Team India: ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್, ಫೀಲ್ಡಿಂಗ್ ಕೋಚ್ ವಜಾ
ಐಪಿಎಲ್ 2025ರ ಪಂದ್ಯಾವಳಿ ಬಳಿಕ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಲು ಪ್ರಯಾಣ ಬೆಳೆಸಲಿದೆ. ಮುಂದಿನ ಟೆಸ್ಟ್ ಸರಣಿಗೆ ಮುನ್ನವೇ ಭಾರತ ತಂಡದ ಬ್ಯಾಟಿಂಗ್ ಕೋಚ್ ಅಭಿಷೇಕ್ ನಾಯರ್ ಮತ್ತು ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಅವರನ್ನು ವಜಾಗೊಳಿಸಲಾಗಿದೆ. ದೈನಿಕ್ ಜಾಗರಣ್ ಈ ಬಗ್ಗೆ ವರದಿ ಮಾಡಿದ್ದು, ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಹೀನಾಯ ಪ್ರದರ್ಶನ ನೀಡಿದ ಬಳಿಕ ಇವರಿಬ್ಬರ ತಲೆದಂಡವಾಗಿದೆ ಎಂದು ವರದಿವಾಗಿದೆ.
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಭಾರತದ ಬ್ಯಾಟಿಂಗ್ ವಿಫಲವಾಗಿತ್ತು. ಟೀಂ ಇಂಡಿಯಾ ಪ್ರದರ್ಶನಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪುವ ಅವಕಾಶವನ್ನು ಭಾರತ ತಂಡ ಕಳೆದುಕೊಂಡಿತು.

ಅಭಿಷೇಕ್ ನಾಯರ್ ಮತ್ತು ಟಿ. ದಿಲೀಪ್ ವಜಾ
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ಸೋಲಿನ ಬಳಿಕ ಭಾರತ ತಂಡ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದು ಸಂಭ್ರಮಿಸಿದೆ. ಟೀಮ್ ಇಂಡಿಯಾ ಸೇರಿದ ಸೇರಿದ ಎಂಟು ತಿಂಗಳಲ್ಲೇ ಬಿಸಿಸಿಐ ನಾಯರ್ ಅವರಿಗೆ ಮನೆ ದಾರಿ ತೋರಿಸಿದೆ ಎಂದು ವರದಿಯಾಗಿದೆ. ಈ ಜೋಡಿಯ ಹೊರತಾಗಿ, ತರಬೇತುದಾರ ಸೋಹಮ್ ದೇಸಾಯಿ ಅವರನ್ನು ಸಹ ವಜಾ ಮಾಡಲಾಗಿದೆ.
ದೈನಿಕ್ ಜಾಗರಣ್ ವರದಿಯ ಪ್ರಕಾರ ಪ್ರಸ್ತುತ ಪಟ್ಟಿಯಲ್ಲಿ ಯಾವುದೇ ತಕ್ಷಣದ ಬದಲೀ ಕೋಚ್ ನೇಮಕ ಮಾಡುವುದಿಲ್ಲ. ಏಕೆಂದರೆ ಸೀತಾಂಶು ಕೋಟಕ್ ಈಗಾಗಲೇ ತಂಡದೊಂದಿಗೆ ಬ್ಯಾಟಿಂಗ್ ಕೋಚ್ ಆಗಿ ಸಂಬಂಧ ಹೊಂದಿದ್ದಾರೆ ಮತ್ತು ಫೀಲ್ಡಿಂಗ್ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಬಹುದಾದ ರಯಾನ್ ಟೆನ್ ಡೋಸ್ಚೇಟ್ ಕೂಡ ಇದ್ದಾರೆ.
ದಕ್ಷಿಣ ಆಫ್ರಿಕಾ ಆಟಗಾರ ಆಡ್ರಿಯನ್ ಲೆ ರೌಕ್ಸ್ ಅವರು ಸೋಹಮ್ ಅವರ ಬದಲಾಗಿ ಜವಾಬ್ದಾರಿ ವಹಿಸಿಕೊಳ್ಳಬಹುದು. ದಕ್ಷಿಣ ಆಫ್ರಿಕಾದ ಆಟಗಾರ ಪ್ರಸ್ತುತ ಪಂಜಾಬ್ ಕಿಂಗ್ಸ್ ತಂಡದ ಜೊತೆ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಕೆಕೆಆರ್ ತಂಡದಲ್ಲಿ ಕೆಲಸ ಮಾಡಿದ್ದಾರೆ ಎನ್ನುವುದು ಗಮನಾರ್ಹ ಸಂಗತಿ. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಬಿಸಿಸಿಐನಿಂದ ಅಧಿಕೃತ ದೃಢೀಕರಣ ಇನ್ನೂ ಬಂದಿಲ್ಲ.
ಭಾರತ ತಂಡದ ಬ್ಯಾಟಿಂಗ್ ಸಮಸ್ಯೆ
ಭಾರತ ಮತ್ತು ಆಸ್ಟ್ರೇಲಿಯಾ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್ ಹೊರತುಪಡಿಸಿ, ಇತರ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾದರು. ಜೈಸ್ವಾಲ್ 5 ಪಂದ್ಯಗಳಲ್ಲಿ 391 ರನ್ ಗಳಿಸಿದರು. ನಿತೀಶ್ ಕುಮಾರ್ ರೆಡ್ಡಿ 298 ರನ್ ಗಳಿಸಿದರು. ವಿರಾಟ್ ಕೊಹ್ಲಿ ಕೇವಲ 190 ರನ್ ಗಳಿಸುವಲ್ಲಿ ಯಶಸ್ವಿಯಾದರೆ, ನಾಯಕ ರೋಹಿತ್ ಶರ್ಮಾ ಮೂರು ಪಂದ್ಯಗಳಲ್ಲಿ 31 ರನ್ ಗಳಿಸಿದರು.
ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರೊಂದಿಗಿನ ಭಿನ್ನಾಭಿಪ್ರಾಯಗಳೇ ಸಿಬ್ಬಂದಿ ವಜಾಕ್ಕೆ ಕಾರಣ ಎನ್ನುವ ಅನುಮಾನ ವ್ಯಕ್ತವಾಗಿದೆ. ಗೌತಮ್ ಗಂಭೀರ್ ತಮ್ಮ ಆಪ್ತರನ್ನು ಕೋಚಿಂಗ್ ಸಿಬ್ಬಂದಿಯಾಗಿ ಹೊಂದಲು ಆಸಕ್ತಿ ಹೊಂದಿದ್ದು ಈ ಕಾರಣಕ್ಕೆ ಉಳಿದ ಕೋಚ್‌ಗೆ ಕೋಕ್ ನೀಡಲಾಗಿದೆ ಎಂದು ವರದಿಯಾಗಿದೆ.












Click it and Unblock the Notifications