Sanjay Manjrekar: ಉತ್ತರ ಭಾರತ ಕ್ರಿಕೆಟಿಗರ ಬಗ್ಗೆ ಗಮನವಿಲ್ಲ; ವಿವಾದ ಸೃಷ್ಟಿಸಿದ ಸಂಜಯ್ ಮಂಜ್ರೇಕರ್ ಹೇಳಿಕೆ
ಉತ್ತರ ಭಾರತ ಮತ್ತು ದಕ್ಷಿಣ ಭಾರತೀಯರ ನಡುವೆ ಆಗಾಗ್ಗೆ ತಿಕ್ಕಾಟ ನಡೆಯುತ್ತಲೇ ಇರುತ್ತದೆ. ಅದರಲ್ಲೂ ಬೆಂಗಳೂರಿನಲ್ಲಿ ಕೆಲವು ಉತ್ತರ ಭಾರತೀಯರ ಅಹಂಕಾರದ ವರ್ತನೆಗಳು ಆಗಾಗ್ಗೆ ಸುದ್ದಿಯಾಗುತ್ತಿರುತ್ತವೆ. ಈಗ ಭಾರತ ತಂಡದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಕಾಮೆಂಟರಿ ಮಾಡುವ ಸಂದರ್ಭದಲ್ಲಿ ಉತ್ತರ ಭಾರತ ಕ್ರಿಕೆಟಿಗರ ಬಗ್ಗೆ ನೀಡಿರುವ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.
ಮಹಿಳಾ ಟಿ20 ವಿಶ್ವಕಪ್ ಪಂದ್ಯಾವಳಿಯ ಭಾರತ ನ್ಯೂಜಿಲೆಂಡ್ ಪಂದ್ಯದ ಸಂದರ್ಭದಲ್ಲಿ ಸ್ಟಾರ್ ಸ್ಪೋರ್ಟ್ಸ್‌ನ ಹಿಂದಿ ಭಾಷೆಯಲ್ಲಿ ವೀಕ್ಷಕ ವಿವರಣೆ ಮಾಡುವಾಗ ವಿವಾದಾತ್ಮಕ ಹೇಳಿಕೆ ನೀಡಿದರು. ಭಾರತದ ಆರಂಭಿಕ ಪಂದ್ಯದ ಎರಡನೇ ಇನ್ನಿಂಗ್ಸ್ ವೇಳೆ ಸಂಜಯ್ ಮಂಜ್ರೇಕರ್ ಮಾತನಾಡುವ ಭರದಲ್ಲಿ ಉತ್ತರ ಭಾರತದ ಕ್ರಿಕೆಟಿಗರ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ.

11ನೇ ಓವರ್ ಸಂದರ್ಭದಲ್ಲಿ ಕ್ಯಾಮೆರಾ ಭಾರತ ತಂಡದ ತರಬೇತುದಾರ ಅಮೋಲ್ ಮುಜುಂದಾರ್ ಅವರನ್ನು ಪರದೇ ಮೇಲೆ ತೋರಿಸಿದಾಗ, ಪ್ರತಿಕ್ರಿಯೆ ನೀಡಿದ ಸಂಜಯ್ ಮಂಜ್ರೇಕರ್, ಅವರು ಉತ್ಸಾಹದಲ್ಲಿ ಕಾಣುತ್ತಿದ್ದಾರೆ, ತಂಡಕ್ಕೆ ಉತ್ತಮ ತರಬೇತುದಾರರ ಸಿಕ್ಕಂತಾಗಿದೆ. ಅವರ ಎಡಭಾಗದಲ್ಲಿ ಸಹಾಯಕ ಕೋಚ್ ಆವಿಷ್ಕರ್ ಸಾಳ್ವಿ ಇದ್ದಾರೆ ಎಂದರು. ಆಗ ಮತ್ತೊಬ್ಬ ಕಾಮೆಂಟೇಟರ್, ಅವರ ಬಲಕ್ಕೆ, ಮುನಿಶ್ ಬಾಲಿ, ಮಾಜಿ ಪಂಜಾಬ್ ಆಟಗಾರ ಮತ್ತು ಈಗ ತಂಡದ ಫೀಲ್ಡಿಂಗ್ ಕೋಚ್ ಇದ್ದಾರೆ ಎಂದು ಗಮನಿಸಿದರು, ಇದಕ್ಕೆ ಪ್ರತಿಕ್ರಿಯೆ ನೀಡಿದ ಸಂಜಯ್ ಮಂಜ್ರೇಕರ್, ಕ್ಷಮಿಸಿ ನಾನು ಅವರನ್ನು ಗುರುತಿಸಲಿಲ್ಲ, ನನಗೆ ಉತ್ತರ ಭಾರತೀಯ ಆಟಗಾರರ ಬಗ್ಗೆ ಹೆಚ್ಚು ಗಮನ ಇರುವುದಿಲ್ಲ ಎಂದು ಹೇಳಿದ್ದಾರೆ.
ಸಂಜಯ್ ವಿರುದ್ಧ ವ್ಯಾಪಕ ಆಕ್ರೋಶ
ಉತ್ತರ ಭಾರತ ಕ್ರಿಕೆಟಿಗರ ಬಗ್ಗೆ ಲಘುವಾಗಿ ಮಾತನಾಡಿದ ಸಂಜಯ್ ಮಂಜ್ರೇಕರ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮುಂಬೈ ಮೂಲದವರಾದ ಸಂಜಯ್ ಮಂಜ್ರೇಕರ್ ವಿರುದ್ಧ ಉತ್ತರ ಭಾರತೀಯರು ಸಿಟ್ಟಾಗಿದ್ದು, ಇದು ಮುಂಬೈ ಲಾಬಿಯ ಮತ್ತೊಂದು ಮುಖ ಅಷ್ಟೇ ಎಂದು ಹೇಳಿದ್ದಾರೆ.
ಈ ಮೊದಲಿನಿಂದಲೂ ಕೂಡ ಭಾರತ ತಂಡದಲ್ಲಿ ಮುಂಬೈ ಲಾಬಿ ಇದೆ ಎನ್ನುವ ಆರೋಪ ಇದ್ದೇ ಇದೆ. ಬಿಸಿಸಿಐ ಆಯ್ಕೆದಾರರು ಮೊದಲಿಗೆ ಮುಂಬೈ ಮೂಲದ ಆಟಗಾರರಿಗೆ ಮಣೆ ಹಾಕುತ್ತಾರೆ, ಇತರ ರಾಜ್ಯಗಳ ಆಟಗಾರರನ್ನು ಕಡೆಗಣಿಸಲಾಗುತ್ತದೆ ಎಂದು ಆರೋಪಗಳಿವೆ.
ಉತ್ತರ ಭಾರತದ ಆಟಗಾರರ ಬಗ್ಗೆ ಯಾಕಿಷ್ಟು ತಾತ್ಸಾರ ಎಂದು ಕೆಲವು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ಮುಂಬೈ ಲಾಬಿ ಯಾವ ಮಟ್ಟಕ್ಕಿದೆ ಎನ್ನುವುದಕ್ಕೆ ಇದು ಉದಾಹರಣೆ ಎಂದು ಹೇಳಿದ್ದಾರೆ.












Click it and Unblock the Notifications