಿರುವ ಈ ಮೂವರು ವೇಗಿಗಳನ್ನು ತಂಡಕ್ಕೆ ಸೇರಿಸಿಕೊಳ್ಳಲು ಆರ್ ಸಿಬಿ ಯೋಜಿಸಬಹುದಾಗಿದೆ.
ವೈಶಾಖ್ ವಿಜಯ್ ಕುಮಾರ್
ಆರ್ ಸಿಬಿ ತಂಡದಲ್ಲಿ ಎರಡು ವರ್ಷ ಆಡಿರುವ ವೈಶಾಖ್ ವಿಜಯ್ ಕುಮಾರ್ ಪ್ರತಿಭಾವಂತ ವೇಗದ ಬೌಲರ್. ಉತ್ತಮ ಪ್ರದರ್ಶನ ನೀಡುವ ಮೂಲಕ ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ನಕಲ್ ಬಾಲ್, ಸ್ಲೋವರ್ ಬಾಲ್ ಸೇರಿದಂತೆ ಹಲವು ವಿಭಿನ್ನ ಶೈಲಿಯನ್ನು ಹೊಂದಿದ್ದು, ಆರ್ ಸಿಬಿ ತಂಡದ ಪ್ರಮುಖ ಬೌಲರ್ ಆಗಿದ್ದರು. ಮೆಗಾ ಹರಾಜಿಗೆ ಮುನ್ನ ಅವರನ್ನು ಬಿಡುಗಡೆ ಮಾಡಿದ್ದರು. ಅವರನ್ನು ಮತ್ತೆ ತಂಡಕ್ಕೆ ಕರೆತರಲು ಫ್ರಾಂಚೈಸಿ ಯೋಜಿಸಿದೆ.
ವಿದ್ವತ್ ಕಾವೇರಪ್ಪ
ಪಂಜಾಬ್ ಕಿಂಗ್ಸ್ ತಂಡದಲ್ಲಿ ಆಡಿರುವ ವಿದ್ವತ್ ಕಾವೇರಪ್ಪ, ಕರ್ನಾಟಕದ ಭರವಸೆಯ ವೇಗದ ಬೌಲರ್ ಆಗಿದ್ದಾರೆ. ರಣಜಿ ಟ್ರೋಫಿಯಲ್ಲಿ ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದು, ಭವಿಷ್ಯದ ದೃಷ್ಟಿಯಿಂದ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಆರ್ ಸಿಬಿ ಯೋಜಿಸಬಹುದು.
ವಾಸುಕಿ ಕೌಶಿಕ್
ಕರ್ನಾಟಕದ ಮತ್ತೊಬ್ಬ ಭರವಸೆಯ ವೇಗದ ಬೌಲರ್ ವಾಸುಕಿ ಕೌಶಿಕ್, ಸದ್ಯ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು ಫ್ರಾಂಚೈಸಿಗಳ ಗಮನ ಸೆಳೆದಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಿರುವ ಅನುಭವವಿದ್ದು, ಈ ವರ್ಷ ಅಲ್ಲದೇ ಇದ್ದರೂ ಮುಂದಿನ ವರ್ಷಗಳಲ್ಲಿ ಅವರು ಆರ್ ಸಿಬಿ ತಂಡದ ಪ್ರಮುಖ ಅಸ್ತ್ರ ಆಗಬಲ್ಲ ಸಾಮರ್ಥ್ಯ ಹೊಂದಿದ್ದಾರೆ.












Click it and Unblock the Notifications