ENG vs SA: ಇಂಗ್ಲೆಂಡ್ ವಿರುದ್ಧ ರೋಚಕ ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ
ಸೆಂಟ್ ಲೂಸಿಯಾದ ಡರೇನ್ ಸಾಮಿ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ 7 ರನ್‌ಗಳ ರೋಚಕ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 163 ರನ್ ಕಲೆಹಾಕಿತು. ಕ್ವಿಂಟನ್ ಡಿಕಾಕ್ 38 ಎಸೆತಗಳಲ್ಲಿ ಅಮೋಘ 65 ರನ್ ಗಳಿಸುವ ಮೂಲಕ ದಕ್ಷಿಣ ಆಫ್ರಿಕಾ ಸವಾಲಿನ ಮೊತ್ತ ಗಳಿಸಲು ಕಾರಣವಾದರು.

ಡೇವಿಡ್ ಮಿಲ್ಲರ್ 28 ಎಸೆತಗಳಲ್ಲಿ 43 ರನ್ ಗಳಿಸಿ ಕೊನೆಯಲ್ಲಿ ಅಬ್ಬರಿಸಿದರು. ರೀಝಾ ಹೆಂಡ್ರಿಕ್ಸ್ 19 ರನ್, ಟ್ರಿಸ್ಟಾನ್ ಸ್ಟಬ್ಸ್ 12 ರನ್ ಗಳಿಸಿದರೆ. ಹೆನ್ರಿಕ್ ಕ್ಲಾಸೆನ್ ಕೇವಲ 8 ರನ್ ಗಳಿಸಿದರು.
ಗೆಲ್ಲುವ ಪಂದ್ಯ ಸೋತ ಇಂಗ್ಲೆಂಡ್
ಈ ಸವಾಲಿನ ಮೊತ್ತ ಬೆನ್ನತ್ತಿದ ಇಂಗ್ಲೆಂಡ್ ಉತ್ತಮ ಆರಂಭ ಪಡೆಯಲಿಲ್ಲ. ಫಿಲ್ ಸಾಲ್ಟ್ 11 ರನ್ ಗಳಿಸಿದರೆ, ಜೋಸ್ ಬಟ್ಲರ್ 17 ರನ್ ಗಳಿಸಿದರು. ಜಾನಿ ಬೈರ್ ಸ್ಟೋ 16 ರನ್, ಮೊಯೀನ್ ಅಲಿ 9 ರನ್ ಗಳಿಸಿ ಔಟಾದರು. 10.2 ಓವರ್ ಗಳಲ್ಲಿ 61 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ಸೋಲಿನ ಸುಳಿಗೆ ಸಿಲುಕಿತ್ತು.
ಹ್ಯಾರಿ ಬ್ರೂಕ್ ಮತ್ತು ಲಿಯಾಮ್ ಲಿವಿಂಗ್ ಸ್ಟೋನ್ 5ನೇ ವಿಕೆಟ್‌ಗೆ 78 ರನ್‌ಗಳ ಜೊತೆಯಾಟದ ಮೂಲಕ ಇಂಗ್ಲೆಂಡ್‌ಗೆ ಗೆಲುವಿನ ಭರವಸೆ ಮೂಡಿಸಿದ್ದರು. ಹ್ಯಾರಿ ಬ್ರೂಕ್ 37 ಎಸೆತಗಳಲ್ಲಿ 53 ರನ್ ಗಳಿಸಿದರೆ, ಲಿಯಾಮ್ ಲಿವಿಂಗ್‌ಸ್ಟೋನ್ 17 ಎಸೆತಗಳಲ್ಲಿ 33 ರನ್ ಗಳಿಸಿ ದಕ್ಷಿಣ ಆಫ್ರಿಕಾ ತಂಡಕ್ಕೆ ಸೊಲಿನ ಭೀತಿ ಮೂಡಿಸಿದ್ದರು.
ಆದರೆ ಇವರಿಬ್ಬರೂ ಔಟ್ ಆಗುತ್ತಿದ್ದಂತೆ ದಕ್ಷಿಣ ಆಫ್ರಿಕಾ ಕೊನೆಯಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿತು. ಅಂತಿಮವಾಗಿ ಇಂಗ್ಲೆಂಡ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 156 ರನ್ ಗಳಿಸಿದ ಇಂಗ್ಲೆಂಡ್ 7 ರನ್‌ಗಳಿಂದ ಸೋಲೊಪ್ಪಿಕೊಂಡಿತು.
ಕಗಿಸೋ ರಬಾಡ ಮತ್ತು ಕೇಶವ್ ಮಹಾರಾಜ್ ತಲಾ 2 ವಿಕೆಟ್ ಪಡೆದುಕೊಂಡರು. ಎನ್ರಿಕ್ ನೋಕಿಯಾ ಮತ್ತು ಓಟ್ನಿಲ್ ಬಾರ್ಟ್‌ಮ್ಯಾನ್ ತಲಾ ಒಂದು ವಿಕೆಟ್ ಪಡೆದರು.
ಈ ಗೆಲುವಿನ ಮೂಲಕ ದಕ್ಷಿಣ ಆಫ್ರಿಕಾ ಈ ವಿಶ್ವಕಪ್‌ನಲ್ಲಿ ಈವರೆಗೂ ಆಡಿರುವ 6 ಪಂದ್ಯಗಳನ್ನು ಗೆದ್ದು ಹೊಸ ದಾಖಲೆ ಬರೆಯಿತು. ಸೆಮಿಫೈನಲ್‌ಗೆ ದಕ್ಷಿಣ ಆಫ್ರಿಕಾ ಈಗಾಗಲೇ ಬಹುತೇಕ ಅರ್ಹತೆ ಗಿಟ್ಟಿಸಿಕೊಂಡಿದ್ದು, ಸೂಪರ್ 8 ಹಂತದ ತಮ್ಮ ಕೊನೆಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ.












Click it and Unblock the Notifications