India vs South Africa: ಚಕ್ರವರ್ತಿ ಅಬ್ಬರದ ನಡುವೆಯೂ ಗೆದ್ದ ದಕ್ಷಿಣ ಆಫ್ರಿಕಾ
ಸೇಂಟ್ ಜಾರ್ಜ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ ರೋಚಕ ಗೆಲುವು ಸಾಧಿಸಿದೆ. 125 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ಭಾರತದ ಸ್ಪಿನ್ ದಾಳಿಗೆ ಸಿಲುಕಿ ಒಂದು ಹಂತದಲ್ಲಿ ಸೋಲುವ ಹಂತದಲ್ಲಿತ್ತು, ಸ್ಟಬ್ಸ್ ಮತ್ತು ಕೊಯೆಟ್ಜೆ ಕೊನೆಯಲ್ಲಿ ಅಬ್ಬರಿಸುವ ಮೂಲಕ ಗೆಲುವು ದಕ್ಷಿಣ ಆಫ್ರಿಕಾಗೆ ಗೆಲುವು ತಂದುಕೊಟ್ಟರು.
ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಸರಣಿಯ ಮೊದಲ ಪಂದ್ಯದಲ್ಲಿ ಅಬ್ಬರದ ಶತಕ ಗಳಿಸಿದ್ದ ಸಂಜು ಸ್ಯಾಮ್ಸನ್ ಎರಡನೇ ಪಂದ್ಯದಲ್ಲಿ ರನ್ ಗಳಿಸದೇ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಅಭಿಷೇಕ್ ಶರ್ಮಾ 5 ಎಸೆತಗಳಲ್ಲಿ 4 ರನ್ ಗಳಿಸಿ ಔಟಾದರು. ನಾಯಕ ಸೂರ್ಯಕುಮಾರ್ ಯಾದವ್ ಕೂಡ 9 ಎಸೆತಗಳಲ್ಲಿ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಬಳಿಕ ಬಂದ ತಿಲಕ್ ವರ್ಮಾ 20 ರನ್, ಅಕ್ಷರ್ ಪಟೇಲ್ 27 ರನ್ ಮತ್ತು ಹಾರ್ದಿಕ್ ಪಾಂಡ್ಯ ಅಜೇಯ 39 ರನ್ ಗಳಿಸುವ ಮೂಲಕ ಭಾರತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 124 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು. ದಕ್ಷಿಣ ಆಫ್ರಿಕಾ ಬೌಲರ್ ಗಳು ಸಂಘಟಿತ ಪ್ರದರ್ಶನ ನೀಡಿದರು. ಮಾರ್ಕೊ ಯಾನ್ಸೆನ್, ಗೆರಾಲ್ಡ್ ಕೊಯೆಟ್ಜಾ, ಸಿಮೆಲಾನೆ, ಮಾರ್ಕ್ರಂ ಮತ್ತು ಪೀಟರ್ ತಲಾ 1 ವಿಕೆಟ್ ಪಡೆದರು.
ವರುಣ್ ಚಕ್ರವರ್ತಿ ಮಾರಕ ಬೌಲಿಂಗ್
125 ರನ್‌ಗಳ ಸಾಧಾರಣ ಮೊತ್ತವನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡಕ್ಕೆ ವರುಣ್ ಚಕ್ರವರ್ತಿ ಆಘಾತ ನೀಡಿದರು. 4 ಓವರ್ ಗಳಲ್ಲಿ ಕೇವಲ 17 ರನ್ ಬಿಟ್ಟುಕೊಟ್ಟ ಅವರು ಪ್ರಮುಖ 5 ವಿಕೆಟ್ ಪಡೆದು ಮಿಂಚಿದರು. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಮೊದಲ ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿದರು.
ರ್‍ಯಾನ್ ರಿಕಲ್‌ಟನ್ 13 ರನ್ ಗಳಿಸಿದರೆ, ರೀಜಾ ಹೆಂಡ್ರಿಕ್ಸ್ 24 ರನ್ ಗಳಿಸಿದರು. ನಾಯಕ ಏಡೆನ್ ಮಾರ್ಕ್ರಂ 3 ರನ್ ಗಳಿಸಿ ಔಟಾದರು. ಮಾರ್ಕೊ ಯಾನ್ಸನ್ 7 ರನ್, ಹೆನ್ರಿಕ್ ಕ್ಲಾಸೆನ್ 2 ರನ್ ಗಳಿಸಿದರೆ, ಡೇವಿಡ್ ಮಿಲ್ಲರ್ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದರು.
ಒಂದು ಹಂತದಲ್ಲಿ ಸೋಲುವ ಭೀತಿಯಲ್ಲಿದ್ದ ದಕ್ಷಿಣ ಆಫ್ರಿಕಾಗೆ ಟ್ರಿಸ್ಟಾನ್ ಸ್ಟಬ್ಸ್ ಮತ್ತು ಗೆರಾಲ್ಡ್ ಕೊಯೆಟ್ಜಾ ಆಸರೆಯಾದರು. ಒಂದು ಕಡೆ ವಿಕೆಟ್ ಬೀಳುತ್ತಿದ್ದರು, ಸ್ಟಬ್ಸ್ ಮತ್ತೊಂದು ಕಡೆ ಭಾರತದ ಬೌಲಿಂಗ್ ಪಡೆಯನ್ನು ಎದುರಿಸಿ ನಿಂತರು. 41 ಎಸೆತಗಳಲ್ಲಿ ಅಜೇಯ 47 ರನ್ ಗಳಿಸುವ ಮೂಲಕ ಆಸರೆಯಾದರು ಮತ್ತೊಂದು ಕಡೆ ಗೆರಾಲ್ಡ್ ಕೊಯೆಟ್ಜೆ 9 ಎಸೆತಗಳಲ್ಲಿ ಅಜೇಯ 19 ರನ್ ಗಳಿಸಿದರು. ಇವರಿಬ್ಬರ ಬ್ಯಾಟಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ 19 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 128 ರನ್ ಗಳಿಸುವ ಮೂಲಕ ಗೆಲುವು ಸಾಧಿಸಿತು. ಈ ಗೆಲುವಿನ ಮೂಲಕ ನಾಲ್ಕು ಪಂದ್ಯಗಳ ಸರಣಿ 1-1 ರಲ್ಲಿ ಸಮಬಲವಾಗಿದೆ.












Click it and Unblock the Notifications