Rishabh Pant: ಮೈದಾನದಲ್ಲೇ ಪಂತ್ ಜೊತೆ ಸಂಜೀವ್ ಗೊಯೆಂಕಾ ಮಾತುಕತೆ: ಭಾರತದ ಮಾಜಿ ಆಟಗಾರ ಅಸಮಾಧಾನ
2025ರ ಐಪಿಎಲ್ ಮೆಗಾ ಹರಾಜಿನಲ್ಲಿ ರಿಷಬ್ ಪಂತ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ಬರೋಬ್ಬರಿ 27 ಕೋಟಿ ರೂಪಾಯಿಗೆ ಖರೀದಿ ಮಾಡಿತು. ಐಪಿಎಲ್ ಇತಿಹಾಸದಲ್ಲೇ ದುಬಾರಿ ಆಟಗಾರ ಎನಿಸಿಕೊಂಡರು. ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಹೊರಬಂದ ಬಳಿಕ ದುಬಾರಿ ಬೆಲೆಗೆ ಎಲ್‌ಎಸ್‌ಜಿ ಪಾಲಾದ ಪಂತ್, ಬಳಿಕ ತಂಡದ ನಾಯಕತ್ವ ವಹಿಸಿಕೊಂಡರು.
2025ರ ಐಪಿಎಲ್‌ನಲ್ಲಿ ಎಲ್‌ಎಸ್‌ಜಿ ಫ್ರಾಂಚೈಸಿ ನಾಯಕ ರಿಷಬ್ ಪಂತ್‌ರಿಂದ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿತ್ತು, ಆದರೆ ಮೊದಲ ಮೂರು ಪಂದ್ಯಗಳಲ್ಲಿ ಪಂತ್ ಬ್ಯಾಟಿಂಗ್‌ನಲ್ಲಿ ವಿಫಲವಾಗಿದ್ದಾರೆ. ಮೊದಲ ಪಂದ್ಯದಲ್ಲಿ ನಾಯಕತ್ವದಲ್ಲಿ, ಕೀಪಿಂಗ್‌ನಲ್ಲಿ ಮತ್ತು ಬ್ಯಾಟಿಂಗ್‌ನಲ್ಲೂ ವಿಫಲವಾಗಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ಒಂದು ವಿಕೆಟ್‌ನಿಂದ ಭರ್ಜರಿ ಗೆಲುವು ಸಾಧಿಸಿತ್ತು.

ಸಂಜೀವ್ ಗೊಯೆಂಕಾ ಬಗ್ಗೆ ಅಸಮಾಧಾನ
ಫ್ರಾಂಚೈಸಿ ಮಾಲೀಕ ಸಂಜೀವ್ ಗೊಯೆಂಕಾ ಪ್ರತಿ ಪಂದ್ಯದ ನಂತರ ನಾಯಕ ರಿಷಬ್ ಪಂತ್ ಜೊತೆ ಮೈದಾನದಲ್ಲೇ ಚರ್ಚೆ ನಡೆಸುವುದು ಪ್ರತಿ ಬಾರಿ ವೈರಲ್ ಆಗುತ್ತಲೇ ಇದೆ. ಕಳೆದ ಬಾರಿ ಕೆಎಲ್ ರಾಹುಲ್ ಜೊತೆ ಇದೇ ರೀತಿ ಮೈದಾನದಲ್ಲೇ ಅಸಮಾಧಾನ ವ್ಯಕ್ತಪಡಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತೊರೆದು ಡೆಲ್ಲಿ ಕ್ಯಾಪಿಟಲ್ಸ್ ಸೇರಿಕೊಂಡಿದ್ದಾರೆ.
ಇದೀಗ ರಿಷಬ್ ಪಂತ್ ಜೊತೆ ಪ್ರತಿ ಪಂದ್ಯದ ಬಳಿ ಸಂಜೀವ್ ಗೊಯೆಂಕಾ ಮಾತನಾಡುವುದು, ಅದರಲ್ಲೂ ಪಂದ್ಯವನ್ನು ಸೋತರೆ ಅವರು ಮಾತನಾಡುವ ರೀತಿ, ಹಾವಭಾವ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ಸೋಲು ಕಂಡ ಬಳಿಕ ಪಂತ್ ಜೊತೆ ತೀವ್ರ ಚರ್ಚೆ ನಡೆಸಿದರು.
ಭಾರತ ತಂಡದ ಮಾಜಿ ಆಟಗಾರ, 1983ರ ವಿಶ್ವಕಪ್ ವಿಜೇತ ತಂಡದಲ್ಲಿದ್ದ ವೇಗದ ಬೌಲರ್ ಮದನ್ ಲಾಲ್, ವಿಡಿಯೋ ನೋಡಿ ಬೇಸರ ವ್ಯಕ್ತಪಡಿಸಿದ್ದಾರೆ. ಆಟಗಾರರಿಗೆ ಮುಕ್ತವಾಗಿ ಆಡಲು ಅವಕಾಶ ನೀಡುವಂತೆ ಮತ್ತು ಮೈದಾನದಲ್ಲಿ ಚರ್ಚೆ ನಡೆಸದೆ ಡ್ರೆಸ್ಸಿಂಗ್ ರೂಂನಲ್ಲಿಯೋ ಅಥವಾ ಹೋಟೆಲ್‌ನಲ್ಲೋ ಆಟಗಾರರ ಜೊತೆ ಚರ್ಚೆ ನಡೆಸುವಂತೆ ಸಲಹೆ ಕೊಟ್ಟಿದ್ದಾರೆ.
ರಿಷಬ್ ಪಂತ್ ಮತ್ತು ಸಂಜೀವ್ ಗೊಯೆಂಕಾ ಅವರ ನಡುವಿನ ಚರ್ಚೆ ಬಗ್ಗೆ ನನಗೆ ಗೊತ್ತಿಲ್ಲ. ಚರ್ಚೆಯನ್ನು ಒಳಗಡೆ ಮಾಡಿಕೊಳ್ಳಲಿ, ಆಟಗಾರರು ಕ್ರಿಕೆಟ್ ಅನ್ನು ಆನಂದಿಸಲಿ ಅವರನ್ನು ಮುಕ್ತವಾಗಿ ಆಡಲು ಬಿಡಿ, ಟಿ20 ಮಾದರಿ ಕ್ರಿಕೆಟ್ ತುಂಬಾ ಅನಿರೀಕ್ಷಿತ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ಇದುವರೆಗೂ ಮೂರು ಪಂದ್ಯಗಳನ್ನು ಆಡಿದ್ದು ಒಂದು ಪಂದ್ಯದಲ್ಲಿ ಮಾತ್ರ ಗೆಲುವ ಕಂಡಿದ್ದು, ಎರಡು ಪಂದ್ಯಗಳಲ್ಲಿ ಸೋತಿದೆ. ಮುಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.












Click it and Unblock the Notifications