ಚಿಕ್ಕಬಳ್ಳಾಪುರದಲ್ಲಿಂದು T20I ಲೀಗ್: ಕಣದಲ್ಲಿ ಅಬ್ಬರಿಸಲಿದ್ದಾರೆ ಸಚಿನ್, ಯುವಿ, ಜಯಸೂರ್ಯ
ಚಿಕ್ಕಬಳ್ಳಾಪುರ ಜನವರಿ 18: ಮಾನವ ಸೇವಾ ಸ್ಫೂರ್ತಿಯನ್ನು ಎತ್ತರಕ್ಕೊಯ್ಯುವ ಸದುದ್ದೇಶದೊಂದಿಗೆ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ನಿರ್ಮಾಣವಾಗಿರುವ ನೂತನ ಕ್ರೀಡಾಂಗಣದಲ್ಲಿ ಇಂದು (ಜ.18) ಕ್ರಿಕೆಟ್ ಪಂದ್ಯ ಆಯೋಜಿಸಲಾಗಿದ್ದು ಅಂತಾರಾಷ್ಟ್ರೀಯ ಕ್ರಿಕೆಟ್ ದಿಗ್ಗಜರ ಸಮಾಗಮ ಆಗಲಿದೆ.
ಸತ್ಯಸಾಯಿ ಗ್ರಾಮದಲ್ಲಿ ನಿರ್ಮಾಣವಾಗಿರುವ ಅಂತರಾಷ್ಟ್ರೀಯ ಮಟ್ಟದ ಸಾಯಿಕೃಷ್ಣನ್ ಕ್ರಿಕೆಟ್ ಸ್ಟೇಡಿಯಂನಲ್ಲಿ (Saikrishnan Cricket Stadium) ಇಂದು (ಜ.18) ಟಿ20 ಕ್ರಿಕೆಟ್ (T20 Cricket) ಟೂರ್ನಿಯನ್ನು ಆಯೋಜನೆ ಮಾಡಲಾಗಿದೆ.

ಮಧುಸೂದನ ಸಾಯಿ ಜಾಗತಿಕ ಮಾನವೀಯ ಸೇವಾ ಅಭಿಯಾನದಿಂದ ಆಯೋಜಿಸಿರುವ ಒಂದು ಜಗತ್ತು - ಒಂದು ಕುಟುಂಬ (ಒನ್ ವಲ್ಡ್ -ಒನ್ ಫ್ಯಾಮಿಲಿ) ಕಪ್‌ಗಾಗಿ ನಡೆಯುವ ಪಂದ್ಯದಲ್ಲಿ ವಿಶ್ವದ ಹಲವು ರಾಷ್ಟ್ರಗಳ ಕ್ರಿಕೆಟ್ ದಿಗ್ಗಜರು ಪಾಲ್ಗೊಳ್ಳಲಿದ್ದಾರೆ. ನೂತನವಾಗಿ ನಿರ್ಮಾಣವಾಗಿರುವ ಕ್ರಿಕೆಟ್ ಸ್ಟೇಡಿಯಂ ಕೂಡ ಉದ್ಘಾಟನೆಯಾಗಲಿದೆ.
ಈ ಸೌಹಾರ್ದಯುತ ಪಂದ್ಯಾವಳಿಯಲ್ಲಿ 8 ದೇಶಗಳ 24 ದಿಗ್ಗಜ ಆಟಗಾರರು ಎರಡು ತಂಡಗಳಾಗಿ ಪಂದ್ಯವಾಡಲಿದ್ದಾರೆ. ಭಾರತದ ಮೂಲ ಧ್ಯೇಯ ವ್ಯಾಕ್ಯ ವಸುಧೈವ ಕುಟುಂಬಕಂ ಎಂಬ ಮಾತಿಗೆ ಪ್ರತಿರೂಪವೆಂಬಂತೆ ಒಂದು ಪ್ರಪಂಚ ಒಂದು ಕುಟುಂಬ ಕಪ್ ಎಂಬ ಹೆಸರಿನಡಿ ಪಂದ್ಯಾವಳಿ ಆಯೋಜನೆ ಮಾಡಲಾಗಿದೆ.
ನೂತನ ಹೊಸ ಸಾಯಿಕೃಷ್ಣನ್ ಸ್ಟೇಡಿಯಂ ಉದ್ಘಾಟನಾ ಅಂಗವಾಗಿ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿದೆ. ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ನೇತೃತ್ವದಲ್ಲಿ ಪಂದ್ಯಾವಳಿಗೆ ಬೇಕಾದ ಎಲ್ಲಾ ತಯಾರಿಗಳು ನಡೆದಿವೆ. ಇನ್ನೂ ಈ ಒಂದು ಪಂದ್ಯಾವಳಿಯಲ್ಲಿ ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ಮೊಹಮ್ಮದ್ ಕೈಫ್, ಇರ್ಫಾನ್ ಪಠಾಣ್, ಸನತ್ ಜಯಸೂರ್ಯ, ಮುತ್ತಯ್ಯ ಮುರಳೀಧರನ್, ಚಮಿಂಡಾ ವಾಸ್ ಸೇರಿದಂತೆ 24 ಮಂದಿ ಮಾಜಿ ಕ್ರಿಕೆಟ್ ಆಟಗಾರರು ಭಾಗವಹಿಸಲಿದ್ದಾರೆ.

ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪಲ್ಲಾದ ಜೋಶಿ ಭಾಗವಹಿಸಲಿದ್ದಾರೆ. ವಸುದೈವ ಕುಟುಂಬಕಂ ಸಂದೇಶ ಸಾರುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಕ್ರಿಕೆಟ್ ಪಂದ್ಯದಲ್ಲಿ ಸಚಿನ್ ತೆಂಡುಲ್ಕರ್ ಹಾಗೂ ಯುವರಾಜ್ ಸಿಂಗ್ ನಾಯಕತ್ವದ ತಂಡಗಳ ನಡುವೆ ಹೋರಾಟ ನಡೆಯಲಿದೆ.
ಸ್ಪಿನ್ನರ್‌ಗಳಾದ ಹರ್ಭಜನ್ ಸಿಂಗ್, ಮುತ್ತಯ್ಯ ಮುರಳೀಧರನ್, ವೇಗಿಗಳಾದ ಇರ್ಫಾನ್ ಪಠಾಣ್, ಚಾಮಿಂಡ್ ವಾಸ್, ಆರ್.ಪಿ.ಸಿಂಗ್ ಅಲ್ಲದೆ ಎಡಗೈ ಸ್ಪಿನ್ನರ್ ಮಾಂಟಿ ಪನೇಸರ್, ಡ್ಯಾನಿ ಮಾರಿಸನ್, ವೆಂಕಟೇಶಪ್ರಸಾದ್ ಸೇರಿ 7 ದೇಶಗಳ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಒಂದು ಜಗತ್ತು-ಒಂದು ಕುಟುಂಬ ಸಂದೇಶ ಬೆಂಬಲಿಸಿ 1983ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದ ಕೆಲವು ಆಟಗಾರರು ಆಗಮಿಸುತ್ತಿರುವುದು ವಿಶೇಷ.












Click it and Unblock the Notifications