BFC vs KBFC: ಕಂಠೀರವದಲ್ಲಿ ಕೇರಳಕ್ಕೆ ಮಣ್ಣು ಮುಕ್ಕಿಸಿ ಶಂಕರ್ ನಾಗ್ ಸಿನಿಮಾ ಹಾಡು ಹಾಡಿದ ಸುನಿಲ್ ಚೆಟ್ರಿ
ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಐಎಸ್‌ಎಲ್ ಪಂದ್ಯಾವಳಿಯ ಕೇರಳ ಬ್ಲಾಸ್ಟರ್ಸ್ ವಿರುದ್ಧದ ಪಂದ್ಯದಲ್ಲಿ ಬಿಎಫ್‌ಸಿ 4-2 ಅಂತರದಲ್ಲಿ ಅಮೋಘ ಗೆಲುವು ಸಾಧಿಸಿದೆ. ಐಎಸ್‌ಎಲ್‌ನಲ್ಲಿ ಬಿಎಫ್‌ಸಿ ಮತ್ತು ಕೇರಳ ಬ್ಲಾಸ್ಟರ್ಸ್ ನಡುವಿನ ಪಂದ್ಯವೆಂದರೆ ಅಲ್ಲಿ ಹೈವೋಲ್ಟೇಜ್ ಹಣಾಹಣಿ ಇರುತ್ತದೆ. ಕಂಠೀರವ ಕ್ರೀಡಾಂಗಣದಲ್ಲಿ ಕೇರಳ ಬ್ಲಾಸ್ಟರ್ಸ್ ಬಿಎಫ್‌ಸಿಯನ್ನು ಈವರೆಗೂ ಸೋಲಿಸಲು ಸಾಧ್ಯವಾಗಿಲ್ಲ. ಶನಿವಾರ ನಡೆದ ಪಂದ್ಯದಲ್ಲಿ ಕೂಡ ಬಿಎಫ್‌ಸಿ ತನ್ನ ಪ್ರಾಬಲ್ಯವನ್ನು ಮುಂದುವರೆಸಿತು.
ನಾಯಕ ಸುನಿಲ್ ಚೆಟ್ರಿ ಅಮೋಘ ಪ್ರದರ್ಶನದ ನೆರವಿನಿಂದ ಬಿಎಫ್‌ಸಿ ಕೇರಳ ಬ್ಲಾಸ್ಟರ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ಆರಂಭದಿಂದಲೇ ಬೆಂಗಳೂರು ಆಕ್ರಮಣಕಾರಿಯಾಗಿ ಆಡಲು ಆರಂಭಿಸಿತು. 8ನೇ ನಿಮಿಷದಲ್ಲೇ ಸುನಿಲ್ ಚೆಟ್ರಿ ಮೊದಲ ಗೆಲುವು ಸಾಧಿಸಿದರು. 38ನೇ ನಿಮಿಷದಲ್ಲಿ ರಿಯಾನ್ ವಿಲಿಯಮ್ಸ್ ಎರಡನೇ ಗೋಲು ಬಾರಿಸುವ ಮೂಲಕ ಮೊದಲಾರ್ಧದಲ್ಲಿ ಬಿಎಫ್‌ಸಿ 2-0 ಮುನ್ನಡೆ ಸಾಧಿಸಿತು.

ದ್ವಿತೀಯಾರ್ಧದಲ್ಲಿ ಕೇರಳ ಬ್ಲಾಸ್ಟರ್ಸ್ ಆಕ್ರಮಣಕಾರಿ ಆಟವಾಡಿತು. 56ನೇ ನಿಮಿಷದಲ್ಲಿ ಜೇಸಸ್ ಜಿಮೆನೆಜ್ ಕೇರಳಕ್ಕೆ ಮೊದಲ ಗೋಲು ಬಾರಿಸಿ, ಅಂತರವನ್ನು 2-1ಕ್ಕೆ ಕಡಿಮೆ ಮಾಡಿದರು. 67ನೇ ನಿಮಿಷದಲ್ಲಿ ಫ್ರೆಡ್ಡಿ ಲಲ್ಲಾಮ್ವಾವ ಎರಡನೇ ಗೋಲು ಬಾರಿಸುವ ಮೂಲಕ 2-2 ಅಂತರದಲ್ಲಿ ಸಮಬಲವಾಯಿತು.
ಬಳಿಕ ಅಬ್ಬರಿಸಿದ ಬಿಎಫ್‌ಸಿ ನಾಯಕ ಸುನಿಲ್ ಚೆಟ್ರಿ 73ನೇ ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ ಅಂತರವನ್ನು 3-2ಕ್ಕೆ ಹೆಚ್ಚಿಸಿದರು. ಬಳಿಕ ಆಟದ ಕೊನೆಯಲ್ಲಿ ಸುನಿಲ್ ಚೆಟ್ರಿ ತಮ್ಮ ಮೂರನೇ ಗೋಲು ಬಾರಿಸುವ ಮೂಲಕ ಗೆಲುವಿನ ಅಂತರವನ್ನು 4-2ಕ್ಕೆ ಹೆಚ್ಚಿಸಿದರು.
ಹಾಡು ಸಂತೋಷಕ್ಕೆ ಹಾಡಿದ ಸುನಿಲ್ ಚೆಟ್ರಿ
ಕೇರಳ ಬ್ಲಾಸ್ಟರ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆ ಬೆಂಗಳೂರು ತಂಡದ ಅಭಿಮಾನಿಗಳು ಸಂಭ್ರಮಿಸಿದರು. ಆಟಗಾರರ ಸಂಭ್ರಮ ಕೂಡ ಜೋರಾಗಿತ್ತು. ಮೈದಾನದಲ್ಲಿ ಶಂಕರ್ ನಾಗ್ ಅಭಿನಯದ ಗೀತಾ ಸಿನಿಮಾದ 'ಹಾಡು ಸಂತೋಷಕ್ಕೆ' ಹಾಡನ್ನು ಹಾಡುತ್ತಿದ್ದರು. ಸುನಿಲ್ ಚೆಟ್ರಿ ಕೂಟ ಈ ಹಾಡಿಗೆ ಧ್ವನಿಯಾಗುವ ಮೂಲಕ ಅಭಿಮಾನಿಗಳ ಖುಷಿಯನ್ನು ಹೆಚ್ಚಿಸಿದರು.
ಸುನಿಲ್ ಚೆಟ್ರಿ ಕನ್ನಡ ಹಾಡು ಹಾಡಿ ಸಂಭ್ರಮಿಸಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಬೆಂಗಳೂರು ಬುಲ್ಸ್ ಮತ್ತು ಬಿಎಫ್‌ಸಿ ತಮ್ಮ ಸೋಷಿಯಲ್ ಮಾಧ್ಯಮ ಖಾತೆಗಳಲ್ಲಿ ಕನ್ನಡಕ್ಕೆ ನೀಡುವ ಆದ್ಯತೆ ಅಭಿಮಾನಿಗಳ ಮನಗೆದ್ದಿದೆ.












Click it and Unblock the Notifications