ICC World Cup: ಪಾಕಿಸ್ತಾನಕ್ಕೆ ಶಾಕ್ ಕೊಡುತ್ತಾ ಅಫ್ಘಾನಿಸ್ತಾನ?
ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023ರ ಟೂರ್ನಿ ಪ್ರತಿ ಪಂದ್ಯಕ್ಕೂ ತಿರುವು ಪಡೆಯುತ್ತಾ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ಉಣಬಡಿಸುತ್ತಿದೆ. ಅದ್ರಲ್ಲೂ 2011ರ ಬಳಿಕ ಭಾರತ 2023ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ಆಯೋಜಿಸುವ ಜವಾಬ್ದಾರಿಯ ಹೊತ್ತುಕೊಂಡಿದೆ. ಹೀಗಿದ್ದಾಗ ಪಾಕಿಸ್ತಾನ ತಂಡ ಒಂದು ಪಂದ್ಯ ಚೆನ್ನಾಗಿ ಆಡಿದ್ರೆ, ಮತ್ತೆ ಒಂದು ಪಂದ್ಯದಲ್ಲಿ ಹೀನಾಯ ಪ್ರದರ್ಶನ ತೋರುತ್ತಿದೆ.
ಹೌದು, ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯತ್ತಿರುವ 2023ರ ಐಸಿಸಿ ಏಕದಿನ ವಿಶ್ವಕಪ್‌ನ 22ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಪಾಕಿಸ್ತಾನ ಸವಾಲಿನ ಮೊತ್ತ ಕಲೆಹಾಕಿ ಭರವಸೆ ಮೂಡಿಸಿತ್ತು. ಆದ್ರೆ ಪಾಕಿಸ್ತಾನ ಟೀಂನ ಹಣೆಬರಹ ಗೊತ್ತಾಗಿದ್ದು 2ನೇ ಇನ್ನಿಂಗ್ಸ್ ಶುರುವಾದಾಗ. ಪಾಕಿಸ್ತಾನ ತಂಡ 283 ರನ್‌ಗಳ ಗುರಿ ನೀಡಿದ್ರು ಅಫ್ಘಾನಿಸ್ತಾನ ತಂಡವನ್ನ ಕಟ್ಟಿಹಾಕಲು ಪರದಾಡುತ್ತಿದೆ. ಅದರಲ್ಲೂ ಕ್ರಿಕೆಟ್ ಶಿಶು ಅಫ್ಘಾನಿಸ್ತಾನ ತಂಡ ಪಾಕಿಸ್ತಾನ ತಂಡಕ್ಕೆ ಈ ಪಂದ್ಯದಲ್ಲಿ ಪಾಠ ಕಲಿಸುವುದು ಬಹುತೇಕ ಪಕ್ಕಾ ಆಗಿದೆ.

ಪಾಕಿಸ್ತಾನ VS ಅಫ್ಘಾನಿಸ್ತಾನ ಮ್ಯಾಚ್ ಏನಾಯ್ತು?
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ತಂಡ, ನಿಗದಿತ 50 ಓವರ್‌ಗಳಲ್ಲಿ ಬಾಬರ್ ಅಜಂ ಮತ್ತು ಅಬ್ದುಲ್ಲಾ ಶಫೀಕ್ ಅವರ ಅರ್ಧಶತಕದ ನೆರವಿನಿಂದ 7 ವಿಕೆಟ್‌ಗಳ ನಷ್ಟಕ್ಕೆ 282 ರನ್ ಗಳಿಸಿತ್ತು, ಈ ಮೂಲಕ ಅಫ್ಘಾನಿಸ್ತಾನಕ್ಕೆ 283 ರನ್ ಗುರಿ ನೀಡಿದೆ. ಆದ್ರೆ ಈ ಗುರಿಯ ಬೆನ್ನುಹತ್ತಿದ ಅಫ್ಘಾನಿಸ್ತಾನ ತಂಡ, ಪಾಕಿಸ್ತಾನದ ಬೌಲರ್‌ಗಳ ಬೆವರು ಇಳಿಸುತ್ತಿದೆ. ಹೀಗೆ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ರೋಚಕ ಹಂತ ತಲುಪಿ, ಈಗಾಗಲೇ ಅಫ್ಘಾನಿಸ್ತಾನ ಟೀಂನ ಆರಂಭಿಕ ಆಟಗಾರರು ಅರ್ಧಶತಕ ಗಳಿಸಿ ತಂಡದ ಗೆಲುವಿಗೆ ಕಹಳೆ ಮೊಳಗಿಸಿದ್ದಾರೆ.
ಏನ್ ಗುರೂ ಪಾಕಿಸ್ತಾನದ ಕಥೆ?
ಪಾಕಿಸ್ತಾನದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಅಬ್ದುಲ್ಲಾ ಶಫೀಕ್ ಮತ್ತು ಇಮಾಮ್-ಉಲ್-ಹಕ್ ಜೋಡಿ ಮೊದಲ ವಿಕೆಟ್‌ಗೆ 56 ರನ್‌ಗಳ ಜೊತೆಯಾಟ ನೀಡಿದರು. 22 ಎಸೆತಗಳಲ್ಲಿ 17 ರನ್ ಗಳಿಸಿ ಆಡುತ್ತಿದ್ದ ಇಮಾಮ್-ಉಲ್-ಹಕ್ ಅಜ್ಮತುಲ್ಲಾ ಒಮರ್ಜಾಯ್ ಬೌಲಿಂಗ್‌ಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ನಾಯಕ ಬಾಬರ್ ಅಜಂ ಅಫ್ಘಾನಿಸ್ತಾನ ಬೌಲರ್‌ಗಳನ್ನ ಕಾಡಿದ್ರು. ಈ ವೇಳೆ 75 ಎಸೆತಗಳಲ್ಲಿ 5 ಬೌಂಡರಿ & 2 ಸಿಕ್ಸರ್‌ಗಳ ಮೂಲಕ 58 ರನ್ ಬಾರಿಸಿ ಔಟಾದರು ಅಬ್ದುಲ್ಲಾ ಶಫೀಕ್.
ಆ ಬಳಿಕ ಮೊಹಮ್ಮದ್ ರಿಜ್ವಾನ್ ಕೇವಲ 8 ರನ್‌ಗಳಿಗೆ ವಿಕೆಟ್‌ನ ಒಪ್ಪಿಸಿದರು. ಬಾಬರ್ ಅಜಂ 92 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ 74 ರನ್ ಗಳಿಸಿದ್ರೆ, ಸೌದ್ ಶಕೀಲ್ 34 ಎಸೆತಗಳಲ್ಲಿ 3 ಬೌಂಡರಿ ನೆರವಿನಿಂದ 25 ರನ್ ಗಳಿಸಿದ್ರು. ಹೀಗೆ ಎದ್ದೂ.. ಬಿದ್ದು.. ಪಾಕ್ ತಂಡ 282 ರನ್ ಗಳಿಸಿದೆ. ಆದ್ರೆ ಸವಾಲಿನ ಮೊತ್ತ ಕೊಟ್ಟರೂ ಪಾಕಿಸ್ತಾನ ತಂಡ ಗೆಲುವು ಕಾಣುವಲ್ಲಿ ಪರದಾಡುತ್ತಿದೆ. ಅಫ್ಘಾನಿಸ್ತಾನ ತಂಡದ ದಾಂಡಿಗರು ಪಾಕಿಸ್ತಾನ ಬೌಲಿಂಗ್‌ಗೆ ತಕ್ಕ ಉತ್ತರ ನೀಡುತ್ತಿದ್ದಾರೆ.

ಇತ್ತೀಚಿನ ಮಾಹಿತಿ ಪ್ರಕಾರ ಅಫ್ಘಾನಿಸ್ತಾನ ತಂಡ ಒಟ್ಟು 152 ರನ್ ಗಳಿಸಿ ಕೇವಲ ಒಂದೇ ಒಂದು ವಿಕೆಟ್ ಕಳೆದುಕೊಂಡಿದೆ. ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಜ್ ಒಟ್ಟು 53 ಬಾಲ್‌ಗಳಲ್ಲಿ 65 ರನ್ ಗಳಿಸಿ ಔಟಾಗಿದ್ದಾರೆ. ಇದೀಗ ಮತ್ತೊಬ್ಬ ಓಪನರ್, ಇಬ್ರಾಹಿಂ ಜದ್ರಾನ್ 75 ರನ್ ಗಳಿಸಿ ಆಟವಾಡುತ್ತಿದ್ದಾರೆ. ಹಾಗೇ ಇಬ್ರಾಹಿಂ ಜದ್ರಾನ್‌ಗೆ ರಹಮತ್ ಶಾ, ಸಾಥ್ ನೀಡಿ ಆಟವಾಡುತ್ತಿದ್ದಾರೆ. ಈ ಮೂಲಕ ಪಾಕಿಸ್ತಾನ ನೀಡಿರುವ ಸವಾಲಿನ ಮೊತ್ತ ಛಿದ್ರ ಮಾಡುವ ಹುಮ್ಮಸ್ಸಿನಲ್ಲಿದೆ ಅಫ್ಘಾನಿಸ್ತಾನ ಕ್ರಿಕೆಟ್ ತಂಡ.












Click it and Unblock the Notifications