Ind vs WI: ಆರ್‌ಸಿಬಿ ಪ್ಲೇಯರ್ಸ್ ಅಬ್ಬರಕ್ಕೆ ಬೆಚ್ಚಿದ ವೆಸ್ಟ್ ಇಂಡೀಸ್; ದಾಖಲೆ ಬರೆದ ಮಂಧಾನ-ರಿಚಾ
ಮುಂಬೈನಲ್ಲಿ ನಡೆದ ಭಾರತ ಮತ್ತು ವೆಸ್ಟ್ ವಿಂಡೀಸ್ ಮಹಿಳಾ ತಂಡಗಳ ನಡುವಿನ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಭಾರತ 60 ರನ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ 2-1 ಅಂತರದಲ್ಲಿ ಸರಣಿ ಗೆದ್ದುಕೊಂಡಿದೆ. ಸ್ಮೃತಿ ಮಂಧಾನ ಅರ್ಧಶತಕ ಗಳಿಸುವ ಮೂಲಕ ಹೊಸ ದಾಖಲೆ ಬರೆದರೆ, ರಿಚಾ ಘೋಷ್ ಸ್ಫೋಟಕ ಬ್ಯಾಟಿಂಗ್ ಮಾಡಿ ಭಾರತ ಬೃಹತ್ ಮೊತ್ತ ಕಲೆಹಾಕಲು ಸಹಾಯ ಮಾಡಿದರು.
ಟಾಸ್ ಗೆದ್ದ ವೆಸ್ಟ್ ಇಂಡೀಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 217 ರನ್ ಗಳಿಸುವ ಮೂಲಕ ವೆಸ್ಟ್ ಇಂಡೀಸ್‌ಗೆ ಬೃಹತ್ ಗುರಿ ನೀಡಿತು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 157 ರನ್ ಗಳಿಸುವ ಮೂಲಕ ಸೋಲೋಪ್ಪಿಕೊಂಡಿತು.

ತವರಿನಲ್ಲಿ ಭಾರತ ಮಹಿಳಾ ತಂಡ 5 ವರ್ಷಗಳ ಬಳಿಕ ಟಿ20 ಸರಣಿಯನ್ನು ಗೆದ್ದ ಸಾಧನೆ ಮಾಡಿದೆ. ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ರಿಷಾ ಘೋಷ್ ಪಂದ್ಯ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿ ಪಡೆದರೆ, ಸರಣಿಯಲ್ಲಿ ಮೂರು ಪಂದ್ಯಗಳಲ್ಲೂ ಅರ್ಧಶತಕ ಬಾರಿಸಿದ ಸ್ಮೃತಿ ಮಂಧಾನ ಸರಣಿ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿ ಪಡೆದುಕೊಂಡರು.
ದಾಖಲೆ ಬರೆದ ಸ್ಮೃತಿ ಮಂಧಾನ
ವೆಸ್ಟ್ ಇಂಡೀಸ್ ವಿರುದ್ಧದ ಟಿ0 ಸರಣಿಯ ಕೊನೆಯ ಪಂದ್ಯದಲ್ಲಿ 47 ಎಸೆತಗಳಲ್ಲಿ 77 ರನ್ ಸಿಡಿಸುವ ಮೂಲಕ ಸ್ಮೃತಿ ಮಂಧಾನ ಹೊಸ ದಾಖಲೆ ಬರೆದರು. ಅಂತಾರಾಷ್ಟ್ರೀಯ ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಅರ್ಧಶತಕ ಸಿಡಿಸಿದ ಸುಜಿ ಬೇಟ್ಸ್ ದಾಖಲೆಯನ್ನು ಹಿಂದಿಕ್ಕಿದರು. ನ್ಯೂಜಿಲೆಂಡ್‌ನ ಸುಜಿ ಬೇಟ್ಸ್ 29 ಅರ್ಧಶತಕ ಗಳಿಸಿದ್ದು, ಸ್ಮೃತಿ ಮಂಧಾನ 30 ಅರ್ಧಶತಕ ಗಳಿಸಿದ್ದಾರೆ.
ಕ್ಯಾಲೆಂಡರ್ ವರ್ಷದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿ ಹೊಸ ದಾಖಲೆ ಬರೆದರು. ಶ್ರೀಲಂಕಾ ತಂಡದ ನಾಯಕಿ ಚಾಮರಿ ಅಟಪಟ್ಟು 720 ರನ್ ಗಳಿಸಿ ಮಾಡಿದ್ದ ದಾಖಲೆಯನ್ನು ಸರಿಗಟ್ಟಿದರು. 2024ರಲ್ಲಿ 21 ಇನ್ನಿಂಗ್ಸ್‌ಗಳಲ್ಲಿ 763 ರನ್ ಕಲೆಹಾಕಿರುವ ಸ್ಮೃತಿ ಮಂಧಾನ ಕ್ಯಾಲೆಂಡರ್ ವರ್ಷದಲ್ಲಿ ಟಿ20 ಕ್ರಿಕೆಟ್‌ನಲ್ಲಿ 700 ಕ್ಕೂ ಹೆಚ್ಚು ರನ್ ಕಲೆಹಾಕಿನ ನಾಲ್ಕನೇ ಆಟಗಾರ್ತಿ ಎನ್ನುವ ದಾಖಲೆ ಮಾಡಿದರು.
ರಿಚಾ ಘೋಷ್ ವೇಗದ ಅರ್ಧಶತಕ
ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ 21 ಎಸೆತಗಳಲ್ಲಿ 3 ಬೌಂಡರಿ 5 ಸಿಕ್ಸರ್ ಸಹಿತ 54 ರನ್ ಸಿಡಿಸಿ ವೇಗದ ಅರ್ಧಶತಕ ಸಿಡಿಸಿದ ದಾಖಲೆ ಮಾಡಿದರು. 18 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಸ್ಮೃತಿ ಮಂಧಾನ ಅವರ ದಾಖಲೆ ಮುರಿದರು.
ಸ್ಮೃತಿ ಮಂಧಾನ ಮತ್ತು ರಿಚಾ ಘೋಷ್ ಇಬ್ಬರೂ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್ ಸಿಬಿ ತಂಡಕ್ಕಾಗಿ ಆಡುತ್ತಾರೆ ಎನ್ನುವುದು ವಿಶೇಷ. ಇಬ್ಬರು ಸದ್ಯ ಅತ್ಯುತ್ತಮ ಫಾರ್ಮ್‌ನಲ್ಲಿದ್ದು 2025ರ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಕೂಡ ಇದೇ ರೀತಿ ಪ್ರದರ್ಶನ ನೀಡಿದರೆ ಆರ್ ಸಿಬಿ ಸತತ ಎರಡನೇ ಬಾರಿ ಕಪ್ ಗೆಲ್ಲುವುದು ಸುಲಭವಾಗುತ್ತದೆ ಎನ್ನುವುದು ಅಭಿಮಾನಿಗಳ ಹಾರೈಕೆಯಾಗಿದೆ.












Click it and Unblock the Notifications