Shivam Dube: ನಿಂಬೆಹಣ್ಣಿನ ಮಾಟ-ಮಂತ್ರಕ್ಕೆ ಶಿವಂ ದುಬೆ ವಿಕೆಟ್ ಪತನವಾಯ್ತಾ?, ದೂರಿನ ಬಗ್ಗೆ ಸಿಎಸ್‌ಕೆ ಸ್ಪಷ್ಟನೆ ಏನು?
CSK IPL 2026: ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಏಪ್ರಿಲ್ 18ರಂದು ನಡೆದ ಐಪಿಎಲ್ ಪಂದ್ಯದಲ್ಲಿ ಎಸ್‌ಆರ್‌ಎಚ್ ತಂಡವು ಸಿಎಸ್‌ಕೆ ವಿರುದ್ಧ ಭರ್ಜರಿ ಜಯ ದಾಖಲಿಸಿತು. ಆದರೆ, ಈ ಸೋಲಿಗಿಂತ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿರುವುದು ಪಂದ್ಯದ ವೇಳೆ ನಡೆದಿದೆ ಎನ್ನಲಾದ ಒಂದು ಮಾಟ-ಮಂತ್ರದ ಘಟನೆ.
ಸಿಎಸ್‌ಕೆ ತಂಡ ಬ್ಯಾಟಿಂಗ್ ಮಾಡುತ್ತಿದ್ದಾಗ ಗ್ಯಾಲರಿಯಲ್ಲಿ ಕುಳಿತಿದ್ದ ಎಸ್‌ಆರ್‌ಎಚ್ ಅಭಿಮಾನಿಯೊಬ್ಬರ ವಿಡಿಯೋ ಈಗ ವೈರಲ್ ಆಗಿದೆ. ಆ ಅಭಿಮಾನಿ ತನ್ನ ಪ್ಯಾಂಟ್ ಜೇಬಿನಿಂದ ನಿಂಬೆಹಣ್ಣನ್ನು ಹೊರತೆಗೆದು ಏನೋ ಮಂತ್ರ ಪಠಿಸುತ್ತಿರುವಂತೆ ವಿಡಿಯೋದಲ್ಲಿದೆ. ಕಾಕತಾಳೀಯ ಎಂಬಂತೆ, ಆತ ಮಂತ್ರ ಪಠಿಸಿದ ಬೆನ್ನಲ್ಲೇ ಕ್ರೀಸ್‌ನಲ್ಲಿದ್ದ ಸ್ಫೋಟಕ ಬ್ಯಾಟರ್ ಶಿವಂ ದುಬೆ ವಿಕೆಟ್ ಒಪ್ಪಿಸಿ ಹೊರನಡೆದರು. ಇದನ್ನು ಕಂಡ ನೆಟ್ಟಿಗರು "ಸಿಎಸ್‌ಕೆ ಸೋಲಿಗೆ ಮಾಟ-ಮಂತ್ರವೇ ಕಾರಣ" ಎಂದು ಸಾಮಾಜಿ ಜಾಲತಾಣದಲ್ಲಿ ಅಸಮಾಧಾನ ಹೊರಹಾಕುತ್ತಿದ್ದಾರೆ. ಇನ್ನು ಕೆಲವರು ಮೀಮ್‌ಗಳ ಮೂಲಕ ಈ 'ಬ್ಲ್ಯಾಕ್ ಮ್ಯಾಜಿಕ್' ವಿಷಯವನ್ನು ತಮಾಷೆ ಮಾಡುತ್ತಿದ್ದಾರೆ.

ವದಂತಿಗಳಿಗೆ ತೆರೆ ಎಳೆದ ಸಿಎಸ್‌ಕೆ ಮ್ಯಾನೇಜ್‌ಮೆಂಟ್
ಈ ಘಟನೆಗೆ ಸಂಬಂಧ ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಬಿಸಿಸಿಐಗೆ ಅಧಿಕೃತ ದೂರು ನೀಡಿದೆ ಎಂಬ ಸುದ್ದಿಯೊಂದಿಗೆ ದೂರಿನ ಪ್ರತಿಯೊಂದು ಕೂಡ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ಪರಿಶೀಲನೇ ಮಾಡಿದಾಗ ಇದು ಸಂಪೂರ್ಣ ಸುಳ್ಳು ಸುದ್ದಿ ಎಂಬುದು ತಿಳಿದುಬಂದಿದೆ. ಸಿಎಸ್‌ಕೆ ಅಂತಹ ವೃತ್ತಿಪರ ತಂಡವು ಇಂತಹ ಮೂಢನಂಬಿಕೆಯ ವಿಷಯಗಳ ಬಗ್ಗೆ ದೂರು ನೀಡುವ ಸಾಧ್ಯತೆಯಿಲ್ಲ. ವೈರಲ್ ಆಗಿರುವ ದೂರಿನ ಪತ್ರವು ಕಿಡಿಗೇಡಿಗಳು ಸೃಷ್ಟಿಸಿರುವ ನಕಲಿ ಪ್ರತಿಯಾಗಿದೆ ಎಂದು ತಿಳಿದುಬಂದಿದೆ.
ಕ್ರೀಡೆಯಲ್ಲಿ ಸೋಲು-ಗೆಲುವು ಆಟಗಾರರ ಪ್ರದರ್ಶನದ ಮೇಲೆ ನಿರ್ಧಾರವಾಗುತ್ತದೆಯೇ ಹೊರತು ಇಂತಹ ತಂತ್ರ-ಮಂತ್ರಗಳಿಂದಲ್ಲ. ಅಭಿಮಾನಿಯೊಬ್ಬ ನಿಂಬೆಹಣ್ಣು ಹಿಡಿದು ಮಂತ್ರಿಸಿದ ದೃಶ್ಯ ಮತ್ತು ಅದೇ ಸಮಯದಲ್ಲಿ ವಿಕೆಟ್ ಬಿದ್ದಿರುವುದು ಕೇವಲ ಒಂದು ಕಾಕತಾಳೀಯ ಘಟನೆಯಷ್ಟೆ. ಸಾರ್ವಜನಿಕರು ಇಂತಹ ವದಂತಿಗಳನ್ನು ಮತ್ತು ಮೂಢನಂಬಿಕೆಗಳನ್ನು ನಂಬಬಾರದು ಅಂತಲೂ ಸಾಮಾಜಿಕ ಜಾಲತಾಣದಲ್ಲಿ ಕ್ರೀಡಾಭಿಮಾನಿಗಳು ಮನವಿ ಮಾಡಿದ್ದಾರೆ.
ವಿಕೆಟ್ ಬೀಳಲಿ ಎಂದು ಪ್ರಾರ್ಥನೆ; ವಿಡಿಯೋ ವೈರಲ್
ಸಿಎಸ್‌ಕೆ ತಂಡವು 195 ರನ್‌ಗಳ ಗುರಿಯನ್ನು ಬೆನ್ನಟ್ಟುತ್ತಿದ್ದಾಗ, 17ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ಎಸ್‌ಆರ್‌ಎಚ್ ತಂಡದ ಯುವ ಬೌಲರ್ ಸಾಕಿಬ್ ಹುಸೇನ್ ಅವರು ಎಸೆದ ವೇಗವಾದ ಎಸೆತಕ್ಕೆ ಶಿವಂ ದುಬೆ ಕ್ಲೀನ್ ಬೌಲ್ಡ್ ಆದರು. ವಿಡಿಯೋದಲ್ಲಿರುವ ಅಭಿಮಾನಿ ಕೇವಲ ನಿಂಬೆಹಣ್ಣನ್ನು ತಿರುಗಿಸುವುದಲ್ಲದೆ, ಕೈಗಳಿಂದ ವಿಚಿತ್ರವಾದ ಸಂಕೇತಗಳನ್ನು ಮಾಡುತ್ತಾ ವಿಕೆಟ್ ಬೀಳಲಿ ಎಂದು ಪ್ರಾರ್ಥಿಸುತ್ತಿರುವುದು ಕಂಡುಬಂದಿದೆ.
Black magic live 😭 pic.twitter.com/rzJYd6kjti
— Out Of Context Cricket (@GemsOfCricket) April 19, 2026
ಸುಳ್ಳು ಸುದ್ದಿ ಎಂದು ಸ್ಪಷ್ಟನೆ
ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಕಲಿ ದೂರಿನ ಪತ್ರದಲ್ಲಿ ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ಅವರ ಸಹಿ ಮತ್ತು ಹೆಸರನ್ನು ಬಳಸಲಾಗಿದೆ. ಆದರೆ, ಇದು ಎಡಿಟ್ ಮಾಡಲಾದ ನಕಲಿ ಪತ್ರ ಎಂದು ಕ್ರೀಡಾ ವಿಶ್ಲೇಷಕರು ಖಚಿತಪಡಿಸಿದ್ದಾರೆ. ಈ ವದಂತಿಗಳು ಅತಿರೇಕಕ್ಕೆ ಹೋದಾಗ, ತೇಲಂಗಾಣ ಸರ್ಕಾರದ ಸಾಮಾಜಿಕ ಜಾಲತಾಣ ನಿರ್ವಹಣೆ ತಂಡವೊಂದು ಕೂಡ "ಇದು ಸುಳ್ಳು ಸುದ್ದಿ ಮತ್ತು ಕಿಡಿಗೇಡಿಗಳ ಕೆಲಸ" ಎಂದು ಸ್ಪಷ್ಟನೆ ನೀಡಿದೆ.












Click it and Unblock the Notifications