Scotland: ನಮೀಬಿಯಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ನಂದಿನಿ ಪ್ರಾಯೋಜಕತ್ವದ ಸ್ಕಾಟ್ಲೆಂಡ್
ಗುರುವಾರ ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆದ ಟಿ20 ವಿಶ್ವಕಪ್ 2024ರ ಬಿ ಗುಂಪಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ನಮೀಬಿಯಾ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ವಿಶೇಷವೆಂದರೆ ಸ್ಕಾಟ್ಲೆಂಡ್ ತಂಡಕ್ಕೆ ಕನ್ನಡಿಗರ ಹೆಮ್ಮೆಯ ನಂದಿನಿ ಪ್ರಾಯೋಜಕತ್ವ ನೀಡಿದೆ. ಸ್ಕಾಟ್ಲೆಂಡ್ ಟಿ20 ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ನಮೀಬಿಯಾ ವಿರುದ್ಧ ಗೆದ್ದಿರುವುದು ಮತ್ತೊಂದು ವಿಶೇಷ.

ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ನಮೀಬಿಯಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 155 ರನ್ ಗಳಿಸಿತು. ನಾಯಕ ಗೆರ್ಹಾರ್ಡ್ ಎರಾಸ್ಮಸ್ 31 ಎಸೆತಗಳಲ್ಲಿ 52 ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು. ಝಾನೆ ಗ್ರೀನ್ 28, ನಿಕೋ ಡೇವಿನ್ 20 ರನ್ ಗಳಿಸಿದರು.
ಬ್ರಾಡ್ ವೀಲ್ 4 ಓವರ್ ಗಳಲ್ಲಿ 33 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದರು. ಬ್ರಾಡ್ಲಿ ಕರ್‍ರಿ 2 ವಿಕೆಟ್ ಪಡೆದರೆ, ಕ್ರಿಸ್ಟೋಫರ್ ಸೋಲ್, ಕ್ರಿಸ್ ಗ್ರೀವ್ಸ್ ಮತ್ತು ಮೈಕೆಲ್ ಲೀಸ್ಕ್ ತಲಾ ಒಂದು ವಿಕೆಟ್ ಪಡೆದರು.
ಸುಲಭವಾಗಿ ಬೆನ್ನತ್ತಿದ ಸ್ಕಾಟ್ಲೆಂಡ್
156 ರನ್‌ಗಳ ಸವಾಲಿನ ಗುರಿಯನ್ನು ಬೆನ್ನತ್ತಿದ ಸ್ಕಾಟ್ಲೆಂಡ್ ಆರಂಭದಲ್ಲೇ ಜಾಜ್ ಮುನ್ಸಿ (7 ರನ್) ಅವರ ವಿಕೆಟ್ ಕಳೆದುಕೊಂಡಿತು. ಮೈಕೆಲ್ ಜೋನ್ಸ್ 26 ರನ್ ಗಳಿಸಿದರೆ, ಬ್ರಾಂಡ್ ಮೆಕ್‌ಮುಲ್ಲೆನ್ 19 ರನ್ ಗಳಿಸಿದರು. ನಾಯಕ ರಿಚೀ ಬೆರ್ರಿಂಗ್ಟನ್ ಅಜೇಯ 47 ರನ್ ಗಳಿಸಿದರೆ, ಮೈಕೆಲ್ ಲೀಸ್ಕ್ 17 ಎಸೆತಗಳಲ್ಲಿ ಸ್ಫೋಟಕ 35 ರನ್ ಗಳಿಸುವ ಮೂಲಕ ಸ್ಕಾಟ್ಲೆಂಡ್‌ಗೆ ಇನ್ನೂ 9 ಎಸೆತ ಬಾಕಿ ಇರುವಂತೆಯೇ ಗೆಲುವು ತಂದುಕೊಟ್ಟರು.
ಈ ಗೆಲುವಿನ ಮೂಲಕ ಸ್ಕಾಟ್ಲೆಂಡ್ ಬಿ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ. ಇಂಗ್ಲೆಂಡ್ ವಿರುದ್ಧದ ಪಂದ್ಯ ಮಳೆಯಿಂದ ರದ್ದಾದ ಬಳಿಕ ಎರಡೂ ತಂಡಗಳು ಒಂದೊಂದು ಅಂಕ ಪಡೆದಿದ್ದವು, ಈಗ ನಮೀಬಿಯಾ ವಿರುದ್ಧ ಗೆದ್ದು 2 ಅಂಕ ಪಡೆದುಕೊಂಡಿದೆ.
ಬಿ ಗುಂಪಿನಲ್ಲಿ ಸ್ಕಾಟ್ಲೆಂಡ್, ಆಸ್ಟ್ರೇಲಿಯಾ, ಇಂಗ್ಲೆಂಡ್, ನಮೀಬಿಯಾ, ಒಮನ್ ತಂಡಗಳು ಸೆಣೆಸುತ್ತಿದ್ದು ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಎಂಟರ ಘಟ್ಟವನ್ನು ಪ್ರವೇಶಿಸಲಿವೆ.
ಕನ್ನಡಿಗರ ಹೆಮ್ಮೆಯ ನಂದಿನ ಈಗ ವಿಶ್ವಮಟ್ಟದಲ್ಲಿ ಮಾರುಕಟ್ಟೆ ವಿಸ್ತರಿಸಲು ಮುಂದಾಗಿದ್ದು, ಟಿ20 ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳಿಗೆ ಪ್ರಾಯೋಜಕತ್ವ ನೀಡಿದೆ. ಎರಡೂ ತಂಡಗಳ ಜೆರ್ಸಿಯ ತೋಳಿನ ಮೇಲೆ ನಂದಿನಿ ಲೋಗೋ ನೋಡುವುದು ಕನ್ನಡಿಗರಿಗೆ ಖುಷಿ ಕೊಟ್ಟಿದೆ.












Click it and Unblock the Notifications